ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ನೋವು-ನಲಿವುಗಳ, ಸಿಹಿ-ಕಹಿಗಳ ಸಂಗಮವಾಗಿರುವ ಜೀವನ ಹಲವು ಬಾರಿ ದುಃಖಗಳ ಸಂತೆ ಎನಿಸುತ್ತದೆ. ಅನಿರೀಕ್ಷಿತವಾದ ಎಡರುತೊಡರುಗಳು, ಸಾಲ-ಸೋಲುಗಳು ನಮ್ಮ ಬಾಳನ್ನು ಛಿದ್ರಗೊಳಿಸುತ್ತವೆ. ಎಲ್ಲರಂತೆ ಈ ಜೋಡಿಗೂ ಸುಂದರ ಬದುಕು ಕಟ್ಟಿಕೊಳ್ಳುವ ನೂರಾರು ಕನಸುಗಳಿತ್ತು. ಅದನ್ನು ಸಾಕಾರಗೊಳಿಸುವ ಸಲುವಾಗಿ ರಾತ್ರಿ-ಹಗಲಿನ ಪರಿವಿಲ್ಲದೆ ನಿಂತಲ್ಲಿ ನಿಲ್ಲದೆ, ಕುಳಿತಲ್ಲಿ ಕೂರದೆ ಕಾಲಿಗೆ ಚಕ್ರಕಟ್ಟಿಕೊಂಡವನಂತೆ ಹೋಟೆಲಿನ ಕೆಲಸಗಳಲ್ಲಿ ಮೈಮುರಿದು ದುಡಿಯುತ್ತಿದ್ದ ಜೀವವೊಂದು ಅನಿರೀಕ್ಷಿತ ಅವಗಢದಿಂದ ಒಂದು ಕಾಲನ್ನೇ ಕಳೆದುಕೊಂಡು, ದುಡಿಮೆ ಇಲ್ಲದೆ ಬದುಕು ಮುಗಿದೇ ಹೋಯಿತು ಎಂದು ಆಸ್ಪತ್ರೆಯ ಹಾಸಿಗೆಯಲ್ಲಿದ್ದಾರೆ. ಇದು ಮಂಗಳೂರಿನ ಸುರತ್ಕಲ್ ಮಧ್ಯ ನಿವಾಸಿ ಸಂಜೀವ ಮೂಲ್ಯ ಮತ್ತು ಅವರ ಮಡದಿ ಶೋಭಾ ಬದುಕಿನ ದುರಂತ ಕಥೆ.
ಕುಟುಂಬಕ್ಕೆ ಆಧಾರವಾಗಿದ್ದ ಮಧುಮೇಹ ಮತ್ತು ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಸಂಜೀವ ಮೂಲ್ಯ ಅವರು ಗ್ಯಾಂಗ್ರೀನ್ ನಿಂದ ಒಂದು ಕಾಲನ್ನು ಕಳೆದುಕೊಂಡಿದ್ದಾರೆ. ಮಕ್ಕಳಿಲ್ಲದ ಸಂಜೀವ ಮೂಲ್ಯ-ಶೋಭಾ ಅವರ ಪ್ರಸ್ತುತ ಸ್ಥಿತಿಯನ್ನು ನೋಡಿದರೆ ಎಂತಹ ಕಠಿಣ ಮನಸ್ಸು ಕೂಡಾ ಕರಗಿ ಹೋಗುವುದರಲ್ಲಿ ಸಂಶಯವಿಲ್ಲ. ಆರ್ಥಿಕ ಸಂಕಷ್ಟದಿಂದ ಮನೆಯಲ್ಲಿ ಒಪ್ಪೊತ್ತಿನ ಊಟಕ್ಕೂ ತತ್ವಾರ ಅನುಭವಿಸುತ್ತಿರುವ ಈ ದಂಪತಿಗೆ ದೈನಂದಿನ ಖರ್ಚುವೆಚ್ಚಗಳನ್ನು ನಿರ್ವಹಿಸುದೇ ಸವಾಲಾಗಿದೆ.
ಸುರತ್ಕಲ್ ಮಧ್ಯ ಪ್ರಗತಿನಗರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿರುವ ಈ ದಂಪತಿಗೆ ಸ್ವಂತ ಸೂರೂ ಇಲ್ಲ. ಹೈದರಾಬಾದಿನ ಹೋಟೆಲೊಂದರಲ್ಲಿ ದುಡಿಯುತ್ತಾ ಇದ್ದ ಸಂಜೀವ ಮೂಲ್ಯ ಅವರು ರಜೆ ಎಂದು ಒಂದು ದಿನ ಕೂಡ ಮನೆಯಲ್ಲಿ ಕುಳಿತುಕೊಳ್ಳುವ ಜಾಯಮಾನದವರಲ್ಲ. ಹೀಗಾಗಿ ಜೀವಮಾನವಿಡೀ ದುಡಿದು ಉಳಿಸಿದ್ದ ಹಣದಿಂದ ಮನೆಯೊಂದನ್ನು ಕಟ್ಟಿ ಊರಲ್ಲೇ ಸೆಟ್ಲ್ ಆಗೋಣ, ಮಕ್ಕಳಂತೂ ಇಲ್ಲ..ಇಬ್ಬರು ಹೇಗಾದರೂ ಬದುಕಬಹುದು ಎಂಬ ಲೆಕ್ಕಾಚಾರ ಹಾಕಿ ಮೂರು ವರ್ಷದ ಹಿಂದೆ ಊರಿನ ಬಸ್ ಹತ್ತಿದ್ದರು. ಅವರು ಯಾವಾಗ ಊರಿಗೆ ಕಾಲಿಟ್ಟರೋ ಅಂದಿನಿಂದ ವಿಧಿಯಾಟವೇ ಬೇರೆಯಾಗಿದೆ. ಏಕಾಏಕಿ ಅನಾರೋಗ್ಯಕ್ಕೆ ಸಿಲುಕಿದ ಅವರ ಬದುಕಿನ ದಿಕ್ಕೇ ಬದಲಾಯಿತು. ಕಿಡ್ನಿ ಮತ್ತು ಕಾಲಿನ ಗ್ಯಾಂಗ್ರಿನ್ ರೋಗಕ್ಕೆ ಸಿಲುಕಿದ ಅವರ ಪಾದ ಆ ಬಳಿಕ ಮೊಣಕಾಲು ಕತ್ತರಿಸಬೇಕಾಗಿ ಬಂತು. ಮನೆ ಕಟ್ಟಲೆಂದು ಒಟ್ಟುಗೂಡಿಸಿದ್ದ ಸುಮಾರು ಆರು ಲಕ್ಷಕ್ಕೂ ಅಧಿಕ ಹಣ ಇವರ ಚಿಕಿತ್ಸೆಗಾಗಿಯೇ ಖರ್ಚಾಗಿದ್ದು, ಭವಿಷ್ಯದ ಕನಸುಗಳು ನುಚ್ಚುನೂರಾಗಿದೆ. ತಮ್ಮ ಪರಿಸ್ಥಿತಿ ನೆನೆದು ಈ ದಂಪತಿ ಇಂದು ಕಣ್ಣೀರಿನಲ್ಲೇ ಕೈತೊಳೆಯುತ್ತಿದ್ದಾರೆ. ಸದ್ಯ ಶೋಭಾ ಅವರು ಬೀಡಿ ಕಟ್ಟಿ ಒಪ್ಪೊತ್ತಿನ ಊಟದ ದಾರಿ ಕಂಡು ಕೊಂಡರೆ ಮುಂದೇನು ಎನ್ನುವ ಚಿಂತೆ ಅವರನ್ನು ಕಾಡುತ್ತಿದೆ.
ನೆರವು ಬೇಕು :
ತೀವ್ರ ಬಡತನದಲ್ಲಿರುವ ಇವರ ಕುಟುಂಬಕ್ಕೆ ಆಸ್ಪತ್ರೆ ವೆಚ್ಚ, ಮನೆ ಬಾಡಿಗೆ, ದೈನಂದಿನ ಖರ್ಚುವೆಚ್ಚವನ್ನು ಹೊಂದಿಸಲು ಸಾದ್ಯವಾಗುತ್ತಿಲ್ಲ ಹನಿ-ಹನಿ ಸೇರಿ ಹಳ್ಳ.. ತೆನೆ-ತೆನೆ ಸೇರಿ ಕಣಜ ಎನ್ನುವಂತೆ ದಾನಿಗಳು ತಮ್ಮ ಕೈಲಾದ ಸಹಾಯವನ್ನು ಮಾಡುವ ಮೂಲಕ ನೊಂದ ಈ ಕುಟುಂಬಕ್ಕೆ ಸಾಂತ್ವಾನಪಡಿಸಲು ಹಾಗೂ ದಂಪತಿಯ ಮುಂದಿನ ಭವಿಷ್ಯಕ್ಕೆ ದಾರಿದೀಪವಾಗಲು ಕೈ ಜೋಡಿಸಬೇಕಿದೆ. ಸಹಾಯ ಮಾಡುವವರಿಗೆ ಉಳಿತಾಯ ಖಾತೆಯ ವಿವರ:
Sanjeeva N
Canara Bank Surathkal Branch
S.B A/c No. 0649101043749
IFSC Code: CNRB0000634
Contact No. 8977391159
ಚಿತ್ರ-ಮಾಹಿತಿ : ಹೇಮಂತ್ ಕುಮಾರ್ ಕಿನ್ನಿಗೋಳಿ