ಏನಕೇನ ಪ್ರಕಾರೇಣ ಕಲಾವಿದನೆನಿಸಿ ಕೊಂಡು ಪ್ರಸಿದ್ಧಿಗೆ ಬಂದು, ಸಕಲ ಸೌಕರ್ಯಗಳನ್ನು ತನ್ನದಾಗಿಸಿಕೊಳ್ಳುವ ಜನರಿರುವ ಈ ಕಾಲಘಟ್ಟದಲ್ಲಿ, ಅಪ್ಪಟ ಕಲಾವಿದ ನಾಗಿದ್ದು, ಕಲೆಯೇ ತನ್ನ ಜೀವಾಳವೆಂದು ಪರಿಭಾವಿಸಿ, ರಂಗ ವ್ಯವಹಾರದಲ್ಲಿ – ನಡೆನುಡಿ ಗಳಲ್ಲಿ ಶುದ್ಧ ಮನಸ್ಕನಾಗಿ ಕಲಾಸೇವೆಗೈದು, ಈಗ ಅಜ್ಞಾತನಾಗಿ, ಅಶಕ್ತನಾಗಿ, ಸಮಾಜದ – ಸರ್ಕಾರದ ಯಾವೊಂದು ಸೌಕರ್ಯಕ್ಕೂ ಒಳಪಡದೇ ಧ್ವನಿಯಡಗಿ ಮೂಕವೇದನೆಯನ್ನು ಅನುಭವಿಸುತ್ತಾ ಬದುಕುತ್ತಿರುವ ಕಲಾವಿದರಲ್ಲೊಬ್ಬರು ಬಡಗು ಯಕ್ಷಾಂಗಣದಲ್ಲಿ ಒಂದೊಮ್ಮೆ ಖ್ಯಾತ ಸ್ತ್ರೀ ವೇಷಧಾರಿಯಾಗಿ ಮೆರೆದು ಮರೆಯಾಗಿರುವ ಪ್ರಬುದ್ಧ ಕಲಾವಿದ ಹೊನ್ನಪ್ಪ ಗೋಕರ್ಣ.
ತನ್ನ ಅರುವತ್ತಾರರ ಇಳಿ ವಯಸ್ಸಿನಲ್ಲಿ ಅಸೌಖ್ಯ ದಿಂದ ತನ್ನ ದೇಹದ ಸ್ವಾದೀನವನ್ನೇ ಕಳ ಕೊಂಡು ಮೂಕವೇದನೆಗಳೊಂದಿಗೆ ಉ. ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಮೂರೂರು ಬಳಿ ಗೋಳಿಬೈಲು ಗುಡ್ಡೆಯ ತನ್ನ ಪುಟ್ಟ ಮನೆಯಲ್ಲಿ ಬಾಳುತ್ತಿದ್ದಾರೆ.
ಗೋಕರ್ಣ ಪುಣ್ಯಕ್ಷೇತ್ರದಲ್ಲಿ ತೀರಾ ಹಿಂದುಳಿದ ಕುಂಬಾರ ವರ್ಗದ ಗಣಪತಿ ಗುನಗ ಹಾಗೂ ಮಾದೇವಿ ದಂಪತಿಗಳ ಮಗನಾಗಿ ಹೊನ್ನಪ್ಪ ಗೋಕರ್ಣ ಜನಿಸಿದ್ದು ಬಡತನದಲ್ಲಿಯೇ. ವಿದ್ಯಾ ಭ್ಯಾಸ ಕೇವಲ ನಾಲ್ಕನೇ ತರಗತಿಗೆ ಮುಕ್ತಾಯ. ಅಲ್ಲಿಂದ ಯಕ್ಷಗಾನದ ಗೀಳು. ಆಗಿನ ಕಾಲದ ಪ್ರಚಂಡ ಕಲಾವಿದರ ಪಾತ್ರಗಳನ್ನು ನೋಡುತ್ತಾ, ತನ್ನ 22ನೇ ವಯಸ್ಸಿನಲ್ಲಿ ಯಕ್ಷಗಾನಕ್ಕೆ ಪಾದಾರ್ಪಣೆ ಮಾಡಿದರು. ದಿ| ಆ್ಯಕ್ಟರ್ ಜೋಷಿಯವರ ಮಾರ್ಗ ದರ್ಶನದಲ್ಲಿ ಸ್ತ್ರೀವೇಷಗಳನ್ನು ಮಾಡಲಾರಂಭಿಸಿದರು.
ಎಲ್ಲಾ ರೀತಿಯ ಸ್ತ್ರೀಪಾತ್ರಗಳಿಗೆ, ಅದರಲ್ಲಿಯೂ ಕರುಣ ರಸದ ಪಾತ್ರಗಳಿಗೆ ಇವರು ಅಮೋಘವಾಗಿ ಜೀವ ತುಂಬು ತ್ತಿದ್ದರು. ಸಾವಿತ್ರಿ, ದಮಯಂತಿ, ಚಂದ್ರಮತಿ, ಅಂಬೆ, ದಾಕ್ಷಾಯಿಣಿ ಮುಂತಾದ ಸ್ತ್ರೀ ವೇಷಧಾರಿಗೆ ಸವಾಲೊಡ್ಡುವ ಪಾತ್ರಗಳ ನಡೆ ಇವರಿಗೆ ಕರತಲಾಮಲಕವಾಗಿತ್ತು. ಇವರು ಶ್ರೀ ಗುಂಡಿಬೈಲ್ ಮೇಳ, ಇಡಗುಂಜಿ, ಅಮೃತೇಶ್ವರಿ ಮೇಳಗಳಲ್ಲಿ ಅಪಾರ ಅನುಭವ ಪಡೆದು 1976ರಲ್ಲಿ ಪೆರ್ಡೂರು ಮೇಳಕ್ಕೆ ಸೇರ್ಪಡೆಗೊಂಡರು. ಇಲ್ಲಿ ಇವರ ಯಕ್ಷ ಚಹರೆಯೇ ಬದಲಾಯಿತು. ದಿ|ಶಂಕರನಾರಾಯಣ ಸಾಮಗ, ದಿ| ಕಮಟಾ ಗೋವಿಂದ ನಾಯಕ್, ದಿ| ಕಾಳಿಂಗ ನಾವಡ, ವಾಸುದೇವ ಸಾಮಗರಂತ ದಿಗ್ಗಜ ಕಲಾವಿದರಿದ್ದ ಪೆರ್ಡೂರು ಮೇಳದ “ವಿಜಯಶ್ರೀ’ ಪ್ರಸಂಗದ ಇವರ ವಿಮಲೆಯ ಪಾತ್ರ ಮನೆಮಾತಾ ಯಿತು. ಸಾಲಿಗ್ರಾಮ ಮೇಳದಲ್ಲಿಯೂ ಕೆಲಕಾಲವಿದ್ದ ಇವರು ಮೂರುವರೆ ದಶಕಗಳ “ಕಲಾ ತಿರುಗಾಟ’ ಸಾರ್ಥಕ್ಯ ಕಂಡಿತ್ತು.
ಇಷ್ಟೇ ಅಲ್ಲದೆ ಇವರು ಹರಿಕೀರ್ತನೆಯಲ್ಲೂ ಖ್ಯಾತರು. ಮಣ್ಣಿನ ಗಣೇಶ, ಶಾರದೆ ಮೂರ್ತಿ ರಚನೆಯಲ್ಲಿಯೂ ಇವರದು ಎತ್ತಿದ ಕೈ. ಆದರೆ ಈಗ ಅಸೌಖ್ಯದಿಂದ ಮೂರ್ತಿರಚನೆಯನ್ನು ಮಾಡಲಾಗದೇ ತಮ್ಮ ಮಗನಿಗೆ ಕಲಿಸಿಕೊಟ್ಟಿದ್ದಾರೆ. ಪರಿಪೂರ್ಣ ಕಲಾವಿದರಾದ ಗೋಕರ್ಣರು ಪುರುಷ ವೇಷದಲ್ಲಿಯೂ ಪ್ರಸಿದ್ಧರು. ಕಾಳಿದಾಸ ಪ್ರಸಂಗದ “ಕಾಳ’, ನಳ, ಹರಿಶ್ಚಂದ್ರ, ರಾಮ, ನಾರದ, ಈಶ್ವರ ಮುಂತಾದ ಪ್ರಬುದ್ಧ ಪಾತ್ರಗಳಲ್ಲಿ ಯಥೋಚಿತ ಹರಿತ ಮಾತುಗಾರಿಕೆಯಿಂದ ಪ್ರಸಿದ್ಧರಾಗಿದ್ದರು.
ತನ್ನ ಕಲಾ ಜೀವನದಲ್ಲಿ ಯಾವುದೇ ಅನುಕೂಲ ಮಾಡಿಕೊಳ್ಳಲಾಗದಿದ್ದ ಹೊನ್ನಪ್ಪರಿಗೆ ಹತ್ತು ಮಂದಿ ಮಕ್ಕಳು. ಒಬ್ಬ ಮಗ ಮಣ್ಣಿನ ಮೂರ್ತಿ ರಚನೆಯಲ್ಲಿ ತೊಡಗಿದುದನ್ನು ಬಿಟ್ಟರೆ ಇವರ ಯಾವ ಮಕ್ಕಳೂ ಕಲಾಲೋಕದ ಆಕರ್ಷಣೆಗೆ ಒಳಗಾಗಲಿಲ್ಲ. “ಹಿಂದುಳಿದ ವರ್ಗದ ಬಡವನು ಕಲಾವಿದನಾಗಲೇ ಬಾರದು’ ಎಂಬುದು ಇವರ ಅಂತರಾಳದ ನೋವಿನ ಮಾತು. ಇವರಿಗಿಂತಲೂ ಕಡಿಮೆ ಅರ್ಹತೆ ಯುಳ್ಳ ಅನೇಕ ಮಂದಿ ಸರ್ಕಾರದಿಂದ ರಾಜ್ಯ ಪ್ರಶಸ್ತಿ, ಮಾಸಾಶನ ಮೊದಲಾದ ಸೌಲಭ್ಯಗಳನ್ನು ಪಡೆಯಲು ಶಕ್ತರಾದರೂ ಇವರಿಗೆ ಇದು ಇನ್ನೂ ದಕ್ಕದಿರುವುದು ವ್ಯವಸ್ಥೆಯ ವ್ಯಂಗ್ಯವಲ್ಲದೆ ಮತ್ತೇನು ?
ಕಲೆ – ಕಲಾವಿದರಿಗಾಗಿ ಹಗಲಿರುಳೂ ಚಿಂತನೆ ಮಾಡುತ್ತಿರುವ ಉಡುಪಿಯ ಯಕ್ಷಗಾನ ಕಲಾರಂಗ (ರಿ.) ಸಂಸ್ಥೆಯು ಹೊನ್ನಪ್ಪ ಗೋಕರ್ಣರ ಬಗ್ಗೆ ಅಸ್ಪಷ್ಟ ಮಾಹಿತಿಯೊಂದಿಗೆ ಹುಡುಕಿ ಹೋಗಿ ಇವರನ್ನು ಭೇಟಿ ಮಾಡಿ, ಇವರಲ್ಲಿ ಭರವಸೆಯ ಹೊಂಗಿರಣ ತುಂಬಿದೆ. ತಾನು ಪ್ರತಿ ವರ್ಷ ಕೊಡಮಾಡುವ ಕಡಿಯಾಳಿ ಸುಬ್ರಾಯ ಉಪಾಧ್ಯಾಯ ಪ್ರಶಸ್ತಿಯನ್ನು ಈ ಸಾಲಿನಲ್ಲಿ ಇವರಿಗೆ ನೀಡಲು ನಿರ್ಧರಿಸಿದೆ.
ಬರಹ : ಮೋಹನ್ ಪೆರ್ಡೂರು