ರಾಜ್ಯಪ್ರಶಸ್ತಿ ವಿಜೇತ ನಿರ್ದೇಶಕ ರಾಮದಾಸ್ ನಾಯ್ಡು ನಿರ್ದೇಶನದ ಕುಂಬಾರನ ಬದುಕಿನ ಕಥೆಯನ್ನಾಧರಿಸಿದ ಚಲನಚಿತ್ರ `ಪ್ರವಾಹ’ ೨೦೦೨ರಲ್ಲಿ ಪನೋರಮಾಕ್ಕೆ ಆಯ್ಕೆಯಾಗಿತ್ತು . ಇಳಿವಯಸ್ಸಿನವರ ಸಮಸ್ಯೆಯ ಮೇಲೆ ಇವರು ತಯಾರಿಸಿದ್ದ `ಮುಸ್ಸಂಜೆ’ ಚಿತ್ರಕ್ಕೆ ಆರು ರಾಜ್ಯ ಪ್ರಶಸ್ತಿ ದೊರೆಕಿತ್ತು. ಅವರು ನಿರ್ದೇಶಿಸಿದ ಚಿತ್ರ `ಪ್ರವಾಹ’ ಜಾಗತೀಕರಣ ಹಾಗೂ ನಮ್ಮ ಸಂಸ್ಕೃತಿ ಮತ್ತು ಪರಂಪರೆಗಳ ಮೇಲೆ ಜಾಗತೀಕರಣದ ಪ್ರಭಾವ – ಈ ವಿಷಯವನ್ನಾಧರಿಸಿದೆ. ಕುಂಬಾರನೊಬ್ಬನ ಜೀವನವನ್ನು ಉದಾಹರಣೆಯಾಗಿರಿಸಿಕೊಂಡು ತಯಾರಿಸಲಾಗಿರುವ ಈ ಚಿತ್ರ ಬರೀ ಜಾಗತೀಕರಣದ ಬಗ್ಗೆಯಷ್ಟೇ ಅಲ್ಲದೇ ಬಡತನ, ಆತನ ಮೇಲೆ ಸಮಾಜದಲ್ಲಿರುವ ಸಿರಿವಂತರ ದೌರ್ಜನ್ಯ, ಹಳ್ಳಿಯ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಗಳ ಪರಿಚಯವನ್ನೂ ಮಾಡಿಸುತ್ತದೆ.
ತಲತಲಾಂತರದಿಂದ ಕುಲಕಸುಬಾಗಿ ಬಂದಿರುವ ಕುಂಬಾರ ಕೆಲಸವನ್ನು ನೆಚ್ಚಿಕೊಂಡು ಬದುಕಲು ಪ್ರಯತ್ನಿಸುವ ವ್ಯಕ್ತಿ ಮಾರಪ್ಪ. ಮಗ ಸಿದ್ಧರಾಮ ಹೊಸತಲೆಮಾರಿನ ಹುಡುಗ. ಆತನ ಓದು ಹಾಗೂ ಸಂಸಾರವನ್ನು ಸಾಗಿಸಲು ಮಡಿಕೆ ಮಾರುವುದನ್ನು ಬಿಟ್ಟರೆ ಇನ್ಯಾವ ಉಧ್ಯೋಗವೂ ಮಾರಪ್ಪನಿಗೆ ತಿಳಿಯದು. ಆದರೆ ಈ ಆಧುನಿಕ ಪ್ಲಾಸ್ಟಿಕ್ ಯುಗದಲ್ಲಿ ಮಡಿಕೆ ಕೊಳ್ಳುವವರೇ ಇಲ್ಲದ ಪರಿಸ್ಥಿತಿಯಲ್ಲಿ ಯಾವೆಲ್ಲಾ ರೀತಿಯ ಆರ್ಥಿಕ ತೊಂದರೆಗೆ ಈ ಕುಂಬಾರನ ಸಂಸಾರ ತುತ್ತಾಗುತ್ತದೆ ಎನ್ನುವುದನ್ನು ತುಂಬಾ ಸರಳವಾಗಿ ರಾಮದಾಸ್ ನಾಯ್ಡು ಅವರು ಬಿಂಬಿಸಿದ್ದಾರೆ. ಪ್ರವಾಹದಲ್ಲಿ ಕಾಣುವ ಕುಂಬಾರನ ಪಾತ್ರ ಕೇವಲ ಒಂದು ನಿದರ್ಶನವಷ್ಟೇ. ಇದೇ ರೀತಿ ಹಲವು ಕುಲಕಸುಬುಗಳು ಇಂದು ಬೆಲೆ ಕಳೆದುಕೊಂಡಿವೆ. ಆ ಕುಟುಂಬಗಳು ಅಥವಾ ಆ ಜಾತಿಯ ಗುಂಪು ಇನ್ಯಾವುದೋ ಜೀವನೋಪಾದಿಯನ್ನು ಹುಡುಕಲೇ ಬೇಕು. ಹಳ್ಳಿಯಲ್ಲಿ ಉಧ್ಯೋಗಾವಕಾಶ ಕಡಿಮೆ. ಆಗೆಲ್ಲಾ ಬೇರೆ ವಿಧಿಯಿಲ್ಲದೆ ಅವರೆಲ್ಲರೂ ಪಟ್ಟಣ ಸೇರುತ್ತಾರೆ. ಅಲ್ಲಿ ಕೊಳಗೇರಿಗಳ ನಿರ್ಮಾಣವಾಗುತ್ತಲೇ ಹೋಗುತ್ತದೆ. ಪ್ರವಾಹ ಚಿತ್ರದಲ್ಲಿ ಬರುವ ಸಿದ್ಧರಾಮಯ್ಯನ ಪಾತ್ರ ಹಳ್ಳಿಯ ಮುಂದಿನ ಜನಾಂಗದ ಪ್ರತಿಬಿಂಬ. ಆತನೂ ಕೊನೆಗೆ ಅಪ್ಪನ ಕಸುಬನ್ನು ಬಿಟ್ಟು ಪಟ್ಟಣ ಸೇರುತ್ತಾನೆ. ಇದೇ ಸಮಸ್ಯೆಗೆ ಪರಿಹಾರ ಎಂದೇನೂ ನಾಯ್ಡು ಅವರು ಈ ಚಿತ್ರದಲ್ಲಿ ಹೇಳುತ್ತಿಲ್ಲ. ಇದರಿಂದಲೂ ಸಮಸ್ಯೆಗಳಿವೆ. ಪಟ್ಟಣ ಎಲ್ಲಿಯವರೆಗೆ ಈ ರೀತಿ ವಲಸೆ ಬಂದವರನ್ನು ಆಹ್ವಾನಿಸುತ್ತಾ ಹೋಗಲು ಸಾಧ್ಯ ಎನ್ನುವ ಪ್ರಶ್ನೆಯೂ ಇಲ್ಲಿದೆ. ಅದೂ ಉತ್ತರವೇ ಇಲ್ಲದ ಪ್ರಶ್ನೆ.
ಜಾಗತೀಕರಣದಿಂದಾಗಿ ನಶಿಸುತ್ತಿರುವ ನಮ್ಮ ಸಾಂಸ್ಕñತಿಕ ಮೌಲ್ಯಗಳಂತೇ ಕಮರ್ಶಿಯಲ್ ಚಿತ್ರಗಳ ಹಾವಳಿಯಲ್ಲಿ ಸಾಮಾಜಿಕ ಕಳಕಳಿಯ ಚಿತ್ರಗಳು ಹಿಂದೇಟು ಹಾಕುತ್ತಿದ್ದರೂ, `ಪ್ರವಾಹ’ ರಾಷ್ಟ್ರೀಯ ಮಟ್ಟದ ಪನೋರಮಾಕ್ಕೆ ಆಯ್ಕೆಯಾಗಿದ್ದು ಸೃಜನಶೀಲತೆ ಜೀವಂತವಾಗಿರುವುದಕ್ಕೊಂದು ನಿದರ್ಶನವಾಗಿದೆ.