ಬಂಟ್ವಾಳ (ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಒಂದು ಕಡೆ ಬಡತನ, ಮತ್ತೊಂದು ಕಡೆ ಅಂಗ ವೈಕಲ್ಯ ಇವೆಲ್ಲವನ್ನೂ ಮೀರಿ ಈ ಹುಡುಗಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ ೪೬೭ ಅಂಕ ಪಡೆದಿರುವುದು, ಮನಸ್ಸಿದ್ದರೆ ಏನೂ ಬೇಕಾದರೂ ಮಾಡಬಹುದು ಎನ್ನುವುದನ್ನು ತೋರಿಸಿಕೊಟ್ಟಿದೆ.
ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ಕೇಶವ ಕುಲಾಲ್ ಮತ್ತು ರಾಜೀವಿ ಇವರ ಸುಪುತ್ರಿ. ತಂದೆ ಕೇಶವರು ಕೂಡಾ ಹುಟ್ಟಿನಿಂದಲೇ ಅಂಗವೈಕಲ್ಯಕ್ಕೆ ತುತ್ತಾದವರು. ಆದರೂ ಜೀವನಾಧಾರಕ್ಕೆ ಮನೆಯ ಪಕ್ಕದಲ್ಲಿಯೇ ಒಂದು ಗೂಡಂಗಡಿಯನ್ನು ಇಟ್ಟುಕೊಂಡಿದ್ದಾರೆ. ಇಬ್ಬರು ಹೆಣ್ಣು ಮಕ್ಕಳಿದ್ದು ಹಿರಿಯ ಮಗಳು ದ್ವಿತೀಯ ಬಿ.ಕಾಂ ಓದುತ್ತಿದ್ದಾಳೆ. ತಾಯಿಗೆ ಬೀಡಿ ಕಟ್ಟುವುದೇ ಕಾಯಕ. ಕಿರಿಯ ಮಗಳು ಭಾಗ್ಯಶ್ರೀ.
ಈಕೆಗೆ ಸೊಂಟದ ಕೆಳಗೆ ಬಲವೇ ಇಲ್ಲ :
ಆದರೆ ಕಲಿಕೆಯಲ್ಲಿ ಭಾರೀ ಆಸಕ್ತಿ. ತನ್ನ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ಲೊರೆಟ್ಟೋ ಚರ್ಚ್ ಶಾಲೆಯಲ್ಲಿ ಕಲಿತು ಅಲ್ಲಿಯೂ ಉತ್ತಮ ಅಂಕಗಳನ್ನೇ ಪಡೆದುಕೊಂಡಿದ್ದಾಳೆ. ಅಮ್ಮ ಎತ್ತಿಕೊಂಡು ಹೋಗಿಯೇ ಅವಳನ್ನು ಶಾಲೆಗೆ ಬಿಟ್ಟು ಅಲ್ಲಿಯೇ ಇದ್ದು ಮತ್ತೆ ಸಂಜೆ ಮನೆಗೆ ಕರೆದುಕೊಂಡು ಹೋಗುತ್ತಿದ್ದರು. ಎಸ್.ಎಸ್.ಎಲ್.ಸಿಯಲ್ಲಿ ೪೭೦ ಅಂಕಗಳನ್ನು ಪಡೆದು ಉತ್ತೀರ್ಣಳಾಗಿ ಮುಂದೆ ಪಿಯುಸಿಗೆ ಎಸ್.ವಿ.ಎಸ್ ಪದವಿಪೂರ್ವ ಕಾಲೇಜನ್ನು ಸೇರಿದ ಇವಳದ್ದು ಎಲ್ಲರೂ ನೆನಪಿಟ್ಟುಕೊಳ್ಳುವಂತಹ ಸಾಧನೆ.
ವೀಲ್ಚೇರ್ನಲ್ಲೇ ಕುಳಿತು ಪಾಠ ಕಲಿಕೆ :
ತಾಯಿ ರಿಕ್ಷಾ ಬಾಡಿಗೆ ಮಾಡಿಕೊಂಡು ಬಂದು ಮಗಳನ್ನು ಎತ್ತಿಕೊಂಡು ಬಂದೇ ಕಾಲೇಜಿಗೆ ಬಿಡುತ್ತಿದ್ದರು. ಅಲ್ಲಿ ವೀಲ್ ಚೇರ್ನಲ್ಲಿಯೇ ಇವಳ ಕಲಿಕೆ ಸಾಗುತ್ತಿತ್ತು. ಅವಳ ಸ್ನೇಹಿತೆಯರು ಕೂಡಾ ಬಿಡುವಿನ ಹೊತ್ತಿನಲ್ಲಿ ಇವಳನ್ನು ವೀಲ್ ಚೇರ್ನಲ್ಲಿಯೇ ಕರೆದುಕೊಂಡು ಹೋಗುತ್ತಿದ್ದುದು ಎಲ್ಲರೂ ಅವಳನ್ನು ಪ್ರೀತಿಸುವವರೇ ಆಗಿದ್ದರು. ತಾನು ಇನ್ನೊಬ್ಬರ ಮೇಲೆ ಅವಲಂಬಿತಳಾಗಬಾರದು ಎನ್ನುವ ಕಾರಣಕ್ಕಾಗಿ ಎರಡು ಮರದ ತುಂಡನ್ನು ಹಿಡಿದುಕೊಂಡು ಒಂದು ಫ್ಲೋರ್ನಿಂದ ಇನ್ನೊಂದು ಫ್ಳೋರ್ಗೆ ಹತ್ತಿ ಇಳಿಯುತ್ತಿದ್ದುದನ್ನು ನೋಡಿದಾಗ ಎಲ್ಲರ ಕರುಳ್ ಚುರಕ್ ಎನ್ನುತ್ತಿತ್ತು.
ಇಂತಹ ಅಂಗವೈಕಲ್ಯ ಇದ್ದರೂ ಅವಳ ಸಾಧನೆಗೆ ಅದು ಅಡ್ಡಿಯಾಗಲಿಲ್ಲ. ವಾಣಿಜ್ಯ ವಿಭಾಗದಲ್ಲಿ ೪೭೬ ಅಂಕಗಳನ್ನು ಪಡೆದಿರುವುದು ಅವಳ ಮಹತ್ಸಾಧನೆಯೇ ಸರಿ. ಮುಂದೆ ದೂರ ಶಿಕ್ಷಣದಲ್ಲಿ ಬಿ.ಕಾಂ ಮಾಡುವುದು ಇವಳ ಕನಸಾಗಿದೆ. ಇಂತಹ ವಿದ್ಯಾರ್ಥಿಗಳು ಸಣ್ಣ ವಿಷಯಕ್ಕೂ ಹೆದರಿ ಸೋತು ಬಿಡುವ ಅದೆಷ್ಟೋ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗುತ್ತಾರೆ ಎಂಬುದರಲ್ಲಿ ಸಂಶಯವಿಲ್ಲ.
****