ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : ತುಳುನಾಡಿನ ಅವಳಿ ವೀರರೆಂದೇ ಕರೆಯಲ್ಪಡುವ ಕಾರಣಿಕ ಪುರುಷರಾದ ಕೋಟಿ ಚೆನ್ನಯರು ಹಾಗೂ ಅವರ ತಾಯಿ ಮಹಾ ತಾಯಿ ದೇಯಿ ಬೈದ್ಯೆತಿಯ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿ ನಂದನ ಬಿತ್ತಲ್ ಇಂದು ಎಲ್ಲರ ಗಮನಸೆಳೆದಿದೆ. ಬ್ರಹ್ಮಕಲಶೋತ್ಸವ ಸಂಭ್ರಮದಲ್ಲಿರುವ ಗೆಜ್ಜೆಗಿರಿ ನಂದನ ಬಿತ್ತ್ಲ್ನಲ್ಲಿ ನಾಲ್ಕು ಮೂರ್ತಿಗಳನ್ನು ಒಂದೇ ಮರದಲ್ಲಿ ಕೆತ್ತಿದ ಶಿಲ್ಪಿ ರಮೇಶ್ ಕುಲಾಲ್ ಪೆರುವಾಯಿ ಮತ್ತು ತಂಡದ ಕಾರ್ಯ ಕೂಡ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ರಮೇಶ್ ಅವರ ಕುರಿತು ನಾನಿಲ್ತಾರ್ ಕುಲಾಲ ಸಂಘದ ಉಪಾಧ್ಯಕ್ಷೆ ಜೇಸಿ ಅರುಣಾ ಕುಲಾಲ್ ಅವರು ಬರೆದ ಪರಿಚಯ ಲೇಖನ ಇಲ್ಲಿದೆ..
ನನ್ನ ಆತ್ಮೀಯರಲ್ಲಿ ಒಬ್ಬರಾದವರು ಪ್ರಸಿದ್ಧ ಶಿಲ್ಪಿ ರಮೇಶ್ ಕುಲಾಲ್ ಪೆರುವಾಯಿಯವರು. ಇವರು ಬಂಟ್ವಾಳ ತಾಲೂಕಿನ ಮಾಣಿಲ ಎಂಬ ಪುಣ್ಯ ಕ್ಷೇತ್ರ ದಲ್ಲಿ ಬಾಬು ಮೂಲ್ಯ ಮತ್ತು ಪದ್ಮಾವತಿ ದಂಪತಿಗಳ ಸುಪುತ್ರರಾಗಿ ಜನಿಸಿದವರು . ಎಳವೆಯಿಂದಲೇ ಚುರುಕು ಸ್ವಭಾವದಿಂದ ಎಲ್ಲರ ಪ್ರೀತಿಗೆ ಭಾಜನರಾದವರು. ಬಾಲ್ಯದಿಂದಲೇ ಚಿತ್ರ ಬಿಡಿಸುವ ಕಲೆಯನ್ನು ಕರಗತ ಮಾಡಿಕೊಂಡು, ತಮ್ಮ ಪ್ರಾಥಮಿಕ ಶಾಲಾ ದಿನಗಳಿಂದಲೂ ಚಿತ್ರಕಲೆಯಲ್ಲಿ ಅನೇಕ ಬಾರಿ ಬಹುಮಾನ ಪಡೆದು ಗುರುಗಳ ಪ್ರೀತಿಯ ಶಿಷ್ಯರಾಗಿದ್ದರು. ಚಿತ್ರಕಲೆಯಲ್ಲಿ ಪ್ರಶಸ್ತಿ ಪಡೆಯುತ್ತಾ ಮುಂದೆ ತಾನೊಬ್ಬ ಯಶಸ್ವಿ ಚಿತ್ರಕಾರನಾಗಬೇಕೆಂಬ ಹಂಬಲದೊಂದಿಗೆ ಕಾರ್ಕಳ ತಾಲೂಕಿನ ಮಿಯ್ಯಾರಿನಲ್ಲಿ C E Kamath Institute Artisan Diploma ಪದವಿ ಪಡೆದು ನಂತರದ ದಿನಗಳಲ್ಲಿ ಸುಮಾರು ಹನ್ನೊಂದು ವರುಷಗಳಿಂದ ಮರ ಹಾಗೂ ಕಲ್ಲಿನ ವಿಗ್ರಹಗಳ ಕೆತ್ತನೆಯಿಂದ ಚಿತ್ರಕಲೆಯಲ್ಲಿ ತನ್ನದೇ ಛಾಪನ್ನು ಮೂಡಿಸುತ್ತಾ ಹಿಂದೂ ಧರ್ಮದ ಕುಲಾಲ ಸಮುದಾಯದ ಓರ್ವ ಪ್ರಸಿದ್ಧ ಶಿಲ್ಪಿಯಾಗಿ ಗುರುತಿಸಿಕೊಂಡವರು. ಹನುಮಗಿರಿಯಲ್ಲಿ ವೃತ್ತಿ ಆರಂಭಿಸಿದ ಇವರು ಕುಲ್ಕುಂದ ಬಸವೇಶ್ವರ ದೇವಸ್ಥಾನದಿಂದ ಹಿಡಿದು ಸುಮಾರು ಮೂವತ್ತಕ್ಕಿಂತಲೂ ಅಧಿಕ ದೈವಸ್ಥಾನಗಳಲ್ಲಿ ತನ್ನ ಕೈ ಚಳಕದಿಂದ ಮೂರ್ತಿ ಕೆತ್ತನೆ ಮಾಡಿ ಜನಮಾನಸದಲ್ಲಿ ನೆಲೆನಿಂತವರು.
ದೇಯಿ ಬೈದಿತಿ ಕೋಟಿ ಚೆನ್ನಯರ ಮೂಲಸ್ಥಾನ, ಆದಿದೈವ ಧೂಮಾವತಿ ಕ್ಷೇತ್ರ – ಗುರು ಸಾಯನ ಬೈದ್ಯರ ಶಕ್ತಿಪೀಠ ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್ ಲ್ ಕ್ಷೇತ್ರದಲ್ಲಿ 24/02/2020 ರಿಂದ 02/03/2020 ರವರೆಗೆ ನಡೆಯುವ ಪ್ರತಿಷ್ಠಾ ಬ್ರಹ್ಮಕಲಶೋತ್ಸವದಲ್ಲಿ ಪ್ರತಿ ನಿತ್ಯ ಲಕ್ಷಾನುಲಕ್ಷ ಭಕ್ತ ಜನರು ಆ ಪುಣ್ಯ ಕ್ಷೇತ್ರಕ್ಕೆ ಆಗಮಿಸಿದ್ದರು. ಈ ಐತಿಹಾಸಿಕ ಪುಣ್ಯ ಕ್ಷೇತ್ರದಲ್ಲಿ ಗೆಜ್ಜೆಗಿರಿ ಕ್ಷೇತ್ರದ ಗುರು ಸಾಯನ ಬೈದ್ಯರು, ಮಾತೆ ದೇಯಿ ಬೈದಿತಿ ಹಾಗೂ ಕೋಟಿ ಚೆನ್ನಯರ ಮೂರ್ತಿಗಳ ಕೆತ್ತನೆ ಮಾಡಿದ ಶಿಲ್ಪಿ ರಮೇಶ್ ಕುಲಾಲ್ ಹಾಗೂ ತಂಡದವರು. ಹನುಮಗಿರಿಯಿಂದ ಗೆಜ್ಜೆಗಿರಿಯವರೆಗೆ ಹೆಜ್ಜೆ ಹಾಕಿದ ಅಪೂರ್ವ ಸಾಧಕರಿವರು. ಸಾಯನ ಬೈದ್ಯರು ಗೆಜ್ಜೆಗಿರಿ ಕ್ಷೇತ್ರದ ಗುರುಗಳು, ಅವರ ಸಹೋದರಿ ದೇಯಿ ಬೈದಿತಿ, ಅಳಿಯಂದಿರು ಕೋಟಿ ಚೆನ್ನಯರು. ವಿಶೇಷವಾಗಿ ಮಾತೃ ಮೂಲ ಸಂಸ್ಕೃತಿಯ ಬಿಲ್ಲವ ಸಮಾಜದಲ್ಲಿ ಸಾಯನ ಬೈದ್ಯರು ಹಾಗೂ ಮಾತೆ ದೇಯಿ ಬೈದಿತಿಗೆ ವಿಶೇಷ ಮಾನ್ಯತೆ. ಒಂದೇ ಕುಟುಂಬದ ನಾಲ್ಕು ಶಕ್ತಿಗಳ ಮೂರ್ತಿಗಳನ್ನು ಕೆತ್ತಲು ಒಂದೇ ಹಲಸಿನ ಮರ ಸಿಕ್ಕಿದ್ದು ಪವಾಡವೇ ಸರಿ. ಇದು ನಿಜಕ್ಕೂ ಕೋಟಿ ಚೆನ್ನಯರ ಮಹಿಮೆ ಎಂದರೆ ತಪ್ಪಾಗದು. ಇಂದಿನ ದಿನಗಳಲ್ಲಿ ಎರಡು ವಿಗ್ರಹಗಳನ್ನು ಕೆತ್ತುವ ಒಂದೇ ಮರ ಸಿಗುವುದೇ ವಿರಳ ಅಂತಹದರಲ್ಲಿ ನಾಲ್ಕು ವಿಗ್ರಹಗಳನ್ನು ಕೆತ್ತುವ ಒಂದೇ ಮರ ಸಿಕ್ಕಿರುವುದು ಕೋಟಿ ಚೆನ್ನಯರ ಕಾರಣಿಕ ಎನ್ನುವುದು ಭಕ್ತ ಜನರ ನಂಬಿಕೆ.
ತಳಭಾಗದ ಅಂದರೆ ಬೇರಿನ ಭಾಗದ ಮರದಲ್ಲಿ ಗುರು ಸಾಯನ ಗುರುಗಳ ಮೂರ್ತಿ ಕೆತ್ತಲಾಗಿದೆ. ಗರ್ಭದ ಭಾಗದಲ್ಲಿ ಮಾತೆ ದೇಯಿ ಬೈದಿತಿಯ ಮೂರ್ತಿ ಕೆತ್ತಲಾಗಿದೆ. ಮಾತೆಯ ಗರ್ಭದಲ್ಲಿ ಜನಿಸಿದ ಕುವರರ ಮೂರ್ತಿಗಳನ್ನು ಮೇಲ್ಭಾಗದಲ್ಲಿ ಕೆತ್ತಲಾಗಿದೆ. ಒಂದು ಮಾತೃ ಮೂಲ ಪರಂಪರೆಯ ಪೀಳಿಗೆಯನ್ನು ಅತ್ಯಂತ ಸುಂದರವಾಗಿ ಈ ಮೂರ್ತಿ ಕೆತ್ತನೆಯ ವಿಧಾನದಿಂದ ತಿಳಿಯಲು ಸಾಧ್ಯ. ರಮೇಶ್ ಕುಲಾಲ್ ಪೆರುವಾಯಿ ಹಾಗೂ ಅವರ ತಂಡದಲ್ಲಿದ್ದವರಾದ ಲೋಕೇಶ್ ಪಾಣಾಜೆ, ಚಂದ್ರಹಾಸ ಪೆರ್ಲ, ರಾಜೇಶ್ ಕಾಸರಗೋಡು, ಪುರಂದರ ಉಪ್ಪಿನಂಗಡಿ, ಶಶಿಕಾಂತ್ ಅಡ್ಯನಡ್ಕ, ಗೋಪಾಲ ಕೃಷ್ಣ ಪೆರ್ ರವರು ಗೆಜ್ಜೆಗಿರಿ ಮೂಲಸ್ಥಾನದ ಕಾರಣಿಕ ಶಕ್ತಿಗಳ ಮೂರ್ತಿಗಳನ್ನು ಗೆಜ್ಜೆಗಿರಿಯಲ್ಲೇ ಕೆತ್ತಿದ್ದು ಮತ್ತೊಂದು ವಿಶೇಷ. ಅತ್ಯಂತ ಅಪೂರ್ವವಾದ ಹೊಯ್ಸಳ ಶೈಲಿಯಲ್ಲಿ ಈ ಮೂರ್ತಿಗಳನ್ನು ಕೆತ್ತನೆ ಮಾಡಲಾಗಿದೆ. ಇಲ್ಲಿ ಯಾವುದೇ ರೀತಿಯ ಜೋಡಣೆಗಳಿಲ್ಲ. ದೇಹದ ಬೇರೆ ಬೇರೆ ಭಾಗಗಳನ್ನು ಪ್ರತ್ಯೇಕವಾಗಿ ಕೆತ್ತಿ ಬಳಿಕ ಜೋಡಿಸುವ ಪ್ರಕ್ರಿಯೆ ಇಲ್ಲಿ ನಡೆದಿಲ್ಲ. ಬದಲಾಗಿ ಇಡೀ ಮೂರ್ತಿಯ ಎಲ್ಲಾ ಅಂಗಾಂಗಗಳನ್ನು ಪೂರ್ತಿಯಾಗಿ ಒಂದೇ ಮರದಲ್ಲಿ ಕೆತ್ತಲಾಗಿದೆ. ಸಾಯನ ಬೈದ್ಯರ ಕೈಯಲ್ಲಿರುವ ದಂಡ ಕೂಡಾ ಮರದ ಯಥಾಸ್ಥಿತಿಯಲ್ಲಿಯೇ ಮೂಡಿದೆ ಎಂದು ಶಿಲ್ಪಿ ರಮೇಶ್ ಕುಲಾಲ್ ಪೆರುವಾಯಿಯವರು ಹೇಳುತ್ತಾರೆ. 2019 ರ ಡಿಸೆಂಬರ್ ತಿಂಗಳಲ್ಲಿ ಬಿಂಬ ಕೆತ್ತನೆಗೆ ಮುಹೂರ್ತ ಮಾಡಲಾಗಿದ್ದು, ನಂತರ ಕೇವಲ ಎಪ್ಪತ್ತು ದಿನಗಳಲ್ಲಿ ರಾತ್ರಿ ಹಗಲೆನ್ನದೆ ರಮೇಶ್ ಕುಲಾಲ್ ಪೆರುವಾಯಿಯವರ ನೇತೃತ್ವದ ತಂಡ ಬಹಳ ಶೃದ್ಧೆಯಿಂದ ತದೇಕಚಿತ್ತದಿಂದ ಮೂರ್ತಿ ಕೆತ್ತನೆಯನ್ನು ಯಾವುದೇ ಅಡೆತಡೆಗಳಿಲ್ಲದೆ ಶಿಸ್ತುಬದ್ಧವಾಗಿ ಕಠಿಣ ಶ್ರಮವಹಿಸಿ ಸಂಪೂರ್ಣಗೊಳಿಸಿದ್ದಾರೆ. ರಮೇಶ್ ಕುಲಾಲ್ ಪೆರುವಾಯಿಯವರು ಓರ್ವ ಪ್ರಸಿದ್ಧ ಶಿಲ್ಪಿ ಯಾಗಿ ತಮ್ಮ ಹೆಸರನ್ನು ಸುವರ್ಣಾಕ್ಷರ ದಲ್ಲಿ ಬರೆದಿಡುವಂತೆ ಮಾಡಿರುವ ಒಬ್ಬ ಅದ್ಭುತ ದಾರು ಬಿಂಬ(ಮರದ ಮೂರ್ತಿ)ದ ರಚನಕಾರ ರಾಗಿ ಮೂಡಿ ಬಂದಿರುವ ಅಪ್ರತಿಮ ಸಾಧಕರಿವರು. ನಿಮಗೂ ನಿಮ್ಮ ತಂಡದವರಿಗೂ ಅಭಿನಂದನೆಗಳು. ಮರದ ಕೊರಡನ್ನು ಅದ್ಭುತ ಕಲಾಪ್ರತಿಮೆಯಾಗಿ ಮಾರ್ಪಡಿಸುವ ಕಲೆಗಾರಿಕೆ ಕರಗತವಾಗಿರುವ ನಿಮ್ಮೆಲ್ಲರ ಸಾಧನೆ ನಿತ್ಯ ನಿರಂತರವಾಗಿರಲಿ. ಭಗವಂತನ ಅನುಗ್ರಹ ಸದಾ ನಿಮಗಿರಲಿ💐 ಸಾಧನೆಯ ಹಾದಿಯಲ್ಲಿ ನಿಮ್ಮೆಲ್ಲಾ ಕನಸುಗಳು ನನಸಾಗಲಿ ಎಂಬ ಆಶಯ ನನ್ನದು.
ಮೂರ್ತಿ ಕೆತ್ತನೆಗಾಗಿ ಸಂಪರ್ಕಿಸಿ: ರಮೇಶ್ ಕುಲಾಲ್ ಪೆರುವಾಯಿ: 7760702002(ವಾಟ್ಸ್ಯಾಪ್) 6361672176