ಪುತ್ತೂರು(ಕುಲಾಲ ವರ್ಲ್ಡ್ ಡಾಟ್ ಕಾಮ್): ಹುಟ್ಟಿದ ಪ್ರತಿಯೊಂದು ವ್ಯಕ್ತಿ ಯಲ್ಲಿಯೂ ಒಂದಲ್ಲ ಒಂದು ಪ್ರತಿಭೆ ಅಡಗಿರುತ್ತದೆ. ಅದಕ್ಕಾಗಿ ಸೂಕ್ತ ವೇದಿಕೆ ಸಿಕ್ಕಾಗ ಪ್ರದರ್ಶನ ಮಾಡುತ್ತಾರೆ. ಇನ್ನೂ ಕೆಲವರು ಎಲ್ಲ ಕಲೆ ಗೊತ್ತಿದ್ದು ವೇದಿಕೆ ಸಿಗದೆ ವಂಚಿತರಾಗಿರುತ್ತಾರೆ. ಹಾಗೆಯೇ ಹಲವು ಕನಸುಗಳನ್ನು ಹೊತ್ತ ಯುವಕ ತಾನು ವೇದಿಕೆಯಲ್ಲಿ ಪ್ರದರ್ಶನ ನೀಡಿ ಅದರ ಅನುಭವದ ರುಚಿಯಿಂದ ಮುಂದುವರಿದ ಪ್ರತಿಭೆ ಭರತ್ ಕುಲಾಲ್. ಎಲ್ಲರೂ ಇವರನ್ನು ಪ್ರೀತಿಯಿಂದ ಬಾತು ಕುಲಾಲ್ ಎಂದು ಕರೆಯುತ್ತಾರೆ.
ಇವರು ಶ್ರೀ ನಾರಾಯಣ ಹಾಗೂ ಶ್ರೀಮತಿ ಸುಂದರಿಯವರ ತೃತೀಯ ಪುತ್ರನಾಗಿ, ನಿರಂಜನ್ ಕುಲಾಲ್ ಹಾಗೂ ಯಶವಂತ್ ಕುಲಾಲ್ ಅವರ ಪ್ರೀತಿಯ ತಮ್ಮನಾಗಿ ಮಂಜನಾಡಿ ಪದೊಳಿಕಟ್ಟೆಯಲ್ಲಿ ಜನಿಸುತ್ತಾರೆ. ತನ್ನ ಪ್ರಾಥಮಿಕ ಹಂತದಿಂದ ಪ್ರೌಢಶಾಲಾ ಶಿಕ್ಷಣವನ್ನು ದೇರಳಕಟ್ಟೆ ಶಾಲೆಯಲ್ಲಿ ಮುಂದುವರಿಸಿದರು. ಹಾಗೆಯೇ ಪದವಿ ಪೂರ್ವ ಶಿಕ್ಷಣವನ್ನು ಉಳ್ಳಾಲ ಭಾರತ್ ಕಾಲೇಜಿನಲ್ಲಿ ಪೂರೈಸಿ. ನಂತರ ಕದ್ರಿಯಲ್ಲಿ ತನ್ನ ಐಟಿಐ ಕೋರ್ಸನ್ನು ಒಂದು ವರ್ಷದಲ್ಲಿ ಮುಗಿಸಿರುತ್ತಾರೆ. ನಂತರ ಇವರ ಕನಸಾದಂತಹ ಎಡಿಟಿಂಗ್ ಕೋರ್ಸ್ ನ್ನು ಮಂಗಳೂರು ಹೋಮ್ ಎಂಟರ್ಟೈನ್ಮೆಂಟ್ ನಲ್ಲಿ ಮುಗಿಸಿರುತ್ತಾರೆ.
ಬೆಳವ ಸಿರಿ ಮೊಳಕೆಯಲ್ಲೇ ಎಂಬಂತೆ ತನ್ನ 6ನೇ ತರಗತಿಯಲ್ಲಿ ಯಕ್ಷಗಾನ ಕಲಿತ ಇವರು ನಂತರ ವಿಷ್ಣುಮೂರ್ತಿ ಅಧ್ಯಯನ ಕೇಂದ್ರದಲ್ಲಿ 5 ವರ್ಷಗಳ ಯಕ್ಷಗಾನ ಪ್ರದರ್ಶನ ನೀಡಿದ್ದಾರೆ. ಕಟೀಲು 1ನೇ ಮೇಳದಲ್ಲಿ 6 ತಿಂಗಳ ತಿರುಗಾಟದಲ್ಲಿ ಭಾಗವಹಿಸಿದ್ದರು. `ಎಂಚ ನಂಬುನಿ’ ಎಂಬ ನಾಟಕದ ಮೂಲಕ ನಾಟಕರಂಗಕ್ಕೆ ಪದಾರ್ಪಣೆಗೈದ ಇವರು ವೈಷ್ಣವಿ ಕಲಾವಿದರು ಮಂಜೇಶ್ವರ ನಾಟಕ ತಂಡಕ್ಕೆ ಸೇರ್ಪಡೆಯಾಗಿ ಸುಮಾರು 5 ವರ್ಷಗಳ ಕಾಲ ತನ್ನ ಸೇವೆಯನ್ನು ಸಲ್ಲಿಸಿದರು.
ಹಾಗೆಯೇ ತುಳುವರ ಜೋಡುಕಲ್ಲ್ ತಂಡಕ್ಕೆ ಸೇರ್ಪಡೆಯಾಗಿ 2 ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಪ್ರೀತಿ ಉಪ್ಪಡ್, ಮೂಜಿನೆದಾಯೆ, ನೆನೆಪು ದೀಲೆ, ಪೊರ್ತು ಆತಿಜಿ, ಬಂಗಾರ್ ಕಂಡನಿ, ಮದಿಮೆ ಒಂಜಿ ಆಂಡ್ ಗೆತ್ತಾ, ಶ್ರೀಮತಿ, ನನ ತೂವೊಡು ಮುಂತಾದ ಹಲವು ನಾಟಕಗಳಲ್ಲಿ ತಮ್ಮ ಕಲಾ ಪ್ರೌಢಿಮೆ ಮೆರೆದಿರುವ ಇವರು ಉಪ್ಪಿ-2, ಕಟಪಾಡಿ ಕಟ್ಟಪ್ಪ, ಭೂಮಿಕಾ ಮುಂತಾದ ಸಿನಿಮಾದಲ್ಲೂ ಚಿಕ್ಕಪುಟ್ಟ ಪಾತ್ರ ನಿರ್ವಹಿಸಿ ಸೈ ಎನಿಸಿದ್ದಾರೆ. ಇವೆಲ್ಲದರ ಮಧ್ಯೆ ಸ್ವಂತದ್ದೇನಾದರೂ ಮಾಡಬೇಕೆಂಬ ಕನಸಿನಂತೆ 2016ರಲ್ಲಿ ಬಿ.ಕೆ ಕ್ರೀಯೆಷನ್ ಎಡಿಟಿಂಗ್ ಆಫೀಸನ್ನು ಆರಂಭಿಸಿದರು. ಅದು ಇಂದಿಗೆ 3 ವರ್ಷಗಳನ್ನು ಪೂರೈಸುತ್ತಾ ಬಂದಿದೆ.
ಹಾಗೆಯೇ ಇವರ ಕೈ ಚಳಕದಿಂದ ಪೆಟ್ಟ್ ಕಮ್ಮಿ ನವೀನ, ಚಕ್ಕುಲಿ, ಅರ್ಕಂಜಿ ಮುಂತಾದ ಆಲ್ಬಂ ಸಾಂಗ್ ಮೂಡಿ ಬಂದಿವೆ. ಅಷ್ಟೇ ಅಲ್ಲದೇ ಇತ್ತೀಚೆಗೆ ಯೂಟ್ಯೂಬ್ ನಲ್ಲಿ ಪ್ರಯೋಗಾತ್ಮಕವಾಗಿಯೂ ಸದ್ದು ಮಾಡುತ್ತಿರುವ `ಮಾಯೆ ಕಾರ್ಣಿಕ ನಾರಿ’ ಕಿರು ಚಿತ್ರ ನೋಡುಗರ ಗಮನ ಸೆಳೆದು ಇವರ ಪ್ರತಿಭೆಗೆ ಕನ್ನಡಿ ಹಿಡಿದಿದೆ.
ಮನಸ್ಸಿನಲ್ಲಿ ಅದೆಷ್ಟೋ ನೋವು ಇದ್ದರೂ ತನ್ನಿಂದ ಬೇರೆಯವರನ್ನು ಖುಷಿಯಲ್ಲಿ ಇಡಬೇಕೆಂದು ಯೋಚಿಸಿದ ಬಾತು ತನ್ನ ಅಣ್ಣನಾದ ನಿರಂಜನ್ ಕುಲಾಲ್ ಅವರ ಜೊತೆ ತಮಾಷೆ ಹಾಗೂ ಅದರ ಜೊತೆಗೆ ಒಳ್ಳೆಯ ಸಂದೇಶವನ್ನು ನೀಡುವ ವೀಡಿಯೋ ವನ್ನು ಮಾಡಿ ಇನ್ನಷ್ಟು ಜನಪ್ರಿಯರಾದರು . ಇದೇ ರೀತಿ ಪ್ರೋತ್ಸಾಹ ಸಿಕ್ಕರೆ ನಾನು ನನ್ನ ಜೀವನದ ಬಹುಮುಖ್ಯ ಕನಸನ್ನು ನನಸಾಗಿಸಬಲ್ಲೆ ಎನ್ನುವ ಬಾತು ಅವರ ಮಾತು ನಿಜವಾಗಲಿ. ಇವರ ಭವಿಷ್ಯ ಉಜ್ವಲವಾಗಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವಂತಾಗಲಿ.