ವಿಟ್ಲ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 75ರ ಹರೆಯದ ಕಿನ್ನು ಕುಲಾಲ್ ಈಗಲೂ ಯಕ್ಷಗಾನದಲ್ಲಿ ಪಾತ್ರ ಮಾಡುತ್ತಾರೆಂದರೆ ಅಚ್ಚರಿಯಾಗಲೇಬೇಕು. ಯಾವ ಪಾತ್ರವಾದರೂ ಸೈ ಕಿನ್ನು ಅವರು ಆ ಪಾತ್ರಕ್ಕೆ ಜೀವ ತುಂಬುತ್ತಾರೆ. ಕೇರಳ-ಕರ್ನಾಟಕ ಗಡಿಪ್ರದೇಶವಾದ ಕುದ್ದುಪದವು ಕೇಪು ಗ್ರಾಮದ ಅಮೈನಲ್ಲಿ 1938ರಲ್ಲಿ ಜನಿಸಿದ ಕಿನ್ನು ಕುಲಾಲ್ ಬಡತನದಲ್ಲೇ ಬೆಳೆದವರು.
ಹದಿಹರೆಯದಲ್ಲಿ ತಂದೆಯ ಮರಣಾನಂತರ ಮನೆಯ ಜವಾಬ್ದಾರಿ ಕಿನ್ನು ಅವರ ಹೆಗಲ ಮೇಲೆ ಬಿತ್ತು. ಆಗ ಕಲಿಕೆಗೆ ವಿದಾಯ ಹೇಳಿದ ಕಿನ್ನು, ಕಟೀಲು ಮೇಳದ ಹಿರಿಯ ಕಲಾವಿದರಾಗಿದ್ದ ಮುದ್ಕುಂಜ ವಾಸುದೇವ ಪ್ರಭುಗಳ ಬಳಿ ಯಕ್ಷಗಾನ ನಾಟ್ಯ ತರಬೇತಿ ಪಡೆದರು.
ಹೊಟ್ಟೆಪಾಡಿಗಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದರೂ, ಯಕ್ಷಗಾನದ ಹವ್ಯಾಸವನ್ನು ಮುಂದುವರಿಸಿದರು. ಹೀಗೆ ವಾಸುದೇವ ಪ್ರಭುಗಳೊಂದಿಗೆ ಕಟೀಲಿನಲ್ಲಿ ತಮ್ಮ 14ನೇ ವಯಸ್ಸಿನಲ್ಲಿ ರಂಗಸ್ಥಳ ಪ್ರವೇಶ ಮಾಡಿದರು. ಯಕ್ಷಗಾನ ಕೈ ಹಿಡಿಯುತ್ತಿದ್ದಂತೆ ಹಲವಾರು ಹವ್ಯಾಸಿ ಕಲಾವಿದರೊಂದಿಗೆ ಸೇರಿ ತಮ್ಮ ಹುಟ್ಟೂರಿನಲ್ಲಿ ಉಳ್ಳಾಲ್ತಿ ಯಕ್ಷಗಾನ ಕಲಾಸಂಘವನ್ನೂ ಸ್ಥಾಪಿಸುವ ಮೂಲಕ ಯಕ್ಷಗಾನ ಕಲಾವಿದರಿಗೆ ಪ್ರೋತ್ಸಾಹ ನೀಡಿದರು. 1986ರಲ್ಲಿ ದುರ್ಗಾಪರಮೇಶ್ವರಿ ಯಕ್ಷಗಾನ ಸಂಘದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಇವರು ಕಾಸರಗೋಡು ಮತ್ತು ಕರ್ನಾಟಕದಲ್ಲಿ ಸಾವಿರಾರು ಪ್ರದರ್ಶನಗಳನ್ನು ನೀಡಿದ್ದಾರೆ.
ಮೊದಲ ಬಾರಿಗೆ ನಾರದನ ವೇಷ ಹಾಕುವ ಮೂಲಕ ರಂಗಸ್ಥಳದಲ್ಲಿ ಹೆಜ್ಜೆ ಹಾಕಿದ ಇವರು, ಯಾವುದೇ ಬಣ್ಣದ ವೇಷಗಳಿರಲಿ, ಈ ಪಾತ್ರಕ್ಕೆ ನ್ಯಾಯವೊದಗಿಸುತ್ತಾರೆ. ಇವರ ನಾಲ್ವರು ಮಕ್ಕಳೂ ಯಕ್ಷಗಾನ ಕಲಾವಿದರೇ. ಕಿನ್ನು ಅವರು ಬಣ್ಣದ ವೇಷಧಾರಿಯಾಗಿ ಸಹಸ್ರಕವಚ, ತಾರಕಾಸುರ, ನರಕಾಸುರ, ರಾವಣ, ಭೀಮ, ಶಬರಾಸುರ ಮೊದಲಾದ ಪಾತ್ರಗಳನ್ನು ನಿರ್ವಹಿಸಿ ಜನ ಮನ್ನಣೆ ಗಳಿಸಿದ್ದಾರೆ. ಇವರು ಸಂಪೂರ್ಣ ದೇವಿ ಮಹಾತ್ಮೆಯಲ್ಲಿ ಶುಂಭಾಸುರ ಪಾತ್ರ ಮಾಡಿದ್ದನ್ನು ನೋಡಿದ ಜನ ಇಂದಿಗೂ ಅವರ ಕಲಾನೈಪುಣ್ಯವನ್ನು ಹಾಡಿ ಹೊಗಳುತ್ತಾರೆ.
ವೃತ್ತಿ ಕಲಾವಿದರಾದ ಹೊಸಹಿತ್ಲು ಮಹಾಲಿಂಗ ಭಟ್, ಗಂಗಾಧರ ಆಚಾರಿ, ಜಗದೀಶ ನಲ್ಕ ಮೊದಲಾದವರ ಜತೆ ರಂಗಸ್ಥಳ ಹಂಚಿಕೊಂಡ ಇವರು ತಾವು ಯಾವುದೇ ವೃತ್ತಿ ಕಲಾವಿದರಿಗಿಂತ ಕಮ್ಮಿಯಿಲ್ಲ ಎಂಬುದನ್ನು ಅಭಿನಯಿಸಿ ತೋರಿಸಿದ್ದಾರೆ. ಭಜನಾ ಕಲಾವಿದರೂ ಆಗಿದ್ದ ಇವರು ಶ್ರೀ ಉಳ್ಳಾಲ್ತಿ ಭಜನಾ ಮಂಡಳಿ, ಅಮೈಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ಆದರೆ ಇಂತಹ ಪ್ರತಿಭೆಯಿರುವ ಕಿನ್ನು ಕುಲಾಲ್ ಎಲೆಮರೆ ಕಾಯಿಯಾಗಿಯೇ ಉಳಿದಿರುವುದು ದುರದೃಷ್ಟಕರ. ಸ್ಥಳೀಯ ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ.
ಪ್ರಸ್ತುತ ವರ್ಷ ಕರ್ನಾಟಕ ಸರ್ಕಾರದ ಕಲಾವಿದರ ಮಾಸಾಶನ ವ್ಯಾಪ್ತಿಗೆ ಇವರು ಆಯ್ಕೆಯಾಗಿದ್ದು ಬಿಟ್ಟರೆ ಇವರ ಪ್ರತಿಭೆಗೆ ಅರ್ಹ ಗೌರವಗಳು ಈವರೆಗೆ ಸಂದಿಲ್ಲ.
ಯಕ್ಷಗಾನ ಕಲೆಯನ್ನೇ ಜೀವಾಳವಾಗಿಸಿಕೊಂಡಿರುವ ಇವರು ಯಾವತ್ತೂ ಪ್ರಶಸ್ತಿ, ಗೌರವಗಳಿಗಾಗಿ ಹಂಬಲಿಸಿದವರೂ ಅಲ್ಲ. ತಾನು ಪ್ರಾಮಾಣಿಕನಾಗಿಯೇ ಇದ್ದು, ಕಲಾಸೇವೆಯನ್ನು ಸಲ್ಲಿಸಿದರಷ್ಟೇ ಸಾಕು ಎಂಬ ಮನೋಭಾವ ಇವರದ್ದು. ಕಲಾವಿದರು ಪ್ರಶಸ್ತಿ ಪುರಸ್ಕಾರಗಳ ಹಿಂದೆ ಬಿದ್ದು ತಮ್ಮನ್ನು ತಾವೇ ಹೊಗಳಿಕೊಳ್ಳುವ ಈ ಕಾಲದಲ್ಲಿ ಇಂದಿಗೂ ಕೂಲಿ ಮಾಡಿ ಜೀವಿಸುವ ಕಿನ್ನು ಅವರ ಪ್ರಾಮಾಣಿಕತೆಯನ್ನು ಮೆಚ್ಚಲೇ ಬೇಕು. ಸಾಂಸಾರಿಕ ಜವಾಬ್ದಾರಿಯೊಂದಿಗೆ ಬಡತನದಲ್ಲಿಯೂ ಯಕ್ಷಗಾನ ಕಲೆಯನ್ನು ಕಲಿತು ಈ ಇಳಿವಯಸ್ಸಿನಲ್ಲಿಯೂ ಅದನ್ನು ವ್ರತದಂತೆ ಮುಂದುವರಿಸುತ್ತಿರುವ ಕಿನ್ನು ಅವರಿಗೆ ಹ್ಯಾಟ್ಸ್ ಆಫ್!