ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮ ನಿರೂಪಕರಿಗೆ ಅವಕಾಶಗಳು ಹೆಚ್ಚಾಗಿವೆ. ಕಾರಣ ಟಿವಿ ಮಾಧ್ಯಮಗಳಲ್ಲಿ ಇಂದು ರಿಯಾಲಿಟಿ ಶೋಗಳು ಹೆಚ್ಚಿವೆ. ಹೀಗಾಗಿ ಉತ್ತಮ ಮಾತುಗಾರರಿಗೆ ಅವಕಾಶಗಳು ಎಲ್ಲೆಡೆಯೂ ತೆರೆದಿವೆ. ಆ್ಯಂಕರ್ ಆಗಬೇಕು, ಟಿವಿಯಲ್ಲಿ ಕಾಣಿಸಿಕೊಳ್ಳಬೇಕು ಎನ್ನುವಂಥ ಹಂಬಲ ಇರುವವರು ನಿರೂಪಣಾ ಶೈಲಿ ಮತ್ತು ಭಾಷೆಯನ್ನು ತಿಳಿದುಕೊಂಡಿರುವುದು ಅತೀ ಅಗತ್ಯ. ಶಾಲೆ, ಕಾಲೇಜುಗಳಲ್ಲಿ ಭಾಷಣ, ಸಂವಾದ, ಡಿಬೇಟ್ ಇನ್ನಿತರ ಸ್ಪರ್ಧೆಗಳಲ್ಲಿ ಭಾಗವಹಿಸಿ ಮೆಚ್ಚುಗೆ ಗಳಿಸಿದ್ದರೆ ಮುಂದೆ ಇಂತಹ ಕ್ಷೇತ್ರದಲ್ಲೂ ಉದ್ಯೋಗ ಕಂಡುಕೊಳ್ಳಲು ಸಾಧ್ಯವಿದೆ. ಮಾತನಾಡುವುದು ಒಂದು ಕಲೆ. ಎಲ್ಲರಿಗೂ ಇದು ಸಿದ್ಧಿಸುವುದಿಲ್ಲ. ಯಾವುದೇ ಕಾರ್ಯಕ್ರಮ ಇರಲಿ, ಒಬ್ಬ ಒಳ್ಳೆಯ ನಿರೂಪಕ ಆ ವೇದಿಕೆಗೆ ಒಂದು ಕಳೆಯನ್ನು ನೀಡಬಲ್ಲ. ಇಂಥ ಕಲೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಬದುಕು ಕಟ್ಟಿಕೊಂಡವರೂ ಇದ್ದಾರೆ. ಇವರಲ್ಲಿ ಮಧುರಾಜ್ ಗುರುಪುರ ಕೂಡಾ ಒಬ್ಬರು.
ಮಾತು ಬಲ್ಲವರಿಗೆ ಜಗಳವಿಲ್ಲ. ಊಟ ಬಲ್ಲವನಿಗೆ ರೋಗವಿಲ್ಲ ಎನ್ನುವಂತೆ ಮಾತು ಎಲ್ಲವನ್ನೂ ನೀಡುತ್ತದೆ. ವಾಕ್ಚಾತುರ್ಯವನ್ನು ಬಂಡವಾಳ ಮಾಡಿಕೊಂಡು ಕಾರ್ಯಕ್ರಮಗಳ ನಿರೂಪಣೆ ಮಾಡುವುದನ್ನು ಕರಗತ ಮಾಡಿಕೊಂಡಿರುವ ಮಧುರಾಜ್ ಎಂಬ ಇಪ್ಪತ್ತೈದರ ತರುಣ. ತನ್ನ ವಾಕ್ಚಾತುರ್ಯದ ಮೂಲಕ ಜನಮನ ಸೆಳೆದ ಇವರು, ಇತ್ತೀಚೆಗಷ್ಟೇ ದೂರದ ಮುಂಬಯಿಯಲ್ಲಿ `ಸ್ವರ ಮನ್ಮಥ’ ಎಂಬ ಬಿರುದಿನೊಂದಿಗೆ ಗೌರವಿಸಲ್ಪಟ್ಟಿದ್ದಾರೆ.
ಗುರುಪುರದ ನಾರಾಯಣ ಮತ್ತು ಇಂದಿರಾ ದಂಪತಿಗಳ ಪುತ್ರನಾಗಿರುವ ಮಧುರಾಜ್, ತನ್ನ ಆರನೇ ವಯಸ್ಸಿನಲ್ಲಿಯೇ ನಾಟಕಕ್ಕೆ ಬಣ್ಣ ಹಚ್ಚುವ ಮೂಲಕ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದರು. `ಮುಗಲ್ ಬಿರಿನಗ’ ಎಂಬ ತುಳು ನಾಟಕದಲ್ಲಿ ಬಲ ನಟನಾಗಿ ಅಭಿನಯಿಸಿ ಎಲ್ಲರ ಮೆಚ್ಚುಗೆ ಗಳಿಸಿದ್ದ ಇವರು, ಶಾಲೆಯಲ್ಲಿ ನಡೆಯುತ್ತಿದ್ದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ತಪ್ಪದೇ ಭಾಗವಹಿಸುತ್ತಿದ್ದರು.
ಹೀಗೆ ಸಣ್ಣ ಪುಟ್ಟ ಭಾಗವಹಿಸುವಿಕೆ ಅವರಿಗೆ ಪ್ರೇರಣೆಯಾಗಿ ಇಂದು ಒಬ್ಬ ಉತ್ತಮ ನಿರೂಪಕ ಎಂಬ ಬಿರುದು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಮೊದಲಿಗೆ ತಮ್ಮ ಧ್ವನಿಯನ್ನು ಮೊಬೈಲ್ ಫೋನ್ ನಲ್ಲಿ ರೆಕಾರ್ಡಿಂಗ್ ಮಾಡಿ, ತನ್ನ ಸ್ನೇಹಿತರಿಗೆ ಕಳಿಸಿಕೊಟ್ಟು, ಅವರಿಂದ ಬಂದ ಪ್ರೋತ್ರಾಹದ ಮಾತುಗಳಿಂದ ಪುಳಕಿತಗೊಳ್ಳುತ್ತಿದ್ದ ಮಧುರಾಜ್ ನ ಆತ್ಮವಿಶ್ವಾಸ ಹೆಚ್ಚಿಸುವಲ್ಲಿ ಸಹಕಾರಿಯಾಗಿದ್ದು, ಮುಂದೆ ಈ ಕ್ಷೇತ್ರವನ್ನು ಆಯ್ಕೆ ಮಾಡಲು ಪ್ರೇರಣೆಯಾಯಿತು.
ಬಜ್ಪೆ ಸುಂಕದಕಟ್ಟೆ ನಿರಂಜನಸ್ವಾಮಿ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸ ನಡೆಸುತ್ತಿದ್ದಾಗ ಬಹುತೇಕ ಎಲ್ಲಾ ಕಾರ್ಯಕ್ರಮಗಳಲ್ಲಿ ತಮ್ಮ ವಿಶೇಷ ಕಲೆಯಿಂದ ಗುರುತಿಸಿಕೊಂಡರು. ಇಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ನಿರೂಪಕನಾಗಿ ಎಲ್ಲರ ಪ್ರಶಂಸೆ ಗಳಿಸಿರುವ ಇವರು ಮೂರು ಬಾರಿ ಉತ್ತಮ ನಿರೂಪಕ ಎಂಬ ಪ್ರಶಸ್ತಿ ಗಿಟ್ಟಿಸಿಕೊಂಡಿದ್ದಾರೆ.
ನಿರೂಪಣೆ ಮಾತ್ರವಲ್ಲದೆ ಹಾಡುಗಾರಿಕೆ, ನಟನೆ, ಮಿಮಿಕ್ರಿಯಲ್ಲಿಯೂ ಕೈಯಾಡಿಸಿ ಯಶಸ್ವಿಯಾಗಿರುವ ಮಧುರಾಜ್, ೨೦೧೬ ರಲ್ಲಿ ಬೆಂಗಳೂರಿನಲ್ಲಿ ನಡೆದ `ಪರಿಚಯ್’ ಎಂಬ ರಿಯಾಲಿಟಿ ಷೋ ನಲ್ಲಿ ಪಾಲ್ಗೊಂಡು `ಬೆಸ್ಟ್ ಎಂ.ಸಿ ಅವಾರ್ಡ್’ ಪಡೆದುಕೊಂಡಿದ್ದಾರೆ. ನ್ಯೂಸ್ ಕರ್ನಾಟಕ ಎಂಬ ಚಾನೆಲ್ ನಲ್ಲಿ ಕಾರ್ಯಕ್ರಮ ನಿರೂಪಣೆ ಮಾಡುತ್ತಾ ಬಂದಿರುವ ಮಧುರಾಜ್ ಅವರಿಗೆ `ವಿಶ್ವ ತುಳುವೆರೆ ಪರ್ಬ’ದಲ್ಲಿ ಉತ್ತಮ ನಿರೂಪಕನೆಂಬ ನೆಲೆಯಲ್ಲಿ ಸನ್ಮಾನಿಸಲಾಗಿದೆ.
ಮುಂಬಯಿ ಬಂಟರ ಸಂಘ ಸಹಿತ ಸುಮಾರು 900 ಕ್ಕೂ ಅಧಿಕ ಕಾರ್ಯಕ್ರಮಗಳಲ್ಲಿ ತಮ್ಮ ನಿರೂಪಣಾ ಪ್ರತಿಭೆಯನ್ನು ಮೆರೆದಿರುವ ಇವರು `ಕಲಾಂಜಲಿ ಕ್ರಿಯೇಷನ್’ ತಂಡದ ಜೊತೆ ಸೇರಿ ನಲ್ವತ್ತಕ್ಕೂ ಹೆಚ್ಚು ಆಲ್ಬಮ್ ಹಾಡುಗಳಿಗೆ ಸ್ವರ ನೀಡಿದ್ದಾರೆ. ಇತ್ತೀಚೆಗಷ್ಟೇ ಮುಂಬಯಿಯ ತಿಲಕ್ ನಗರ ಪೆಸ್ಟೋಮ್ ಸಾಗರ ಕರ್ನಾಟಕ ಸಂಘವು `ಸ್ವರ ಮನ್ಮಥ’ ಎಂಬ ಬಿರುದನ್ನು ನೀಡಿ ಗೌರವಿಸಿದೆ.