ಕುಂದಾಪುರ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬೀಜಾಡಿ ಐಶ್ವರ್ಯ ಮೀಡಿಯಾ ಆಯೋಜಿಸಿರುವ ಸಿನಿ ಕುಂದಾಪುರ 2019, ಕುಂದಾಪುರ ಭಾಗದ ಪ್ರಥಮ ಕಿರುಚಿತ್ರ ಸ್ಪರ್ಧೆಯಲ್ಲಿ ಕುಲಾಲ ಸಮಾಜದ ರಾಘವೇಂದ್ರ ಶಿರಿಯಾರ ನಿರ್ದೇಶನದ `ಅಜ್ಜಿ ಮನೆ’ ಪ್ರಥಮ ಸ್ಥಾನ ಪಡೆದಿದೆ.
ಫೆಬ್ರವರಿ 16ರಂದು ಕೋಟೇಶ್ವರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಕಿರುಚಿತ್ರ ಸ್ಪರ್ಧೆ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಿತು. ಕುಂದಾಪುರ ಕನ್ನಡ ಭಾಷೆಯನ್ನ ಬಳಸಿ `ಅಜ್ಜಿ ಮನೆ’ ಚಿತ್ರವನ್ನು ಸುಂದರವಾಗಿ ಕಟ್ಟಿಕೊಡಲಾಗಿದ್ದು, ಕುಂದಾಪುರ ಭಾಗದ ಅಜ್ಜಿ ಮನೆಯ ,ಅಜ್ಜಿ ಮತ್ತು ಮೊಮ್ಮಗಳ ಭಾವನೆಗಳ ಸುತ್ತ ಈ ಚಿತ್ರವನ್ನು ಹೆಣೆಯಲಾಗಿದೆ. ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶನ ಪ್ರಶಸ್ತಿಯನ್ನ ರಾಘವೇಂದ್ರ ಶಿರಿಯಾರ, ಛಾಯಾಗ್ರಹಣಕ್ಕಾಗಿ ರೋಹಿತ್ ಅಂಪಾರು ಅತ್ಯುತ್ತಮ ಛಾಯಾಗ್ರಹಣ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸ್ಪರ್ಧೆಗೆ ಆಗಮಿಸಿದ 12 ಕಿರುಚಿತ್ರಗಳ ಪೈಕಿ 5 ಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. 1 ಕಿರುಚಿತ್ರಕ್ಕೆ ಶ್ರೇಷ್ಠ ಚಿತ್ರ, 2 ಕಿರುಚಿತ್ರಗಳಿಗೆ ಉತ್ತಮ ಚಿತ್ರ, ಇನ್ನೆರಡು ಚಿತ್ರಗಳಿಗೆ ಪ್ರೋತ್ಸಾಹಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕುಂದಾಪುರ ಡಿವೈಎಸ್ಪಿ ಬಿ.ಪಿ.ದಿನೇಶ್ಕುಮಾರ್ ಸಮಾರಂಭ ಉದ್ಘಾಟಿಸಿ ಶುಭಕೋರಿದರು. ರಾಷ್ಟ್ರಪ್ರಶಸ್ತಿ ಪುರಸ್ಕೃತ ನಿರ್ಮಾಪಕ ಯಾಕೂಬ್ ಖಾದರ್ ಗುಲ್ವಾಡಿ, ಪ್ರಸಿದ್ಧ ಚಲನಚಿತ್ರ ಸಂಕಲನಕಾರ ಬಿ.ಎಸ್.ಕೆಂಪರಾಜು ಬೆಂಗಳೂರು, ರಂಗಕರ್ಮಿ ಸದಾನಂದ ಬೈಂದೂರು, ಐಶ್ವರ್ಯ ಮೀಡಿಯಾ ಮುಖ್ಯಸ್ಥ ರಾಘವೇಂದ್ರ ಬೀಜಾಡಿ, ಕೃಷ್ಣಮೂರ್ತಿ ಪಿ.ಕೆ., ರವೀಂದ್ರ ಶೆಟ್ಟಿ, ನಿವೃತ್ತ ಬಿಇಓ ಗೋಪಾಲ ಶೆಟ್ಟಿ, ಶ್ರೀನಿವಾಸ ಗಾಣಿಗ, ಶಶಾಂಕ್ ಮಂಜ, ಮಿತ್ರಾ ಮಂಜ ಮತ್ತಿತರರು ಉಪಸ್ಥಿತರಿದ್ದರು.