ಇದು ಚಿತ್ರ ರಸಿಕರ ಮನಗೆದ್ದ ಕೊಲೆ ರಹಸ್ಯದ ಥ್ರಿಲ್ಲರ್ ಸಿನಿಮಾ
ಕುಲಾಲ್ ವರ್ಲ್ಡ್ ಡಾಟ್ ಕಾಮ್ : ಯಶೋಧೆ ಧಾರಾವಾಹಿಯ ನಾಯಕನಾಗಿ ಮನೆ ಮಾತಾಗಿದ್ದವರು ಕಾರ್ತಿಕ್ ಬಂಜನ್ ಅತ್ತಾವರ. ಇವರು ಅಪ್ಪಟ ತುಳುನಾಡ ಹುಡುಗ. ಈ ಹಿಂದೆ ರಿಕ್ಷಾ ಡ್ರೈವರ್ ಎಂಬ ತುಳು ಚಿತ್ರದ ಮೂಲಕವೇ ಕಾರ್ತಿಕ್ ನಟನಾಗಿ ಹೊರ ಹೊಮ್ಮಿದ್ದರು. ಆದರೆ ಅವರ ಆಸೆಗಳೇ ಬೇರೆಯದ್ದಿದ್ದವು.`ಅನುಕ್ತ’ ಚಿತ್ರಕ್ಕೆ ಥ್ರಿಲ್ಲರ್ ಶೈಲಿಯ ಕಥೆ ಬರೆದಿದ್ದು ಇದೇ ಕಾರ್ತಿಕ್ ಬಂಜನ್ ಎಂಬುದು ನಿಜವಾದ ವಿಶೇಷ ಮತ್ತು ಅಚ್ಚರಿ. ಬಹುಶಃ ಅವರೂ ತುಳುನಾಡಿನವರೇ ಆದ್ದರಿಂದ ಆ ಮಣ್ಣಿನ ಘಮಲಿನ ಕಥೆಯನ್ನೇ ಹೆಣೆದಿದ್ದಾರೆ. ಆದರೆ ಈ ಕಥೆ ಬರೆಯುವಾಗ ಅವರಲ್ಲಿ ಇದೊಂದು ಒಳ್ಳೆ ಚಿತ್ರವಾಗಬೇಕೆಂಬ ಬಯಕೆ ಇತ್ತೇ ಹೊರತು ತಾನು ನಾಯಕನಾಗಬೇಕೆಂಬ ಯಾವ ಇರಾದೆಯೂ ಇರಲಿಲ್ಲವಂತೆ.
ಕಡೆಗೆ ಅಶ್ವತ್ಥ್ ಸ್ಯಾಮುಯಲ್ ನಿರ್ದೇಶನ ಮಾಡಲು ತಯಾರಾಗಿ, ಹರೀಶ್ ಬಂಗೇರ ನಿರ್ಮಾಣ ಮಾಡಲು ಮುಂದಾಗಿದ್ದರು. ಇದಕ್ಕೆ ಅನುಕ್ತ ಎಂಬ ಹೆಸರು ಫಿಕ್ಸಾಗಿ ಸಂಗೀತ ಭಟ್ ನಾಯಕಿಯಾಗಿಯೂ ಆಯ್ಕೆಯಾಗಿದ್ದರು. ಆದರೆ ನಾಯಕ ಯಾರೆಂಬ ಪ್ರಶ್ನೆ ಮಾತ್ರ ಹಾಗೆಯೇ ಉಳಿದುಕೊಂಡಿತ್ತು. ಕಡೆಗೆ ತಾವೇ ಆ ಪಾತ್ರಕ್ಕೆ ಸೂಕ್ತ ಎಂಬ ಅಭಿಪ್ರಾಯ ಚಿತ್ರ ತಂಡದಿಂದ ಬಂದಾಗ ಕಾರ್ತಿಕ್ ಅನಿರೀಕ್ಷಿತವಾಗಿ ನಾಯಕನಾಗಿ ನಟಿಸಿದ್ದರಂತೆ. ಆದರೆ, ಅನುಕ್ತ ಚಿತ್ರದ ಮೂಲಕ ಕಾರ್ತಿಕ್ ನಾಯಕನಾಗಿ ನೆಲೆಗೊಳ್ಳೋದು ಖಚಿತ ಎಂಬಂತಿದೆ. ಯಶೋಧೆ ಧಾರಾವಾಹಿಯ ಮೂಲಕ ಕಿರುತೆರೆ ಪ್ರೇಕ್ಷಕರ ಮನ ಗೆದ್ದಿದ್ದ ಕಾರ್ತಿಕ್ ಇದೀಗ ಹಿರಿತೆರೆಗೂ ಲಗ್ಗೆ ಇಟ್ಟಿದ್ದಾರೆ.
ಈಗಾಗಲೇ ಟ್ರೇಲರ್, ಹಾಡುಗಳ ಮೂಲಕ ಸಖತ್ ಸದ್ದು ಮಾಡಿರುವ ಸಿನಿಮಾ ರಾಜ್ಯಾದ್ಯಂತ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ತಮ್ಮ ಸಿನಿಮಾ ಬಗ್ಗೆ ಕಾರ್ತಿಕ್ ಇಲ್ಲಿ ಮಾತನಾಡಿದ್ದಾರೆ.
- ಅನುಕ್ತ ಎಂದರೆ ಏನು ?
ಸಂಸ್ಕೃತದಲ್ಲಿ ‘ಉಕ್ತಿ’ ಎನ್ನುವ ಪದ ಇದೆ. ಹೇಳುವುದು ಎನ್ನುವುದು ಇದರ ಅರ್ಥ. ಅನುಕ್ತ ಎಂದರೆ ಹೇಳೋಕಾಗದ್ದು, ಮಾತಿನಲ್ಲಿ ಎಂಬ ಅರ್ಥ ಬರುತ್ತದೆ.
- ಇದೇ ಹೆಸರನ್ನು ಸಿನಿಮಾಗೆ ಇಡಲು ಕಾರಣವೇನು ?
ಸಿನಿಮಾದಲ್ಲಿ ಒಂದಿಷ್ಟು ಘಟನೆಗಳು ನಡೆದಿರುತ್ತವೆ. ಅದನ್ನು ಯಾರೂ ಯಾರಿಗೂ ವಿವರಿಸಲು ಆಗುವುದಿಲ್ಲ. ಇಂಥ ಘಟನೆಗಳನ್ನಿಟ್ಟುಕೊಂಡು ಹಣೆದ ಕತೆಯಾದ ಕಾರಣ ಇದೇ ಟೈಟಲ್ ಸೂಕ್ತ ಏನಿಸಿತು. ಟ್ರೇಲರ್ ನೋಡಿದವರು, ಇದು ರಂಗಿತರಂಗ ರೀತಿ ಇದೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ. ಅಲ್ಲಿ ಯಕ್ಷಗಾನವನ್ನು ಬಳಸಲಾಗಿತ್ತು, ನಾವಿಲ್ಲಿ ದೈವಾರಾಧನೆಯನ್ನು ಬಳಸಿದ್ದೇವೆ. ಎರಡೂ ಕರಾವಳಿಯ ಹಿನ್ನಲೆಯಲ್ಲಿಯೇ ಬರುವಂಥದ್ದು, ಇದನ್ನು ನೋಡಿದವರಿಗೆ ಹಾಗೆ ಆದರೆ ಅದರ ಕತೆಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಹೊಸ ರೀತಿಯ ಕತೆ ಇದರಲ್ಲಿದೆ.
- ಕಿರುತೆರೆಯಿಂದ ಹಿರಿತೆರೆಯ ಪಯಣ ಹೇಗಿದೆ ?
ಕಲರ್ಸ್ನ ಯಶೋಧೆ ಧಾರಾವಾಹಿ ಮಾಡುವಾಗಲೇ ನನಗೆ ಸಿನಿಮಾ ಮಾಡುವ ಕನಸಿತ್ತು. ಒಂದಿಷ್ಟು ಅವಕಾಶಗಳು ಕೂಡಾ ಹುಡುಕಿ ಬಂದಿತ್ತು. ಆದರೆ ನನಗೆ ಎಲ್ಲರೂ ಮಾಡುವಂಥ ಮಾಮೂಲಿ ಸಿನಿಮಾ ಮಾಡುವುದಕ್ಕೆ ಇಷ್ಟ ಇರಲಿಲ್ಲ. ಹೊಸ ರೀತಿಯ ಕತೆಗೆ ಹುಡುಕಾಟ ನಡೆಸಿದ್ದೆ. ಒಬ್ಬ ಸಾಮಾನ್ಯ ಕುಳಿತು ಒಂದು ಕತೆ ಮಾಡಿಕೊಂಡೆ. ಅದು ನಮ್ಮ ಇಡೀ ತಂಡದವರಿಗೆ ಇಷ್ಟವಾಯ್ತು. ನಂತರದಲ್ಲಿ ಅನುಕ್ತ ಸಿನಿಮಾ ಆಗಿ ನಿಮ್ಮ ಮುಂದಿದೆ. ನಾನು ಯಾವ ರೀತಿಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪ್ರವೇಶ ಪಡೆಯಬೇಕೆಂದು ಆಸೆ ಪಟ್ಟಿದ್ದೆನೋ ಅದೇ ರೀತಿಯ ಸಿನಿಮಾ ಮೂಲಕ ಬರುತ್ತಿದ್ದೇನೆ. ಈ ಬಗ್ಗೆ ಖುಷಿ ಇದೆ.
- ನಿಮ್ಮ ಧಾರಾವಾಹಿಯಂತೆ ಸಿನಿಮಾದಲ್ಲಿಯೂ ಕರಾವಳಿ ಪ್ಲೇವರ್ ಹೆಚ್ಚಿದೆ. ಇದರ ಹಿಂದಿನ ಕಾರಣ ಏನು?
ಕಾರಣ ಅಂತ ಏನಿಲ್ಲ, ನಮ್ಮ ಸುತ್ತಮುತ್ತಲಿನ ಇಲ್ಲಿನ ಆಚರಣೆಗಳನ್ನು ಸೇರಿಯೇ ಕತೆ ಹೆಣೆದಿದ್ದು. ನಿರ್ದೇಶಕರಿಗೂ ಕರಾವಳಿ ಪರಿಸರ ಚೆನ್ನಾಗಿ ಗೊತ್ತಿತ್ತು. ಅದನ್ನು ಸಿನಿಮಾದಲ್ಲಿ ಹೇಗೆ ತೋರಿಸಬೇಕು ಎನ್ನುವ ಐಡಿಯಾ ಕೂಡಾ ಅವರಲ್ಲಿತ್ತು. ಈ ಎಲ್ಲ ಕಾರಣಗಳು ಸೇರಿ ಸಿನಿಮಾದಲ್ಲಿ ಕರಾವಳಿಯ ಫ್ಲೇವರ್ ಹೆಚ್ಚಾಯ್ತು. ಇದನ್ನು ಬಿಟ್ಟರೆ ಬೇರೆ ಕಾರಣ ಏನಿಲ್ಲ.
- ಸಿನಿಮಾದ ಕತೆಯೆ ಎಳೆಯ ಬಗ್ಗೆ ಹೇಳಿ?
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ. ಕತೆಯ ಪ್ರತಿಯೊಂದು ಅಂಶ ಕೂಡಾ ಸಿನಿಮಾಗೆ ಮುಖ್ಯವಾಗುತ್ತದೆ. ಅದನ್ನು ಹೇಳುವುದು ಕಷ್ಟವಲ್ಲ. ಗೊತ್ತಿಲ್ಲದೇ ಯಾವುದೇ ವಿಚಾರಗಳನ್ನು ತಲೆಯಲ್ಲಿ ಇಟ್ಟುಕೊಳ್ಳದೇ ಸಿನಿಮಾ ನೋಡಿದರೆ ಸಿಗುವ ಖುಷಿ, ನಾನು ಸಿನಿಮಾ ಬಗ್ಗೆ ಒಂದಿಷ್ಟು ವಿಷಯಗಳನ್ನು ಹೇಳಿದ ನಂತರ ಸಿಗುವುದಿಲ್ಲ. ನಾನು ಒಂದು ಭರವಸೆ ಕೊಡ್ತೀನಿ ಇಡೀ ಸಿನಿಮಾ ಪ್ರೇಕ್ಷಕರಿಗೆ ಹೊಸ ಅನುಭವ ಕೊಡುತ್ತದೆ. ಮೊದಲಿನಿಂದ ಕೊನೆಯವರೆಗೂ ಸೀಟಿನ ತುದಿಯಲ್ಲಿ ಕುಳಿತು ನೋಡುವಂತೆ ಮಾಡುತ್ತದೆ.
- ಟ್ರೇಲರ್ ಯೂಟ್ಯೂಬ್ನಲ್ಲಿ ಸೌಂಡ್ ಮಾಡಿದೆ, ಇದನ್ನು ನಿರೀಕ್ಷೆ ಮಾಡಿದ್ರಾ?
ಟ್ರೇಲರ್ ಎನ್ನುವುದು ಸಿನಿಮಾಗೆ ಆಹ್ವಾನ ಪತ್ರಿಕೆ ಇದ್ದಂತೆ. ಇದು ಚೆನ್ನಾಗಿರಬೇಕು ನಿರ್ಧರಿಸಿಯೇ ಟ್ರೇಲರ್ ಬಿಡುಗಡೆ ಮಾಡಿದ್ವಿ. ಹೊಸಬನ ಸಿನಿಮಾ ಆದ ಕಾರಣ ಜನರು ನಿಮ್ಮ ಸಿನಿಮಾ ಏಕೆ ನೋಡಬೇಕು ಎಂದು ಕೇಳುತ್ತಾರೆ. ಇದಕ್ಕೆ ಉತ್ತರ ನಮ್ಮ ಟ್ರೇಲರ್. ಸಿನಿಮಾ ಹೇಗೆ ಬಂದಿದೆ, ಸಿನಿಮಾದಲ್ಲಿ ಏನೆಲ್ಲಾ ಇದೆ ಎನ್ನುವುದನ್ನು ಹೇಳಿ ಜನರಲ್ಲಿ ಕುತೂಹಲ ಮೂಡಿಸಬೇಕಿತ್ತು. ಈ ಕೆಲಸವನ್ನು ಟ್ರೇಲರ್ ಮಾಡಿದೆ. ಇದು ಜನರನ್ನು ಥಿಯೇಟರ್ಗೆ ಕರೆತರುವಲ್ಲಿ ಮುಖ್ಯ ಪಾತ್ರವಹಿಸುತ್ತದೆ ಎಂಬ ನಂಬಿಕೆ ಇದೆ.
- ಸಿನಿಮಾದಲ್ಲಿ ಬೇರೆ ಯಾರೆಲ್ಲಾ ಇದ್ದಾರೆ ?
ಸಂಗೀತ, ಅನು ಪ್ರಭಾಕರ್, ಸಂಪತ್ ರಾಜ್ ಮೂವರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಶ್ವಥ್ ಸ್ಯಾಮುಯಲ್ ಸಿನಿಮಾ ರ್ದೇಶಕರು, ಹರೀಶ್ ಬಂಗೇರ ನಿರ್ಮಾಪಕರು, ನಾಬಿನ್ ಪೌಲ್ ಸಂಗೀತ, ಮನೋಹರ್ ಜೋಷಿ ಕ್ಯಾಮೆರಾ ವರ್ಕ್ ಇದೆ. ಹಾಗೆ ನೋಡಿದರೆ ಇಲ್ಲಿ ನನ್ನನ್ನು ಬಿಟ್ಟರೆ ಉಳಿದವರೆಲ್ಲರೂ ಅನುಭವಿಗಳೇ.
- ಕತೆಯನ್ನಂತೂ ನೀವು ಹೇಳುವುದಿಲ್ಲ, ಈ ಮೂಲಕ ಓದುಗರಿಗೆ ಸಿನಿಮಾವನ್ನು ಏಕೆ ನೋಡಬೇಕು ಎನ್ನುವುದನ್ನಾದರೂ ಹೇಳಿ?
ಕರಾವಳಿ ಸುತ್ತಮುತ್ತಲಿನ ಪರಿಸರ, ಅಲ್ಲಿನ ಆಚರಣೆ, ಪ್ರೀತಿ ಪ್ರೇಮ ಘಟ್ಟದ ಬದುಕು ಇದೆಲ್ಲವನ್ನೂ ಸೇರಿಸಿ ಒಂದು ಸಸ್ಪೆನ್ಸ್ ಸಿನಿಮಾದ ಮೂಲಕ ಕಟ್ಟಿಕೊಟ್ಟಿದ್ದೇವೆ. ಕತೆಯಿಂದ ಹಿಡಿದು ಪ್ರತಿಯೊಂದು ವಿಭಾಗದಲ್ಲಿಯೂ ಉತ್ತಮವಾಗಿರುದನ್ನೇ ಕೊಟ್ಟಿದ್ದೇವೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎಂಬ ಭರವಸೆ ಇದೆ. ಇದಕ್ಕಿಂತ ಹೆಚ್ಚೇನೂ ಹೇಳಲು ಸಾಧ್ಯವಿಲ್ಲ ಉಳಿದಿದನ್ನು ಸಿನಿಮಾ ನೋಡಿದ ಪ್ರೇಕ್ಷಕರೇ ಹೇಳಬೇಕು.