ಪುತ್ತೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಮನಸ್ಸು ಮಾಡಿದರೆ ಸಾಧಿಸಲು ಹಲವು ದಾರಿಗಳಿವೆ. ಪ್ರತಿಯೊಬ್ಬರು ತಮ್ಮ ಪ್ರತಿಭೆ, ಸಾಮರ್ಥ್ಯಕ್ಕೆ ತಕ್ಕಂಥ ಕ್ಷೇತ್ರ ಆಯ್ದುಕೊಂಡು ಅದರಲ್ಲಿ ಯಶಸ್ಸು ಗಳಿಸಿ ಮೇಲೆ ಬರುವ ಪ್ರತಿಭೆ ಬೆರಳೆಣಿಕೆಯಷ್ಟು ಜನ ಮಾತ್ರ. ಸಾಧಿಸುವ ಛಲ ಬೇಕು. ಗುರಿಯನ್ನು ತಲುಪುವ ಉದ್ದೇಶ ಇಟ್ಟುಕೊಂಡು ಮುನ್ನುಗ್ಗಿದರೆ ಮಾತ್ರ ಜಯದ ಬಾಗಿಲು ತೆರೆಯಲು ಸಾಧ್ಯ. ಅಂಥವರ ಸಾಲಿನಲ್ಲಿ ನಡುವಾಳ್ ಸುಧಾಕರ ಕುಲಾಲ್ ನಿಲ್ಲುತ್ತಾರೆ.
ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕೆಂಬ ಛಲ ಹೊತ್ತುಕೊಂಡು ಸತತ 19ವರ್ಷಗಳಿಂದ ಯುವಜನ ಮೇಳದ ಕಾರ್ಯಕ್ರಮ ಸಹಿತ ವಿವಿಧ ರಂಗಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಂತ ಹಂತವಾಗಿ ಸಾಧನೆಯ ಮೆಟ್ಟಿಲೇರುತ್ತಾ ಬಂದ ಸುಧಾಕರ್ ಹರಿಯಪ್ಪ ಮೂಲ್ಯ ತಾಯಿ ಶಿವಮ್ಮ ದಂಪತಿಗಳ ಎರಡು ಮಕ್ಕಳಲ್ಲಿ ಹಿರಿಯ ಪುತ್ರ. ಹುಟ್ಟಿದ್ದು 1-6-1976 ರಂದು. ಹತ್ತನೇ ತರಗತಿಯವರೆಗೆ ವಿದ್ಯಾಭ್ಯಾಸವನ್ನು ಮಾಡಿ, 8 ವರ್ಷಗಳ ಕಾಲ ಹೋಟೆಲ್ ಒಂದರಲ್ಲಿ ದುಡಿಮೆ ಮಾಡಿ, ಅದರ ಜೊತೆ ಕೃಷಿಯಲ್ಲಿ ಕೂಡ ತನ್ನನ್ನು ತಾನು ತೊಡಗಿಸಿಕೊಂಡರು.
ಮೊದಲ ಬಾರಿ ಸುಬ್ರಾಯ .ಬಿ.ಎಸ್. ಶೆಟ್ಟಿ ಮಜಲು ಇವರು ತಾಲೂಕು ಯುವಜನ ಮೇಳದ ಮೂಲಕ ಜಾನಪದ ಕಲೆಯಲ್ಲಿ ತೊಡಗಿಸಿಕೊಳ್ಳಲು ಸುಧಾಕರ ಕುಲಾಲ್ ರವರನ್ನು ಪ್ರೋತ್ಸಾಹಿಸಿದರು. ಅದರ ಜೊತೆಗೆ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವಂತೆ ನವೀನ್ ರೈ ಶಿಬರ ಮತ್ತು ಯುವಕ ಮಂಡಳ ನರಿಮೊಗರು ಇದರ ಸದಸ್ಯರು ಪ್ರೋತ್ಸಾಹಿಸಿದರು.
ಆ ಬಳಿಕ ಸತತ 19 ವರ್ಷಗಳಿಂದ ಯುವಜನ ಮೇಳದ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾ ಬಂದಿರುತ್ತಾರೆ. ಅವುಗಳಲ್ಲಿ ತುಳು ಜನಪದ ಕಂಗಿಲು ಕುಣಿತ , ಕರಂಗೋಲು , ಹಾಗೂ ಕೋಲಾಟ, ಗೀಗಿಪದ, ರಂಗಗೀತೆ ,ಭಾವಗೀತೆ, ಲಾವಣಿ, ಮತ್ತು ಜನಪದ ಗೀತೆ, ಪಾಡ್ದನ, ವೀರಗಾಸೆ ಮುಂತಾದ ಕಲಾ ಸೇವೆಯನ್ನು ಅರ್ಪಿಸುತ್ತಾ ತನ್ನೊಳಗಿನ ಪ್ರತಿಭೆಯನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ತನ್ನಂಥ ಇತರ ಹಲವಾರು ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದಾರೆ.
ಹಲವಾರು ಸಂಘ ಸಂಸ್ಥೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ. ವಿದ್ಯಾರ್ಥಿ ಅರಳು ಪ್ರತಿಭೆಗಳಿಗೂ ಪ್ರೋತ್ಸಾಹಿಸುತ್ತಾ ಬರುತ್ತಿರುವ ಇವರು ಸಂಘಟನೆಗೂ ನಟನೆಗೂ ಸಿದ್ದ ಎಂಬಂತೆ ಹಲವಾರು ತುಳು ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿ ಮಿಂಚಿದ್ದಾರೆ. ಇವರು ಪ್ರಸ್ತುತ ಸಾಯಿ ಶೃಂಗಾರ ಕಲಾವಿದೆರು ಕುಡ್ಲ ಈ ತಂಡದಲ್ಲಿ ತನ್ನ ನಟನಾ ಪ್ರತಿಭೆಯನ್ನು ಪ್ರದರ್ಶಿಸುತ್ತಿದ್ದಾರೆ.
ಜನಪದ ಕಲಾ ಪ್ರಕಾರವನ್ನು ಕಲಿಯುವ ಮೂಲಕ ನೆಲ ಮೂಲದ ಪರಂಪರೆಯನ್ನು ಕಾಪಾಡುವ ಮಹತ್ತರ ಜವಾಬ್ದಾರಿ ಯುವ ಜನಾಂಗದ ಮೇಲಿದೆ. ಯುವಜನ ಮೇಳಗಳಿಂದ ಪ್ರತಿಯೊಬ್ಬ ವ್ಯಕ್ತಿಯೂ ಗುರುತಿಸಿಕೊಂಡು ತನ್ನ ಪ್ರತಿಭೆಯನ್ನು ವ್ಯಕ್ತಪಡಿಸಲು ಉತ್ತಮ ವೇದಿಕೆ ಕಲ್ಪಿಸಿಕೊಡುತ್ತದೆ. ಅಲ್ಲದೇ ಪ್ರತಿಯೊಬ್ಬರೂ ವೇದಿಕೆ ಏರಲು ಉತ್ತಮ ಅವಕಾಶ ಒದಗಿಸಿ ಕೊಡುವುದಲ್ಲದೆ ಮನಸ್ಥೈರ್ಯವನ್ನು ತುಂಬಲು ಸಹಕಾರಿಯಾಗುತ್ತದೆ ಎನ್ನುವ ಸುಧಾಕರ್ ಅವರು, ಯುವಕ ಮಂಡಲ ನರಿಮೊಗರು ಹಾಲು ಉತ್ಪಾದಕರ ಸಂಘದ ನಿರ್ದೇಶಕರಾಗಿ, ಹಾಗೂ ಜಿಲ್ಲಾ ಯುವಜನ ಒಕ್ಕೂಟದ ನಿರ್ದೇಶಕರಾಗಿ, ಮಹಾಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷರಾಗಿ , ಶ್ರೀನಿಧಿ ಫ್ರೆಂಡ್ಸ್ ಕ್ಲಬ್ ಇದರ ಅಧ್ಯಕ್ಷರಾಗಿ, ಮತ್ತು ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ನರಿಮೊಗರು ಇದರ ಬಿ ಒಕ್ಕೂಟದ ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.
ವಿವಾಹವಾಗಿ ಮಡದಿ ಮತ್ತು ಎರಡು ಮಕ್ಕಳ ಜೊತೆಗೆ ಸಂತೃಪ್ತ ಜೀವನವನ್ನು ಸಾಗಿಸುತ್ತಿರುವ ಸುಧಾಕರ್ ಅವರಿಗೆ ಇನ್ನಷ್ಟು ಕಲಾಸೇವೆ ಮಾಡುವ ಸದವಕಾಶಗಳು ಒದಗಿ ಬರಲಿ. ಸಮಾಜಸೇವೆಯಲ್ಲಿ ತೊಡಗಿ ಸದಾಕಾಲವೂ ಒಳ್ಳೆಯ ಕಾರ್ಯ ಮಾಡುತ್ತಾ ಇತರರಿಗೂ ಮಾದರಿಯಾಗಿರಲಿ ಎಂಬ ಶುಭ ಹಾರೈಕೆಗಳು.