ಮಂಗಳೂರು(ಅ.೨೫, ಕುಲಾಲ್ ವರ್ಲ್ಡ್ ಡಾಟ್ ಕಾಮ್): ಬಾಲ್ಯದಲ್ಲಿ ಚಿಗುರೊಡೆದ ಹವ್ಯಾಸವು ಬೆಳೆಯುತ್ತಾ ಬೆಳೆಯುತ್ತಾ ಗುರಿಯಾಗಿ, ಅದೇ ಬದುಕಿನ ಗುರಿಯಾಗಿ ಬದಲಾಗುವುದುಂಟು. ಹಾಗೆ ಶ್ರದ್ಧೆ, ನಿರಂತರ ಪರಿಶ್ರಮ, ಸಾಧಿಸುವ ಛಲ ನಮ್ಮೊಳಗೆ ಅಡಗಿ ರುವ ಸುಪ್ತ ಪ್ರತಿಭೆಯು ಅನಾವರಣಗೊಳ್ಳುವುದು. ಕೈಯಲ್ಲಿ ಪೆನ್ಸಿಲ್ ಹಿಡಿದ ತಕ್ಷಣ ಎಲ್ಲರೂ ಚಿತ್ರಕಲಾವಿದರಾಗಲು ಸಾಧ್ಯವಿಲ್ಲ. ಅದು ಅನುಭವ, ಹವ್ಯಾಸ, ಶ್ರಮ, ಏಕಾಗ್ರತೆ, ತಾಳ್ಮೆ, ಆಸಕ್ತಿಗಳಿಂದ ಹುಟ್ಟುವಂತಹ ವಿನೂತನ ಕಲೆಯ ಲಹರಿ. ಅಂಥ ನಿರಂತರ ಪರಿಶ್ರಮದಿಂದ ವಿದ್ಯಾರ್ಥಿ ದೆಸೆಯಿಂದಲೇ ಕಲೆಯನ್ನು ಹವ್ಯಾಸವನ್ನಾಗಿ ರೂಢಿಸಿ, ಸ್ವಯಂ ಕರಗತ ಮಾಡಿಕೊಂಡು ಹೆಜ್ಜೆ ಇಡುತ್ತಿರುವ, ಚಿತ್ರಗಳಲ್ಲೇ ಮೋಡಿ ಮಾಡುವ ಪ್ರತಿಭಾವಂತ ಕಲಾವಿದೆ ಸ್ನೇಹಾ ಕುಲಾಲ್.
ಸುರತ್ಕಲ್ ಕಾಟಿಪಳ್ಳ ಆದರ್ಶ ನಗರದ ಜಯರಾಮ್-ಯಶೋಧ ದಂಪತಿಗಳ ಇಬ್ಬರು ಪುತ್ರಿಯರಲ್ಲಿ ಹಿರಿಯವಳಾದ ಸ್ನೇಹಾ ಇತರ ಕಲೆ, ಕಲೆಗಾರರನ್ನು ನೋಡಿ ಅನುಕರಣೆ ಮಾಡಿಕೊಂಡವಳು. ಇಂದು ಚಿತ್ರಗಳನ್ನು ಕೇವಲ ಪೆನ್ಸಿಲ್ಲು ಬಳಸಿ ಆಕರ್ಷಕ ಚಿತ್ರಗಳನ್ನು ಬಿಡಿಸಿ ಕಲೆಗೆ ಜೀವ ತುಂಬುತ್ತಿದ್ದಾರೆ. ಶ್ರೀನಿವಾಸ ಕಾಲೇಜಿನಲ್ಲಿ ಇಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) ಮುಗಿಸಿರುವ ಈಕೆ, ಪ್ರಸ್ತುತ ಬೆಂಗಳೂರಿನ ಖಾಸಗಿ ಸಾಫ್ಟ್ ವೇರ್ ಕಂಪೆನಿಯೊಂದರಲ್ಲಿ ವೆಬ್ ಡೆವಲಪರ್ ಆಗಿ ದುಡಿಯುತ್ತಿದ್ದಾರೆ.
ಬಾಲ್ಯದಲ್ಲಿ ಎಲ್ಲ ಮಕ್ಕಳಂತೆ ಗೋಡೆಗಳಲ್ಲಿ ಚಿತ್ರಗಳನ್ನು ಗೀಚುತ್ತಿದ್ದ ಸ್ನೇಹಾ ಸುರತ್ಕಲ್ ನ ವಿದ್ಯಾದಾಯಿನಿ ಶಾಲೆಯಲ್ಲಿ ಮೂರನೇ ತರಗತಿ ಕಲಿಯುತ್ತಿದ್ದಾಗ ಚಿತ್ರಕಲಾ ಸ್ಪರ್ಧೆಯಲ್ಲಿ ಪ್ರಥಮವಾಗಿ ಭಾಗವಹಿಸಿ ಬಹುಮಾನ ಗೆದ್ದಿದ್ದಳು. ಅಂದು ಆಕೆ ಬಿಡಿಸಿದ್ದ ಸಾಯಿಬಾಬಾರ ಚಿತ್ರ ಎಲ್ಲರ ಮನಗೆದ್ದಿತ್ತು. ಮೊದಲ ಯತ್ನದಲ್ಲೇ ಗಮನಸೆಳೆದ ಈಕೆಗೆ ಹೆತ್ತವರು ಮಗಳ ಆಸಕ್ತಿಗೆ ಬೆಂಬಲವಾಗಿ ಪ್ರೋತ್ಸಾಹ ನೀಡಿದ ಫಲವಾಗಿ ಸುಪ್ತ ಪ್ರತಿಭೆ ಇಲ್ಲಿ ಅನಾಮತ್ತಾಗಿ ಅನಾವರಣಗೊಳ್ಳಲು ಸಹಕಾರಿಯಾಯಿತು. ಆ ಬಳಿಕ ಚಿತ್ರಕಲೆಯಲ್ಲಿ ಹೆಚ್ಚಿನ ಆಸಕ್ತಿಯನ್ನು ಬೆಳೆಸಿಕೊಂಡರು. ಶಾಲೆ-ಕಾಲೇಜುಗಳಲ್ಲಿ ಶಿಕ್ಷಣ ಇಲಾಖೆ ವತಿಯಿಂದ ನಡೆಸಿದ ಅನೇಕ ಜಿಲ್ಲಾ, ತಾಲೂಕು ಹಾಗೂ ಅಂತರಕಾಲೇಜು ಚಿತ್ರಕಲಾ ಸ್ಪರ್ಧೆಯಲ್ಲಿ ಭಾಗವಹಿಸುತ್ತಾ ನಿರಂತರ ಪ್ರಥಮ ಬಹುಮಾನವನ್ನೇ ಗೆದ್ದಿದ್ದು, ಈಕೆಗೆ ಸಿಕ್ಕ ಸರ್ಟಿಫಿಕೆಟ್ ಗಳಿಗೆ ಲೆಕ್ಕವಿಲ್ಲ. ಹಾಗಂತ ಈಕೆ ಇದಕ್ಕಾಗಿ ಯಾವುದೇ ವಿಶೇಷ ತರಬೇತಿ, ಮಾರ್ಗದರ್ಶನ ಪಡೆದಿಲ್ಲ ಎಂಬುದೂ ವಿಶೇಷ.
ಚಿತ್ರಕಲೆಯೆಂಬುದು ಸ್ನೇಹಾರ ಪ್ಯಾಷನ್. ಬೆಂಗಳೂರಿನ ಬ್ಯುಸಿ ಲೈಫ್, ಆಫೀಸು ಕೆಲಸಗಳ ನಡುವೆ ಕೊಂಚ ನೆಮ್ಮದಿಯನ್ನು ಚಿತ್ರಕಲೆಯಿಂದಲೇ ಕಂಡುಕೊಳ್ಳುವ ಈಕೆಯ ಕುಂಚದಲ್ಲಿ ಇದುವರೆಗೆ ಸಾವಿವಾರು ಚಿತ್ರಗಳು ಅರಳಿವೆ. ಅವರಿಗೆ ಇತರ ಚಿತ್ರಕ್ಕಿಂತ ವ್ಯಕ್ತಿಚಿತ್ರಗಳನ್ನು ಬಿಡಿಸುವುದರಲ್ಲಿ ಹೆಚ್ಚಿನ ಆಸಕ್ತಿ. ಪೆನ್ಸಿಲ್ ಡ್ರಾಯಿಂಗ್ನತ್ತ ಹೆಚ್ಚಿನ ಒಲವು. ಈಕೆ ರಚಿಸಿದ ಪೋಟ್ರೈಟ್ ಗಳನ್ನು ನೋಡುತ್ತಾ ಹೋದರೆ ವ್ಹಾವ್ ಎಂದು ಉದ್ಗರಿಸದೇ ಇರುವುದಿಲ್ಲ. ಸದ್ಯ ಸ್ನೇಹಾ ಅವರು ತಮ್ಮ ವೃತ್ತಿ ಹಾಗೂ ಇಷ್ಟಪಟ್ಟು ಕಲಿತ ಕಲೆಯನ್ನು ಒಟ್ಟಿಗೆ ನಿಭಾಯಿಸಿಕೊಂಡು ಹೋಗುತ್ತಿದ್ದಾರೆ.
ಫೇಸ್ ಪೈಂಟಿಗ್ ಕಲೆಯಲ್ಲೂ ಪ್ರವೀಣೆ:
ಚಿತ್ರಕಲೆ ಮಾತ್ರವಲ್ಲದೆ ಕಲಿಕೆ, ಡಾನ್ಸ್, ಕ್ರಾಫ್ಟ್ ಮತ್ತು ಮೆಹಂದಿ ಕಲೆಯಲ್ಲಿ ಹೆಚ್ಚಿನ ಆಸಕ್ತಿ ಬೆಳೆಸಿಕೊಂಡಿರುವ ಸ್ನೇಹಾ, ಇತ್ತೀಚೆಗೆ ಹೆಚ್ಚು ಜನಪ್ರಿಯವಾಗುತ್ತಿರುವ ಮುಖವರ್ಣಿಕೆ ಕಲೆ (face painting)ನಲ್ಲಿ ಜನರ ಗಮನಸೆಳೆವ ಚಿತ್ತಾಕರ್ಷಕ ಚಿತ್ರಗಳನ್ನು ಮೂಡಿಸುವಲ್ಲೂ ಪಳಗಿದ್ದಾರೆ. “ಹಳ್ಳಿಯಲ್ಲಿ ಹುಟ್ಟಿ ಬೆಳೆದಿರುವುದರಿಂದ ಅಲ್ಲಿನ ಪ್ರಕೃತಿಯ ಸೊಬಗು, ಪ್ರಕೃತಿಯ ಒಡನಾಟವೇ ನನ್ನಲ್ಲಿ ಚಿತ್ರಕಲೆಯಲ್ಲಿ ಆಸಕ್ತಿ ಹುಟ್ಟಿಸುತ್ತಿತ್ತು. ಮೊದಮೊದಲು ದೇವರ ಚಿತ್ರ ಬಿಡಿಸುತ್ತಿದ್ದೆ. ಆಮೇಲೆ ನನ್ನ ಸುತ್ತುಮುತ್ತಲು ಕಾಣುವ ವ್ಯಕ್ತಿಗಳು, ಪರಿಸರ ಹೀಗೆ ಅನುಭವಕ್ಕೆ ದಕ್ಕಿದ್ದಕ್ಕೆಲ್ಲಾ ರೂಪ ನೀಡುತ್ತಾ ಚಿತ್ರ ರಚಿಸುತ್ತಾ ಬಂದೆ. ವ್ಯಕ್ತಿಚಿತ್ರವನ್ನು ಬಿಡಿಸಲು ಹೆಚ್ಚು ಆಸಕ್ತಿ ಇದೆ. ಪೋಟ್ರೈಟ್ ಅಂದರೆ ಇತರ ಚಿತ್ರ ಬಿಡಿಸಿದಂತಲ್ಲ. ಒಬ್ಬ ವ್ಯಕ್ತಿಯ ಪೋಟ್ರೈಟ್ ರಚಿಸುವಾಗ ಹಲವಾರು ಸೂಕ್ಷ್ಮತೆಗಳನ್ನು ಗಮನಿಸಿ ರಚಿಸಬೇಕಾಗುತ್ತದೆ. ಇದಕ್ಕೆ ಹೆಚ್ಚಿನ ತಾಳ್ಮೆ ಬೇಕು. ಈಗೀಗ ನನ್ನ ಕಲೆಯನ್ನು ನೋಡಿದ ಹಲವರು ತಮ್ಮ ಚಿತ್ರ ಬಿಡಿಸಿಕೊಡುವಂತೆ ಕೋರುತ್ತಾರೆ. ಹಲವು ಜನರು ಗಿಫ್ಟ್ ಕೊಡುವುದಕ್ಕೋಸ್ಕರ ನನ್ನ ಬಳಿ ಚಿತ್ರ ಬರೆಸಿಕೊಂಡಿದ್ದಾರೆ” ಎಂದು ಸ್ನೇಹಾ ಅವರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಯಾವುದೇ ಒಂದು ವಿಷಯದಲ್ಲಿ ವಿಶೇಷ ಆಸಕ್ತಿ ಹಾಗೂ ಸತತ ಪ್ರಯತ್ನದೊಂದಿಗೆ ಹೆತ್ತವರ ಪ್ರೋತ್ಸಾಹವಿದ್ದಾಗ ಸಾಧನೆ ಮಾಡಲು ಸಾಧ್ಯ ಎಂಬುವುದಕ್ಕೆ ಸ್ನೇಹಾ ಕುಲಾಲ್ ಒಳ್ಳೆಯ ಉದಾಹರಣೆ.
(ಸ್ನೇಹಾರ ಬಳಿ ಚಿತ್ರ ಬಿಡಿಸಿಕೊಳ್ಳಲು ಇಚ್ಛಿಸುವವರು ಈ ಫೇಸ್ ಬುಕ್ ಲಿಂಕ್ ಮೂಲಕ ಅವರನ್ನು ಸಂಪರ್ಕಿಸಬಹುದು..https://www.facebook.com/profile.php?id=100004678067461 )
- ಡೀಬಿ ಇರ್ವತ್ತೂರು