ಉಡುಪಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಪ್ರತಿಭೆ ಯಾರೊಬ್ಬರ ಸ್ವತ್ತಲ್ಲ. ಕಠಿಣ ಪರಿಶ್ರಮ, ಕೆಲಸದ ಬಗ್ಗೆ ಶ್ರದ್ಧೆ, ಪ್ರಾಮಾಣಿಕ ದುಡಿಮೆ ಇದ್ದರೆ ಪ್ರತಿಯೊಬ್ಬರು ಸಾಧಕರಾಗಬಹುದು ಎನ್ನುವುದಕ್ಕೆ ತಾಜಾ ಉದಾಹರಣೆಯೇ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ ಸ್ಮಾರಕ ‘ಸಾಂಸ್ಕೃತಿಕ ಸೌರಭ ಪುರಸ್ಕಾರ’ ಪುರಸ್ಕೃತ ಸಿನಿಮಾ ಕಲಾವಿದ ರಾಘವೇಂದ್ರ ಶಿರಿಯಾರ.

ಸಿನಿಮಾ ಬಹುಜನರನ್ನು ಸೆಳೆಯುವ ಅತೀ ಬಲಿಷ್ಟ ಕಲಾ ಮಾಧ್ಯಮಗಳಲ್ಲಿ ಒಂದು. ಅದರಲ್ಲೂ ಕಲಾತ್ಮಕ ಸಿನಿಮಾಗಳು ನಿಜ ಬದುಕಿನ ನೋವು ನಲಿವುಗಳ ಪರಿಣಾಮಕಾರಿ ಅಭಿವ್ಯಕ್ತಿ. ಈ ಕಲಾತ್ಮಕ ಸಿನಿಮಾ ರಂಗದಲ್ಲಿ ನಟನಾಗಿ, ನಿರ್ಮಾಣ ಸಹಾಯಕನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಕೆಲಸ ಮಾಡುತ್ತಾ ಭರವಸೆ ಮೂಡಿಸುತ್ತಿರುವ ಕಲಾವಿದ ರಾಘವೇಂದ್ರ ಕುಲಾಲ್ ಶಿರಿಯಾರ ಅವರು.

ಅಂತರಾಷ್ಟ್ರೀಯ ಖ್ಯಾತಿಯ ನಿರ್ದೇಶಕ ಜಿ. ಮೂರ್ತಿ ಅವರ ಪ್ರೇರಣೆಯಿಂದ ರಾಘವೇಂದ್ರ ಅವರು ಕಲಾ ಸಿನಿಮಾ ಜಗತ್ತಿಗೆ ಪಾದಾರ್ಪಣೆ ಮಾಡಿದವರು. ಈಗಾಗಲೇ ಹತ್ತಕ್ಕೂ ಅಧಿಕ ಕಲಾತ್ಮಕ ಸಿನಿಮಾಗಳಲ್ಲಿ ಅಭಿನಯಿಸಿರುವ ರಾಘವೇಂದ್ರ ಶಿರಿಯಾರ ನಟನೆಯಲ್ಲಿ ಸೈ ಎನಿಸಿಕೊಂಡಿದ್ದಾರೆ, ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಕನ್ನಡದ ಕಲಾತ್ಮಕ ಸಿನಿಮಾಗಳಾದ ಕುರುನಾಡು, ಶಂಕರ ಪುಣ್ಯಕೋಟಿ, ವೈಷ್ಣವಿ, ಹರಿಕಥಾ ಪ್ರಸಂಗ, ಅನಿಶ್ಚಿತ, ಗೆರೆಗಳು, ಅರಬ್ಬಿ ಕಡಲ ತೀರದಲ್ಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ರಾಘವೇಂದ್ರ ಶಿರಿಯಾರ ಬಣ್ಣ ಹಚ್ಚಿದ್ದಾರೆ.
ಕುಂದಾಪುರ ಕನ್ನಡದ ಪ್ರಸರಣ ಮತ್ತು ಪ್ರಚಾರಕನಾಗಿಯೂ ಕೆಲಸ ಮಾಡಿರುವ ಇವರು ‘ಎಂತಾರೂ ಬಿಡುಕಾತ್ತಾ’, ‘ಎಲ್ಲವೂ ನಾವು ಹೇಳ್ದಂಗೆ’ ಇನ್ನಿತರ ಹಲವು ಕುಂದಾಪ್ರ ಭಾಷೆಯ ಆಡಿಯೋ, ವಿಡೀಯೋ ಕ್ಯಾಸೆಟ್ ಗಳನ್ನು ನಿರ್ಮಾಣ ಮಾಡಿ ಪ್ರಸಾರಿಸಿದ್ದಾರೆ. ಕಾಷ್ಟ ಶಿಲ್ಪಗಳ ಕಲಾ ವೈಭವದಿಂದ ಮನ್ನಣೆ ಪಡೆದಿರುವ ತುಳುನಾಡಿನ ಮುಖ್ಯ ದೇವಳಗಳಲ್ಲಿ ಒಂದಾದ ಶಿರಿಯಾರ ಮೆಕ್ಕೆಕಟ್ಟುವಿನ ನಂದಿಕೇಶ್ವರ ದೇವಳದ ಸಮಗ್ರ ಚಿತ್ರಣ ಬೀರುವ ವಿಶಿಷ್ಟ ಡಾಕ್ಯುಮೆಂಟರಿಯನ್ನು ನಿರ್ಮಾಣ ಮಾಡಿದ್ದಾರೆ. ಐವತ್ತಕ್ಕೂ ಅಧಿಕ ಪ್ರದರ್ಶನ ಕಂಡ ಕುಂದಾಪ್ರ ಕನ್ನಡದ ‘ಅಣ್ಣು’ಪ್ರಸಿದ್ದ ಕಲಾತ್ಮಕ ಕಿರು ಸಿನಿಮಾದ ನಿರ್ಮಾಣ ಮಾಡಿದವರು ರಾಘವೇಂದ್ರ ಶಿರಿಯಾರ ಅವರೇ. ಹೀಗೆ ನಟನೆ, ನಿರ್ಮಾಣದ ಜೊತೆ ಜೊತೆಯಲ್ಲಿ ಸಿನಿಮಾರಂಗದ ಹಲವು ತಾಂತ್ರಿಕ ವಿಭಾಗಗಳಲ್ಲಿ ಕೆಲಸ ಮಾಡಿಯೂ ಮನ್ನಣೆ ಪಡೆದಿದ್ದಾರೆ.
ರಾಘವೇಂದ್ರ ಶಿರಿಯಾರ ಅವರು ಸಮುದಾಯ ಸಂಘಟನೆಯ ನೇತರಾರಾಗಿಯೂ ದುಡಿದವರು. ಸ್ಥಳೀಯ ನಾಟಕ, ಸಾಮಾಜಿಕ ರಂಗ, ಧಾರ್ಮಿಕ ಚಟುವಟಿಕೆಗಳ ಮುಂಚೂಣಿಯಲ್ಲೂ ರಾಘವೇಂದ್ರ ಶಿರಿಯಾರ ದುಡಿಯುತ್ತಿದ್ದಾರೆ. ತಮ್ಮದೇ ಮುಂದಾಳತ್ವದಲ್ಲಿ ‘ಭ್ರಾಮರಿ ಕಲಾ ವೇದಿಕೆ’ಯನ್ನು ಸ್ಥಾಪಿಸಿಕೊಂಡಿರುವ ರಾಘವೇಂದ್ರ ಅವರು ಶಿರಿಯಾರ ಸುತ್ತಮುತ್ತಲ ಪರಿಸರದ ವಿದ್ಯಾರ್ಥಿಗಳಿಗೆ ನೃತ್ಯ, ಸಂಗೀತ, ನಟನೆಯನ್ನು ಒಳಗೊಂಡ ಲಲಿತಕಲೆಗಳನ್ನು ಅಭ್ಯಸಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.
ಕಲಾತ್ಮಕ ಸಿನಿಮಾ ರಂಗದ ಇವರ ಶ್ರೇಷ್ಟ ಸೇವೆಗಳನ್ನು ಪರಿಗಣಿಸಿ ಇತ್ತೀಚೆಗೆ ಡಾ. ಶಿವರಾಮ ಕಾರಂತ ಹುಟ್ಟೂರ ಪ್ರತಿಷ್ಟಾನ ಕೋಟ, ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ, ಮತ್ತು ಕೋಟತಟ್ಟು ಗ್ರಾಮ ಪಂಚಾಯತ್ ಜಂಟಿಯಾಗಿ ಕೊಡಮಾಡುವ ಸುರೇಂದ್ರ ಶೆಟ್ಟಿ ತೆಕ್ಕಟ್ಟೆ ಸ್ಮಾರಕ ‘ಸಾಂಸ್ಕೃತಿಕ ಸೌರಭ ಪುರಸ್ಕಾರ’ವನ್ನು ಇವರಿಗೆ ನೀಡಿ ಗೌರವಿಸಲಾಗಿದೆ.
‘ನಾನು ಕಲಾತ್ಮಕ ಸಿನಿಮಾರಂಗದ ಸಣ್ಣ ಕಲಾವಿದ. ನೈಜ ಬದುಕಿನ ಚಿತ್ರಣ ಇರುವ ಕಲಾತ್ಮಕ ಸಿನಿಮಾಗಳನ್ನು ಜನ ಹೆಚ್ಚೆಚ್ಚು ನೋಡಿ ಪ್ರೋತ್ಸಾಹಕರಾಗಬೇಕು. ಆಗ ಕಲಾತ್ಮಕ ಸಿನಿಮಾ ಮತ್ತು ಕಲಾವಿದ ಬದುಕುತ್ತಾನೆ’ ಎಂಬುದು ರಾಘವೇಂದ್ರ ಶಿರಿಯಾರ ಅವರ ಅಭಿಮತ. ಅವರ ಕಲಾ ಬದುಕು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ. ಕಲಾತ್ಮಕ ಸಿನಿಮಾಗಳು ಬೆಳೆಯಲಿ ಎಂಬ ಸದಾಶಯ ನಮ್ಮದಾಗಲಿ. ರಾಘವೇಂದ್ರ ಅವರಿಗೆ ಆಲ್ ದಿ..ಬೆಸ್ಟ್ ಅನ್ನೋಣವೇ?
ಬರಹ: ಮಂಜುನಾಥ್ ಹಿಲಿಯಾಣ


