ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್) : ಕಳೆದ ಏಳೆಂಟು ವರ್ಷಗಳಿಂದ ಕರ್ನಾಟಕ ಕರಾವಳಿಯ ಮಣ್ಣಿನಲ್ಲಿ ತನ್ನ ಸೃಜನಶೀಲ ಕಲಾ ಪ್ರತಿಭೆಯ ಮೂಲಕ ಭರತನಾಟ್ಯಕ್ಕೆ ಹೊಸ ಮೆರುಗನ್ನು ನೀಡಿ ಭರತನಾಟ್ಯ, ಜನಪದ ನೃತ್ಯ ಸಂಯೋಜನೆ ಮೊದಲಾದ ಬಹುಮುಖ ಪ್ರತಿಭೆಯ ಅನನ್ಯತೆ, ನಿರಂತರ ಪರಿಶ್ರಮ ಹಾಗೂ ಸಾಂಸ್ಕೃತಿಕ ಚಿಂತನೆಯ ಮೂಲಕ ಹೊರಹೊಮ್ಮುತ್ತಿರುವ ಅಭಿಮಾನದ ಅಪೂರ್ವ ಕಲಾವಿದೆ ವಿದುಷಿ ಚಿತ್ರಾಕ್ಷಿ.
ಮಂಗಳೂರಿನ ಕುಳಾಯಿ ನಿವಾಸಿ ಆಗಿರುವ ಚಿತ್ರಾಕ್ಷಿ ಅವರಿಗೆ ಬಾಲ್ಯದಲ್ಲಿ ನೃತ್ಯದಲ್ಲಿ ಅತೀವ ಆಸಕ್ತಿ ಇರುವುದನ್ನು ಅರಿತ ತಾಯಿ ಗಿರಿಜಾ ಶ್ರೀ ಶಾರದಾ ನಾಟ್ಯಾಲಯದ ಗುರು ವಿದುಷಿ ಭಾರತೀ ಸುರೇಶ್ ಅವರಲ್ಲಿ ಗುರುದೀಕ್ಷೆಯನ್ನು ಕೊಡಿಸಿದರು. ನಾಟ್ಯಕ್ಷೇತ್ರದ ಅಂತರಾಳದಲ್ಲಿ ಅಂತರ್ಯಾಮಿಯಾಗಿರುವ ಸತ್ಯ ಸೌಂದರ್ಯಗಳನ್ನು ಸತತ ಹನ್ನೆರಡು ನೃತ್ಯಾಭ್ಯಾಸಗಳನ್ನು ಅರಗಿಸಿಕೊಂಡು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಡೆಸುವ ಭರತನಾಟ್ಯ ಜೂನಿಯರ್, ಸೀನಿಯರ್ ಹಾಗೂ ವಿದ್ವತ್ ಪದವಿ ಪರೀಕ್ಷೆಗಳನ್ನು ಪೂರೈಸುವಲ್ಲಿ ಯಶಸ್ವಿಯಾದರು.
ಭಾರತ ಕಲೆ, ಸಂಸ್ಕೃತಿ, ಪರಂಪರೆಗಳ ನಾಡು. ಅದರಲ್ಲಿಯೂ ಭಾರತೀಯ ಸಂಸ್ಕೃತಿಯ ಪ್ರತೀಕವಾದ ಭರತನಾಟ್ಯ ಕಲೆಯನ್ನು ಕಲಿತು ತಮ್ಮ ಶಾಲಾ ದಿನಗಳಲ್ಲೇ ಶ್ರೀ ಅಮೃತೇಶ್ವರ ಆಂಗ್ಲ ಮಾಧ್ಯಮ ಶಾಲೆ ವಾಮಂಜೂರು ಇಲ್ಲಿ ನೃತ್ಯ ಶಿಕ್ಷಕಿಯಾಗಿ ಸೇರಿ ನಂತರ ಅಲ್ಲಿನ ಸುತ್ತಮುತ್ತಲಿನ ಪರಿಸರದ ನೃತ್ಯಾಸಕ್ತರಿಗೆ ನೃತ್ಯ ಶಿಕ್ಷಣವನ್ನು ನೀಡುವ ಉದ್ದೇಶದಿಂದ 2012ರಲ್ಲಿ ಯಕ್ಷ ಭಾಗವತರಾದ ತಂದೆ ಸದಾನಂದ ಕುಲಾಲ್ ಅವರ ಪ್ರೋತ್ಸಾಹ, ಊರಿನ ಹಲವು ಗಣ್ಯರ ಸಹಕಾರ ಹಾಗೂ ಗುರುಗಳ ಆಶೀರ್ವಾದದೊಂದಿಗೆ ಶ್ರೀ ಅಮೃತೇಶ್ವರ ನಾಟ್ಯಾಲಯ ಎಂಬ ನೃತ್ಯ ಸಂಸ್ಥೆಯನ್ನು ಸ್ಥಾಪಿಸಿ ಹಲವಾರು ವಿದ್ಯಾರ್ಥಿಗಳಿಗೆ ಭರತನಾಟ್ಯ ಕಲೆಯನ್ನು ಧಾರೆ ಎರೆಯುತ್ತಾ ಪಂಚೋತ್ಸವ ಕಾರ್ಯಕ್ರಮದ ಮುಂಬೆಳಕಿನಲ್ಲಿ ಕುಣಿಯುವ ಮೂಲಕ ಸಣ್ಣ ಮಕ್ಕಳಲ್ಲಿಯೇ ಶಾಸ್ತ್ರೀಯ ನೃತ್ಯಗಳತ್ತ ಆಸಕ್ತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.
ಹಲವಾರು ಜಿಲ್ಲಾ ಹಾಗೂ ರಾಜ್ಯಮಟ್ಟದ ವೇದಿಕೆಗಳಲ್ಲಿ ನೃತ್ಯ ಪ್ರತಿಭೆಯನ್ನು ಮೆರೆದು ಭರತನಾಟ್ಯ ಮಾತ್ರವಲ್ಲದೇ ಕಂಗೀಲು, ಕನ್ಯಾಪು, ಸುಗ್ಗಿ ಕುಣಿತಗಳಲ್ಲೂ ತಮ್ಮನ್ನು ಗುರುತಿಸಿಕೊಂಡು ಕರಗ ನೃತ್ಯದಲ್ಲಿ ತಮ್ಮ ಅಭೂತಪೂರ್ವ ಕಲಾಪ್ರತಿಭೆಯಿಂದ ಜನಮನ್ನಣೆ ಗಳಿಸಿದ್ದಾರೆ.
ಆಲ್ಬಮ್ ಹಾಗೂ ಚಲನಚಿತ್ರ ಹಾಡುಗಳಿಗೆ ನರ್ತಿಸಿರುವ ಇವರು ಎನ್ ಎಸ್ ಎಸ್ ಮೂಲಕ ಶಿಸ್ತನ್ನು ಆರ್ಜಿಸಿಕೊಂಡು ರಾಜ್ಯಮಟ್ಟದ ಶಿಬಿರದಲ್ಲಿ ಭಾಗವಹಿಸಿ ಸ್ಟೇಟ್ ಮೆರಿಟ್ ಸರ್ಟಿಫಿಕೇಟ್ ಗಳನ್ನು ಪಡೆದ ಪ್ರತಿಭಾವಂತೆ. ಕಾಲೇಜು ದಿನಗಳಲ್ಲೇ ನೃತ್ಯ ಸಾಧನೆಯೊಂದಿಗೆ ಶೈಕ್ಷಣಿಕ ಸಾಧನೆಯನ್ನೂ ಮಾಡುತ್ತಾ ಬೆಸ್ಟ್ ಔಟ್ ಗೋಯಿಂಗ್ ಸ್ಟೂಡೆಂಟ್ ಅವಾರ್ಡ್ ಪಡೆದ ಎಂ ಕಾಮ್ ಪದವೀಧರೆ.
ಸುರತ್ಕಲ್, ಮೂಡುಶೆಡ್ಡೆ, ಕಿನ್ನಿಗೋಳಿ, ಶಾಲೆಯಲ್ಲಿ ನೃತ್ಯ ಶಿಕ್ಷಕಿಯಾಗಿದ್ದು, ಕುಂದಿ ಹೋಗುತ್ತಿರುವ ಎಳೆಯ ಪ್ರತಿಭೆಗಳ ಹೆಜ್ಜೆಗೆ ಸಂಸ್ಕಾರವನ್ನು ಗೆಜ್ಜೆಯ ನಾದದ ಕೋಮಲತೆಯ ಕಂಪನ್ನು ನಡೆಸುತ್ತಾ ಮುಂದುವರಿಯುತ್ತಿರುವ ಪ್ರತಿಭೆ.
ಕಳೆದ ನಾಲ್ಕು ವರ್ಷಗಳಿಂದ ಹಳೆಯಂಗಡಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಇಲ್ಲಿ ಅತಿಥಿ ಉಪನ್ಯಾಸಕಿಯಾಗಿದ್ದು, ಪ್ರಸ್ತುತ ಕಾರ್ ಸ್ಟ್ರೀಟ್ ನ ಪ್ರಥಮ ದರ್ಜೆ ಕಾಲೇಜಿನಲ್ಲಿ ವಾಣಿಜ್ಯ ವಿಭಾಗದಲ್ಲಿ ಅತಿಥಿ ಉಪನ್ಯಾಸಕಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ಚಿತಾಕ್ಷಿ ಅವರ ಕಲಾ ಬದುಕು ಕಲರ್ ಫುಲ್ ಆಗಿ ಸಾಗಲಿ ಎಂದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಹಾರೈಸುತ್ತದೆ.