ಕಡು ಬಡತನದಲ್ಲಿ ಅರಳಿದ ಹಳ್ಳಿ ಪ್ರತಿಭೆ
(ಕುಲಾಲ್ ವರ್ಲ್ಡ್ ಡಾಟ್ ಕಾಮ್ 17 ಜೂನ್ 2018): ಶ್ರೀಮಂತ ತುಳು ರಂಗಭೂಮಿಯಲ್ಲಿ ಪ್ರತಿಭಾವಂತ ಕಲಾವಿದರಿಗೆ ಕೊರತೆಯಿಲ್ಲ. ಆದರೆ ಮಹಿಳಾ ಕಲಾವಿದೆಯರ ಸಂಖ್ಯೆ ವಿರಳವೆಂದೇ ಹೇಳಬಹುದು. ಅಂಥವರಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹುಟ್ಟಿ ಬೆಳೆದ ಪ್ರತಿಭೆ ಜ್ಯೋತಿ ಕುಲಾಲ್ ಕೂಡಾ ಒಬ್ಬರು.
ಒಂದಷ್ಟು ವಿಭಿನ್ನ ಮನಸ್ಥಿತಿಯ ಪಾತ್ರದೊಂದಿಗೆ ಬೆರೆತು ಸಲೀಸಾಗಿ ಜೀವ ತುಂಬಲು ಯತ್ನಿಸುವ ಜ್ಯೋತಿ ಪುತ್ತೂರು ತಾಲೂಕಿನ ಉಪ್ಪಿನಂಗಡಿ ನೆಕ್ಕಿಲಾಡಿ ಸುಭಾಸ್ ನಗರದ ದಿ.ಕೃಷ್ಣಪ್ಪ ಕುಲಾಲ್ ಮತ್ತು ರೂಪಾ ದಂಪತಿಗಳ ಹಿರಿಯ ಮಗಳು. ತಂದೆಯ ಅಕಾಲಿಕ ಮರಣದ ಬಳಿಕ ನಾಲ್ಕು ಮಂದಿ ತಂಗಿಯರು, ಒಬ್ಬ ತಮ್ಮನನ್ನು ನೋಡಿಕೊಳ್ಳುವ ಜವಾಬ್ದಾರಿ ತನ್ನ ತಾಯಿಯ ಜೊತೆ ಜ್ಯೋತಿ ಹೆಗಲಿಗೆ ಬಿತ್ತು. ಹತ್ತನೇ ತರಗತಿವರೆಗೆ ಕಲಿತು ಓದಿಗೆ ತಿಲಾಂಜಲಿ ಇತ್ತ ಈಕೆ, ತಮಗಿರುವ ಜಮೀನಿನಲ್ಲಿ ಕೃಷಿ ಚಟುವಟಿಕೆಯ ಜೊತೆ, ತಮ್ಮ ಆಸಕ್ತಿಯ ಕ್ಷೇತ್ರವಾದ ನಾಟಕರಂಗದತ್ತ ಆಕರ್ಷಿತರಾದರು.

ಸಾಧಿಸಬೇಕೆಂಬ ಛಲ, ಅದಮ್ಯ ಉತ್ಸಾಹದಿಂದ ಬಣ್ಣ ಹಚ್ಚುವ ಮೂಲಕ ಕುಟುಂಬದ ಆರ್ಥಿಕ ಹೊರೆ ಇಳಿಸಲು ಮುಂದಾದ ಜ್ಯೋತಿ ಇದುವರೆಗೆ ಒಟ್ಟು 32 ನಾಟಕಗಳಲ್ಲಿ ಬಣ್ಣ ಹಚ್ಚಿ 200ಕ್ಕೂ ಹೆಚ್ಚಿನ ನಾಟಕ ಪ್ರದರ್ಶನ ನೀಡಿ ಜನಮನ್ನಣೆ ಗಳಿಸಿದ್ದಾರೆ.
ಬಾಲ್ಯದಲ್ಲೇ ಆಸಕ್ತಿ :
ಜ್ಯೋತಿ ಅವರು ಬಾಲ್ಯದಲ್ಲೇ ನಾಟಕ ಮತ್ತು ನೃತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡವರು. ಉಪ್ಪಿನಂಗಡಿಯ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗಲೇ ನಾಟಕಗಳಲ್ಲಿ ಶಾಲಾ ಕಾರ್ಯಕ್ರಮಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸುತ್ತಾ ಈ ಕಲೆಯಲ್ಲಿ ಪಳಗುತ್ತಾ ಪಾತ್ರಕ್ಕೆ ಜೀವ ತುಂಬಲು ಯತ್ನಿಸಿ ಚಪ್ಪಾಳೆ ಗಿಟ್ಟಿಸಿಕೊಂಡಿದ್ದವರು.
ಕೊಂಬೆಟ್ಟು ಜೂನಿಯರ್ ಕಾಲೇಜಿನಲ್ಲಿ ಎಸ್ಸೆಸೆಲ್ಸಿ ಮುಗಿಸುವ ಹೊತ್ತಿಗೆ ನಾಟಕ, ನೃತ್ಯದಲ್ಲಿ ಹೆಚ್ಚು ಪಳಗಿದ್ದರು. ಜ್ಯೋತಿ ಅವರ ತಂದೆಯೂ ಕಲಾರಾಧಕರಾಗಿದ್ದು, ಈ ಕ್ಷೇತ್ರದಲ್ಲಿ ಆಸಕ್ತಿಯಿದ್ದುದರಿಂದ ನಾಟಕರಂಗದತ್ತ ಹೊರಳಲು ಅವರು ಪ್ರೇರಣೆಯಾದರು. ಕಟ್ಟಡ ಕಾರ್ಮಿಕರ ಸಂಘದಲ್ಲಿ ಗುರುತಿಸಿಕೊಂಡು ಕಲಾವಿದರಿಗೆ ಪ್ರೇರಣೆ ನೀಡುತ್ತಿರುವ ವಿಶ್ವನಾಥ ಬೆಳ್ಳಿಪ್ಪಾಡಿ ಅವರ ಮಾರ್ಗರ್ಶನ ಜ್ಯೋತಿ ಅವರಿಗೆ ಬಣ್ಣದ ಬದುಕಿನಲ್ಲಿ ಮುಂದುವರಿಯಲು ಸಹಕಾರಿಯಾಯಿತು.
ನಾಟಕ ಮೋಡಿ:
ನಾಟಕಗಳಲ್ಲಿ ಅಭಿನಯಿಸಿ ತನ್ನ ಪ್ರತಿಭೆಯನ್ನು ಬಿಂಬಿಸಬೇಕು ಎನ್ನುವ ಆಸೆ ಹೊತ್ತಿದ್ದ ಜ್ಯೋತಿ ಅವರು, ಉಪ್ಪಿನಂಗಡಿಯ ರಾಮನಗರದಲ್ಲಿ ನಡೆದ `ಅತ್ತಿಗೆ’ ಎಂಬ ನಾಟಕದಲ್ಲಿ ಅಧಿಕೃತವಾಗಿ ಎಂಟ್ರಿ ಪಡೆದರು. ಸಿಕ್ಕಿದ ಮೊದಲ ಅವಕಾಶದಲ್ಲಿಯೇ ಪ್ರತಿಭೆ ಪ್ರದರ್ಶಿಸಿ ಸೈ ಎನಿಸಿಕೊಂಡ ಅವರ ಪರಿಶ್ರಮಕ್ಕೆ ತಕ್ಕ ಫಲಿತಾಂಶ ಸಿಗುವ ವಿಶ್ವಾಸದ ನಗು ಅವರ ಮೊಗದಲ್ಲಿ ಅರಳಿತು.
ವಿವಿಧ ನಾಟಕ ತಂಡಗಳಲ್ಲಿ ಬಾಡಂದಿಪೂ, ತಂಗಡಿಗ್ ತಾಳಿ, ಎನ್ನ ತಂಗಡಿ, ನಾಗ ಪ್ರತಿಷ್ಠೆ , ಬಾರಿ ಸೋಕಾತ್ಂಡ್ , ವಂಚನೆದಾಯೆ, ಬದ್ಕೆರೆ ಕಲ್ಪಿ , ಕಾಕಜಿ ಬತ್ತ್ಂಡ್ , ಈ ನರಕ ದಾಯೆ, ಕಡಿರ ಮಗೆ, ಉಲಾಯಿಡುಲ್ಲೆರ್ , ಇತ್ತೆ ಬರ್ಪೆರ್, ಪುರುಷಗ್ ಪುರುಸೊತ್ತಿಜ್ಜಿ , ಪರತ್ತೆಟ್ ಪೊಸತ್ತುಂಡು , ಗಂಗಾ ಕಾವೇರಿ , ಸೇವಂತಿಗ್ ಮದಿಮೆ, ಸಂಸಾರೊಡೊಂಜಿ ಅಪಸ್ವರ , ಮುಗುರು ತೆಲಿಕೆ, ಕನಕಟ್ಟೊರ್ಚಿ, ಆಯಿಲೆಕ ಅಪುಂಡು , ಗೊತ್ತಾಯೆರ ಬಲ್ಲಿ , ಪನ್ಪಿನಕ್ಲು ಪನ್ಪೆರ್ , ಪೊಸ ಬದುಕ್, ಲಿಂಕ್ ಲಿಂಗಪ್ಪೆ , ಸಯ್ಯೆರ ಬಲ್ಲಿ, ನಂಬ್ಯರ ಬಲ್ಲಿ , ಉಬ್ಯರ್ಲತ್ತ್ ನಿಂಗ್ಯರ್ಲತ್ತ್ , ತೂಂಡ ಗೊತ್ತಾವು, ಸತ್ಯೊದ ಬೊಲ್ಪು , ಎನ್ನಿಲೆಕ ಒವುಲಾ ಇಜ್ಜಿ , ಕರಿಯೆ ಕಟ್ಟಿನ ಕರಿಮಣಿ ಎಂಬ 32 ನಾಟಕಗಳಲ್ಲಿ ಭಿನ್ನ ಪಾತ್ರಗಳಿಗೆ ಜೀವ ತುಂಬಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದ್ದಾರೆ.
ಸುಬ್ರಮಣ್ಯ ಕಲಾವೃಂದ, ಬೆಳ್ಳಿಪ್ಪಾಡಿ ಇವರ ತಂಡದ ಜೊತೆ ಮೂರು ವರ್ಷಗಳ ಕಾಲ, ಸಂಸಾರ ಕಲಾವಿದರು ಬಲ್ನಾಡು ಈ ತಂಡದ ಜೊತೆ ಎರಡು ವರ್ಷ, ಕುಸಲ್ ಕಲಾವಿದರು ರಾಮಕುಂಜ ತಂಡದಲ್ಲಿ ಒಂದು ವರ್ಷ , ನಮ್ಮ ಕಲಾವಿದರು ನೆಲ್ಯಾಡಿ ಬಳಗದಲ್ಲಿ ಎರಡು ವರ್ಷಗಳ ಕಾಲ ಸೇವೆ ಸಲ್ಲಿಸಿರುವ ಜ್ಯೋತಿ, ಪ್ರಸ್ತುತ ಹೊಸತಂಡ ಸಾಯೀ ಫ್ರೆಂಡ್ಸ್ ಮಂಗಳೂರು ಜೊತೆ ಗುರುತಿಸಿಕೊಂಡು ಬಣ್ಣದ ಬದುಕಿನಲ್ಲಿ ಗಟ್ಟಿಯಾಗಿ ನೆಲೆಯೂರಲು ಯತ್ನಿಸುತ್ತಿದ್ದಾರೆ.
`ನಾನು ಇದುವರೆಗೆ ಅಭಿನಯಿಸಿದ ಎಲ್ಲಾ ಪಾತ್ರಗಳೂ ಇಷ್ಟದ ಪಾತ್ರಗಳೇ. ಅದರಲ್ಲೂ `ಪನ್ಪಿನಕ್ಲು ಪನ್ಪೆರ್’ ನಾಟಕದ ಕುರುಡಿಯ ಪಾತ್ರ ಸವಾಲಿನದ್ದಾಗಿದ್ದು, ಇಂಥ ಪಾತ್ರಗಳಲ್ಲಿ ಅಭಿನಯಿಸಲು ನನಗೆ ತುಂಬಾ ಇಷ್ಟ. ಆದರೆ ಇಂಥ ಪಾತ್ರಗಳಿಗೆ ಅದರದ್ದೇ ಆದ ಪ್ರಬುದ್ಧ ಚಹರೆ, ಗಡಸುತನ ಬೇಕು. ಯಾವ ಪಾತ್ರವಾದರೂ ಸರಿ ಜೀವ ತುಂಬಬೇಕು ಅಂತ ಬಯಸುತ್ತೇನೆ. ಅದು ಚಾಲೆಂಜಿಂಗ್ ಆಗಿದ್ದರೂ ಪಾತ್ರಕ್ಕೆ ನ್ಯಾಯ ಒದಗಿಸುತ್ತೇನೆ ಅನ್ನುವ ಆತ್ಮ ವಿಶ್ವಾಸ ಇದೆ’ ಎಂದು ಜ್ಯೋತಿ ಹೇಳುತ್ತಾರೆ. ಪ್ರೇಕ್ಷಕರು ನೀಡುವ ಚಪ್ಪಾಳೆಯೇ ನಮಗೆ ಪ್ರಥಮ ಪ್ರಶಸ್ತಿ ಎನ್ನುವ ಜ್ಯೋತಿ ಅವರು ಅಭಿನಯಿಸಿದ `ಪನ್ಪಿನಕ್ಲು ಪನ್ಪೆರ್’ ನಾಟಕದ ಕುರುಡಿ ಪಾತ್ರಕ್ಕೆ ಶ್ರೇಷ್ಠ ನಟಿ ಎಂದು ಪ್ರಶಸ್ತಿ ಲಭಿಸಿದೆ.
ತನ್ನ ಕಿರಿ ಸಹೋದರಿಯರಾದ ಸ್ವಾತಿ ಮತ್ತು ಶ್ರುತಿ ವಿವಾಹಿತರಾಗಿ ಸಂಸಾರದ ಜಂಜಾಟದಲ್ಲಿದ್ದರೂ ನಾಟಕದ ಜೊತೆ ಬೆಸೆದುಕೊಂಡು ಬಣ್ಣದ ಬದುಕಿನಲ್ಲಿ ಬಿಝಿಯಾಗಿರುವ ಜ್ಯೋತಿ, ವೈವಾಹಿಕ ಬದುಕಿನ ಬಗ್ಗೆ ಇದುವರೆಗೆ ತಲೆಕೆಡಿಸಿಕೊಂಡಂತಿಲ್ಲ. ಶ್ರೇಷ್ಠ ಕಲಾವಿದೆಯಾಗಿ ಬದುಕು ರೂಪಿಸಬೇಕೆಂಬ ಛಲ ಹೊತ್ತಿರುವ ಜ್ಯೋತಿ ನಾಟಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಿ ತುಳುವರ ಮನೆ ಮಾತಾಗಲಿ ಎನ್ನುವುದು ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ಶುಭ ಹಾರೈಕೆ.







