ಕುಲಾಲ್ ವರ್ಲ್ಡ್ ಡಾಟ್ ಕಾಮ್
ಹುಬ್ಬಳ್ಳಿ: ಆಡುಮುಟ್ಟದ ಸೊಪ್ಪಿಲ್ಲ. ನಾಗರಾಜ ಕುಂಬಾರ ಅವರು ನುಡಿಸದ ಚರ್ಮವಾದ್ಯಗಳಿಲ್ಲ. ಹೀಗೆಂದರೆ ಅತಿಶಯೋಕ್ತಿಯೇನಲ್ಲ. ಯಾಕೆಂದರೆ ಹುಬ್ಬಳ್ಳಿಯ ನಾಗರಾಜ ಪಕೀರಪ್ಪ ಕುಂಬಾರ ಸುಮಾರು ಹನ್ನೆರಡಕ್ಕೂ ಹೆಚ್ಚು ಚರ್ಮ ವಾದ್ಯಗಳನ್ನು ನುಡಿಸುತ್ತಿದ್ದಾರೆ. ಹುಬ್ಬಳ್ಳಿ ತಾಲೂಕಿನ ಸುಳ್ಳ ಗ್ರಾಮದ ನಿವಾಸಿಯಾದ 70 ವರ್ಷದ ನಾಗರಾಜ್ ಅವರು 50 ವರ್ಷಗಳಿಂದ ಕಲೆಗಾಗಿಯೇ ತಮ್ಮನ್ನ ಸಮರ್ಪಿಸಿಕೊಂಡಿದ್ದಾರೆ. ತಬಲಾ, ಡೊಳ್ಳುಕುಣಿತ, ಡಗ್ಗಾ , ದಪ್ಪಡ್ಡಿ, ಹಲಗೆ, ಕರಡಿ ಮಜಲು, ಬ್ಯಾಂಗೋ, ಕಾಂಗೋ, ಮೃದಂಗ.. ಹೀಗೆ ಒಟ್ಟು 12ಕ್ಕೂ ಹೆಚ್ಚು ಚರ್ಮ ವಾದ್ಯಗಳನ್ನು ನುಡಿಸುತ್ತಿದ್ದಾರೆ.

ಆಧುನಿಕರಣದಿಂದಾಗಿ ಅಳಿವಿನ ಅಂಚಿನಲ್ಲಿರುವ ನಾಡಿನ ಕಲಾ ಪ್ರಕಾರಗಳನ್ನು ಗ್ರಾಮದ ಯುವಕರಿಗೆ ಹೇಳಿಕೊಟ್ಟು ಕಲೆಯನ್ನು ಪೋಷಣೆ ಮಾಡುತ್ತಿದ್ದಾರೆ. ಪುರುಷರ ಜೊತೆಗೆ ಮಹಿಳೆಯರಿಗೆ ಡೊಳ್ಳುಕುಣಿತ ಕಲಿಸುತ್ತಿದ್ದಾರೆ. ಇವರು ರಾಜ್ಯ ಮತ್ತು ಅಂತರ್ ರಾಜ್ಯಗಳಲ್ಲೂ ತಮ್ಮ ಕಲಾ ಪ್ರದರ್ಶನ ಮಾಡಿಸುತ್ತಿದ್ದಾರೆ.

“ನಮ್ಮ ಮನೆಯಲ್ಲಿ ಹಿಂದಿನಿಂದಲೂ ಭಜನೆ, ಶಾಸ್ತ್ರ, ಪುರಾಣ ಎಲ್ಲವೂ ಸಂಪ್ರದಾಯದಂತೆ ನಡೆಯುತ್ತಾ ಬಂದಿದೆ. ಅದಕ್ಕೆ ಬೇಕಾದ ವಾದ್ಯ ಪರಿಕರಗಳನ್ನು ನಮ್ಮ ತಂದೆಯವರು ನುಡಿಸುತ್ತಾ ಇದ್ದರು. ಅವರ ಬಳಿಕ ನಾವು ಅದನ್ನು ಮುಂದುವರಿಸಿಕೊಂಡು ಬಂದೆವು. ಎಲ್ಲಾ ವಾದ್ಯಗಳನ್ನು ನುಡಿಸಲು ಗುರುಕೃಪೆ, ದೇವರ ಆಶೀರ್ವಾದ ಬೇಕು. ಎಲ್ಲದ್ದಕ್ಕಿಂತ ಮುಖ್ಯವಾಗಿ ನನಗೆ ಕಲಿಯುವ ಆಸಕ್ತಿ ಇತ್ತು. ನನಗೂ ಮುಂಚೆ ನನ್ನ ಅಣ್ಣ ತಬಲಾ ಬಾರಿಸುತ್ತಾ ಇದ್ದರು. ಅನಿವಾರ್ಯ ಕಾರಣದಿಂದ ಕಾರ್ಯಕ್ರಮಕ್ಕೆ ಅವರಿಗೆ ಬರಲಾಗದೇ ಅಡಚಣೆಯಾಯಿತು. ಹೀಗೆ ಅವರ ಬದಲಿಗೆ ನಾನು ಕಲಿಯುವ ಅವಕಾಶ ಬಂತು. ನಮಗೆ ಗೊತ್ತಿರುವ ವಿದ್ಯೆಯನ್ನು ನಮ್ಮ ಮನೆ ಸದಸ್ಯರಿಗೆ ಕಲಿಸುತ್ತಾ ಬಂದೆವು” ಎನ್ನುತ್ತಾರೆ ನಾಗರಾಜ ಕುಂಬಾರ ಅವರು.
(ಪಬ್ಲಿಕ್ ಟೀವಿಯ `ಪಬ್ಲಿಕ್ ಹೀರೋ’ ಕಾರ್ಯಕ್ರಮಕ್ಕೆ ನಡೆಸಿದ ಸಂದರ್ಶನದ ಭಾಗ)



