ಪುತ್ತೂರು (ಕುಲಾಲ್ ವರ್ಲ್ಡ್ ನ್ಯೂಸ್ ): ಗ್ರಾಮೀಣ ಪ್ರದೇಶದಲ್ಲೂ ತೆರೆಯ ಮರೆಯಲಿ ಅದೆಷ್ಟೋ ಯುವ ಪ್ರತಿಭೆಗಳು ಸದ್ದು ಗದ್ದಲವಿಲ್ಲದೆ ಅರಳುತ್ತವೆ. ಇಂತಹ ಪ್ರತಿಭೆಯಲ್ಲಿ ಮನೋಹರ ಕುಲಾಲ್ ಕೂಡ ಒಬ್ಬರು. ಇವರು ಕಡಬ ತಾಲೂಕಿನ ಗ್ರಾಮೀಣ ಪ್ರದೇಶವಾದ ಚಾರ್ವಾಕ ಗ್ರಾಮದ ಕೆಳಗಿನಕೇರಿ ಕೊಪ್ಪದವರಾಗಿದ್ದಾರೆ .
ಗ್ರಾಮೀಣ ಭಾಗದಲ್ಲಿ ಎಲ್ಲಾ ಕಲೆಯಲ್ಲಿಯೂ ತನ್ನನ್ನೂ ತಾನು ತೊಡಗಿಸಿಕೊಂಡಿರುವುದು, ಅದರಲ್ಲೂ ಹೆಮ್ಮೆ ಎಂದರೆ ಗಂಡು ಎಲ್ಲಾ ಕಲೆಯನ್ನು ಕಲಿಯುವುದು ಬಲು ಅಪರೂಪದ ಸಂಗತಿ. ಎಳೆಯ ಪ್ರಾಯದಲ್ಲೇ ಹಾಡು ,ನೃತ್ಯ, ಚಿತ್ರಕಲೆ ಇತ್ಯಾದಿ ಆಸಕ್ತಿಗಳನ್ನು ಬೆಳೆಸಿಕೊಂಡು ಶಿಕ್ಷಣದ ಜೊತೆಯಲ್ಲಿ ತರಬೇತಿ ಪಡೆದ ಯುವ ಕಲಾವಿದರಾಗಿದ್ದಾರೆ.
ನಾಲ್ಕನೇ ತರಗತಿಯಲ್ಲಿ ಶಾರದ ದಾಮೋದರ ಇವರಿಂದ ಭರತನಾಟ್ಯ ಕಲಿತ ಈ ಪ್ರತಿಭೆ ನೃತ್ಯಾಸಕ್ತಿ ಬೆಳೆಸಿಕೊಂಡು ಮುಂದೆ ಕುದ್ಮಾರು ಶಾಲೆಯಲ್ಲಿ ಆರನೇ ತರಗತಿ ಕಲಿಯುವ ಸಂಧರ್ಭದಲ್ಲಿ ಶಾಲಿನಿ ಭಟ್ ಬರೆಪ್ಪಾಡಿ ಅವರಲ್ಲಿ 6 ವರ್ಷ ಸಂಗೀತಾಭ್ಯಾಸ ಮಾಡಿದ್ದರು.
ಹಿಂದೂಸ್ತಾನಿ ಸಂಗೀತ ವನ್ನು ಬಸವರಾಜ್ ಶಾಸ್ತ್ರೀ ಇವರಿಂದ ಮೂರು ವರ್ಷಗಳ ಕಾಲ ಕಲಿತಿರುವ ಇವರು ನೃತ್ಯ ಹಾಗೂ ಗಂಡು ಕಲೆಯಾದ ಯಕ್ಷಗಾನವನ್ನು ಕರಗತ ಮಾಡಿಕೊಂಡು, ಹಾಡು, ಛದ್ಮವೇಷ ಇತ್ಯಾದಿ ಕಲೆಗಳನ್ನು ಕರಗತ ಮಾಡಿದ ಇವರು ಸುಮಾರು ಐನೂರಕ್ಕೂ ಹೆಚ್ಚು ವೇದಿಕೆಯಲ್ಲಿ ಕಾರ್ಯಕ್ರಮ ನೀಡಿದ ಹಿರಿಮೆಗೆ ಪಾತ್ರರು.
ಕನ್ನಡದ ಗಾನಕೋಗಿಲೆ ಬಿ.ಕೆ.ಸುಮಿತ್ರಾ ರಿಂದ ತರಬೇತಿ ಪಡೆದ ಇವರು ಟಿವಿ ,ರೇಡಿಯೋಗಳಲ್ಲಿ ಹಲವಾರು ಕಾರ್ಯಕ್ರಮ ನೀಡಿರುತ್ತಾರೆ. ಇಂಟರ್ನ್ಯಾಷನಲ್ ಹೊಯ್ಸಳ ಗ್ರಾಮ ರೆಸಾರ್ಟ್ ಬೇಲೂರು ರಸ್ತೆ, ಹಾಸನ ಇಲ್ಲಿ ಸುಮಾರು ಮೂರು ತಿಂಗಳು ರೆಸಾರ್ಟ್ ಸಿಂಗರ್ ಆಗಿ ಚೀನ, ಜರ್ಮನಿ,ಇಟಲಿ ,ಅಮೆರಿಕಾ ಮೊದಲಾದ ವಿದೇಶಿ ಹಾಗೂ ಮಹಾರಾಷ್ಟ್ರ ಮುಂಬಯಿ ಬೆಂಗಳೂರು ದೇಶೀಯ ಯಾತ್ರಾರ್ಥಿಗಳ ಮುಂದೆ ಕಾರ್ಯಕ್ರಮ ನೀಡಿ ತನ್ನ ಊರಿನ ಹೆಸರನ್ನು ಪಸರಿಸಿದ ಹೆಮ್ಮೆ ಇವರದು.
ಶಿಕ್ಷಕಿಯಾದ ವಾಣಿ ಇವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುತ್ತಿದ್ದರು. ಪ್ರಾಥಮಿಕ ಶಿಕ್ಷಣವನ್ನು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಕೊಪ್ಪ, ಪ್ರೌಢ ಶಿಕ್ಷಣವನ್ನು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು, ಕಾಲೇಜು ಶಿಕ್ಷಣವನ್ನು ಜೂನಿಯರ್ ಪದವಿ ಪೂರ್ವ ಕಾಲೇಜು ಕಾಣಿಯೂರ್ ನಲ್ಲಿ ಮಾಡಿರುವ ಇವರು ಗಣಪಯ್ಯ ಕುಂಬಾರ ಮತ್ತು ಪದ್ಮಾವತಿ ಯವರ ಪುತ್ರ. ಇವರ ಪ್ರತಿಭೆ ಇನ್ನಷ್ಟೂ ಬೆಳಗಲಿ ಎಂಬುದು ನಮ್ಮ ಆಶಯ.
ಸಂತೋಷ್ ಪಿ, ಕಡಬ (ಕೃಪೆ : ನಮ್ಮ ಕಡಬ ಡಾಟ್ ಕಾಮ್)








