ಕುಲಾಲ್ ವರ್ಲ್ಡ್ ಡಾಟ್ ಕಾಮ್ (ಮಾರ್ಚ್ ೨೯, ೨೦೧೮)
ಉಡುಪಿ : ಜಗತ್ತಿನಾದ್ಯಂತ ಹಲವು ಮಾಧ್ಯಮಗಳು ವೈಭವದ ಮೆರಗಿನೊಂದಿಗೆ ಭರಪೂರ ಮನರಂಜನೆಯನ್ನು ನೀಡುತ್ತಾ ಬಂದಿದ್ದರೂ ರಂಗಭೂಮಿ ತನ್ನ ಸ್ಥಾನವನ್ನು ಇನ್ನಷ್ಟು ಗಟ್ಟಿಗೊಳಿಸಿಕೊಂಡಿದೆ. ಅದಕ್ಕೆ ಕಾರಣ, ರಂಗಭೂಮಿ ಇಂದು ಕೇವಲ ಮನರಂಜನೆಯ ಪ್ರಕಾರವಾಗಿ ಉಳಿದಿಲ್ಲ. ಅದು ಸಮಾಜ ಮುಖಿಯಾಗಿರುವುದು, ಸಮಾಜದ ಕನ್ನಡಿಯಾಗಿರುವುದು ಮತ್ತು ಸಮಾಜದ ಪರಿವರ್ತನೆಗೆ ಸಾಂಸ್ಕೃತಿಕ ಮಾಧ್ಯಮವಾಗಿರುವುದರಿಂದಲೇ ರಂಗಭೂಮಿ ಹೊಸ ಹೊಸ ಪ್ರಯೋಗಗಳ ಮೂಲಕ ಇನ್ನಷ್ಟು ಪ್ರಖರವಾಗಿ ಬೆಳೆಯುತ್ತಿದೆ. ಜನರಲ್ಲಿ ಆಸಕ್ತಿಯನ್ನು ಕೆರಳಿಸುತ್ತಿದೆ.

‘ಕಾವ್ಯೇಷು ನಾಟಕಂ ರಮ್ಯಂ’ ಎಂಬ ಕಾಳಿದಾಸನ ಮಾತಿನಂತೆ ಸಾಹಿತ್ಯದ ಪ್ರಕಾರಗಳಲ್ಲಿ ನಾಟಕವು ಮನಸೆಳೆಯುವ, ರಮಣೀಯ ದೃಶ್ಯಮಾಧ್ಯಮ. ಇತ್ತೀಚಿನ ದಿನಗಳಲ್ಲಿ ರಂಗಭೂಮಿಯತ್ತ ಯುವಪೀಳಿಗೆಯ ಒಲವು ಹೆಚ್ಚಾಗಿದೆ. ಒಂದು ಕಾಲದಲ್ಲಿ ರಂಗಭೂಮಿ ಕಲಾವಿದರೆಂದರೆ ಅವರನ್ನು ಕೀಳುಭಾವನೆಯಲ್ಲಿ ನೋಡಲಾಗುತ್ತಿತ್ತು. ಆದರೆ ಈಗ ಕಾಲ ಬದಲಾಗಿದೆ. ಮನೆಯಿಂದ ಆಚೆ ಹೋಗಿ ರಂಗಭೂಮಿ ಚಟುವಟಿಕೆಯಲ್ಲಿ ಸ್ವಲ್ಪ ತೊಡಗಿಸಿಕೋ ಎಂದು ಪಾಲಕರೇ ಹೇಳುತ್ತಾರೆ. ಇಂದಿನ ಪ್ರಯೋಗಗಳಲ್ಲಿ ಹೊಸತನ, ಸ್ತ್ರೀ ಸಂವೇದನೆ , ತಂತ್ರಜ್ಞಾನ, ಪಾಶ್ಚಾತ್ಯ ಸಂಸ್ಕೃತಿ ಎಲ್ಲವೂ ಬೆರೆತಿದೆ. ಇಂಥ ಕಲೆಯ ಕಡೆಗೆ ಯುವ ಪೀಳಿಗೆ ಹೆಚ್ಚು ಹೆಚ್ಚು ಆಸಕ್ತರಾಗುತ್ತಿರುವುದು ಇದಕ್ಕಿರುವ ಶಕ್ತಿಯನ್ನು ತೋರಿಸುತ್ತದೆ. ಹೀಗೆ ಕೆ.ವಿ.ಸುಬ್ಬಣ್ಣ ಅವರು ಸ್ಥಾಪಿಸಿದ ರಂಗಕಲಾ ಸಂಘ `ನೀನಾಸಂ’ನ ನಾಟಕ ಪ್ರದರ್ಶನವನ್ನು ಕಂಡು ಅದರಿಂದ ಉತ್ತೇಜಿತಳಾಗಿ ಕಲಾವಿದೆಯಾಗಬೇಕೆಂಬ ಕನಸಿಂದ ನಾಟಕ ರಂಗಕ್ಕೆ ಪಾದಾರ್ಪಣೆ ಮಾಡಿದಾಕೆ ಮಣಿಪಾಲದ ಪ್ರತಿಭೆ ಶ್ವೇತಾ ಕುಲಾಲ್.

ಹಾರಾಡಿಯ `ಭೂಮಿಕಾ’ ರಂಗ ತಂಡದ ಭರವಸೆಯ ಕಲಾವಿದೆಯಾಗಿ ರೂಪುಗೊಂದು ತನ್ನದೇ ಆದ ಹೆಜ್ಜೆ ಗುರುತು ಮೂಡಿಸುತ್ತಿದರುವ ಶ್ವೇತಾ ಕುಲಾಲ್ ಮಣಿಪಾಲ ಶಾಂತಿನಗರ ನಿವಾಸಿ ಗೋಪಾಲ ಕುಲಾಲ್ ಮತ್ತು ಗುಲಾಬಿ ದಂಪತಿಯ ಸುಪುತ್ರಿ. ಈಕೆಗೆ ಪ್ರಾಥಮಿಕ ಶಿಕ್ಷಣ ಸಂದರ್ಭದಲ್ಲಿಯೇ ಅಭಿನಯದ ಆಸಕ್ತಿ ಮೂಡಿತ್ತು. ಶಾಲಾ ಕಾರ್ಯಕ್ರಮಗಳಲ್ಲಿ ಚಿಕ್ಕಪುಟ್ಟ ಪಾತ್ರ ನಿರ್ವಹಿಸುತ್ತಾ ಈ ಕಲೆಯಲ್ಲಿ ಪಳಗುತ್ತಾ ಪಾತ್ರಕ್ಕೆ ಜೀವ ತುಂಬಲು ಯತ್ನಿಸುತ್ತಿದ್ದ ಶ್ವೇತಾ ಪದವಿ ಶಿಕ್ಷಣ ಪಡೆಯುತ್ತಿರುವ ಹೊತ್ತಿಗೆ ಹೆಚ್ಚು ನೈಪುಣ್ಯತೆ ಪಡೆದಿದ್ದರು. ಬ್ರಹ್ಮಾವರ ಎಸ್ ಎಂಎಸ್ ಕಾಲೇಜಿನಲ್ಲಿ ದ್ವಿತೀಯ ವರ್ಷ ಡಿಗ್ರಿ ಕಲಿಯುವ ಸಂದರ್ಭ `ಬದುಕಲು ಬಿಡಿ’ ಹಾಗೂ `ಹುಲಿಯ ನೆರಳು’ ಎಂಬ ನಾಟಕದಲ್ಲಿ ಗಮನಸೆಳೆಯುವ ಪಾತ್ರ ನಿರ್ವಹಿಸಿ ಎಲ್ಲರ ಗಮನ ಸೆಳೆದಿದ್ದರು.

ಎಸ್ ಡಿಎಂ ಕಾಲೇಜಿನಲ್ಲಿ ಇಂಗ್ಲೀಷ್ ವಿಷಯದಲ್ಲಿ ಎಂ.ಎ ಪೂರೈಸಿ ಪ್ರಸ್ತುತ ಟಿಎಂಎ ಪೈ ಕಾಲೇಜಿನಲ್ಲಿ ಬಿ.ಎಡ್ ವ್ಯಾಸಂಗ ಮಾಡುತ್ತಿರುವ ಶ್ವೇತಾ `ಭೂಮಿಕಾ’ ರಂಗ ತಂಡದ ಪೂರ್ಣ ಪ್ರಮಾಣದ ಕಲಾವಿದೆಯಾಗಿದ್ದಾರೆ. ನಾಟಕ ಕ್ಲಬ್ ನಲ್ಲಿ ಶ್ವೇತಾ ಅವರ ಅಭಿನಯವನ್ನು ಕಂಡ `ಭೂಮಿಕಾ’ದ ನಿರ್ದೇಶಕ ಬಿ. ಎಸ್ ರಾಮ್ ಶೆಟ್ಟಿ ಅವರು ಆಕೆಯನ್ನು ತಂಡಕ್ಕೆ ಸೇರ್ಪಡೆಗೊಳಿಸಿ, ನಾಟಕ ರಂಗದಲ್ಲಿ ಮಿಂಚಲು ಸ್ಪೂರ್ತಿಯ ಸೆಲೆಯಾದರು. ಹೀಗೆ ಸಿಕ್ಕ ಅವಕಾಶವನ್ನು ಉಪಯೋಗಿಸಿಕೊಂಡು ತನ್ನ ಅಂತರಂಗದ ಪ್ರತಿಭೆಗೆ ನೀರೆರೆದು ಇಂದು ಉತ್ತಮ ಕಲಾವಿದೆಯಾಗಿ ಮೆಚ್ಚುಗೆ ಗಳಿಸುತ್ತಿರುವ ಶ್ವೇತಾ, ಚಂದ್ರಶೇಖರ ಕಂಬಾರರ ರಚನೆಯ “ಮಾರಿಕಾಡು” “ಮದುವೆ ಹೆಣ್ಣು” , “ಹುಲಿಯ ನೆರಳು” , “ಬದುಕಲು ಬಿಡಿ” ಮುಂತಾದ ನಾಟಕಗಳಲ್ಲಿ ಇಪ್ಪತ್ತೈದಕ್ಕೂ ಹೆಚ್ಚು ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಎಂ.ಜಿ.ಎಂ ಕಾಲೇಜಿನಲ್ಲಿ ನಡೆದ ರಂಗಭೂಮಿ ನಾಟಕ ಸ್ಪರ್ಧೆಯಲ್ಲಿ ಬಿ ಎಸ್ ರಾಮ್ ಶೆಟ್ಟಿ ನಿರ್ದೇಶನದ “ವೃತ್ತದ ವೃತ್ತಾಂತ” ನಾಟಕಕ್ಕೆ ಇವರ ತಂಡ ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದರೆ, ಶ್ವೇತಾ ಅವರ ಅಭಿನಯಕ್ಕೆ ವೈಯಕ್ತಿಕ ಪ್ರಶಸ್ತಿ ಕೂಡಾ ಲಭಿಸಿತ್ತು.
“ನನಗೆ ಚಿಕ್ಕಂದಿನಿಂದಲೂ ನಾಟಕ, ನೃತ್ಯದಲ್ಲಿ ಆಸಕ್ತಿಯಿತ್ತು. ಪೋಷಕರು ಮತ್ತು ಗುರುಗಳು ಪ್ರೋತ್ಸಾಹಿಸಿದರು. ಹಾಗಾಗಿ ಈ ಕ್ಷೇತ್ರಕ್ಕೆ ಕಾಲಿಡಲು ಸಾಧ್ಯವಾಯಿತು. ನಾನು ನಾಟಕರಂಗದಲ್ಲಿ ಈಗಷ್ಟೇ ಅಂಬೆಗಾಲಿಡುತ್ತಿರುವ ಶಿಶುವಷ್ಟೇ. ಇನ್ನು ಕಲಿಯುವುದು ಸಾಕಷ್ಟಿದೆ. ಕಲಿಕೆಯ ಜೊತೆ ನಾಟಕರಂಗದಲ್ಲಿ ವಿಭಿನ್ನ ಪಾತ್ರಗಳನ್ನು ನಿರ್ವಹಿಸಿ ಹೆಚ್ಚಿನ ಸಾಧನೆ ಮಾಡಬೇಕೆಂಬ ಆಸೆಯಿದೆ’ ಎನ್ನುತ್ತಾರೆ ಶ್ವೇತಾ. ಇವರ ಕಲಾ ಬದುಕಿನ ಜೀವನ ಇನ್ನು ಉಜ್ವಲವಾಗಿ ಬರಲಿ. ಪ್ರಶಸ್ತಿ. ಸನ್ಮಾನಗಳು ಇವರ ಮುಡಿಗೇರಲಿ. ಕಲಾ ಮಾತೆ ಶಾರದೆ ಇವರಿಗೆ ಒಳಿತು ಮಾಡಲಿ ಎಂದು ನಮ್ಮ ಆಶಯ.
ದಿನೇಶ್ ಬಿ.ಐ








