ಕಾಸರಗೋಡು(ಕುಲಾಲ ವರ್ಲ್ಡ್ ಡಾಟ್ ಕಾಮ್): ಕಾಲದ ಪ್ರವಾಹದಲ್ಲಿ ಅದೆಷ್ಟೋ ಇತಿಹಾಸದ ಪುಟಗಳು ಕೊಚ್ಚಿಹೋಗುತ್ತವೆ. ಆದರೆ, ನಮ್ಮ ಹಿರಿಯರ ದೂರದೃಷ್ಟಿ ಮತ್ತು ಸಮುದಾಯದ ಮೇಲಿದ್ದ ಪ್ರೀತಿ ಮಾತ್ರ ಎಲ್ಲೋ ಒಂದು ಕಡೆ ಜೀವಂತವಾಗಿ ಉಳಿದುಬಿಡುತ್ತದೆ. ಅದಕ್ಕೊಂದು ಅತ್ಯಂತ ಅಪರೂಪದ ಹಾಗೂ ಭಾವನಾತ್ಮಕ ಸಾಕ್ಷಿ ಈ ಆಮಂತ್ರಣ ಪತ್ರ.
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಯರ ಸಂಘದ ಅಂದಿನ ಜಿಲ್ಲಾ ಕಾರ್ಯದರ್ಶಿಯಾಗಿದ್ದ ಮಂಜೇಶ್ವರ ಸಂಕಪ್ಪ ಮೂಲ್ಯರು ಹಾಗೂ ಕಿಂಞಣ್ಣ ಮೂಲ್ಯರು ಒಟ್ಟಾಗಿ, ದಿನಾಂಕ 03-05-1925ರಂದು ತಮ್ಮ ಮನೆಯಲ್ಲೇ ಆಯೋಜಿಸಿದ್ದ ‘ಮೂಲ್ಯರ ಉದ್ಧಾರದ (ಅಭಿವೃದ್ಧಿಯ) 5ನೇ ಮಹಾಸಭೆ’ಗೆ ಬರಲು ಕೋರಿ, ಅಮೆತ್ತೋಡು ಗ್ರಾಮದ ಒಂದನೇ ಗುರಿಕಾರರಾದ ಅಮೆತ್ತೋಡು ಬಂಟು ಮೂಲ್ಯರಿಗೆ ಕಳುಹಿಸಿದ್ದ ಶತಮಾನದ ಅಂಚಿನಲ್ಲಿರುವ (ಸುಮಾರು 100 ವರ್ಷ ಹಳೆಯದಾದ) ಆಮಂತ್ರಣ ಪತ್ರವೊಂದು ಇಂದು ನಮಗೆ ಲಭ್ಯವಾಗಿದೆ.
ಈ ಹಳದಿಯಾದ ಕಾಗದದ ತುಣುಕು ಕೇವಲ ಆಹ್ವಾನ ಪತ್ರಿಕೆಯಲ್ಲ; ನಮ್ಮ ಹಿರಿಯರ ಸಂಘಟನಾ ಚಾತುರ್ಯಕ್ಕೆ ಹಿಡಿದ ಕನ್ನಡಿ. ಇದರಲ್ಲಿ ‘ಐದನೆಯ ಮಹಾಸಭೆ’ ಎಂದು ಉಲ್ಲೇಖಿಸಿರುವುದನ್ನು ನೋಡಿದಾಗ, ಇದರ ಹಿಂದೆ ಈಗಾಗಲೇ ನಾಲ್ಕು ಮಹಾಸಭೆಗಳು ಯಶಸ್ವಿಯಾಗಿ ನಡೆದಿದ್ದವು ಎಂಬ ಹೆಮ್ಮೆಯ ಇತಿಹಾಸ ಕಣ್ಣೆದುರು ನಿಲ್ಲುತ್ತದೆ. ಅಷ್ಟೇ ಅಲ್ಲದೆ, ಮಹಾಸಭೆಯ ಕೆಳಗೆ ‘ಒಳಸಭೆ’ ಎಂಬ ಪದವನ್ನು ಮುದ್ರಿಸಲಾಗಿದ್ದು, ಸಮಾಜದ ಆಂತರಿಕ ಸುಧಾರಣೆಗಾಗಿ ಅಂದಿನ ಕಾಲದಲ್ಲೇ ಎಂತಹ ವ್ಯವಸ್ಥಿತವಾದ ಚಿಂತನೆಗಳು ಮತ್ತು ಚರ್ಚೆಗಳು ನಡೆಯುತ್ತಿದ್ದವು ಎಂಬುದು ಸ್ಪಷ್ಟವಾಗುತ್ತದೆ.
ಭಾರತದಲ್ಲಿ ಮುದ್ರಣ ಮಾಧ್ಯಮಗಳು ತೀರಾ ವಿರಳವಾಗಿದ್ದ, ಸಂಪರ್ಕ ಸಾಧನಗಳೇ ಇಲ್ಲದ ಆ ಕಠಿಣ ದಿನಗಳಲ್ಲೇ ಇಂತಹದೊಂದು ಆಹ್ವಾನಪತ್ರಿಕೆಯನ್ನು ಮುದ್ರಿಸಿ, ಪ್ರತಿಯೊಬ್ಬರಿಗೂ ವೈಯಕ್ತಿಕವಾಗಿ ತಲುಪಿಸಿ, ಸ್ವಂತ ಮನೆಯಲ್ಲೇ ಮಹಾಸಭೆ ನಡೆಸಿ ಸಮಾಜದ ಪ್ರಗತಿಗಾಗಿ ಶ್ರಮಿಸಿದ ನಮ್ಮ ಹಿರಿಯರ ತ್ಯಾಗ ಮತ್ತು ಸಾಧನೆ ಇಂದಿನ ತಲೆಮಾರಿಗೆ ನಿಜಕ್ಕೂ ದಾರಿದೀಪ.
ಕಾಸರಗೋಡು ತಾಲೂಕಿನ ಮುಗು ಗ್ರಾಮದ ಅಮೆತ್ತೋಡು ಎಂಬಲ್ಲಿನ ಬಂಜನ್ ಕುಟುಂಬದ ಆದಿಮೂಲಸ್ಥಾನದ ದೈವಸ್ಥಾನದ ಭಂಡಾರದ ಮನೆಯಲ್ಲಿ, ಒಂದು ಮಣ್ಣಿನ ಮಡಕೆಯೊಳಗೆ ಕಾಲದ ಕಣ್ಣಿಗೆ ಬೀಳದಂತೆ ಅತ್ಯಂತ ಜಾಗರೂಕತೆಯಿಂದ ಜತನವಾಗಿ ಕಾಯ್ದಿರಿಸಲಾಗಿದ್ದ ಹಳೆಯ ಕಡತಗಳ ಮಧ್ಯೆ ಈ ಅಪರೂಪದ ಇತಿಹಾಸದ ದಾಖಲೆ ಸಿಕ್ಕಿದೆ. ಇತಿಹಾಸದ ಈ ಅಮೂಲ್ಯ ರತ್ನವನ್ನು ಕಳೆದುಹೋಗದಂತೆ ಕಾಪಾಡಿಕೊಂಡು ಬಂದ ನಮ್ಮ ಹಿರಿಯರ ದೂರದೃಷ್ಟಿ ಮತ್ತು ಸಮಾಜದ ಮೇಲಿನ ಭಕ್ತಿ ನಿಜಕ್ಕೂ ಶ್ಲಾಘನೀಯ ಹಾಗೂ ವಂದನೀಯ. ಈ ಮಹತ್ವದ ಆಮಂತ್ರಣ ಪತ್ರವನ್ನು ಪತ್ತೆಹಚ್ಚಿ, ಸಮಾಜದ ಮುಂದಿಡಲು ಪತ್ರಿಕಾ ಪ್ರಕಟಣೆಗೆ ನೀಡಿ ಸಹಕರಿಸಿದ ದೈವಸ್ಥಾನದ ಕಾರ್ಯಕರ್ತರಾದ ಎ. ಕೃಷ್ಣ ಚನ್ನಿಕುಡೇಲು ಅವರ ಕಾರ್ಯ ಸ್ಮರಣೀಯವಾದದ್ದು.
(ಚಿತ್ರ-ಮಾಹಿತಿ ಶಂಕರ ಕುಂಜತ್ತೂರು)

