ಹೆಬ್ರಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : ಹೆಬ್ರಿಯ ಪ್ರತೀಕ್ಷಾ ಕುಲಾಲ್ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಅಸಾಧಾರಣ ಸಾಧನೆ ಮಾಡುವ ಮೂಲಕ ಇಡೀ ತಾಲೂಕೇ ಮೆಚ್ಚುವಂತಹ ಕೀರ್ತಿ ತಂದಿದ್ದಾಳೆ. ಆರಂಭಿಕ ಫಲಿತಾಂಶದ ನಂತರ ನಡೆದ ಗಣಿತ ವಿಷಯದ ಮರುಮೌಲ್ಯಮಾಪನದಲ್ಲಿ ಆಕೆಗೆ ಬರೋಬ್ಬರಿ 7 ಹೆಚ್ಚುವರಿ ಅಂಕಗಳು ಲಭಿಸಿದ್ದು, ಇದರೊಂದಿಗೆ ಆಕೆಯ ಒಟ್ಟು ಅಂಕಗಳು 611ಕ್ಕೆ (97.76%) ಏರಿಕೆಯಾಗಿದೆ. ಈ ಅದ್ಭುತ ಯಶಸ್ಸಿನಿಂದಾಗಿ ಪ್ರತೀಕ್ಷಾ ಹೆಬ್ರಿ ತಾಲೂಕಿಗೆ ದ್ವಿತೀಯ ಸ್ಥಾನ ಹಾಗೂ ಕಾರ್ಕಳ ಶಿಕ್ಷಣ ವಲಯದ ಕನ್ನಡ ಮಾಧ್ಯಮ ವಿಭಾಗದಲ್ಲಿ ತೃತೀಯ ಸ್ಥಾನವನ್ನು ಮುಡಿಗೇರಿಸಿಕೊಂಡಿದ್ದಾಳೆ.
ಮುದ್ರಾಡಿ ವಿದ್ಯಾಸಾಗರ ಎಜುಕೇಶನ್ ಟ್ರಸ್ಟ್ ಮುನ್ನಡೆಸುತ್ತಿರುವ ಎಂ. ಎನ್. ಡಿ. ಎಸ್. ಎಂ. ಅನುದಾನಿತ ಪ್ರೌಢಶಾಲೆಯ ಕನ್ನಡ ಮಾಧ್ಯಮದ ವಿದ್ಯಾರ್ಥಿನಿಯಾಗಿರುವ ಈಕೆಯ ಸಾಧನೆ ನಿಜಕ್ಕೂ ಸ್ಫೂರ್ತಿದಾಯಕ. ಬಲ್ಲಾಡಿ ಎಲ್ಸ್ ಬೆಟ್ಟು ನಿವಾಸಿಗಳಾದ ಜಯ ಕುಲಾಲ್ ಮತ್ತು ಸುಧಾ ಕುಲಾಲ್ ದಂಪತಿಯ ಪುತ್ರಿಯಾದ ಪ್ರತೀಕ್ಷಾ, ತಂದೆ-ತಾಯಿ ಬಡ ಕೂಲಿ ಕಾರ್ಮಿಕರಾಗಿದ್ದರೂ ಪರಿಸ್ಥಿತಿಗೆ ಸೋಲದೆ ಶಿಕ್ಷಣದಲ್ಲಿ ಈ ಮಹೋನ್ನತ ಮೈಲಿಗಲ್ಲು ಸ್ಥಾಪಿಸಿದ್ದಾಳೆ. ಕಡು ಬಡತನದಲ್ಲೂ ಅರಳಿದ ಈ ಪ್ರತಿಭೆಯ ಗಮನಾರ್ಹ ಸಾಧನೆಗೆ ಶಾಲೆಯ ಆಡಳಿತ ಮಂಡಳಿ, ಮುಖ್ಯ ಶಿಕ್ಷಕರು, ಶಿಕ್ಷಕ ವೃಂದ, ರಕ್ಷಕ ಶಿಕ್ಷಕ ಸಮಿತಿ, ಹಳೆ ವಿದ್ಯಾರ್ಥಿ ಸಂಘ, ಪೋಷಕರು ಹಾಗೂ ಮುದ್ರಾಡಿಯ ಸಮಸ್ತ ಗ್ರಾಮಸ್ಥರು ಅಪಾರ ಹರ್ಷ ವ್ಯಕ್ತಪಡಿಸಿ, ಆಕೆಯ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

