ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘದ ಪ್ರಯತ್ನ
ಹೆಬ್ರಿ: ಪರಿಸರ ಸ್ನೇಹಿ, ಆರೋಗ್ಯಕ್ಕೂ ಉತ್ತಮವಾದ ಮಡಕೆಗಳಿಗೆ ಈಗ ಹೈಟೆಕ್ ಟಚ್ ಸಿಗುತ್ತಿದೆ. ಪೆರ್ಡೂರು ಕುಂಬಾರರ ಗುಡಿ ಕೈಗಾರಿಕಾ ಸಂಘ ನೂತನ ತಂತ್ರಜ್ಞಾನ ಬಳಸಿ ಮಡಕೆ ತಯಾರಿಸಲು ಮುಂದಾಗಿದೆ.
ಯಂತ್ರದಲ್ಲಿ ತಯಾರಾಗುತ್ತೆ..
ಮಡಕೆ ತಯಾರಿಕೆಗೆ ಈಗ ಯಂತ್ರಗಳೂ ಬಂದಿವೆ. ಮಂಗಳೂರಿನಲ್ಲಿ ನಿರ್ಮಾಣವಾದ 4 ಲಕ್ಷ ರೂ. ವೆಚ್ಚದ ಈ ಯಂತ್ರವನ್ನು ಸ್ಥಾಪಿಸಿ, ಕುಂಬಾರರ ಸಂಘದಲ್ಲಿ ಎಪ್ರಿಲ್ ಮೊದಲ ವಾರದಿಂದ ಮಡಕೆ ತಯಾರಾಗಲಿದೆ. ಮಣ್ಣಿನ ಗುಣಮಟ್ಟವನ್ನು ಪರೀಕ್ಷಿಸಿ ಮಡಕೆ ತಯಾರಿಸಿ, ಆಹಾರ ಬೇಯಿಸಲು ಅನುಕೂಲವಾಗುವಂತೆ ಈ ತಂತ್ರಜ್ಞಾನವಿದೆ. ಮಣ್ಣಿನ ಆಕರ್ಷಕ ಕಲಾಕೃತಿಗಳನ್ನು ಇದರಲ್ಲಿ ತಯಾರಿಸಬಹುದು. ಒಂದು ಗಂಟೆಯಲ್ಲಿ 25 ಪರಿಪೂರ್ಣ ಮಣ್ಣಿನ ಮಡಕೆಗಳನ್ನು ತಯಾರಿಸಲು ಸಾಧ್ಯ.
10 ಲಕ್ಷ ರೂ. ಬಂಡವಾಳ
ಯಂತ್ರ, ಶೆಡ್ ಹಾಗೂ ಬಾಯ್ಲರ್ ನಿರ್ಮಾಣ ಸೇರಿ ಯಾಂತ್ರಿಕ ಮಡಕೆ ತಯಾರಿಕಾ ಘಟಕಕ್ಕೆ 10 ಲಕ್ಷ ರೂ. ಮಿಕ್ಕಿ ಬಂಡವಾಳ ಬೇಕು. ಈ ನಿಟ್ಟಿನಲ್ಲಿ ಸರಕಾರ ಸಹಕಾರ ನೀಡಬೇಕು. ಇದರಿಂದ ಕುಂಬಾರಿಕೆ ಕೆಲಸವನ್ನು ಗಟ್ಟಿಗೊಳಿಸುವುದರ ಜತೆಗೆ ನಿರುದ್ಯೋಗಿಗಳಿಗೆ ಉದ್ಯೋಗಾವಕಾಶ ಕಲ್ಪಿಸಲು ಸಾಧ್ಯವಾಗಲಿದೆ.
60 ವರ್ಷಗಳಿಂದ ನಿರಂತರ ಸೇವೆ
ಕುಂಬಾರಿಕೆ ಉಳಿಸಿ ಬೆಳೆಸುವ ನಿಟ್ಟಿನಲ್ಲಿ 1958ರಲ್ಲಿ ಪ್ರಾರಂಭವಾದ ಪೆರ್ಡೂರಿನ ಕುಂಬಾರರ ಗುಡಿ ಕೈಗಾರಿಕಾ ಸಂಘ ಕುಂಬಾರಿಕೆ ಯಂತ್ರಗಳನ್ನು ಕೊಳ್ಳಲು ಅಸಾಧ್ಯವಾದ ಕುಟುಂಬಗಳನ್ನು ಗುರುತಿಸಿ ಆರ್ಥಿಕವಾಗಿ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದೆ. ಜತೆಗೆ ಬ್ರಹ್ಮಾವರ, ಮುದ್ದೂರು, ಮುಂಡಿRನಜೆಡ್ಡು, ಕಾಪು, ಕುಂದಾಪುರ, ಹೆಬ್ರಿ, ಕಟಪಾಡಿ, ಪೆರ್ಡೂರು ಸುತ್ತಮುತ್ತಲಿನ ಕುಂಬಾರರ ಕುಟುಂಬಗಳು ತಯಾರಿಸಿದ ಮಡಿಕೆಗಳನ್ನು ಇಲ್ಲಿನ ಪ್ರದರ್ಶನ ಹಾಗೂ ಮಾರಾಟ ವಿಭಾಗದ ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ಜಿಲ್ಲೆಯಲ್ಲಿ ಇದೀಗ 35 ಕುಟುಂಬಗಳು ಮಾತ್ರ ಕುಂಬಾರಿಕೆ ಮಾಡುತ್ತಿದ್ದು, ವೃತ್ತಿಯನ್ನು ಜನಪ್ರಿಯಗೊಳಿಸಲು ಸಂಘದ ಅಧ್ಯಕ್ಷ ಸಂತೋಷ ಕುಲಾಲ್ ಈ ಹೊಸ ತಂತ್ರಜ್ಞಾನದ ಯೋಜನೆಗೆ ಮುಂದಾಗಿದ್ದಾರೆ.
ಆಕರ್ಷಕ ಪರಿಕರಗಳು
ನೂರಾರು ರೀತಿಯ ಆಕರ್ಷಕ ಮಣ್ಣಿನ ಪರಿಕರಗಳು ಸಂಘದ ಮಳಿಗೆಯಲ್ಲಿವೆ. ಮಡಕೆ, ಓಡು ದೋಸೆ ಕಾವಲಿ, ಮಣ್ಣಿನ ಒಲೆ, ನೀರಿನ ಹೂಜಿ, ಮಣ್ಣಿನ ಕೊಡ, ಆಕರ್ಷಕ ಹಣತೆಗಳು, ಚಟ್ಟಿ, ಮರಾಯಿ, ಅಡುಗೆ ಮಡಕೆ, ಕಲಶ, ಕವಚ, ಗಿಂಡಿ, ಗೋಪುರ, ಬಾಣಿ, ಓಡು, ದೂಪ, ಮೊಗೆ, ಬಿಸಲೆ, ಕಾವಲಿ, ಅಳಗೆ, ಕಡಾಯಿ, ಹೂದಾನಿ ಹೀಗೆ ಮಣ್ಣಿನ ಹಲವು ಪರಿಕರಗಳು ಲಭ್ಯ. ಈ ಎಲ್ಲ ಪರಿಕರಗಳಿಗೆ ಬೇಡಿಕೆ ಇದೆ. ಆದರೆ ಪೂರೈಕೆ ಕಷ್ಟ ಎನ್ನುತ್ತಾರೆ ಸಂಘದ ಕಾರ್ಯನಿರ್ವಹಣಾಧಿಕಾರಿ ಸುಧಾಕರ ಕುಲಾಲ್ ಪಟ್ಲ.
ಕುಂಬಾರಿಕೆ ಕಲಿಕಾ ವಿಷಯವಾಗಲಿ
ಜತೆಗೆ ಯುವಜನತೆಗೆ ಈ ಬಗ್ಗೆ ತಜ್ಞರಿಂದ ತರಬೇತಿ ನೀಡುವ ಮೂಲಕ ಕುಂಬಾರಿಕೆಯನ್ನು ಐಟಿಐ ವೃತ್ತಿ ಕಲಿಕಾ ವಿಷಯವಾಗಿ ಸೇರಿಸಬೇಕು. ಸರಕಾರದ ಕೌಶಲಾಭಿವೃದ್ಧಿ ಯೋಜನೆಯಡಿ ಪ್ರೋತ್ಸಾಹ ನೀಡಬೇಕು.
– ಸಂತೋಷ್ ಕುಲಾಲ್,
ಅಧ್ಯಕ್ಷರು, ಕುಂಬಾರರ ಗುಡಿ ಕೈಗಾರಿಕಾ ಸಂಘ
– ಉದಯಕುಮಾರ್ ಶೆಟ್ಟಿ (ಕೃಪೆ : ಉದಯವಾಣಿ)