ಇದು ಜಾಲತಾಣದಲ್ಲಿ ಫೇಮಸ್ ಆದ ಮಹಾಮಾತೆ ಕುಟುಂಬ
(ಕುಲಾಲ್ ವರ್ಲ್ಡ್ ಡಾಟ್ ಕಾಮ್, ಮಾರ್ಚ್-೨೦,೨೦೧೮)
ಇತ್ತೀಚಿನ ದಿನಗಳಲ್ಲಿ ಅಪರೂಪವಾಗುತ್ತಿರುವ ಐದು ತಲೆಮಾರು ತುಳುನಾಡಿನಲ್ಲಿ ಆಗಾಗ ಕೆಲವು ಕಡೆ ಕಾಣಿಸಿಕೊಳ್ಳುತ್ತಿದೆ. ಬಿ.ಸಿ. ರೋಡ್ ಸಮೀಪ ಇಂತಹ ಒಂದು ಅಪೂರ್ವ ಐದು ತಲೆಮಾರು ಕಂಡುಬರುತ್ತದೆ. ಇಲ್ಲಿನ ಅಜ್ಜಿಬೆಟ್ಟು ನಿವಾಸಿ ದಿ. ಶಿವಪ್ಪ ಮೂಲ್ಯ ಅವರ ಧರ್ಮಪತ್ನಿ ಕಲ್ಯಾಣಿ ಅವರೇ ಐದು ತಲೆಮಾರನ್ನು ಕಂಡ ಭಾಗ್ಯವಂತರು. ಕಲ್ಯಾಣಿ ಹೆಸರು ಕೇಳಿದ ಕೂಡಲೇ ಇವರ್ಯಾರು ಎಂದು ತಟ್ಟನೇ ಗೊತ್ತಾಗಲಿಕ್ಕಿಲ್ಲ. ಆದರೆ ಫೇಸ್ ಬುಕ್-ವಾಟ್ಸಾಪ್ ಬಳಸುವ ಕೆಲವರಿಗೆ `ಕುಕ್ಕುಡು ಉಂಡರಪ್ಪೆ..?’ ಅಂದ ಕೂಡಲೇ `ಓ ಆ ಅಜ್ಜಿ ಇವರಾ ??’ ಎಂದು ಉದ್ಘಾರ ತೆಗೆಯುವುದು ಖಂಡಿತ!

ಹೌದು.. ಇವರ ಮೊಮ್ಮಗ ಧೀರಜ್ ಅವರು ತನ್ನ ಅಜ್ಜಿ ಕಲ್ಯಾಣಿ ಅವರನ್ನು `ಕುಕ್ಕುಡು ಉಂಡರಪ್ಪೆ’ ಎಂದು ತಮಾಷೆಗಾಗಿ ಕೆಣಕಿ ತೆಗೆದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಇದನ್ನು ಲಕ್ಷಾಂತರ ಮಂದಿ ವೀಕ್ಷಿಸಿ ಶೇರ್ ಮಾಡಿದ್ದಾರೆ. ಈ ಅಜ್ಜಿಯ ನಿಖರ ವಯಸ್ಸಿನ ಲೆಕ್ಕಾಚಾರಕ್ಕೆ ಜಾತಕವಿಲ್ಲ. ಆದರೆ ಮನೆ ಮಂದಿಯ ಪ್ರಕಾರ ವಯಸ್ಸು 85 ದಾಟಿರಬಹುದು ಎನ್ನುತ್ತಾರೆ. ಕಲ್ಯಾಣಿ ಅವರ ಮಗಳು ರೇವತಿ, ಮೊಮ್ಮಗಳು ಭಾರತಿ, ಮರಿಮಗಳು ನಿತ್ಯಾ ಅವರ ಮಗಳು ನಿಧೀಶ್ ಅವರನ್ನು ಅಪರೂಪವೆನಿಸುವ ಅವಿಭಕ್ತ ಕುಟುಂಬದಲ್ಲಿ ಕಾಣುವುದೇ ಸಂಭ್ರಮ.
ಕಲ್ಯಾಣಿ ಅಜ್ಜಿ ಮನೆಯ ಶ್ರೇಯಸ್ಸಿಗೆ ತನ್ನ ಜೀವನವನ್ನೇ ಗಂಧದಂತೆ ತೇಯ್ದಿದ್ದಾಳೆ. ಅದಕ್ಕೆ ಈ ಅಜ್ಜಿ ಎಂದರೆ ಮನೆ ಮಂದಿಗೆಲ್ಲಾ ಪಂಚಪ್ರಾಣ. ಕಲ್ಯಾಣಿ ಅವರ ಪತಿ ಶಿವಪ್ಪ ಅವರು ಕೆಲ ವರ್ಷಗಳ ಹಿಂದೆ ತೀರಿ ಹೋಗಿದ್ದಾರೆ. ಈ ದಂಪತಿಗೆ ಒಟ್ಟು ಮೂವರು ಮಕ್ಕಳು. ರೇವತಿ ಮತ್ತು ಕವಿತಾ ಇಬ್ಬರು ಪುತ್ರಿಯಾರಾದರೆ, ಪುತ್ರ ಚಂದಪ್ಪ. ಇವರೆಲ್ಲರೂ ಸುಖ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಕಲ್ಯಾಣಿ ಅವರ ದೇಹ ವಯೋ ಸಹಜವಾಗಿ ಬಡಕಲಾಗಿ ಬಗ್ಗಿ ಹೋಗಿದ್ದರೂ ಲವಲವಿಕೆಯಿಂದಯಿಂದಿದ್ದು ಮಾನಸಿಕವಾಗಿ ಸ್ವಸ್ಥರಾಗಿದ್ದಾರೆ. ಊರುಗೋಲಿನ ಸಹಾಯದಿಂದ ನಡೆದಾಡುತ್ತಾರೆ. ಇಳಿ ವಯಸ್ಸಿನಲ್ಲೂ ಅತ್ಯಂತ ಸ್ವಾಭಿಮಾನಿಯಾಗಿದ್ದು ತನ್ನ ಕೆಲಸಗಳನ್ನು ತಾನೇ ಮಾಡುತ್ತಾರೆ. ತಮ್ಮ ಆರೋಗ್ಯದ ಗುಟ್ಟೇನೆಂದು ಕೇಳಿದರೆ ನಿರಂತರ ಕೆಲಸ ಚಟುವಟಿಕೆಯೇ ಕಾರಣವೆಂದು ಮುಗುಳ್ನಗುತ್ತಾರೆ. ಈ ಅಜ್ಜಿಗೆ ದೇವರು ಉತ್ತಮ ಆರೋಗ್ಯ ಮತ್ತು ಆಯುಷ್ಯ ನೀಡಲಿ.. ಮುಂದಿನ ಅವರ ಬಾಳು ಸುಖ, ಶಾಂತಿ, ನೆಮ್ಮದಿಯಿಂದ ಕೂಡಿರಲಿ ಎಂದು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ ಹಾರೈಸುತ್ತದೆ.
`ಕುಕ್ಕುಡು ಉಂಡರಪ್ಪೆ’ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋ …
- ದಿನೇಶ್ ಇರ್ವತ್ತೂರು


