ದುಬೈ(ಕುಲಾಲ ವರ್ಲ್ಡ್ ಡಾಟ್ ಕಾಮ್): ದುಬೈನ ಮಣ್ಣಿನಲ್ಲಿ ಅರಳಿ, ತನ್ನ ಅದ್ಭುತ ಕ್ರೀಡಾ ಕೌಶಲ್ಯದ ಮೂಲಕ ಕರಾವಳಿಯ ಕೀರ್ತಿಯನ್ನು ಅಂತರರಾಷ್ಟ್ರೀಯ ಮಟ್ಟದಲ್ಲಿ ಎತ್ತಿ ಹಿಡಿದ ಕೀರ್ತಿ ಅರ್ಚರಾ ಸುಪ್ರಿಯಾ ಕುಲಾಲ್ ಅವರಿಗೆ ಸಲ್ಲುತ್ತದೆ. ಪ್ರತಿಷ್ಠಿತ ‘ಮಹಿಳಾ ಏಷ್ಯಾ ಕಪ್ ಕ್ರಿಕೆಟ್ 2026’ ಪಂದ್ಯಾವಳಿಯಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಮಹಿಳಾ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಮೂಲಕ ಇವರು ಸಮುದಾಯ ಹಾಗೂ ದೇಶಕ್ಕೆ ಹೆಮ್ಮೆ ತಂದಿದ್ದಾರೆ.
ಡಿಸೆಂಬರ್ 21, 2004 ರಂದು ದುಬೈನಲ್ಲಿ ಜನಿಸಿದ ಅರ್ಚರಾ `ಕುಲಾಲ ಫ್ಯಾಮಿಲಿ ದುಬೈ’ ಇದರ ಸದಸ್ಯರಾದ ಭಾಸ್ಕರ್ ಕುಲಾಲ್ ಮತ್ತು ಸುಪ್ರಿಯಾ ಕುಲಾಲ್ ಅವರ ಸುಪುತ್ರಿಯಾಗಿದ್ದಾರೆ. ಅರ್ಚರಾ ಅವರು ಮೈದಾನದಲ್ಲಿ ತಮ್ಮ ಚತುರ ಎಡಗೈ ಬ್ಯಾಟಿಂಗ್ ಮತ್ತು ನಿಖರವಾದ ನಿಧಾನಗತಿಯ ಎಡಗೈ ಆರ್ಥೊಡಾಕ್ಸ್ ಬೌಲಿಂಗ್ ಮೂಲಕ ಎದುರಾಳಿಗಳಿಗೆ ಕಂಟಕರಾಗಿದ್ದಾರೆ. ಐಸಿಸಿ (ICC) 19-ವರ್ಷದೊಳಗಿನ ಮಹಿಳಾ ಟಿ20 ವಿಶ್ವಕಪ್ ಏಷ್ಯಾ ಅರ್ಹತಾ ಪಂದ್ಯಾವಳಿಯಲ್ಲಿ ಕತಾರ್ ವಿರುದ್ಧದ ಜಿದ್ದಾಜಿದ್ದಿನ ಪಂದ್ಯದಲ್ಲಿ ಭರ್ಜರಿ 5 ವಿಕೆಟ್ಗಳನ್ನು ಕಬಳಿಸಿ, ಕ್ರೀಡಾ ಜಗತ್ತಿನ ಗಮನ ಸೆಳೆದಿದ್ದರು.
ತಮ್ಮ ಶ್ರಮ ಮತ್ತು ಬದ್ಧತೆಯಿಂದ ಹಿರಿಯರ ರಾಷ್ಟ್ರೀಯ ತಂಡದಲ್ಲಿ ನಿಯಮಿತವಾಗಿ ಸ್ಥಾನ ಗಿಟ್ಟಿಸಿಕೊಂಡಿರುವ ಅರ್ಚರಾ, ಇತ್ತೀಚೆಗೆ ದುಬೈನಲ್ಲಿ ನಡೆದ ಮಹಿಳಾ ಏಷ್ಯಾ ಕಪ್ 2026ರ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಕ್ರೀಡಾ ಪ್ರೇಮಿಗಳ ಮನಗೆದ್ದಿದ್ದಾರೆ. ಕ್ರಿಕೆಟ್ ಮೈದಾನದಲ್ಲಿ ಜಯದ ಪಥದಲ್ಲಿ ಸಾಗುತ್ತಿರುವ ಈ ಉದಯೋನ್ಮುಖ ತಾರೆಯ ಭವಿಷ್ಯದ ಕ್ರೀಡಾ ಪಯಣಕ್ಕೆ ಶುಭ ಹಾರೈಕೆಗಳು.

