ಕಡಬ: ನಮ್ಮಲ್ಲಿರುವ ಪ್ರತಿಭೆಗೆ ಸೂಕ್ತವಾದ ವೇದಿಕೆ ಮತ್ತು ಪ್ರೋತ್ಸಾಹ ಸಿಕ್ಕಿದರೆ ಸಾಧನೆಯ ಮೆಟ್ಟಿಲನ್ನು ಸುಲಭವಾಗಿ ಏರಲು ಸಾಧ್ಯವಿದೆ. ಎಳೆಯ ಪ್ರಾಯದಲ್ಲೇ ಈ ವಾತಾವರಣದಲ್ಲಿ ಬೆಳೆದು ಸಾಧನೆಯತ್ತ ಹೆಜ್ಜೆ ಹಾಕಿದವರು ಬಹುಮುಖ ಪ್ರತಿಭೆ ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ ವಿಜೇತೆ ಕುಮಾರಿ ದೃತಿ ಕುಲಾಲ್.
ಕಡಬ ತಾಲೂಕಿನ ನೆಲ್ಯಾಡಿ ಗ್ರಾಮದ ಕರಂದಲ ಕೊಪ್ಬ ನಿವಾಸಿ ರಮೇಶ್ ಹಾಗೂ ಕುಸುಮಾ ದಂಪತಿಯ ಪುತ್ರಿಯಾಗಿರುವ ಇವರು ಶಿಮಂತೂರು ಶ್ರೀ ಶಾರದಾ ಮೊಡೆಲ್ ಸೆಕೆಂಡರಿ ಶಾಲೆಯ 6 ನೆಯ ತರಗತಿಯ ವಿದ್ಯಾರ್ಥಿಯಾಗಿದ್ದು ,ಸಂಗೀತ, ಯೋಗ, ಕರಾಟೆ, ಈಜು, ನೃತ್ಯಗಳಲ್ಲಿ ತನ್ನನ್ನು ತೊಡಗಿಸಿಕೊಂಡು ಹಲವಾರು ಬಹುಮಾನ ಪಡೆದ ಬಾಲ ಪ್ರತಿಭೆ.
ದಕ್ಷಿಣ ಕನ್ನಡ ಜಿಲ್ಲೆ ಅಲ್ಲದೇ ರಾಜ್ಯ ಮಟ್ಟದಲ್ಲಿ ನಲವತ್ತಕ್ಕೂ ಹೆಚ್ಚು ನೃತ್ಯ ಪ್ರದರ್ಶಿಸಿ ಪ್ರಶಂಸೆ ಗಳಿಸಿದ್ದಾರೆ. ಸಂಗೀತದಲ್ಲೂ ತಮ್ಮ ಶಾಲೆಯನ್ನು ಪ್ರತಿನಿಧಿಸುವ ಮೂಲಕ ಬಹುಮಾನ ಗಳಿಸಿರುತ್ತಾರೆ. ಕರಾಟೆಯಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ್ದಾರೆ . ಮೂರು ವರ್ಷದಲ್ಲಿ 18 ಚಿನ್ನದ ಪದಕ, 5 ಬೆಳ್ಳಿಯ ಪದಕ ಹಾಗೂ ಹಲವು ಬಹುಮಾನ ಪಡೆದ ಕೀರ್ತಿಯೂ ಇವರದಾಗಿದೆ. 10 ವರ್ಷ ಪ್ರಾಯದಲ್ಲಿಯೇ ರಾಷ್ಟ್ರೀಯ ಮಟ್ಟದ ಕರಾಟೆಯಲ್ಲಿ ಭಾಗವಹಿಸಿ 14 ವರ್ಷ ಪ್ರಾಯದ ಮಧ್ಯಪ್ರದೇಶದ ಪೈಟರ್ ಶೋಭಾ ಎಂಬವರನ್ನು ಫೈನಲ್ ನಲ್ಲಿ ಸೋಲಿಸಿ ಚಿನ್ನದ ಪದಕ ಪಡೆಯುವ ಮೂಲಕ ಅಂತರರಾಷ್ಟ್ರೀಯ ಮಟ್ಟದಲ್ಲಿ ತಮ್ಮ ಪ್ರತಿಭೆಯನ್ನು ತೋರಿಸಿಕೊಟ್ಟವರು.
ಹಳೆಯಂಗಡಿ ರೈಲ್ವೆ ಮೇಲು ಸೇತುವೆ ವಿಚಾರವಾಗಿ ಮಾನ್ಯ ಮುಖ್ಯಮಂತ್ರಿಗಳು ಅಲ್ಲದೇ ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ಯಶಸ್ವಿಯಾಗಿ ಭೇಷ್ ಎನಿಸಿಕೊಂಡ ಪ್ರತಿಭೆ.
ಗೌರವ ಮತ್ತು ಪ್ರಶಸ್ತಿಗಳು:

2017 ರಲ್ಲಿ ಜ್ಞಾಮಂದಾರ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಅಕಾಡೆಮಿ ಬೆಂಗಳೂರು ಇವರಿಂದ “ಅರಳು ಮಲ್ಲಿಗೆ ರಾಜ್ಯ ಪ್ರಶಸ್ತಿ”, ಕಟೀಲು ಗೋಪಾಲಕೃಷ್ಣ ಅಸ್ರಣ್ಣ ಪ್ರಶಸ್ತಿ, ಯುಗಪುರುಷ ಕಿನ್ನಿಗೋಳಿ ಸಂಸ್ಥೆಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಮಂಗಳೂರು ಶ್ರೀ ದೇವಿ ದೇವಸ್ಥಾನ ದಕ್ಷಿಣ ಕನ್ನಡ ಜಿಲ್ಲಾ ಮೂಲ್ಯರ ಯಾನೆ ಕುಲಾಲರ ಸಂಘ ಪೋಲಿಸ್ ಲೇನ್ ಮಂಗಳೂರು ಇವರಿಂದ ಪ್ರತಿಭಾ ಪುರಸ್ಕಾರ, ಇನ್ನರ್ ವೀಲ್ ಕ್ಲಬ್ ಕಿನ್ನಿಗೋಳಿ ಇವರಿಂದ ಪ್ರತಿಭಾ ಪುರಸ್ಕಾರ, ಸುರತ್ಕಲ್ ಕುಲಾಲ ಸಂಘ (ರಿ) ತಡಂಬೈಲು ಇವರಿಂದ ಪ್ರತಿಭಾ ಪುರಸ್ಕಾರ, ಕುಲಾಲ ಸಮಾಜ ಸೇವಾ ಸಂಘ ಕಿನ್ನಿಗೋಳಿ ಇವರಿಂದ ಪ್ರತಿಭಾ ಪುರಸ್ಕಾರ, ಮೂಲ್ಕಿ ಲಯನ್ಸ್ ಕ್ಲಬ್ ಇವರಿಂದ ಪ್ರತಿಭಾ ಪುರಸ್ಕಾರ, ಭ್ರಾಮರಿ ಮಹಿಳಾ ಸಮಾಜ ಮೆನ್ನಬೆಟ್ಟು ಕಿನ್ನಿಗೋಳಿ ಇವರಿಂದ ಪ್ರತಿಭಾ ಪುರಸ್ಕಾರ, 2017 ರಲ್ಲಿ ಸ್ವಾತಂತ್ರ್ಯೋತ್ಸವದಂದು ಪೊಂಪೈ ಕಾಲೇಜು, ಐಕಳ (ನಾಯ್ಕ್ “ಎ” ಗ್ರೇಡ್) ಇವರಿಂದ ಪ್ರತಿಭಾ ಪುರಸ್ಕಾರ ಹಾಗೂ ಅದೇ ವರ್ಷ ಸ್ವಾತಂತ್ರ್ಯೋತ್ಸವದಂದು ಸಾರ್ವಜನಿಕ ಯಕ್ಷಗಾನ ಬಯಲಾಟ ಸಮಿತಿ ಪದ್ಮನೂರು, ಜ್ಯೋತಿ ಮಹಿಳಾ ಮಂಡಳಿ ಮತ್ತು ರೊಕ್ ಗೈಸ್ ಇವರಿಂದ ಪ್ರತಿಭಾ ಪುರಸ್ಕಾರ, ಗಜಾನನ ಸ್ಪೋರ್ಟ್ಸ್ ಕ್ಲಬ್ (ರಿ) ಸುಬ್ರಹ್ಮಣ್ಯ ದೇವಸ್ಥಾನ, ತೋಕೂರು- ಹಳೆಯಂಗಡಿ ಇವರಿಂದ ಪ್ರತಿಭಾ ಪುರಸ್ಕಾರ, ಕುಂಭಶ್ರೀ ಭಜನಾ ಮಂಡಳಿ ಚಾರ್ಮಾಡಿ ಇವರಿಂದ ಮೋಹನ್ ಕುಲಾಲ್ ಇವರ ಮನೆಯಲ್ಲಿ ಪ್ರತಿಭಾ ಪುರಸ್ಕಾರ, ನಾಗ ಪದ್ಮ ನಿಲೆ ಬೆಳಿಯಪ್ಪ ಹಾಗೂ ರೋಹಿಣಿ ನಾಡ್ತಿಲ ಕೊಪ್ಬ ಆಲಂಗಾರು ಕಡಬ ತಾಲೂಕು, ಇವರಿಂದ ಪ್ರತಿಭಾ ಪುರಸ್ಕಾರ,ರೋಟರ್ಯಾಕ್ಟ್ ಕ್ಲಬ್ ಕಿನ್ನಿಗೋಳಿ ಇದರ ಸಂಯೋಜನೆಯಲ್ಲಿ ಸಂತ ಜೂಡ್ ಗೋಲ್ಡನ್ ಜುಬ್ಲೀ ಸ್ಮಾರಕ ಸಭಾಭವನದಲ್ಲಿ ನಡೆದ ‘Roto Rendezvous 2018’ ಕಾರ್ಯಕ್ರಮದಲ್ಲಿ ಸನ್ಮಾನ.
ಇನ್ನಷ್ಟು ಪ್ರತಿಭೆಗಳು ತಮ್ಮಲ್ಲಿ ಮೂಡಿ ಬಂದು ತಮ್ಮ ಊರಿನ ಹೆಸರನ್ನು ರಾಷ್ಟ್ರ ವ್ಯಾಪ್ತಿಯಲ್ಲಿ ಕೇಳಿಬರುವ ಹಾಗೆ ಆಗಲಿ, ತಮ್ಮ ಮುಂದಿನ ಬಾಳು ಉಜ್ವಲವಾಗಿ ಬೆಳಗಲಿ ಎಂಬುದು ನಮ್ಮ ಆಶಯ.
ಸಂತೋಷ್ ಪಿ ಕಡಬ
(ಕೃಪೆ : ನಮ್ಮ ಕಡಬ ಡಾಟ್ ಕಾಮ್ )



