(ಕುಲಾಲ್ ವರ್ಲ್ಡ್ ಡಾಟ್ ಕಾಮ್, ಫೆ.೨೪, ೨೦೧೮)
ಜಗತ್ತು ಬದಲಾದಂತೆ ಮನುಷ್ಯನ ಬೇಡಿಕೆಗಳು ಆದ್ಯತೆಗಳು ಬದಲಾಗುತ್ತಿವೆ. ಇಂದು ಇರುವ ವಸ್ತು ನಾಳೆಗೆ ಹಳತು. ಇದು ಪ್ರಕೃತಿ ನಿಯಮ. ಒಂದು ಕಾಲದಲ್ಲಿ ಬದುಕಿನ ಭಾಗವಾಗಿದ್ದ ಕುಂಬಾರಿಕೆ ಇಂದು ವಿನಾಶದ ಅಂಚಿಗೆ ತಲುಪಿದೆ. ಮಣ್ಣಿನ ಮಡಿಕೆಯ ನೆನಪು ಇಂದಿನ ಮಕ್ಕಳಿಗೂ ಇಲ್ಲದ ಸ್ಥಿತಿ ಉದ್ಭವಿಸಿದೆ. ಮಡಿಕೆಯ ಜಾಗದಲ್ಲಿ ಸ್ಟೀಲ್, ಹಿತ್ತಾಳೆ, ಕಂಚು, ಅಲ್ಯೂಮಿನಿಯಂ ಪಾತ್ರೆಗಳು ಬೆಸೆದುಕೊಂಡಿದ್ದು ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆ ಮರೆಯಾಗುತ್ತಿದೆ. ಆದರೆ ಶ್ರದ್ಧೆ, ಬದ್ಧತೆ, ಹೊಸ ಕಾಲಕ್ಕೆ ಒಗ್ಗುವ ಸೃಜನಶೀಲ ಮನಸ್ಸಿದ್ದರೆ ಯಾವುದೇ ಸಾಂಪ್ರದಾಯಿಕ ವೃತ್ತಿಯನ್ನು ಜೀವಂತವಾಗಿರಿಸಬಹುದು ಎನ್ನುವುದಕ್ಕೆ ಸಾಕ್ಷಿ ಬೆಹರೈನ್ ನಲ್ಲಿರುವ ಈ ಕುಂಭ ಕಲಾ ಕುಟೀರ.
ಭಾರತದಲ್ಲಿ ಕೆಲವೊಂದು ಜಾತಿಗಳು ಕುಂಬಾರಿಕೆಯನ್ನು ನೆಚ್ಚಿಕೊಂಡು ತಮ್ಮ ಕುಲ ಕಸುಬಾಗಿ ಇದನ್ನು ಆರಿಸಿಕೊಂಡು ಜೀವನ ನಡೆಸುತ್ತಿವೆ. ಭಾರತ ಮಾತ್ರದವಲ್ಲದೆ ಇತರ ದೇಶಗಳಲ್ಲೂ ಕುಂಭ ಕಲೆ ವೃತ್ತಿಯನ್ನು ನಂಬಿ ಹಲವು ಕುಟುಂಬಗಳು ಬದುಕುತ್ತಿವೆ. ಆದರೆ ಬೆಹರೈನ್ ನಂಥ ಮರಳುಗಾಡಿನಲ್ಲೂ ಕುಂಬಾರಿಕೆಯಲ್ಲಿ ತೊಡಗಿಸಿಕೊಂಡಿರುವ ಕುಟುಂಬಗಳಿವೆ ಎಂದಾಗ ಒಂದು ಕ್ಷಣ ಆಶ್ಚರ್ಯ ಚಕಿತನಾದೆ.
ಅರಬ್ಬಿನಾಡಿನಲ್ಲಿ ಕುಂಭ ಕಲೆಗೆ ಪೂರಕವಾದ ಮಣ್ಣು, ಕಟ್ಟಿಗೆಯಂಥ ಪರಿಕರಗಳು ಸಿಗುವುದು ವಿರಳ. ಹೀಗಾಗಿ ಹೆಚ್ಚಿನ ಗಲ್ಫ್ ರಾಷ್ಟಗಳು ಮಣ್ಣಿನ ಪಾತ್ರೆ ಪಗಡಿಗಳನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳುತ್ತವೆ. ಆದರೆ ಇದಕ್ಕೆ ಅಪವಾದವೆಂಬಂತೆ ನೇಪಥ್ಯಕ್ಕೆ ಸರಿಯುತ್ತಿರುವ ಕುಂಬಾರಿಕೆಯನ್ನು ತನ್ನ ನೆಲದಲ್ಲೇ ತಯಾರಿಸುತ್ತಿರುವುದು ಬೆಹರೈನ್ ನ ವಿಶೇಷತೆ.
ಇಲ್ಲಿಯ ಮನಾಮದಲ್ಲಿರುವ `ಆಲೀ’ ಎಂಬ ಪ್ರದೇಶದಲ್ಲಿ ನೆಲೆಸಿರುವ ಅರಬೀ ಕುಟುಂಬ ಇಂಥ ಮಣ್ಣಿನ ಪಾತ್ರೆಗಳಲ್ಲದೇ ವಿವಿಧ ಕಲಾಕೃತಿಗಳನ್ನು ತಯಾರಿಸುತ್ತಿವೆ. ಇಲ್ಲಿ ತಯಾರಿಸಲಾಗುವ ವಿವಿಧ ವಿನ್ಯಾಸದ ಮಣ್ಣಿನ ಪರಿಕರಗಳು ವಲಸಿಗರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ.
ಆಧುನಿಕತೆಯ ಅಬ್ಬರಕ್ಕೆ ನಲುಗಿ ಅನೇಕ ಕುಶಲಕರ್ಮಿಗಳು ಸೊರಗುತ್ತಿದ್ದರೆ ಪರಂಪರೆಯಿಂದ ನಡೆಸಿಕೊಂಡು ಬರುತ್ತಿರುವ ತಮ್ಮ ವೃತ್ತಿಗೆ ತಿಲಾಂಜಲಿ ನೀಡದೇ ಮುಂದುವರಿಸಿಕೊಂಡು ಹೋಗುತ್ತಿರುವುದನ್ನು ಕಂಡಾಗ ನಿಜಕ್ಕೂ ಹೆಮ್ಮೆಯೆನಿಸುತ್ತದೆ.
ಚಿತ್ರ-ಬರಹ : ಗಣೇಶ್ ಮಾಣಿಲ, ಬೆಹರೈನ್

