(ಕುಲಾಲ್ ವರ್ಲ್ಡ್ ಡಾಟ್ ಕಾಮ್, 22-12-2018)
ಉಡುಪಿ: ಪೆನ್ಸಿಲ್ ಆರ್ಟ್ ಎನ್ನುವುದು ಅತ್ಯಂತ ಸೂಕ್ಷ್ಮ ಅಷ್ಟೇ ನಾಜೂಕಿನ ವಿಶಿಷ್ಟ ಕಲಾಮಾದ್ಯಮ, ನಿರಂತರ ಕಲಿಕೆ, ಶಿಸ್ತು, ಸೂಕ್ಷ್ಮ ಗ್ರಾಹಿತ್ವ ಇರುವವರಷ್ಟೇ ಈ ಕಲೆಯನ್ನು ದಕ್ಕಿಸಿಕೊಳ್ಳಲು ಸಾಧ್ಯ. ಇಂತಹ ಅಪರೂಪದ ಕಲಾಭಿವ್ಯಕ್ತಿಯನ್ನು ಕರಗತ ಮಾಡಿಕೊಂಡಿರುವ ಈ ಕುಲಾಲ ಯುವಕ ನಿಜವಾಗಿಯೂ ಪೆನ್ಸಿಲ್ ಆರ್ಟ್ ಮತ್ತು ಡ್ರಾಯಿಂಗ್ ಲೋಕದ ಭರವಸೆಯ ಕೋಲ್ಮಿಂಚು.
ಈ ಯುವಕ ಕೈಯಲ್ಲಿ ಪೆನ್ಸಿಲ್ ಹಿಡಿದು ಕುಳಿತರೆ ನಿಮಿಷಗಳೊಳಗೆ ಕನ್ನಡದ ವರನಟ ಡಾ.ರಾಜ್, ಸಾಹಸ ಸಿಂಹ ವಿಷ್ಣು ವರ್ದನ್ ನಂತಹ ಮೇರು ನಟರು ಬಿಳಿ ಹಾಳೆಯ ಮೇಲೆ ಸುಂದರವಾಗಿ ಚಿತ್ರಿತಗೊಳ್ಳುತ್ತಾರೆ, ಹುಲಿ, ಚಿರತೆ, ಸಿಂಹದಂತಹ ವನ್ಯಜೀವಿಗಳು ಬಿಳಿ ಹಾಳೆಯ ಮೇಲೆ ಘರ್ಜಿಸುತ್ತವೆ. ಲಕ್ಷ್ಮಿ, ಬಾಲಗೋಪಾಲ, ದೇವಿ, ಶ್ರೀಕೃಷ್ಣ, ಶಿವನಂತಹ ದೇವ ದೇವತೆಯರು ಸುಂದರವಾಗಿ ಪಡಿಮೂಡುತ್ತಾರೆ. ವಿವಿಧ ಬಗೆಯ ಹೂ, ಪ್ರಕೃತಿ, ಗಿಡಮರಗಳು ಪೆನ್ಸಿಲ್ ಆರ್ಟ್ನಲ್ಲಿ ಚಿತ್ರಿತಗೊಂಡು ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತವೆ. ನೋಡುಗರ ಹುಬ್ಬೇರಿಸುವಂತೆ ಗೆರೆಬರೆಗಳ ಚಿತ್ತಾರವನ್ನು ಬಿಡಿಸುವ ಪೆನ್ಸಿಲ್ ಆರ್ಟ್ ಲೋಕದ ವಿಶಿಷ್ಟ ಪ್ರತಿಭೆಯೇ ರಾಘವ ಕುಲಾಲ್ ನೈಲಾಡಿ ಅವರು.
ಗ್ರಾಮೀಣ ಭಾಗದ ಪ್ರತಿಭೆ:
ರಾಘವ ಕುಲಾಲ್ ಅವರು ಉಡುಪಿ ತಾಲೂಕಿನ ಶಿರಿಯಾರ ಸಮೀಪದ ನೈಲಾಡಿ ಪರಿಸರದವರು. ಕುಷ್ಠ ಕುಲಾಲ್ ಮತ್ತು ಚಿಕ್ಕು ಕುಲಾಲ್ ದಂಪತಿಗಳ ಪುತ್ರನಾಗಿ ಜನಿಸಿ ಎಸ್ ಎಸ್ ಎಲ್ ಸಿಯವರೆಗೆ ಓದಿ ಬಡತನದ ಕಾರಣಕ್ಕೆ ವಿದ್ಯಾಭ್ಯಾಸವನ್ನು ಅಲ್ಲಿಗೆ ಮೊಟಕುಗೊಳಿಸಿದವರು. ಬದುಕಿನ ಆಸರೆಗೆ ಬೆಂಗಳೂರಿನತ್ತ ಸಾಗಿ ಅಲ್ಲಿಂದ ಮುಂಬೈ ಹೋದವರು ಪ್ರಸ್ತುತ ಮುಂಬೈಯಲ್ಲೆ ಹೋಟೇಲು ಕ್ಯಾಶಿಯರ್ ಆಗಿ ದುಡಿಯುತ್ತಾ ಬಿಡುವಿನ ಹವ್ಯಾಸವಾಗಿ ಪೆನ್ಸಿಲ್ ಆರ್ಟ್ನ್ನು ನೆಚ್ಚಿಕೊಂಡವರು. ಈಗಾಗಲೇ ನೂರಕ್ಕೂ ಅಧಿಕ ಪೆನ್ಸಿಲ್ ಆರ್ಟ್ಗಳನ್ನು ರಚಿಸಿರುವ ಇವರ ಎಲ್ಲ ಕಲಾಕುಸುಮುಗಳು ಒಂದಕ್ಕಿಂದ ಇನ್ನೊಂದು ಮನಮೋಹವಾಗಿದೆ. ನೋಡುಗರ ಹೃನ್ಮನ ಸೂರೆಗುಳ್ಳುತ್ತವೆ.
ಸ್ವ ಕಲಿಕೆಯೇ ಇವರ ಗುರು:
ರಾಘವ ಕುಲಾಲ್ ಅವರು ಗುರು ಇಲ್ಲದೇ ವಿದ್ಯೆ ಕಲಿತ ಏಕಲವ್ಯನ ಹಾಗೇ ಸ್ವಂತಃ ಕಲಿಕೆಯಿಂದ ಪೆನ್ಸಿಲ್ ಆರ್ಟ್ನ್ನು ದಕ್ಕಿಸಿಕೊಂಡವರು. ಚಿಕ್ಕ ಪ್ರಾಯದಿಂದಲೇ ಈ ಪೆನ್ಸಿಲ್ ಆರ್ಟ್ ಮೇಲೆ ವಿಪರೀತ ಆಸಕ್ತಿ ಇದ್ದರೂ ಹಣತೆತ್ತು ತರಗತಿಗಳಿಗೆ ಹೋಗಿ ಕಲಿಯುವಷ್ಟು ಆರ್ಥಿಕ ಸಬಲತೆ ಇರಲಿಲ್ಲ. ಬಡತನದ ಕಾರಣದಿಂದ ಓದನ್ನು ಅರ್ಧದಲ್ಲೆ ಮೊಟಕು ಗೊಳಿಸಿ ಉದ್ಯೋಗ ಮಾಡಬೇಕಾದ ಆನಿವಾರ್ಯತೆ ಸೃಷ್ಟಿಯಾಗಿತ್ತು. ಆದರೆ ಪೆನ್ಸಿಲ್ ಆರ್ಟ್ನಲ್ಲಿ ಹೊಸತುಗಳನ್ನು ಸೃಷ್ಟಿಸುವ ಇವರ ಅದಮ್ಯ ಆಸೆಮಾತ್ರ ಒಳಮನಸ್ಸಿನಲ್ಲಿ ಹಾಗೇಯೇ ಇತ್ತು.
ಆದ್ದರಿಂದ ಪತ್ರಿಕೆಗಳಲ್ಲಿ ಬರುವ ವಿವಿಧ ಕಲಾವಿದರು ರಚಿಸಿದ ಚಿತ್ರಗಳು, ಸಾಮಾಜಿಕ ಅಂತರ್ಜಾಲ ತಾಣಗಳಲ್ಲಿ ಬರುವ ಆರ್ಟ್ಗಳು, ಸ್ನೇಹಿತರು ಬಿಡಿಸಿದ ವಿವಿಧ ನಮೂನೆಯ ಕಲಾಕೃತಿಗಳನ್ನು ಸೂಕ್ಷ್ಮವಾಗಿ ನೋಡಿ ಕಲಿಯುತ್ತಾ ಸಾಗಿದವರು. ತಮ್ಮ ತಪ್ಪುಗಳನ್ನು ತಾವೇ ತಿದ್ದಿಕೊಳ್ಳುತ್ತಾ ಸ್ವ ಕಲಿಕೆಯ ಫಲಶ್ರುತಿಯಾಗಿ ಈ ಕಲೆಯನ್ನು ದಕ್ಕಿಸಿಕೊಂಡವರು. ಕಳೆದ ಐದು ವರ್ಷಗಳಿಂದ ಕ್ರೀಯಾಶೀಲವಾಗಿ ತೊಡಗಿಸಿಕೊಂಡಿರುವ ಇವರು ಯಾವ ಖ್ಯಾತನಾಮರಿಗೂ ಕಡಿಮೆ ಇಲ್ಲದಂತೆ ಇವತ್ತು ಪೆನ್ಸಿಲ್ ಆರ್ಟ್ಗಳನ್ನು ರಚಿಸುತ್ತಾರೆ. ಡ್ರಾಯಿಂಗ್ ನಲ್ಲಿ ಸುಂದರ ಕಲಾಕೃತಿಗಳನ್ನು ಕೆತ್ತುತ್ತಾರೆ.
ಅನೇಕ ಪ್ರಸಿದ್ದ ನಟ ನಟಿಯರ ಚಿತ್ರಗಳು, ಹಿಂದೂ ದೇವ ದೇವತೆಯರು, ವನ್ಯಜೀವಿಗಳು, ಪ್ರಕೃತಿ, ದೇಶ ಪ್ರೇಮ ಮೆರೆದ ನಾಯಕರುಗಳು ಹೀಗೆ ನಾನಾ ನಮೂನೆಯ ನೂರಕ್ಕೂ ಅಧಿಕ ಚಿತ್ರಗಳನ್ನು ಮನಮೋಹಕವಾಗಿ ಚಿತ್ರಿಸಿದ್ದಾರೆ. ಪೆನ್ಸಿಲ್ ಆರ್ಟ್ ಜೊತೆ-ಜೊತೆಯಲ್ಲೆ ಡ್ರಾಯಿಂಗ್, ಕಾರ್ಟೂನು, ಬಣ್ಣದ ಚಿತ್ರಗಳನ್ನು ರೂಪಿಸುವುದರಲ್ಲೂ ರಾಘವ ಕುಲಾಲ್ ಎತ್ತಿದ ಕೈ.
ರಾಘವ ಕುಲಾಲ್ ಏನೆನ್ನುತ್ತಾರೆ?
‘‘ಈ ಪೆನ್ಸಿಲ್ ಆರ್ಟ್ ಮತ್ತು ಡ್ರಾಯಿಂಗ್ ನನ್ನ ಬಿಡುವಿನ ಸಮಯದ ನೆಚ್ಚಿನ ಹವ್ಯಾಸ. ಯಾರ ಬೆಂಬಲವೂ ಇಲ್ಲದೇ ನಾನೇ ಸ್ವತಃ ಕಷ್ಟಪಟ್ಟು ಇದನ್ನು ಕಲಿತುಕೊಂಡಿದ್ದೇನೆ. ನೂರಕ್ಕೂ ಅಧಿಕ ಕಲಾಕೃತಿಗಳು ನನ್ನ ಬಳಿ ಇದೆ. ಸಮುದಾಯದ ಸಂಘ ಸಂಸ್ಥೆಗಳ ಸಹಕಾರ ಸಿಕ್ಕರೆ ನಾನು ಬಿಡಿಸಿದ ಎಲ್ಲ ಚಿತ್ರಗಳ ಪ್ರದರ್ಶನ ಏರ್ಪಡಿಸಬೇಕು ಎಂಬ ಆಸೆ ಇದೆ. ಸರ್ವರ ಬೆಂಬಲ ನಿರೀಕ್ಷಿಸುತ್ತೇನೆ’’
ಗುರುತಿಸಬೇಕಾಗಿದೆ:
ಪೆನ್ಸಿಲ್ ಆರ್ಟ್ ಲೋಕದಲ್ಲಿ ಬರವಸೆ ಮೂಡಿಸುತ್ತಿರುವ ಈ ಕುಲಾಲ ಕಲಾವಿದನನನ್ನು ಗುರುತಿಸುವ ಕೆಲಸ ಆಗಬೇಕಾಗಿದೆ. ಸರಿಯಾದ ಗುರು, ಹಿರಿಯರ ಮಾರ್ಗದರ್ಶನ ದೊರಕಿದರೆ ಇನ್ನೂ ಹತ್ತಾರು ಸಾಧ್ಯತೆಗಳನ್ನು ಚಿತ್ರಿಸುವ ಛಲ, ಅದಮ್ಯ ಉತ್ಸಾಹ ಈ ಯುವಕನಿಗಿದೆ. ಸ್ವತಃ ಪರಿಶ್ರಮ, ನಿರಂತರ ಕಲಿಕೆ, ಹೊಸತುಗಳನ್ನು ಸಾಧಿಸುವ ಉತ್ಸಾಹ ಇರುವ ಈ ಯುವಕನಿಗೆ ಎಲ್ಲೆಡೆಯಿಂದ ಬೆಂಬಲ ಹರಿದು ಬರಬೇಕಾಗಿದೆ. ಸ್ವಕಲಿಕೆಯಿಂದ ಈ ಸೂಕ್ಷ್ಮ ಕಲೆಯನ್ನು ಕಲಿತು ಪೆನ್ಸಿಲ್ ಆರ್ಟ್ ಲೋಕದಲ್ಲಿ ಭರವಸೆ ಮೂಡಿಸುತ್ತಿರುವ ಈ ಕುಲಾಲ ತರುಣನಿಗೆ ನಮ್ಮದೊಂದು ಹೃದತುಂಬಿದ ಅಭಿವಂದನೆ ಸಲ್ಲಿಸೋಣವೇ?
ಬರಹ: ಮಂಜುನಾಥ್ ಹಿಲಿಯಾಣ













