ಶಿವಶರಣರು ಕುಲರಸಿಕರು, ಅವರ ರಸಿಕತೆಯ ಬಳ್ಳಿಯ ಬೇರು ಆಧ್ಯಾತ್ಮ ಭೂಮಿಯಲ್ಲಿ; ಆ ಬಳ್ಳಿಯ ತುಂಬ ಭಕ್ತಿಯ ಹೂಗಳು; ಅವುಗಳಿಂದ ಹೊರ ಸೂಸಿದುದು ಸುಜ್ಞಾನ ಕಂಪು.
ಸರ್ವವೂ ಶಿವನೆಂದು ಬಗೆದ, ಸರ್ವವನ್ನೂ ಶಿವಾರ್ಪಣಿಗೈದ ಶರಣರು ಲಿಂಗ ಭೋಗೋಪಭೋಗಿಗಳು, ಜೀವನ ಅವರಿಗೆ ಹೊರೆಯಲ್ಲ; ಅದೊಂದು ಅನಂದದಾಗರ. ಎಲ್ಲವೂ ಶಿವಕರುಣೆಯೆಂದು ತಿಳಿದ ಅವರು ಏನು ಬಂದರೂ – ಉರಿ ಬಂದರೂ, ಸಿರಿ ಬಂದರೂ, ಇಕ್ಕುವ ಶೂಲ ಪ್ರಾಪ್ತಿಯಾದರೂ – ಅದನ್ನು ನಗು ನಗುತ್ತ ಎದುರಿಸಿದರು. ನಗೆಯು ಅವರ ಆತ್ಮೋನ್ನತಿಗೆ ಸಾಧನವಾಗಿತ್ತು.
ಜೀವನಕ್ಕೆ ಹಾಸ್ಯಬೇಕು; ನಗೆ ಬೇಕು. ಇವಿಲ್ಲದಿದ್ದರೆ ಬಾಳು ತಲೆ ಭಾರವಾಗುವುದು. ಆದರೆ ಹಾಸ್ಯ ಅಪಹಾಸ್ಯವಾಗಬಾರದು; ನಗೆ ಹೊಗೆಯಾಗಬಾರದು. ಹೀಗಾಗದಂತೆ ಶರಣರು ಹಾಸ್ಯ, ನಗೆಗಳನ್ನು ಬಳಸಿಕೊಂಡರು. ಹಾಸ್ಯರಸಕ್ಕೆ ಅವರು ಭಕ್ತಿಯ ಸಕ್ಕರೆಯನ್ನು ಬೆರೆಸಿದರು. ಅವರ ವಚನಗಳಲ್ಲಿ ಅಲ್ಲಲ್ಲಿ ನಗೆವೆಳುದಿಂಗಳು ಪಸರಿಸಿರುವುದನ್ನು ಕಾಣಬಹುದು: ಹಾಸ್ಯರಸ ಉಕ್ಕಿದುದನ್ನು ಅನುಭವಿಸಬಹುದು.
ಅರಿತವನಿಗೆ ಈ ಜೀವನದಾಟ ಆನಂದದಾಯಕ. ಅಜ್ಞಾನಿಗಿದು ನರಕ. ಬಾಳಿಗೆ ಗಾಂಭೀರ್ಯ ಬೇಕು; ಹಮ್ಮುಬಿಮ್ಮೂಬೇಕು. ನಗೆಯಂತೆ ಅಳುವೂ ಬೇಕು. ಆದರೆ ಅವು ಆಯಾ ಪ್ರಸಂಗದೊಡನೆ ಮೂಡಿ ಮಾಯವಾಗಬೇಕು. ಮಾನವ ಸರಸ ಸಜ್ಜನಿಕೆಯುಳ್ಳವನಾಗಿ ತನ್ನ ಒಡನಾಡಿಗಳೊಂದಿಗೆ ನಗುನಗುತ್ತ ಬಾಳಬೇಕು.
ಸಂಸಾರದಲ್ಲಿ ಹುಟ್ಟಿ ಮತ್ತೊಂದ ಬಯಸಲೇಕಯ್ಯಾ?
ನಗುವುದು ನುಡಿವುದು ಶಿವಭಕ್ತರೊಡನೆ
ಸುಮ್ಮಾನ ಹಮ್ಮು ಬಿಮ್ಮಾಗಿರಲೇಕಯ್ಯಾ
|| ಶ್ಲೋಕ || ಅಭ್ಯಾಸಸ್ಯ ವಿಹೀನಸ್ಯ ತಸ್ಯಜನ್ಮ ನಿರರ್ಥಕಂ |
ಗುರೋರಪಿ ಸಮಂ ಹಾಸ್ಯಂ ಕರ್ತವ್ಯಂ ಕುಟಿಲಂ ವಿನಾ |
ನಮ್ಮ ಕೂಡಲಸಂಗನ ಶರಣರೊಡನೆ
ಮನದೆರೆದು ಮಾತನಾಡುವುದಯ್ಯಾ.
ಬಸವಣ್ಣನವರು ಮೇಲಿನ ವಚನದಲ್ಲಿ ಹೇಗೆ ಜೀವಿಸಬೇಕೆಂಬುದನ್ನು ಬಹು ಸುಂದರನಾಗಿ ಹೇಳಿದ್ದಾರೆ.
‘ನಗುವುದು, ನುಡಿವುದು’ – ಈ ಮಾತುಗಳ ಆತ್ಮಾರ್ಥ ತಿಳಿದು ಬದುಕಿದರೆ ಆ ಬದುಕು ಶಿವನಿಗೆ ನೈನೇದ್ಯವಾಗುವುದು; ಲೋಗರಿಗೆ ಸುಖದ ಸೆಲೆಯಾಗುವುದು.
ಆಡುವುದು,ಪಾಡುವುದು, ಕೇಳುವುದು, ಹೇಳುವುದು, ನಡೆವುದು,ನುಡಿವುದು,
ಸರಸ ಸಮ್ಮೇಳನವಾಗಿಪ್ಪುದಯ್ಯಾ ನಿಮ್ಮ ಶರಣರೊಡನೆ ಚೆನ್ನಮಲ್ಲಿಕಾರ್ಜುನಯ್ಯಾ
ನೀ ಕೊಟ್ಟ ಆಯುಷ್ಯವುಳ್ಳನ್ನಕ್ಕರ
ಲಿಂಗಸುಖಿಗಳ ಸಂಗದಲ್ಲಿ ದಿನಂಗಳ ಕಳೆವೆನು.
ಸರಸಜೀವನದಲ್ಲಿ ಅತ್ಯಂತ ಚೆಲುವಿನ ಚಿತ್ರವನ್ನೇ ಅಕ್ಕನವರು ಮೇಲಿನ ವಚನದಲ್ಲಿ ಬರೆದಿದ್ದಾರೆ. ಒಟ್ಟಾರೆ ಜೀವನವನ್ನು ಶರಣನೊಡನೆ ಸರಸ ಸಮ್ಮೇಳನವಾಗಿ ನಗುತ್ತ, ನುಡಿಯುತ್ತ ಕಳೆಯಬೇಕು ಎಂದು ಬಸವಾದಿ ಪ್ರಥಮರು ನಡೆದು ನುಡಿದಿದ್ದಾರೆ.
ನಗೆ ಶ್ರೇಷ್ಠವಾದುದು. ಅಂತೆಯೇ “ನಕ್ಕು ನಗಿಸುವಾ ನಗೆ ಲೇಸು” ಎಂದು ಸರ್ವಜ್ಞ ಜನರನ್ನು ನಕ್ಕು ನಗಿಸಿದ. ‘ಲೇಸು’ ಎಂಬ ಶಬ್ದದ ಒಳ ತಿರುಳು ಅರಿಯಬೇಕು. ಚೆನ್ನಾದುದು, ಮಿಗಿಲಾದುದು, ಒಳ್ಳೆಯದು ಎಂಬ ಅರ್ಥಗಳಿಗಿಂತಲೂ ವಿಶಿಷ್ಟವಾದ ಅರ್ಥ ಈ ‘ಲೇಸು’ ಶಬ್ದದಲ್ಲಿದೆ.
ಇಂಥ ಲೇಸನ್ನು ತರುವ ನಗೆಯನ್ನೇ ಕಾಯಕವನ್ನಾಗಿ ಮಾಡಿಕೊಂಡು ನಕ್ಕು ನಗಿಸಿ ಮರ್ತ್ಯವನ್ನು ಮಹವನ್ನಾಗಿ ಮಾಡುವ ಮಣಿಹ ಹೊತ್ತು ಬಂದಿದ್ದ ಮಾರಿ ತಂದೆ. ನಗೆಯನ್ನು ಕಾಯಕವೆಂದು ಶರಣರು ಸ್ವೀಕರಿಸಿದರೆಂದ ಮೇಲೆ ಇದಕ್ಕಿರುವ ಮಹತ್ವ, ಸ್ಥಾನ ಎಂತಹುದೆಂಬುದು ಬಿಡಿಸಿ ಕೇಳಬೇಕಾಗಿಲ್ಲ. ಜನರನ್ನು ನಗೆಯಿಂದ, ಹಾಸ್ಯದಿಂದ ನಗಿಸಬೇಕು; ಅದರಿಂದ ಬರುವ ದ್ರವ್ಯದಿಂದ ಗುರುಲಿಂಗಜಂಗಮರ ದಾಸೋಹ ನಡೆಸಬೇಕು. ಎಂಥ ಕಷ್ಟದ ಕೆಲಸ! ಹೆರವರನ್ನು ನಗಿಸುವುದೆಂದರೇನು ಸಾಮಾನ್ಯವೇ? ನಗೆನಾರನಲ್ಲಿ ಅಪಾರ ಲೋಕಾನುಭವ, ಜಾಣ್ಮೆ, ಪ್ರತಿಭೆಗಳು ಬೇಕು. ಸಾಮಾನ್ಯರನ್ನು ನಗಿಸಬಹುದು. ಕೀಳುಹಾಸ್ಯದಿಂದ. ಆದರೆ ಶರಣರನ್ನು ನಗಿಸುವುದು ಸುಲಭವಲ್ಲ. ಹೊಲದಲ್ಲಿ ದುಡಿಯಬಹುದು; ಅರಸನೋಲಗದಲ್ಲಿ ಕುಳಿತು ರಾಜ್ಯಭಾರ ಮಾಡಬಹುದು. ಇನ್ನೇನಾದರೂ ಮಾಡಬಹುದು. ಅದರೆ ಜನರ ಹೃದಯಗಳನ್ನರಳಿಸಿ ನಗೆ ಬರಿಸುವುದು ನಿಜಕ್ಕೂ ಬಿಗಿಯಾದ ಕಾಯಕ. ನಗೆಯಮಾರಿತಂದೆ ಇಂಥ ಕಾಯಕವುಳ್ಳವನಾಗಿದ್ದನು. ಕಲಕೇತ ಬೊಮ್ಮಯ್ಯ, ಢಕ್ಕೆಯ ಮಾರಯ್ಯ, ಶಿವಮಾಯಿದೇವಿ (ಪುರಾಣ ಹೇಳುವ ಕಾಯಕ) ಮುಂತಾದವರು ತಮ್ಮ ಸುಮಾರು ಕ್ರಿ. ಶ. ೧೧೦೦ ಶತಮಾನದವರಾದ ನಗೆಯ ಮಾರಿತಂದೆ. ಜಾತಿಯಲ್ಲಿ ಕುಂಬಾರ. ತಮ್ಮ ಕಾಯಕದಿಂದ ಜನರನ್ನು ನಗಿಸುತ್ತಿದ್ದರು. ಆದರೆ ನಗೆಯನ್ನೇ ಕಾಯಕ ಮಾಡಿಕೊಂಡಾತ ನಗೆಯ ಮಾರಿತಂದೆ.
ಹಾದರಿಗೆ ಎಂಬುದು ನಗೆಯ ಮಾರಿತಂದೆಯ ಊರು. ಆತ ಹುಟ್ಟಿದೂರನ್ನು ಬಿಟ್ಟು ಕಲ್ಯಾಣಕ್ಕೆ ಬಂದು ನೆಲಸಿದನು. ಮಾರಿತಂದೆ ಓಣಿಯಿಂದ ಓಣಿಗೆ, ಮನೆಯಿಂದ ಮನೆಗೆ ಹೋಗಿ ಹನರನ್ನು ತಿಳಿಹಾಸ್ಯದಿಂದ, ಮೃದುಮಾತುಗಳಿಂದ ನಗಿಸುತ್ತಿದ್ದನು: ಅದರೊಂದಿಗೆ ಶರಣಧರ್ಮದ ತತ್ವಗಳನ್ನೂ ಬಿತ್ತರಿಸುತ್ತಿದ್ದನು.
ಕೆಲವು ಲೋಭಿಗಳು ಒಮ್ಮೆಮಾರಯ್ಯನ ಮಾತಿಗೆ ನಗಬಾರದೆಂದು ಮನಸ್ಸು ಗಟ್ಟಿಮಾಡಿಕೊಂಡು ಕುಳಿತರು. ಅವರು ಲೋಭಿಗಳೆಂಬುದು ಮಾರಿತಂದೆಗೆ ಗೊತ್ತು. ಲೋಭಿಗಳಲ್ಲಿ ಔದಾರ್ಯ ಬರಿಸುವುದು ಶರಣರ ಕಾಯಕ ಧರ್ಮ. ಮಾರಯ್ಯ ಅವರು ಇದ್ದೆಡೆಗೆ ಬಂದು, “ಎತ್ತ ಹೋದಿರೆಲೆ ಪಂಥಗಾರರು, ಜೂಜುಗಾರರು, ನಿಮ್ಮ ತಲೆಗೆ ಶರಣಾರ್ಥಿ” ಎಂದು. ಪಾರಿಜಾತದ ಮಿದುಗಂಪಿನಂತೆ ಇಲ್ಲಿ ಹಾಸ್ಯವಿದೆ. “ನಿಮ್ಮ ತಲೆಗೆ ಶರಣಾರ್ಥಿ” ಈ ವ್ಯಂಗ್ಯದಲ್ಲಿ ಎಷ್ಟು ಅರ್ಥ ಹುದುಗಿದೆ! ಜೂಜುಗಾರರು, ಪಂಥಗಾರರು ಎಂಬಲ್ಲಿ ಇರುವ ಕೋಮಲವಾದ ಕೊಂಕು ಮಾರಯ್ಯ ಬಲ್ಲಿದ ಹಾಸ್ಯಗಾರನೆಂಬುದಕ್ಕೆ ಸಾಕ್ಷಿ. ಆ ಪಂಥಗಾರರು ನಕ್ಕರು; ಮಾರಿತಂದೆಗೆ ಕಾಯಕ ಕೊಟ್ಟರು.
ನಗೆಯ ಮಾರಿತಂದೆಯ ಕಾಯಕದ ಮೈಶಿಷ್ಟ್ಯ ಮತ್ತು ಆತನ ಹಾಸ್ಯದ ಬಗೆಗೆ ಒಂದು ಪವಾಡ ಕಥೆಯಿದೆ. ಅದು ಹಾಸ್ಯರಸದ ನಿಲವನ್ನೂ ಸೊಗಸನ್ನೂ ತಿಳಿಸುತ್ತದೆ; ಅಲ್ಲದೆ ಎಂಥ ಕಷ್ಟದಲ್ಲಿದ್ದರೂ ನಗೆಗಾರರು ಜನರನ್ನು ನಗಿಸಬಲ್ಲರು ಎಂಬುದನ್ನೂ ಸಾರಿ ಹೇಳುತ್ತದೆ.
ನಗೆಯ ಮಾರಿತಂದೆ ವಚನಗಳನ್ನು ರಚಿಸಿದ್ದಾನೆ. “ಅತುರವೈರಿ ಮಾರೇಶ್ವರ” ಎಂಬುದು ಈತಸ ಅಂಕಿತವಾಗಿದೆ. ಈತನ ವಚನಗಳು “ಸಂಗ್ರಹವಾಗಿಯೂ ಹಿತಕರವಾಗಿಯೂ ಸವಿಯಾಗಿಯೂ” ಇವೆ. ಶೈಲಿ ಸರಳವೂ ಲಲಿತವೂ ಆಗಿದೆ. ಈತನಲ್ಲಿ ಸಂಸ್ಕೃತ ಶಬ್ವಗಳ ಬಳಕೆ ಬಹಳ ಕಡಮೆ. ಈತನ ಭಾಷೆ ತಿಳಿಯಾದ ಕನ್ನಡ.
ಈ ಹೊತ್ತ ದೇಹಕ್ಕೆ ನಗೆಯ ಚಿತ್ತದ ಕಾಯಕ
ಇದನೊಪ್ಪುಗೋ ಆತುರವೈರಿ ಮಾರೇಶ್ವರಾ.
ಈ ವಚನದಲ್ಲಿ ತನ್ನ ಕಾಯಕವಾವುದೆಂಬುದನ್ನು ಹೇಳಿದ್ದಾನೆ ಮಾರಯ್ಯ.
ಬಲೆ ಹಾಕಿ ಗುಬ್ಬಿಯನ್ನು ಹಿಡಿಯುವ ಬಲೆಗಾರನಿಗೂ ವಾಗದ್ವೈತಿ – ಸಂಸ್ಕೃತ ಪಂಡಿತನಿಗೂ ಇರುನ ಹೋಲಿಕೆ ಎಷ್ಟು ಸೊಗಸಾಗಿದೆ ಈ ಕೆಳಗಿನ ವಚನದಲ್ಲಿ. ಈ ಕಟೂಕ್ತಿಯಲ್ಲಿ ಅಡಗಿದ ತಿಳಿಹಾಸ್ಯವನ್ನು ಅರಿತು ಆನಂದಿಸಬೇಕು:
ಕಲ್ಲಿಯ ಹಾಕಿ, ನೆಲ್ಲ ತಳಿದು, ಗುಬ್ಬಿಯ ಸಿಕ್ಕಿಸುವ ಕಳ್ಳನಂತೆ.
ವಾಗದ್ವೈತವ ಕಲಿತು, ಸಂಸ್ಕೃತದ ಮಾತಿನ ಪಸರವ ಮುಂದೆ ಇಕ್ಕಿಕೊಂಡು
ಮಂತ್ರ್ಯದ ವಕ್ತ್ರದಲ್ಲಿ ಗ್ರಾಸವ ಹಾಕುವನಂತೆ
ಆದೇತರ ನುಡಿ, ಮಾತಿನ ಮರೆ ಆತುರ ಮಾರೇಶ್ವರಾ
ಡಂಭಾಚಾರಿಗಳಿಗೆ ಚಾಟಿಯ ಏಟು ಈ ವಚನದಲ್ಲಿದೆ:
ಹೊಯಿದೊಣ್ಣೆ ಕೈಯಲ್ಲಿ ಲೇಸಾಯ್ತು ಈತನಿರುವು
ಮಾತಿನಲ್ಲಿ ಆಗಮ, ಮನದಲ್ಲಿ ತೂತಿನ ಕುಡಿಕೆಯ ಆಸೆ
ಇದು ನೀತಿಯಲ್ಲ, ಆತುರವೈರಿ ಮಾರೇಶ್ವರಾ
“ತೂತಿನ ಕುಡಿಕೆಯ ಆಸೆ” ಎಂಬಲ್ಲಿಯ ವ್ಯಂಗ್ಯ ಬಹು ತೀಕ್ಷ್ಣವಾಗಿದೆ; ಇದನ್ನು ಹಿಂಜಿದಷ್ಟೂ ಅರ್ಥಸಂಪತ್ತು ಹೆಚ್ಚಾಗುತ್ತದೆ. ಆಸೆ ಮಾಡುವ ಕುಡಿಕೆ ತೂತುಳ್ಳುದೆ. ಎಷ್ಟು ತುಂಬಿದರೂ ನಿಮಿಷದಲ್ಲಿ ಬರಿದು. ಅಲ್ಲದೆ ಮಾತಿನ ಕುಡಿಕೆ ಕೆಟ್ಟ ವಿಚಾರಗಳ ಸಂಕೇತ. ಮಾತಿನಲ್ಲಿ ಆಗಮ, ಮನದಲ್ಲಿ ಕೆಟ್ಟ ಯೋಚನೆ. ಇದು ಡಂಭಾಚಾರಿಗಳಿಗೇನೇ ಸಾಧ್ಯ.
ತನ್ನ ನಿಲವನ್ನು ಸಹಜವಾಗಿ, ಸೊಗಸಾಗಿ ಹೇಳಿದ್ದಾನೆ ಮರಿತಂದೆ ಈ ವಚನದಲ್ಲಿ:
ಎಲ್ಲರಂತೆ ಮಾಡಿ ಮನಗುಂದಲಾರೆ
ಅರಿತು ಮರೆಯಲಾರೆ
ಕಂಡು ಕಾಣದಂತಿರಲಾರೆ
ಹೇಳಿದಡೆ ಭಕ್ತರ ತೊಡಕು
ಹೇಳಿದಿದ್ದೊಡೆ ನಿನ್ನ ತೊಡಕು
ಇಂತೀ ಎರಡರ ಏರವಿನಲ್ಲಿ
ಗುರಿಯಾಗಲಾರೆ, ಆತುರವೈರಿ ಮಾರೇಶ್ವರಾ..