ಅಮ್ಮ ಮೆಲ್ಲಗೆ ಉಣ್ಣುತ್ತಾ ನಕ್ಕು ನುಡಿದಳು ‘ಕಾಲ ಬದಲಾದದ್ದು ಹೌದು ಮಗಳೇ. ಆದರೂ ನಾನೊಂದು ನಿಜ ಹೇಳ್ತೆ. ಈ ಮೀನಾಗಲಿ, ಕೋಳಿಯಾಗಲಿ ಒಳ್ಳೆ ರುಚಿ ಬರಬೇಕಾದರೆ ಅದನ್ನು ಮಣ್ಣಿನ ಅಳಿಗೆಯಲ್ಲೆ ಕುದಿಸಿ ಮಾಡಬೇಕು. ನಾನು ಇವತ್ತಿಗೂ ಮೀನು, ಕೋಳಿಯನ್ನು ಅದರಲ್ಲೆ ಮಾಡುವುದು. ನೀನು ಒಂದು ಘನ ಮಣ್ಣಿನ ಅಳಿಗೆ ತಕ್ಕೊ ಮಹರಾಯ್ತಿ. ಕುಂದಾಪ್ರ ಸಂತೆಯಲಿ ಬೇಕಷ್ಟು ಸಿಗುತ್ತಲ’’ ಎಂದಳು. ‘ಆದರೆ ಇಳಿಸುವಾಗ ಕುದಿಸುವಾಗ ಸ್ವಲ್ಪ ಜಾಗ್ರತೆ ಮಾಡಬೇಕು. ಗ್ಯಾಸ್ ಚೂರು ಜಾಸ್ತಿ ಖರ್ಚಾಗುತ್ತೆ ಅನ್ನುವುದು ನಿಜ. ಗ್ಯಾಸ್ ಒಲೆ ಮೇಲೆ ಅಳಿಗೆ ಇಟ್ಟಾಗ ಅಗಾಗ್ಗೆ ತಿರುಗಿಸಿ ಇಡಬೇಕು. ಇಲ್ಲದಿದ್ದರೆ ಅಳಿಗೆ ಅಡಿ ಹಿಡಿದುಕೊಳ್ತದೆ. ಇಷ್ಟು ಮಾಡಿ ನೀ ನಾನ್ ವೆಜ್ ಎಂತಹದ್ದು ಬೇಕಾದರೂ ಮಣ್ಣಿನ ಅಳಿಗೆಯಲ್ಲಿ ಮಾಡು. ಅಡಿಗೆಗೆ ಎಂತ ರುಚಿ ಬರುತ್ತೆ ನೋಡು’ ಎಂದು ಹೇಳಿ ಹೋಗಿದ್ದಳು.
(ಕುಲಾಲ್ ವರ್ಲ್ಡ್ ಡಾಟ್ ಕಾಮ್ 31-01-2018)
‘ರೀ.. ನೀವು ಎಂತಹದ್ದೇ ಹೇಳಿ. ಯಾವಾಗಲೂ ಈ ಮೀನು-ಕೋಳಿ ಗಸಿಯಂತಹ ನಾನ್ ವೆಜ್ ಅಡಿಗೆಯನ್ನು ಮಣ್ಣಿನ ಅಳಿಗೆಯಲ್ಲಿ ಮಾಡಿದ್ರೆ ಜಾಸ್ತಿ ರುಚಿ, ಈ ಸ್ಟೀಲ್, ಅಲ್ಯುಮೀನಿಯಂನಂತಹ ಈಗಿನ ಯಾವ ಮಾಡರ್ನ್ ಪಾತ್ರೆಯಲ್ಲಿ ಮಾಡಿದ್ರೂ ಮಣ್ಣಿನ ಪಾತ್ರೆಯಲ್ಲಿ ಮಾಡಿದ ಟೇಸ್ಟು ಅದಕ್ಕೆ ಬರುವುದೇ ಇಲ್ಲ. ಇವತ್ತು ಕುಂದಾಪುರದ ಸಂತೆ. ಅಲ್ಲಿ ಒಳ್ಳೆಯ ಮಣ್ಣಿನ ಅಳಿಗೆ ಸಿಗುತ್ತಂತೆ.. ಹೋಗಿ ತಗೊಂಡು ಬರುವ. ಸಂಜೆ ಬೇಗ ಆಪೀಸಿಂದ ಬನ್ನಿ..ಆಗದಾ..’
ಹೆಂಗಸರ ತರಹ ಕನ್ನಡಿಮುಂದೆ ಗಂಟೆಕಟ್ಟಲೆ ನಿಂತು ತಲೆಯಲ್ಲಿ ಇರುವ ನಾಲ್ಕೇ ನಾಲ್ಕು ಕೂದಲಿಗೇ ಪತಂಜಲಿ ಎಣ್ಣೆ ತಿಕ್ಕಿ ತೀಡಿ ಬಾಚಿಕೊಳ್ಳುತ್ತಿದ್ದ ನಮ್ಮೆಜಮಾನರ ಬಳಿ ಮಣ್ಣಿನ ಅಳಿಗೆ ವಿಷಯ ಎತ್ತಿದ್ದೇ ತಡ..ಗೊಳ್ಳನೇ ನಕ್ಕರು. ‘ಈ ಮಣ್ಣಿನ ಮಡಿಕೆ-ಕುಡಿಕೆ-ಹಂಡೆಗಳೆಲ್ಲಾ ನಿನ್ನ ಅಜ್ಜಿ-ಅಜ್ಜನ ಕಾಲಕ್ಕೆ ಮುಗಿದು ಹೋಯ್ತು.. ಈಗೇನಿದ್ದರೂ ಅಲ್ಯೂಮೀನಿಯಂ ಸ್ಟೀಲ್ ಪಾತ್ರೆಗಳ ಸೀಸನ್. ಅವೇ ಕೆಲವೊಮ್ಮೆ ನಿನ್ನ ಕೋಪ-ತಾಪಕ್ಕೆ ಸಿಕ್ಕಿ ನೀ ಕುಟ್ಟಿ ಅಕಾರ ಕಳಕ್ಕೊಂಡು ಮೂಲೆಲ್ಲಿ ಬಿದ್ದಿರ್ತಾವೆ. ಇನ್ನೂ ಈ ಮಡಿಕೆ ವಿಷಯ ಹೇಳುವುದೇ ಬೇಡ.. ನನ್ನ ಮೇಲಿನ ಸಿಟ್ಟಿಗೆ ನೀ ಒಂದು ಸಲಾ ಎತ್ತಿ ಕುಕ್ಕಿದರೇ ಸಾಕು. ಪಳಾರ್ ಅಂತ ಚೂರು ಚೂರಾಗ್ತದೆ.. ಹೀಗಿರುವಾಗ ಈ ಅಳಿಗೆ ಖರೀದಿಗಿರ ನನ್ನವಳಿಗೆ ಯಾಕೆ ಬಂತೋ?’ ಬಾಯ್ತುಂಬ ನೆಗೆ ಚೆಲ್ಲುತ್ತಾ ನಮ್ಮೆಜಮಾನರು ಕೇಳಿದರು.
ಹೌದು. ಕಳೆದೊಂದು ವಾರದಿಂದ ಮಣ್ಣಿನ ಅಳಿಗೆ ಖರಿದಿಸುವ ಗಿರ ನನ್ನ ತಲೆಯೊಳಗೆ ಹೊಕ್ಕಿ ಕುಳಿತಿರುವುದರ ಹಿಂದೆ ಒಂದು ಬಲವಾದ ಕಾರಣವಿತ್ತು. ಮೊನ್ನೆ ಶುಕ್ರವಾರ ಮಟ-ಮಟ ಮಧ್ಯಾಹ್ನದ ಹೊತ್ತಿಗೆ ಹಳ್ಳಿಯಿಂದ ಅಮ್ಮ ಮನೆಗೆ ಬಂದಿದ್ದಳು. ಬೆಳಗ್ಗೆ ಮೀನು ಮಾರ್ಕೆಟಿಗೆ ಹೋಗಿ ಫ್ರೆಶ್ ಎಂದು ತಂದಿದ್ದ ಬಂಗುಡೆ ಮೀನನ್ನು ಕೊಯ್ದು ಸಮಾ ಉಪ್ಪು-ಹುಳಿ-ಖಾರ ಸೇರಿಸಿ ಮೀನು ಗಸಿಯನ್ನು ದಪ್ಪ ಮಾಡಿ ಕುದಿಸಿ ಅಮ್ಮನಿಗೆ ಉಣ್ಣುವುದಕ್ಕೆ ಇಕ್ಕಿದೆ. ‘ನೀ ಏನೇ ಹೇಳಮ್ಮ.. ನಿನ್ನ ಕೈಯಲ್ಲಿ ರೆಡಿಯಾಗುವ ಮೀನಿನ ಸಾರಿನ ರುಚಿಗೆ ಸರಿಸಮವಾಗಿ ನಮಗೆ ಮಾಡುವುದಕ್ಕೆ ಬರುವುದೇ ಇಲ್ಲ.. ನೀ ಅದೆಂತಹದ್ದು ಹಾಕಿ ಮೀನು ಸಾರನ್ನು ಅಷ್ಟು ರುಚಿ ಮಾಡ್ತೆ ? ನಂಗೂ ಸ್ವಲ್ಪ ಹೇಳಿಕೊಟ್ಟು ಹೋಗಮ್ಮ’’ ಎಂದು ಕೌತುಕದಿಂದ ಕೇಳಿದ್ದೆ.
ಅಮ್ಮ ಮೆಲ್ಲಗೆ ಉಣ್ಣುತ್ತಾ ನಕ್ಕು ನುಡಿದಳು ‘ಕಾಲ ಬದಲಾದದ್ದು ಹೌದು ಮಗಳೇ. ಆದರೂ ನಾನೊಂದು ನಿಜ ಹೇಳ್ತೆ. ಈ ಮೀನಾಗಲಿ, ಕೋಳಿಯಾಗಲಿ ಒಳ್ಳೆ ರುಚಿ ಬರಬೇಕಾದರೆ ಅದನ್ನು ಮಣ್ಣಿನ ಅಳಿಗೆಯಲ್ಲೆ ಕುದಿಸಿ ಮಾಡಬೇಕು. ನಾನು ಇವತ್ತಿಗೂ ಮೀನು, ಕೋಳಿಯನ್ನು ಅದರಲ್ಲೆ ಮಾಡುವುದು. ನೀನು ಒಂದು ಘನ ಮಣ್ಣಿನ ಅಳಿಗೆ ತಕ್ಕೊ ಮಹರಾಯ್ತಿ. ಕುಂದಾಪ್ರ ಸಂತೆಯಲಿ ಬೇಕಷ್ಟು ಸಿಗುತ್ತಲ’’ ಎಂದಳು. ‘ಆದರೆ ಇಳಿಸುವಾಗ ಕುದಿಸುವಾಗ ಸ್ವಲ್ಪ ಜಾಗ್ರತೆ ಮಾಡಬೇಕು. ಗ್ಯಾಸ್ ಚೂರು ಜಾಸ್ತಿ ಖರ್ಚಾಗುತ್ತೆ ಅನ್ನುವುದು ನಿಜ. ಗ್ಯಾಸ್ ಒಲೆ ಮೇಲೆ ಅಳಿಗೆ ಇಟ್ಟಾಗ ಅಗಾಗ್ಗೆ ತಿರುಗಿಸಿ ಇಡಬೇಕು. ಇಲ್ಲದಿದ್ದರೆ ಅಳಿಗೆ ಅಡಿ ಹಿಡಿದುಕೊಳ್ತದೆ. ಇಷ್ಟು ಮಾಡಿ ನೀ ನಾನ್ ವೆಜ್ ಎಂತಹದ್ದು ಬೇಕಾದರೂ ಮಣ್ಣಿನ ಅಳಿಗೆಯಲ್ಲಿ ಮಾಡು. ಅಡಿಗೆಗೆ ಎಂತ ರುಚಿ ಬರುತ್ತೆ ನೋಡು’ ಎಂದು ಹೇಳಿ ಹೋಗಿದ್ದಳು. ಅಂದಿನಿಂದ ಈ ಹೊಸ ಅಳಿಗೆಯ ಖರೀದಿಯ ಗಿರ ನನ್ನ ತಲೆಗೆ ಏರಿತ್ತು. ಯಜಮಾನರ ಬಳಿ ಬೇಡಿಕೆಯನ್ನು ಇಟ್ಟೂ ಆಯ್ತು.
‘ನೋಡು ವಿಶೂ.. ಇವತ್ತು ಶನಿವಾರ. ಆಪೀಸಿಂದ ನಂಗೆ ಬೇಗ ಬರೊಕೆ ಆಗುವುದು ಡೌಟು..ನೀ ಹೋಗಿ ಅಳಿಗೆಯನ್ನಾದ್ರೂ ತಾ.. ಇಲ್ಲ ಹಂಡೆಯಾದರೂ ತಾ.. ಹಣ ಕೊಟ್ಟು ಹೋಗ್ತೆ’’ ಎಂದು ಜಾರಿಕೊಂಡರು.
ಈ ಆಪೀಸು ಕೆಲಸಕ್ಕೆ ಹೋಗೋ ಗಂಡಸರಿಗೆ ಮನೆಯಲ್ಲಿರುವ ಹೆಂಡತಿ ಅಂದರೆ ಯಾವಾಗಲೂ ಸಸಾರವೇ. ಅವರ ಲೆಕ್ಕದಲ್ಲಿ ಕಿಸೆಯಿಂದ ಹಣ ಎಳೆದು ಕೊಟ್ಟರೇ ಅಲ್ಲಿಗೆ ಗಂಡಸರ ಜವಬ್ದಾರಿ ಮುಗಿಯಿತು ಅಂತ. ಮನೆಯ ನಿತ್ಯ ವರಾತ- ಅಗತ್ಯಗಳನ್ನು ನೋಡಿಕೊಳ್ಳುವ ಹೆಂಗಸ್ಸು ಕಾಲು ಕಸವೇ. ನಮ್ಮನೆಯ ಗಂಡಸ್ಸು ಅದಕ್ಕಿಂತ ಭಿನ್ನವಾಗಿಯೇನೂ ಇಲ್ಲ. ಎಲ್ಲರ ಮನೆಯ ದೋಸೆಯೂ ತೂತೆ ತಾನೇ..
ಇವರು ಹೇಗೂ ಬರುವ ಜನಅಲ್ಲ ಅಂತ ಗೊತ್ತಾಗಿ ಸಂತೆಗೆ ಒಬ್ಬಳೇ ಹೋಗುವ ನಿರ್ದಾರ ಮಾಡಿಬಿಟ್ಟಿದ್ದೆ. ಇವರನ್ನು ಆಪೀಸಿಗೆ ಕಳಿಸಿ ಮಗನನ್ನು ಸ್ಕೂಲ್ ವ್ಯಾನ್ ಹತ್ತಿಸಿ, ಬೆಳಗಿನ ಮುಸುರಿ ಪಾತ್ರೆ-ಪಗಡೆ ತೊಳೆದು ಒಂದಿಷ್ಟು ಬಟ್ಟೆ ಕುಕ್ಕಿ ಒಣಗಿಸಿ ಗಡಿಬಿಡಿಯಲ್ಲಿ ರೆಡಿಯಾಗಿ ಹೊರಟೆ. ಗಡಿಯಾರ ಬೆಳಗಿನ ಹತ್ತೂವರೆ ತೋರಿಸುತ್ತಿತ್ತು.
ಕರಾವಳಿಯ ಸೆರಗು ಕುಂದಾಪುರದ ಬಿಸಿಲಿನ ಝಳ ಎಲ್ಲರಿಗೂ ಗೊತ್ತಿದ್ದೆ. ಮಧ್ಯಾಹ್ನ ಹನ್ನೆರಡು ಗಂಟೆ ನಂತರ ಮನೆ ಹೊರಗೆ ಕಾಲಿಟ್ಟರೆ ನೆತ್ತಿ ಸುಡುವ ಬಿಸಿಲು. ಹಾಗಾಗಿ ಹೊತ್ತು ಏರುವುದರ ಒಳಗೆ ಸಂತೆ ಮುಗಿಸಿ ಮನೆಗೆ ಬರುವ ಇರಾದೆಯೊಂದಿಗೆ ನಾ ತುರಾತುರಿಯಲ್ಲಿ ಹೊರಟಿದ್ದು ನಿಜ.
ನೂರಾರು ವರ್ಷಗಳಿಂದ ಪ್ರತಿ ಶನಿವಾರ ನೆಡೆಯುವ ಕುಂದಾಪುರದ ಸಂತೆ ಕರಾವಳಿಯ ಪ್ರಸಿದ್ದ ಸಂತೆಗಳಲ್ಲಿ ಒಂದು.. ಎಲ್ಲಿ ನೋಡಿದರೂ ಗಿಜಿ ಗಿಜಿ ಗೌಜು-ಗದ್ದಲ. ಘಟ್ಟದ ಮಾವಿನ ಮಿಡಿಯಿಂದ ಹಿಡಿದು ಆಚೆಮನೆ ದ್ಯಾವಜ್ಜಿಯ ಬಸಳೆ, ಹರಿವೆ ಕಟ್ಟಿನವರೆಗೆ, ಕಾಣೆಯಿಂದ ಹಿಡಿದು ತೊರ್ಕೆ, ಶಾಡಿ ಮೀನಿನವರೆಗೆ ಎಲ್ಲವೂ ಫ್ರೆಶ್ಸಾಗಿ ಇಲ್ಲಿ ಸಿಗುತ್ತದೆ. ತಲೆಗೆ ಚುಚ್ಚುವ ಕ್ಲಿಪ್ಪಿಂದ ಹಿಡಿದು ರೇಶ್ಮೆ, ಕಾಂಚಿವರಂ ಸೀರೆಯವರಗೆ ಮಿರ ಮಿರ ಮಿಂಚುವ ಬಟ್ಟೆಗಳು, ಚೈನಿ ಪ್ಯಾನ್ಸಿ ಬರ್ಮಾ ಬೊಂಬೆ ಬಜಾರಿನ ಎಲ್ಲ ವಸ್ತುಗಳೂ ಗಿರಾಕಿಗಳನ್ನು ಮೋಡಿ ಮಾಡಿಬಿಡುತ್ತದೆ. ಹಾಗಾಗಿ ಶನಿವಾರದ ಸಂತೆ ಎಂದರೆ ಮಿನಿ ಜಾತ್ರೆ.. ಜನರ ಗೌಜೇ..ಗೌಜು.
ಮೆಣಸು ಮೆಂತೆ ಜೀರಿಗೆಯಂತಹ ಮನೆಗೆ ಅಗತ್ಯವಾಗಿ ಬೇಕಿದ್ದ ಒಂದಿಷ್ಟು ದಿನಸಿ ವಸ್ತುಗಳನ್ನು ಖರಿದೀಸಿ ಹಸಿರು ತರಕಾರಿಯನ್ನು ಚೀಲಕ್ಕೆ ಸೇರಿಸಿದೆ. ಮುಖ್ಯವಾಗಿ ಬಂದ ಉದ್ದೇಶ ಮಣ್ಣಿನ ಅಳಿಗೆಯನ್ನು ಖರೀದಿಸುವುದಾದ್ದರಿಂದ ಮಡಿಕೆ ಮಾರುವ ಕುಂಬಾರನೆಲ್ಲಿ ಎಂದು ಹುಡುಕುತ್ತಾ ಹೊರಟೆ.
ಸಂತೆಯ ಇಕ್ಕೆಲಗಳಲ್ಲೂ ಎದ್ದು ನಿಂತಿರುವ ಸಾಲು ಸಾಲು ತರಕಾರಿ ಅಂಗಡಿಗಳು, ಪ್ಯಾನ್ಸಿ, ಬರ್ಮಾ, ಬೊಂಬೆ ಬಜಾರುಗಳು ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದ್ದವು. ಗಿಜಿಗುಡುವ ಜನರ ಮಧ್ಯೆ ಹಾದು ಘಮ್ಮೆನ್ನುವ ಮೀನು ಮಾರ್ಕೆಟನ್ನು ದಾಟಿ ಸಂತೆಯ ಮೂಲೆಗೆ ಬಂದರೂ ಒಬ್ಬನೇ ಒಬ್ಬ ಮಡಿಕೆ ಮಾರುವ ಕುಂಬಾರ ಕಣ್ಣಿಗೆ ಬೀಳಲಿಲ್ಲ. ನಾನು ಚಿಕ್ಕ ಪ್ರಾಯದಿಂದ ಅಜ್ಜಿ ಜೊತೆ-ಅಮ್ಮನ ಜೊತೆ ನೂರಾರು ಸಲ ಕುಂದಾಪ್ರ ಸಂತೆಗೆ ಬಂದವಳೆ. ತಲೆಗೊಂದು ಮುಂಡಾಸು ಸುತ್ತಿ ಸಾಲಾಗಿ ಕುಳಿತು ಮಡಿಕೆ ಮಾರುತ್ತಿದ್ದ ಹತ್ತಾರು ಕುಂಬಾರರನ್ನು ಅಂದು ನೋಡಿದ್ದರ ನೆನಪು. ಆದರೆ ಇವತ್ತು ಒಬ್ಬರು ಕಾಣಲು ಸಿಗಲಿಲ್ಲ.
ಕುಂಬಾರರೆಲ್ಲ ಎಲ್ಲಿ ಮಾಯವಾದರೋ!?
ನೂರಾರು ವರ್ಷಗಳ ಕಾಲ ಜನರ ನಿತ್ಯ ಬದುಕಿಗೆ ಅನ್ನ-ಅಹಾರಗಳನ್ನು ಬೇಯಿಸಿಕೊಳ್ಳಲು ಅಗತ್ಯವಾಗಿ ಬೇಕಿದ್ದ ಕುಂಬಾರಿಕೆ ಪರಿಕರಗಳು ಈ ಸ್ಟೀಲು, ಅಲ್ಯುಮೀನಿಯಂ ಪ್ಲಾಸ್ಟಿಕ್ ಗಳ ಎದರು ಸ್ಪರ್ಧಿಸಲಾಗದೇ ಮೂಲೆಗುಂಪಾಗಿ ಹೋಯ್ತಲ್ಲ.. ಯಾವುದ್ಯಾವುದೋ ವಿದೇಶಿ, ಚೀನಿ ಮೂಲದ ನೂರಾರು ಬಣ್ಣ-ಬಣ್ಣದ ವಸ್ತುಗಳು ಸಿಗುವ ನಮ್ಮೂರ ಸಂತೆಯಲಿ ಇದೇ ನೆಲದಲ್ಲಿ ಹುಟ್ಟಿದ ಕುಂಬಾರನ ಮಡಿಕೆಗಳು ಇಲ್ಲಾವಾಯ್ತೆ ಎಂಬ ಕೊರಗು ನನ್ನ ಆ ಕ್ಷಣ ಕಾಡಿತು.
ಸಂತೆಯ ಮೂಲೆ ಮೂಲೆ ಅರಸಿದರೂ ಒಬ್ಬನೇ ಒಬ್ಬ ಕುಂಬಾರ ನನ್ನ ಕಣ್ಣಿಗೆ ಬೀಳಲಿಲ್ಲ. ‘ಇನ್ನೂ ತಿರುಗಿ ಮನೆಗೆ ಹೋಗುವುದೇ ಸೈ’ ಎಂಬ ಭಾವದಿಂದ ಹೊರಡುವ ತೀರ್ಮಾನ ಮಾಡಿದೆ. ಆದರೆ ಸಂಜೆ ನಮ್ಮೆಜಮಾನ್ರು ‘ಯಜಮಾಂತಿಯರು ಸಂತೆಯಲ್ಲಿ ತಂದ ಅಳಿಗೆ ತೋರಿಸಿ ಕಾಣುವ’ ಎಂದು ಕೇಳಿದರೆ ‘ಸಿಗಲಿಲ್ಲ’ ಎಂದರೆ ಹಂಗಿಸಿ ನಗುತ್ತಾರೆ ಎಂಬ ನೆನಪು ಕಾಡಿತು. ಹಾಗಾಗಿ ಕೊನೆಯ ಪ್ರಯತ್ನ ಎಂಬಂತೆ ಅಲ್ಲೆ ಇದ್ದ ಸಣ್ಣ ಬೀಡಾ ಅಂಗಡಿಯವನ ಹತ್ತಿರ ‘ಹೋಯಿ.. ಇಲ್ಲಿ ಮಣ್ಣಿನ ಪಾತ್ರೆ-ಪಗಡೆಗಳು ಎಲ್ಲಿ ಸಿಕ್ಕುತ್ತಾವೇ?’ ಎಂದು ಮೆಲ್ಲಗೆ ಕೇಳಿದೆ. ಅವನು ಸಂತೆಯ ಬಲ ಮೂಲೆಯ ಅಂಚಿಗೆ ಕೈ ತೋರಿಸಿ ‘ಅಲ್ಲೊಂದು ಅಜ್ಜ ಮುಂಚೆ ಮಡಿಕೆ ತಕ್ಕೊಂಡು ಬರ್ತಿತ್ತಪ್ಪಾ..ಈವಾಗ ಬರುತ್ತೋ ಇಲ್ಲವೋ ನಂಗೆ ಸಮಾ ತಿಳಿಯ. ನೀವೆ ಹೋಗಿ ನೋಡಿ’ ಎಂದ.
ಮತ್ತೆ ತಡಮಾಡಲಿಲ್ಲ. ಬರಾಕಿನಿಂದ ಸಂತೆಯ ಬಲ ಮೂಲೆಗೆ ಸಾಗಿ ಬಂದೆ. ಸಂತೆಯಿಂದ ಸಾಕಷ್ಟು ದೂರವಾಗಿ ಮೂಲೆಯಲ್ಲಿ ಮರದ ನೆರಳಿನಲ್ಲಿ ಒಂದಿಷ್ಟು ಮಡಿಕೆ-ಕುಡಿಕೆಗಳ ರಾಶಿ ಇರುವುದು ಕಾಣಿಸಿತು. ಅದರ ಮಧ್ಯೆ ಮುಪ್ಪಿನ ಮುದುಕಪ್ಪನೊಬ್ಬ ಆಸೀನವಾಗಿರುವುದು ಗೋಚರಿಸಿತು. ಆ ಅಜ್ಜನ ಸುತ್ತಮುತ್ತ ಮಣ್ಣಿನ ಅಳಿಗೆ, ದೋಸೆ ಕಾವಲಿ, ಬಾವಡಿ, ಹಣತೆ, ಧೂಪದ ಆರತಿ ಸಣ್ಣ ದೊಡ್ಡ ಪಾತ್ರೆಗಳು ಇನ್ನಿತರ ಅನೇಕ ಮಣ್ಣಿನ ಪರಿಕರಗಳು ಇದ್ದವು. ಅಜ್ಜನ ಸಮೀಪದಲ್ಲೆ ಆಸೀನವಾಗಿದ್ದ ಅಜ್ಜಿಯೊಬ್ಬಳು ನೆಲದ ಮೇಲೆ ಕುಳಿತು ವೀಳ್ಯ ಮೆಲ್ಲುತ್ತಿದ್ದಳು.
ಗಿರಾಕಿಗಳಿಲ್ಲದೇ ಬಿಕೋ ಎನ್ನುತ್ತಿದ್ದ ಆ ಸ್ಥಳದಲ್ಲಿ ತಲೆಗೊಂದು ಮುಂಡಾಸು ಸುತ್ತಿ ಏರುತ್ತಿದ್ದ ಬಿಸಿಲಿಗೆ ಮುಖವೊಡ್ಡಿ ಕುಳಿತಿದ್ದ ಅಜ್ಜನ ಬಳಿ ಬಂದು ಸಣ್ಣ ನಗು ಬೀರಿದೆ. ಒಣಗಿದ ತುಟಿಗೆ ನಾಲಿಗೆ ಸವರಿಕೊಳ್ಳುತ್ತಾ ನಗು ಬೀರಿದ ಅಜ್ಜ ‘ಬನ್ನಿಯಮ್ಮ ಬನ್ನಿ..ಏನು ಬೇಕು ನಿಮಗೆ’ ಎಂದು ಆತ್ಮೀಯವಾಗಿ ಸ್ವಾಗತಿಸಿದ.
ನನಗೂ ಬಿಸಿಲಿನಲ್ಲಿ ಸಾಗಿ ಬಂದು ದಣಿವಾಗಿತ್ತು. ಕೈಯಲ್ಲಿದ್ದ ಚೀಲಗಳನ್ನೆಲ್ಲ ಅಜ್ಜನ ಎದರಿಗೆ ಇರಿಸಿದೆ. ಅಜ್ಜ ತಾನು ಕುಳಿತ ಕಬ್ಬಿಣದ ಕುರ್ಚಿಯನ್ನೆ ನನ್ನತ್ತಾ ದೂಡಿದ. ಆರಾಮಾವಾಗಿ ಕುಳಿತು ‘ಅಜ್ಜ..ನನಗೊಂದು ಮೀಡಿಯಂ ಸೈಜಿನ ಮಣ್ಣಿನ ಅಳಿಗೆ ಬೇಕಿತ್ತು. ಮೀನು. ಕೋಳಿ ಸಾರು, ಸುಕ್ಕ ಮಾಡುವಂತಹದ್ದು’ ಎಂದೆ. ಅಜ್ಜ ಖುಷಿ-ಖುಷಿಯಾಗಿ ತನ್ನ ಬಳಿ ಇರುವ ಚಿಕ್ಕ-ದೊಡ್ಡ ಗಾತ್ರದ ಹತ್ತಾರು ಅಳಿಗೆಯನ್ನು ನನ್ನ ಎದುರಿಗಿರಿಸಿ ‘ನಿಮಗೆ ಯಾವುದು ಬೇಕಮ್ಮ..ತಗೊಳ್ಳಿ’ ಎಂದ. ಸುಮಾರು ಮೀಡಿಯಂ ಗಾತ್ರದ ಒಂದು ಅಳಿಗೆಯನ್ನು ಎತ್ಹಿಡಿದು ‘ಇದಕ್ಕೆಷ್ಟು ಬೆಲೆ’ ಎಂದೆ. ‘ಇನ್ನೂರ ಐವತ್ತು ರೂಪಾಯಿ’ ಎಂದ. ‘ಯಪ್ಪಾ.. ಇಷ್ಟು ಚಿಕ್ಕ ಅಳಿಗೆಗೆ ಅಷ್ಟು ರೇಟಾ..ತುಂಬಾ ಜಾಸ್ತಿ ಆಯ್ತಲ್ಲ. ಇಷ್ಟೇ ದೊಡ್ಡದಿರುವ ಸ್ಟೀಲ್ ಅಲ್ಯುಮೀನಿಯಂ ಪಾತ್ರೆಗಳು ಐವತ್ತು ರೂಪಾಯಿಗೆ ಸಿಗುತ್ತೆ ಅಜ್ಜ’ ಎಂದು ಚೌಕಾಸಿ ಬುದ್ದಿಗೆ ಇಳಿದೆ.
ಅಜ್ಜನ ಮುಖ ಪೆಚ್ಚಾದುದು ಕಾಣಿಸಿತು. ‘ಅಷ್ಟು ಕಡಿಮೆ ರೇಟಿಗೆ ಕೊಡುವುದಕ್ಕೆ ನಂಗೆ ಪುರೇಸುವುದೇ ಇಲ್ಲವ್ವ..ಒಂದು ಇಪ್ಪತ್ತು ರೂಪಾಯಿ ಬಿಡಬಹುದು ಅಷ್ಟೇಯಾ’’ ಎಂದ. ಯಾಕೋ ಅಜ್ಜನ ಬಳಿ ಚೌಕಾಸಿ ಮಾಡುವುದು ಬೇಡ ಅನ್ನಿಸಿತು. ‘ಸರಿ ತಾತಯ್ಯ ತಕೋ’ ಎಂದು ನೋಟುಗಳನ್ನು ನೀಡಿದೆ. ಅಜ್ಜ ಖುಷಿಯಿಂದ ನೋಟುಗಳನ್ನು ಕಣ್ಣಿಗೊತ್ತಿಕೊಂಡು ಕಿಸೆಗೆ ಇಳಿಸಿದ. ಮಣ್ಣಿನ ಅಳಿಗೆ ಒಡೆಯದಂತೆ ಅದರೊಳಗೆ ಒಂದಿಷ್ಟು ಹುಲ್ಲುಗಳನ್ನು ಸೇರಿಸಿ ಪ್ಯಾಕು ಮಾಡಿ ‘ ತಕ್ಕೊಂಡು ಹೋಗುವಾಗ ಜಾಗ್ರತೆ ಅಮ್ಮ.. ಒಡೆಯದಂತೆ ನೋಡ್ಕೊಳ್ಳಿ.’’ ಎಂದ.
‘ಮಡಿಕೆ ವ್ಯಾಪರ ಹೇಗಿದೆ ಅಜ್ಜ. ಬೇಡಿಕೆ ಉಂಟಾ’ ಕುತೂಹಲದಿಂದ ದುತ್ತನೇ ಒಂದು ಪ್ರಶ್ನೆ ಎಸೆದೆ. ಅಜ್ಜನ ಮುಖ ಒಮ್ಮೆಗೆ ಗಂಭೀರ ಆಯ್ತು. ಹತ್ತಿರದಲ್ಲಿ ಕುಳಿತಿದ್ದ ಅಜ್ಜಿ ವೀಳ್ಯದ ಕೆಂಪು ರಸ ಉಗಿದು ಮಾತಿಗಿಳಿದಳು.
‘ಎಂತಹದ್ದು ಮಡಿಕೆ ಯ್ಯಾಪರ ಮಗಾ.. ಬರೀ ಡಲ್ಲು. ಬೆಳಗ್ಗೆ ಎಂಟು ಗಂಟೆಗೆ ಬಂದು ಇಲ್ಲಿ ಕೂಕ್ಕಂಡಿತು. ಐನೂರು ರೂಪಾಯಿ ಆಗಲಿಲ್ಲ. ನೀನೆ ಬೋಣಿ. ಪಾತಾಳಕ್ಕಿಳಿದರೋ ಬಿಜಿನೆಸ್ಸು ನಮ್ದು’ ಎಂದಿತು.
‘ಒಂದು ಕಾಲದಲ್ಲಿ ಇದೇ ಜಾಗದಲ್ಲಿ ಕುಳಿತು ದಿನಕ್ಕೆ ಸಾವಿರಾರು ಮಡಿಕೆಗಳನ್ನು ಮಾರಿದ ಕೈ ಕಣಮ್ಮ ಇದು. ಇವತ್ತು ದಿನವಿಡೀ ಕುಳಿತ್ರೆ ಒಂದು ಹತ್ತು ಮಡಿಕೆ ವ್ಯಾಪರ ಆದ್ರೆ ಅದು ನಮ್ಮ ಪುಣ್ಯ. ಮಾಡ್ಕೊಂಡು ಬಂದ ಉದ್ಯೋಗ ನಮಗೆ ಬಿಡುವುದಕ್ಕೆ ಆಗುವುದಿಲ್ಲ. ಬಿಟ್ಟರೇ ಬದುಕು ಸಾಗಬೇಕಲ್ಲ..? ಈ ಸ್ಟೀಲು, ಅಲುಮೀನಿಯಂ, ಪ್ಲಾಸ್ಟಿಕ್-ಪಿಂಗಾಣಿ ಪಾತ್ರೆ-ಪಗಡೆಗಳು ಬಂದ ಮೇಲೆ ನಮ್ಮ ಮಡಿಕೆಯನ್ನು ಕೇಳುವವರು ಯಾರು ಹೇಳು? ಎಲ್ಲೋ ಅಪರೂಪಕ್ಕೆ ನಿನ್ನ ತರಹದವರು ಅಳಿಗೆ-ಪಳಿಗೆ ಅಂತ ಬರ್ತಾರೆ. ಅವರನ್ನೆ ಕಾಯುದು ನಾವು. ‘ಮೊದಲಿನ ಕಾಲವಲ್ಲ..ವಂಡಾರು ಕಂಬಳ ಅಲ್ಲ(ಕುಂದಾಪ್ರ ಗಾದೆ) ಅಂತಾರಲ್ಲ ಹಾಗೇ ನಮ್ಮ ಬದುಕು’ ಎಂದ ಅಜ್ಜ.
ಯಾಕೋ ಆ ಅಜ್ಜ ದೀರ್ಘ ನಿಟ್ಟುಸಿರು ಚೆಲ್ಲಿ ತನ್ನೊಳಗಿನ ನೋವನ್ನು ಅಭಿವ್ಯಕ್ತಿಸಿದ ಪರಿ ನನ್ನ ಮನಸ್ಸನ್ನು ಚಳ್ಳನೇ ಅಲ್ಲಾಡಿಸಿತು. ‘ಅಲ್ಲ ಅಜ್ಜಾ..ಈ ಮಡಿಕೆ-ಕುಡಿಕೆ ಮಾಡುವವರಿಗೆ ಸರಕಾರ ಸಾಲ ಸೌಲಭ್ಯ, ಸಲಕರಣೆ ಅಂತೆಲ್ಲ ಕೊಡುವುದಂತಲ್ಲ..ಹೌದಾ’ ಕೇಳಿದೆ.
ಕೊಡುತ್ತೆ.. ಅಂತ ನಾನು ಕೇಳಿದ್ದೆ. ಆದರೆ ಇದುವರೆಗೆ ನಮಗೆ ಸಿಕ್ಕಿದ್ದು ಎನೂ ಇಲ್ಲ ಮಗ. ಮುಂಚೆಲ್ಲಾ ನಮ್ಮೂರಿನ ಸುತ್ತ ಮುತ್ತಾನೇ ಮಡಿಕೆ ಮಾಡುವ ಜೇಡಿ ಮಣ್ಣು ಧಾರಾಳ ಸಿಕ್ತಿತ್ತು. ಆದರೀಗ ಅದನ್ನು ತೆಗೆಯಲಿಕ್ಕೆ ಸರಕಾರವೇ ಬಿಡುವುದಿಲ್ಲ. ಅವರಿವರ ಕಾಲು ಹಿಡಿದು ಮಣ್ಣು ತಕ್ಕೊಳ್ಳೊಕೇ ಹೋದ್ರು ಅದಕ್ಕೆ ಅಲ್ಲದಿದ್ದ ರೇಟು ಹೇಳ್ತಾರೆ. ಸುಡ್ಲಿಕ್ಕೆ ಸೌದೆಯೂ ಇಲ್ಲ. ಸೌದೆ ಕಡಿದ್ರೆ ಕಾಡು ಹಾಳಾಗುತ್ತೆ ಅಂತದೆ ಸರಕಾರ. ಈ ಮಡಿಕೆಯನ್ನು ಸಾಗಿಸೋ ಗಾಡಿ ಚಾರ್ಜು, ಜನರ ಕೂಲಿ, ನಮ್ಮ ಕೆಲಸ ಎಲ್ಲ ಲೆಕ್ಕ ಹಾಕಿದ್ರೆ ಎಂತಹದ್ದೂ ಪುರೆಸುದಿಲ್ಲ..ಆದರೇ ಬಿಡುವುದಕ್ಕೆ ಮನಸ್ಸು ಒಪ್ಪುದಿಲ್ಲ.’ ಎಂದಿತು ಅಜ್ಜ.
‘ನಮ್ಮ ಮನೆತನದ ಮೂಲ ಉದ್ಯೋಗ ಮಡಿಕೆ ಮಾಡುವುದು. ನನ್ನಜ್ಜನಿಂದ ನನ್ನಪ್ಪನಿಗೆ ಅವನಿಂದ ನನಗೆ ಬಳುವಳಿಯಾಗಿ ಈ ಕಾಯಕ ಬಂತು. ಆದ್ರೆ ನನ್ನ ಮಕ್ಕಳ್ಯಾರು ಇದನ್ನು ಕಲಿಯಲಿಲ್ಲ..ನಾನು ಕಲಿಸಿಕೊಡಲು ಇಲ್ಲ..ಯಾಕಂದರೆ ಇದರಿಂದ ಇನ್ನು ಬದುಕು ನಡೆಸುವುದು ಕಷ್ಟ..ಅವರೆಲ್ಲ ಬೇರೆ ಉದ್ಯೋಗ ಹಿಡಿದಿದ್ದಾರೆ. ನಾನೇ ಇದರ ಕೊನೆಯ ಕೊಂಡಿ. ಒರಲೆ ಹಿಡಿದ ಆಲದ ಮರ ತರಹ. ಯಾವಾಗ ಬಿದ್ದು ಹೋಗ್ತಿನೋ ನಾ ಕಾಣೆ..’ ಎಂದಿತು ಅಜ್ಜ.
ಅಜ್ಜನ ಮಾತಿಗೆ ಏನು ಪ್ರತಿಕ್ರಿಯಿಸಬೇಕೋ ತಿಳಿಯಲಿಲ್ಲ. ವ್ಯಾನಿಟಿಯಲ್ಲಿದ್ದ ನೂರರ ನೋಟನ್ನು ಆ ಅಜ್ಜಿಯ ಕೈ ಮೇಲಿರಿಸಿ ಅಲ್ಲಿಂದ ಹೊರಟೆ. ರಿಕ್ಷಾದಲ್ಲಿ ಸಾಮಾನು, ಅಳಿಗೆಯನ್ನು ಏರಿಸಿ ಮನೆಗೆ ಬಂದು ತಲುಪಿದೆ..
ಮನದ ತುಂಬಾ ಆ ಅಜ್ಜ-ಅಜ್ಜಿಯರೇ ತುಂಬಿಕೊಂಡರು.!
ಬದಲಾವಣೆ ಜಗದ ನಿಯಮ..ಕಾಲಕ್ಕೆ ತಕ್ಕ ಹಾಗೇ ನಾವು ಬದಲಾಗಬೇಕು ಎಂಬ ಮಾತು ದಿಟ. ಆದರೂ ಈ ಶತ ಶತಮಾನಗಳ ಪರಂಪರೆ ಇರುವ ಈ ಕುಂಬಾರಿಕೆ ವಿನಾಶದ ಅಂಚು ತಲುಪುತ್ತಿರುವುದು ಯಾಕೋ ಸಹಿಸಿಕೊಳ್ಳಲು ಮನ ಒಪ್ಪಲಿಲ್ಲ. ಮಣ್ಣು-ನೀರು-ಗಾಳಿ-ಬೆಂಕಿಯಂತಹ ಪಂಚಭೂತಗಳನ್ನೆ ಬಂಡವಾಳವನ್ನಾಗಿಸಿಕೊಂಡು ಹುಟ್ಟಿದ ವೃತ್ತಿ ಅದು ಕುಂಬಾರಿಕೆ. ಮಡಿಕೆ ಪರಿಶುದ್ಧವಾದ ದೇಶಿ ಉತ್ಪನ್ನ. ಅನಾಗರಿಕವಾಗಿದ್ದ ಮನುಷ್ಯನನ್ನು ನಾಗರಿಕ ಜಗತ್ತಿಗೆ ಕರೆ ತರುವಲ್ಲಿ ಮಡಿಕೆಗಳ ಪಾತ್ರವೂ ದೊಡ್ಡದಿದೆ. ಚಕ್ರವೊಂದು ಗರ ಗರ ತಿರುಗಿದರೆ ಅಲ್ಲೊಂದು ಅಧ್ಬುತ ತಂತ್ರಜ್ಞಾನ ಸೃಷ್ಟಿಯಾಗುತ್ತದೆ ಎಂಬುದನ್ನು ಮಡಿಕೆ ಮಾಡುವುದನ್ನು ನೋಡಿಯೇ ಈ ಜಗತ್ತು ಅರಿತುಕೊಂಡಿದ್ದು.. ಅದರ ಬುನಾದಿಯಲ್ಲೆ ತಂತ್ರಜ್ಞಾನ ಬೆಳೆದಿರಬಹುದು. ನೂರಾರು ವರ್ಷಗಳ ಕಾಲ ಜನರ ನಿತ್ಯ ಬದುಕಿಗೆ ಅಗತ್ಯವಾಗಿ ಬೇಕಿದ್ದ ಮಣ್ಣಿನ ಮಡಿಕೆ-ಕುಡಿಕೆಗಳು ಇಂದು ಮಾರುಕಟ್ಟೆ ಮೌಲ್ಯವನ್ನು ಕಳೆದುಕೊಂಡು ಮೂಲೆ ಗುಂಪಾಗುತ್ತಿದೆಯಲ್ಲಾ ಎನಿಸಿತು.
ಎಲ್ಲ ವಾತಾವರಣಕ್ಕೂ ಹೊಂದುವ ಆರೋಗ್ಯವರ್ಧಕವಾಗಿದ್ದ ಈ ಮಡಿಕೆ-ಕುಡಿಕೆಗಳನ್ನು ಈ ಕಾಲದ ಜಮಾನಕ್ಕೆ ಹೊಂದುವಂತೆ ರೂಪಾಂತರಿಸಿ ಮಾರ್ಕೆಟು ಮಾಡುವಲ್ಲಿ ಕುಂಬಾರರು ಸೋತರೇನೋ? ಜಾಗತಿಕರಣದ ಎಫೆಕ್ಟ್ ನಿಂದ ಜನರ ಬದುಕಿನ ರೀತಿ ಬದಲಾಯ್ತು. ಈ ಬದಲಾವಣೆಯ ನೇರ ಹೊಡೆತ ಈ ನೆಲದ ಅನೇಕ ಪಾರಂಪರಿಕ ಉದ್ಯೋಗಗಳ ಮೇಲೆ ಆಗಿದೆ. ವಿದೇಶಿ ವಸ್ತುಗಳ ವ್ಯಾಮೋಹದಿಂದ ಸ್ವದೇಶಿ ಉತ್ಪನ್ನಗಳನ್ನು ನಾವು ಧಿಕ್ಕರಿಸುತ್ತಿದ್ದೇವೆ. ಈ ಕಾರಣದಿಂದಲೇ ಬುಟ್ಟಿ ಹೆಣೆವ ಚೋಮ, ಮಡಿಕೆ ಮಾಡುವ ಬೀರ, ನೇಯ್ಗೆ ಮಾಡುವ ಕಾಳಿ, ಗಾಡಿ ಹೊಡೆವ ಕರಿಯರ ಬದುಕು ಬೀದಿ ಪಾಲಗುತ್ತಿದೆ.. ಅವರ ಊಟದ ಬಟ್ಟಲನ್ನು ಕಸಿದು ನಾವು ಆಧುನಿಕರಾಗುತ್ತಿದ್ದೇವೆ.. ಇದು ಒಂದು ತೆರನಾದ ಶೋಷಣೆಯಲ್ಲದೇ ಮತ್ತಿನ್ನೇನು??
ನಿತ್ಯವೂ ಎನ್ನ ಮನ ಆ ಅಜ್ಜ-ಅಜ್ಜಿಯರನ್ನು ನೆನೆದು ಮರುಗುತ್ತಿದೆ..