ಉಜಿರೆಯ ಕುಂಬಾರರು ಊರಿನ ಪಟೇಲನ ಅಣತಿಯಂತೆ ಸ್ವಾತಂತ್ರ್ಯಪೂರ್ವದಲ್ಲಿ ಮನುಷ್ಯರನ್ನು ಹೊರುತ್ತಿದ್ದರಂತೆ. ಮಂಗಳೂರಲ್ಲಿದ್ದ ಇಂಗ್ಲಿಷ್ ಅಧಿಕಾರಿಗಳನ್ನು ಬೇಸಿಗೆಯಲ್ಲಿ ತಾಪ ಕಡಿಮೆ ಇರುವ ಕುದುರೆಮುಖದ ವಿಶ್ರಾಂತಿ ಧಾಮಗಳಿಗೆ ಬೆಳ್ತಂಗಡಿಯಿಂದ ಕಾಲುದಾರಿಯಲ್ಲಿ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದರಂತೆ. ಉಜಿರೆಯ ಕುಂಬಾರರು ದೇವಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ತಿಳಿದುಬರುತ್ತದೆ. ಉಜಿರೆಯ ಕುಂಬಾರರು ಮಾಡುವ ವೈಶಿಷ್ಟ್ಯಪೂರ್ಣ ಕಲೆ ಎಂದರೆ ಹರಕೆಯ ಮಣ್ಣಿನ ಮೂರುತಿ. ಅವರವರು ಮಾಡಿಕೊಂಡ ಹರಕೆಯಂತೆ ಬೇಡಿಕೆಗೆ ಅನುಗುಣವಾಗಿ ವಿವಿಧ ಮಣ್ಣಿನ ಮೂರ್ತಿಗಳನ್ನು ಮಾಡಿಕೊಡುವರು.
(ಕುಲಾಲ್ ವರ್ಲ್ಡ್ ಡಾಟ್ ಕಾಮ್ ಲೇಖನ, Dec. 16, 2017 )
ತುಳುನಾಡಿನ ಕನ್ನಡ ಕುಂಬಾರರು ಘಟ್ಟದ ಮೇಲಿನಿಂದ ಬಂದು ಸಹ್ಯಾದ್ರಿ ಪರ್ವತದ ಕೆಳಗಿನ ಪ್ರದೇಶದಲ್ಲಿ ನೆಲೆಸಿದರು ಎಂಬುದರ ಕುರಿತು ಸಂಶೋಧನೆ ಆಗಬೇಕಿದೆ. ಕನ್ನಡದ ಕುಂಬಾರರು ಹೆಚ್ಚಾಗಿ ಬೆಳ್ತಂಗಡಿ ತಾಲೂಕಿನ ಬಂಗಾಡಿ, ಉಪ್ಪಿನಂಗಡಿ, ಉಜಿರೆ, ಕಕ್ಕಿಂಜೆ, ಅರೇಕಾಲ, ಚಾರ್ಮಾಡಿ, ಕಡಬ ಮುಂತಾದೆಡೆ ನೆಲೆಸಿದ್ದಾರೆ. ಉಜಿರೆಯಲ್ಲಿ ಸುಮಾರು ೧೫೦ಕ್ಕೂ ಹೆಚ್ಚು ಕನ್ನಡ ಕನ್ನಡ ಕುಂಬಾರರ ಮನೆಗಳಿವೆ. ಉಳಿದ ಪ್ರದೇಶಗಳಲ್ಲಿ ಬಹಳ ಕಡಿಮೆ. ಉಜಿರೆಯಲ್ಲಿ ಒಂದೇ ಕಡೆ ಹೆಚ್ಚಿನ ಸಂಖ್ಯೆಯಲ್ಲಿರುವುದರಿಂದಲೋ ಏನೋ ಇವರಿಗೆ ಉಜಿರೆ ಕುಂಬಾರರೆಂದು ಕರೆಯುವ ರೂಢಿ ತುಳುನಾಡಿನಲ್ಲಿದೆ.
ತುಳುನಾಡಿನ ಕುಲಾಲರ ಹಾಗೆ ಇವರದು ಅಳಿಯಕಟ್ಟು ಕುಟುಂಬವಲ್ಲ. ಮಕ್ಕಳಕಟ್ಟು ಪಿತೃಪ್ರಧಾನ ಕುಟುಂಬ. ಇವರ ಮನೆ ಭಾಷೆ, ಹೆಸರೇ ಸೂಚಿಸುವಂತೆ ಕನ್ನಡ. ಕನ್ನಡ ಕುಂಬಾರರು ವೈಷ್ಣವ ಪಂಥಕ್ಕೆ ಸೇರಿದವರು. ಮಾಂಸಾಹಾರಿಗಳು, ಮೊದಲಿಗೆ ಕುಂಬಾರಿಕೆಯ ಜೊತೆಗೆ ಬೇಸಾಯವನ್ನು ಮಾಡುತ್ತಿದ್ದರಂತೆ. ಕಾರಣಾಂತರದಿಂದ ಭೂಮಿಯು ಹೋದ ಮೇಲೆ ಮಡಕೆ ಮಾಡುವುದನ್ನು ಮುಖ್ಯ ವೃತ್ತಿಯನ್ನಾಗಿ ಸ್ವೀಕರಿಸಿದ್ದಾರೆ. ಉಜಿರೆಯ ಅವಲಕ್ಕಿ ಗಿರಣಿಗಳಿಗೆ ಭತ್ತ ಬೇಯಿಸಲು ದೊಡ್ಡ ದೊಡ್ಡ ಮಡಕೆಗಳನ್ನು ಇವರು ಮಾಡಿಕೊಡುತ್ತಿದ್ದರು.
ಉಜಿರೆ ಎಂಬ ಶಬ್ದವು ಅವಲಕ್ಕಿ ತಯಾರು ಮಾಡಲು ಬಳಸುವ ಪಾತ್ರೆ ಎಂದು ಅರ್ಥ. ಅದೇ ಮುಂದೆ ಉಜಿರೆ ಆಯಿತೆಂದು ಕೆಲವರ ಊಹೆ. ಉಜಿರೆಯ ಕನ್ನಡ ಕುಂಬಾರರ ಮಡಿಕೆಗಳು ಬಹಳ ಗುಣಮಟ್ಟದವುಗಳೆಂದು ಹೆಸರು ಪಡೆದಿದ್ದವು. ಇವರು ಮಡಕೆ ಮಾಡುವ ಮಣ್ಣನ್ನು ಪಿಡಿ ಮಾಡಿ, ಸೋಸಿ, ನೀರು ಹಾಕಿ ತಿಂಗಳವರೆಗೆ ಕೊಳೆಯಲು ಬಿಟ್ಟು ನಂತರ ಮಡಿಕೆ ಮಾಡುತ್ತಿದ್ದರಂತೆ. ಇದರಿಂದಾಗಿ ಇವರು ಮಾಡಿದ ಮಡಕೆಗಳು ಬಾಳಿಕೆ ಮತ್ತು ನೈಪುಣ್ಯತೆಗೆ ಹೆಸರಾಗಿದ್ದವೆಂದು ಎಡ್ಗರ್ ಥರ್ಸ್ಟನ್ (Caste and Tribes of Southern India) ಎಂಬ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.
ಉಜಿರೆಯ ಕುಂಬಾರರು ಊರಿನ ಪಟೇಲನ ಅಣತಿಯಂತೆ ಸ್ವಾತಂತ್ರ್ಯಪೂರ್ವದಲ್ಲಿ ಮನುಷ್ಯರನ್ನು ಹೊರುತ್ತಿದ್ದರಂತೆ. ಮಂಗಳೂರಲ್ಲಿದ್ದ ಇಂಗ್ಲಿಷ್ ಅಧಿಕಾರಿಗಳನ್ನು ಬೇಸಿಗೆಯಲ್ಲಿ ತಾಪ ಕಡಿಮೆ ಇರುವ ಕುದುರೆಮುಖದ ವಿಶ್ರಾಂತಿ ಧಾಮಗಳಿಗೆ ಬೆಳ್ತಂಗಡಿಯಿಂದ ಕಾಲುದಾರಿಯಲ್ಲಿ ಪಲ್ಲಕ್ಕಿಯಲ್ಲಿ ಹೊತ್ತುಕೊಂಡು ಹೋಗುತ್ತಿದ್ದರಂತೆ.
ಉಜಿರೆಯ ಕುಂಬಾರರು ದೇವಸ್ಥಾನದೊಂದಿಗೆ ನಿಕಟ ಸಂಪರ್ಕ ಹೊಂದಿರುವುದು ತಿಳಿದುಬರುತ್ತದೆ. ಉಜಿರೆಯ ಕುಂಬಾರರು ಮಾಡುವ ವೈಶಿಷ್ಟ್ಯಪೂರ್ಣ ಕಲೆ ಎಂದರೆ ಹರಕೆಯ ಮಣ್ಣಿನ ಮೂರುತಿ. ಅವರವರು ಮಾಡಿಕೊಂಡ ಹರಕೆಯಂತೆ ಬೇಡಿಕೆಗೆ ಅನುಗುಣವಾಗಿ ವಿವಿಧ ಮಣ್ಣಿನ ಮೂರ್ತಿಗಳನ್ನು ಮಾಡಿಕೊಡುವರು. ಉದಾ: ಮನುಷ್ಯ, ಆಕಳು, ಪಕ್ಷಿ ಹೀಗೆ ಯಾವುದು ಬೇಕೋ ಅದನ್ನು ಮಣ್ಣಿನಿಂದ ಮಾಡಿ ಸುಟ್ಟುಕೊಡುವರು. ಭಕ್ತಾಧಿಗಳು ಈ ಮಣ್ಣಿನ ಮೂರ್ತಿಯನ್ನು ಹರಕೆಯ ರೂಪದಲ್ಲಿ ಉಜಿರೆಯ ಹತ್ತಿರದ ಸುರ್ಯ ದೇವಸ್ಥಾನಕ್ಕೆ ಅರ್ಪಿಸುವರು. ಧರ್ಮಸ್ಥಳದಿಂದ ಸುಮಾರು ೧೫ ಕಿಮೀ ದೂರದ ಕಾಯರ್ ತಡ್ಕ ಎಂಬಲ್ಲಿ ಮಣ್ಣಿನಲ್ಲಿ ವಿವಿಧ ವಿನ್ಯಾಸದ ಮಡಕೆ, ಮೂರ್ತಿ ಮತ್ತು ಗೊಂಬೆಗಳನ್ನು ಮಾಡುವ ಕುಂಬಾರರಿದ್ದಾರೆ. ಮಣ್ಣಿನ ಮೂರ್ತಿಗಳನ್ನು ಹರಕೆ ಕೊಡುವ ಪದ್ಧತಿ ತಮಿಳುನಾಡಿನಲ್ಲಿ ವಿಶೇಷವಾಗಿರುವುದು ಕಂಡುಬರುತ್ತದೆ.
ಕನ್ನಡ ಕುಂಬಾರರು ಆಚರಿಸುವ ಮುಖ್ಯ ಹಬ್ಬಗಳಲ್ಲಿ ದೀಪಾವಳಿ ಕೂಡ ಒಂದು. ಆ ದಿನ ಮಡಕೆ ಮಾಡುವ ಸಾಧನ ಸಲಕರಣೆಗಳನ್ನು ಇತ್ತು ಪೂಜೆ ಮಾಡುವರು. ದೈವಬಲಿಯಲ್ಲಿ ಇವರಿಗೆ ನಂಬಿಕೆಯಿದೆ. ಭೂತ-ಕೋಲದ ಆಚರಣೆ ಇಲ್ಲ. ವರ್ಷಕ್ಕೊಮ್ಮೆ ಮಾರಿ ಪೂಜೆ ಮಾಡುವರು.
ಕನ್ನಡ ಕುಂಬಾರರಲ್ಲಿ ಸೂತಕದ ಆಚರಣೆ ಇದೆ. ಸೂತಕದ ಸಂಕೇತವಾಗಿ ಕಾಯೆರ್ ಮರದ ಎಲೆಯನ್ನು ಮನೆಯ ಮಾಡಿನಲ್ಲಿ ಇಡುವ ಪದ್ಧತಿ ಇತ್ತು. ಮಗು ಜನನವಾದ ಮೇಲೆ ಐದನೆಯ ದಿನ ನಾಮಕರಣ ಪದ್ಧತಿ ಇದೆ. ೧೬ನೇ ದಿನದಲ್ಲಿ ಮಗುವನ್ನು ತೊಟ್ಟಿಲಿಗೆ ಹಾಕುವರು.
ಗಂಡಿನ ಮನೆಯಲ್ಲಿ ಜಲಸಾಕ್ಷಿಯಾಗಿ ಗಂಡಿನ ತಂದೆ, ಹೆಣ್ಣಿನ ತಂದೆಯವರ ಉಪಸ್ಥಿತಿಯಲ್ಲಿ ಬ್ರಾಹ್ಮಣರ ಪೌರೋಹಿತ್ಯದಲ್ಲಿ ಮಾಡುವೆ ನಡೆಯುವುದು. ಕನ್ನಡ ಕುಂಬಾರರಲ್ಲಿ ವಿಧವಾ ವಿವಾಹ ಪದ್ಧತಿ ಇತ್ತು/. ಆದರೆ ಕೂಡಾವಳಿ ಇರಲಿಲ್ಲ. ಇವರು ಸತ್ತವರನ್ನು ಸುಡುತ್ತಾರೆ. ಹೂಳುವ ಪದ್ಧತಿ ಕೂಡಾ ಇದೆ. ಸ್ಟಾ ೧೨ನೇ ದಿನ ಉತ್ತರಕ್ರಿಯೆ ಮಾಡುವರು.
ತುಳುನಾಡಿನಲ್ಲಿ ಕನ್ನಡ ಕುಂಬಾರರ ಸಂಖ್ಯೆ ೨೦೦೩ರಲ್ಲಿ ಸುಮಾರು ಒಂದೂವರೆ ಸಾವಿರ ಇರಬಹುದು. ಇವರಲ್ಲಿ ವಿದ್ಯಾವಂತರು ಬಹಳ ಕಡಿಮೆ. ಒಂದು ಕಾಲಕ್ಕೆ ಇವರ ಮಡಿಕೆ ಕುಡಿಕೆಗಳಿಗೆ ಬಹಳ ಬೇಡಿಕೆ ಇತ್ತು. ಆಧುನಿಕತೆಯಿಂದಾಗಿ ಕುಂಬಾರಿಕೆ ನೆಲಕೆಚ್ಚಿದೆ. ಸಂಘಟಿತರಾಗಿ ಸರಕು ನೆರವು ಪಡೆದು ಕುಂಬಾರಿಕೆಯನ್ನು ಅಭಿವೃದ್ಧಿಪಡಿಸುವ ಛಾತಿ ಇಲ್ಲದ ಅಸಹಾಯಕರಾದ ಮುಗ್ಧ ಜನರಿವರು.
(ಬಸವರಾಜ ಕುಂಚೂರು ಅವರು ಬರೆದ `ಕುಂಬಾರ ಜನಾಂಗ’ ಪುಸ್ತಕದಿಂದ ಆಯ್ದುಕೊಂಡ ಲೇಖನ)
(www.kulalworld.com, Dec. 16, 2017 )