ಮಂಗಳೂರು(ಡಿ.೩೦, ಕುಲಾಲ್ ವರ್ಲ್ಡ್ ನ್ಯೂಸ್) : ಮಕ್ಕಳ ಪ್ರತಿಭೆಗೆ ಪ್ರೋತ್ಸಾಹ ನೀಡಿದರೆ ಅದು ವಿಕಸಿತಗೊಳ್ಳುತ್ತಾ ನಾಡಿಗೊಂದು ಕೀರ್ತಿ ತಂದುಕೊಡಬಲ್ಲುದು ಎಂಬುದಕ್ಕೆ ಸ್ಪಷ್ಟ ನಿದರ್ಶನ ಈ ಬಹುಮುಖ ಪ್ರತಿಭೆಯ ಶರಣ್ಯ ಪಿ ಬಂಗೇರ ಎಂಬ ಬಾಲ ಸಾಧಕಿ. ಕುಲಾಲ ಸಮುದಾಯದ ಈ ಬಾಲಕಿಯ ಸಾಧನೆಗೆ ಸಾಕ್ಷಿಯಾಗಿ ಈ ಬಾರಿ ಮಂಗಳೂರಿನ ಪಿಲಿಕುಳದಲ್ಲಿ ಡಿ.24ರಂದು ನಡೆದ ತುಳುನಾಡೋಚ್ಛಯ ಕಾರ್ಯಕ್ರಮದ “ಜೋಕುಲೆ ಜೊಂಕಿಲ್” ಮಕ್ಕಳ ವೈವಿಧ್ಯಮಯ ಕಾರ್ಯಕ್ರಮದ ಅಧ್ಯಕ್ಷತೆಗೆ ಆಯ್ಕೆಯಾಗಿದ್ದು ಇನ್ನೊಂದು ಹೆಮ್ಮೆಯೆನಿಸಿದೆ.
ಕಳೆದ ಬಾರಿ ಕಾಸರಗೋಡಿನ ಬದಿಯಡ್ಕದಲ್ಲಿ ಜರಗಿದ ವಿಶ್ವ ತುಳುವೆರೆ ಆಯನೊದ ಮಕ್ಕಳ ತುಳು ಕವಿಗೋಷ್ಠಿಯಲ್ಲಿ ಭಾಗವಹಿಸಿ ತನ್ನ ಮುದ್ದಾದ ಕವನ ವಾಚನಗೈದಾಗ ಪ್ರೇಕ್ಷಕರು ಮುಕ್ತಕಂಠದಿಂದ ಕೊಂಡಾಡಿದ್ದು ಈ ಬಾರಿ ತುಳುನಾಡೋಚ್ಚಾಯದ ಮಕ್ಕಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲು ಸ್ಫೂರ್ತಿ ವೇದಿಕೆಯಾಗಿದೆ.
ಬಾಲ ಪ್ರತಿಭೆಯ ಪರಿಚಯ:
ಕೇರಳ ಕರ್ನಾಟಕ ಗಡಿ ಪ್ರದೇಶ ತಲಪಾಡಿಯ ದೇವಿಪುರ ಎಂಬ ಹಳ್ಳಿಯಲ್ಲಿ ಹುಟ್ಟಿದ ಶರಣ್ಯ ತನ್ನ ಪ್ರತಿಭೆಯಿಂದಾಗಿ ಊರಿಗೂ ಶಾಲೆಗೂ ಕೀರ್ತಿ ತಂದಿರಿಸಿದ ಬಹುಮುಖ ಬಾಲ ಸಾಧಕಿ. 11 ವರ್ಷ ವಯಸ್ಸಿನ ಪುಟಾಣಿ ಶರಣ್ಯ .ಪಿ.ಬಂಗೇರ ತಲಪಾಡಿ ಅನುದಾನಿತ ಶ್ರೀ ದುರ್ಗಾ ಪ್ರಸಾದಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿ. ತಲಪಾಡಿ ಬಜಂಗ್ರೆ ನಿವಾಸಿ ಪುರುಷೋತ್ತಮ .ಯನ್. ಬಂಗೇರ ಮತ್ತು ಲೀಲಾವತಿಯವರ ಪುತ್ರಿ. ತನ್ನ 5ನೇ ವಯಸ್ಸಿನಲ್ಲಿ ಬಾಲಕೃಷ್ಣ ಮಂಜೇಶ್ವರ ಇವರ ಬಳಿ ಭರತನಾಟ್ಯ ಕಲಿಯಲು ತನ್ನನ್ನು ತೊಡಗಿಸಿಕೊಂಡಳು. 8 ವರ್ಷ ಪ್ರಾಯದಲ್ಲಿ ಅಶ್ವತ್ಥ್ ಮಂಜನಾಡಿ ಇವರ ಬಳಿ ಯಕ್ಷಗಾನ ಕಲಿಯಲು ತೊಡಗಿದಳು .
ತನ್ನ 11 ವರ್ಷ ಪ್ರಾಯದಲ್ಲಿ ಸುಮಾರು 120ಕ್ಕೂ ಮಿಕ್ಕಿ ಕಲಾಪ್ರದರ್ಶನ ನೀಡಿರುವಳು. ಶಾಲಾ ಇಲಾಖೆ ನಡೆಸುವ ಪ್ರತಿಭಾಕಾರಂಜಿಯಲ್ಲಿ ಸತತ ಮೂರು ಬಾರಿ ಜಿಲ್ಲಾ ಮಟ್ಟವನ್ನು ಪ್ರತಿನಿಧಿಸಿದ ಈಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ತನ್ನ ಹೆಸರನ್ನು ಗುರುತಿಸಿ ಕೊಂಡು ಮಿಂಚಿದ ಪೋರೆ. ಪ್ರಸ್ತುತ ಮಂಜನಾಡಿ ವಿಷ್ಣು ಮೂರ್ತಿ ಜನಾರ್ದನ ಯಕ್ಷಗಾನ ಅಧ್ಯಯನ ಕೇಂದ್ರದ ಬಾಲಕಲಾ ಮೇಳದಲ್ಲಿ ಪಾತ್ರಧಾರಿಯಾಗಿ ಪ್ರದರ್ಶನ ನೀಡುತ್ತಿದ್ದಾಳೆ.
ಭರತನಾಟ್ಯದಲ್ಲಿ ಜೂನಿಯರ್ ಪರೀಕ್ಷೆ ಗೆ ತರಬೇತಿ ಪಡೆಯುತ್ತಿದ್ದು ಮೇ ತಿಂಗಳಲ್ಲಿ ಪರೀಕ್ಷೆ ಬರೆಯಲು ಹಾಜರಾತಿ ಪಡೆದಿರುತ್ತಾಳೆ. ಅಸಂಖ್ಯಾತ ಪ್ರಶಸ್ತಿ ಪುರಸ್ಕಾರ ಗಳನ್ನು ಪಡೆದ ಈಕೆಯ ಸಾಧನೆ ಹಾಗೂ ಶ್ರಮಕ್ಕೆ ಇನ್ನಷ್ಟು ಅವಕಾಶಗಳು ಒದಗಿ ಬಂದು ಪ್ರತಿಭೆ ಬೆಳಗಲಿ ಎಂಬುದೇ ಹಾರೈಕೆ.
———————————
ಬರಹ : ಶ್ರೀಜ-ಪೆರ್ಲ





