ಸ್ವಾತಂತ್ರ್ಯ ಸೇನಾನಿ ಡಾ. ಅಮ್ಮೆಂಬಳ ಬಾಳಪ್ಪ ಕರಾವಳಿ ಕರ್ನಾಟಕದ ಹಳೆ ತಲೆಮಾರಿನ ಸಮಾಜವಾದದ ಕೊನೆಯ ಕೊಂಡಿ. ಅವರ ವೈಯಕ್ತಿಕ ಬದುಕು, ಉಡುಗೆ ತೊಡುಗೆ ಸರಳ ಜೀವನ, ಬ್ರಹ್ಮಚರ್ಯ ಅವರು ಕೊನೆಯುಸಿರೆಳೆದ ಮನೆಯ ಹೆಸರು (ಅಹಿಂಸಾ) ಇವೆಲ್ಲವನ್ನು ನೋಡುವಾಗ ಅವರೋರ್ವ ಅಪ್ಪಟ ಗಾಂಧಿವಾದಿಯಂತೆ ಕಾಣುತ್ತಾರೆ. ಆದರೆ ಹೋರಾಟದ ಬದುಕು, ಹಿಂದುಳಿದ ವರ್ಗಗಳ ಏಳಿಗೆಗೆ ತುಡಿಯುತ್ತಿದ್ದ ಅವರ ಮನಸ್ಸು, ರೈತಾಪಿ ವರ್ಗದ, ಕಾರ್ಮಿಕ ವರ್ಗದ ಹಕ್ಕುಗಳಿಗಾಗಿ ಅವರು ಎತ್ತಿದ್ದ ಧ್ವನಿಯ ಪರಿ ಇವೆಲ್ಲವನ್ನು ನೋಡುವಾಗ ಅವರೋರ್ವ ಅಪ್ಪಟ ಸಮಾಜವಾದಿಯಂತೆ ಗೋಚರಿಸು ತ್ತಾರೆ. ಬಾಳಪ್ಪರು ಸಮಾಜವಾದ ಮತ್ತು ಗಾಂಧಿವಾದ ಇವೆರಡರಿಂದಲೂ ಹೊರತಲ್ಲ. ಅದಾಗ್ಯೂ ಅವರನ್ನು ಓರ್ವ ಗಾಂಧಿ ಪ್ರಣೀತ ಸಮಾಜವಾದಿ ಎನ್ನುವುದು ಅಷ್ಟು ಸೂಕ್ತವೆನಿಸುವುದಿಲ್ಲ.
ಅಮ್ಮೆಂಬಳ ಬಾಳಪ್ಪರ ಆರೋಗ್ಯದ ದಿನಗಳಲ್ಲಿ ‘ಸಮಾಜವಾದ ಮತ್ತು ಗಾಂಧಿವಾದದ ಹದವಾದ ಮಿಶ್ರಣ’ದಂತೆ ಕಾಣುತ್ತಿದ್ದರು. ಡಾ ಬಾಳಪ್ಪತನ್ನ ಬದುಕಿನ ಕೊನೆಯ ಐದಾರು ವಸಂತಗಳನ್ನು ಹೊರತುಪಡಿಸಿ ಸದಾ ಜನರೊಂದಿಗೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬದುಕಿದ್ದರು. ಡಾ. ಬಾಳಪ್ಪರಿಂದ ರಾಜಕೀಯ ದೀಕ್ಷೆ ಪಡೆದು ದೇಶ ಕಂಡ ಅಪ್ರತಿಮ ಕಾರ್ಮಿಕ ಹೋರಾಟಗಾರನಾಗಿ ಮೈದಾಳಿ ನಿಂತು ರಾಜಕೀಯ ಬದುಕಿನ ಇಳಿ ಸಂಜೆಯಲ್ಲಿ ಕೊಳಕು ರಾಜಕೀಯದ ಕೊಚ್ಚೆ ಗುಂಡಿ ಯಲ್ಲಿ ತನ್ನ ಕಾಲುಗಳನ್ನು ಹೂಳಿಸಿಕೊಂಡ ವರು ಜಾರ್ಜ್ ಫೆರ್ನಾಂಡಿಸ್. ತನ್ನ ಶಿಷ್ಯ ಜಾರ್ಜ್ ಫೆೆರ್ನಾಂಡಿಸರನ್ನು ಬಾಳಪ್ಪರು ಅತಿಯಾಗಿ ಪ್ರೀತಿಸುತ್ತಿದ್ದರೂ ಜಾರ್ಜ್ರ ಬಿ.ಜೆ.ಪಿ.ಯೊಂದಿಗಿನ ಮೈತ್ರಿ ಯನ್ನು ಅವರು ಕಟುವಾಗಿ ಟೀಕಿಸುತ್ತಿ ದ್ದರು. ‘‘ಜಾರ್ಜ್ ಈ ಆರೆಸ್ಸೆಸ್ಗ ಳೊಂದಿಗೆ ಕೈ ಜೋಡಿಸಿ ಅವನನ್ನು ಇಷ್ಟು ಕಾಲ ಪೊರೆದ ಸಮಾಜವಾದಿ ಸಿದ್ಧಾಂತಕ್ಕೆ ಎಳ್ಳು ನೀರು ಬಿಟ್ಟನಲ್ಲಾ’’ ಎಂದು ಬಾಳಪ್ಪವಿಷಾದ ವ್ಯಕ್ತಪಡಿಸುತ್ತಿದ್ದರು. ಜಾರ್ಜ್ ಕೇಂದ್ರದ ರಕ್ಷಣಾ ಸಚಿವರಾಗಿದ್ದಾಗ ತನ್ನ ಗುರುವಿಗೆ ಉನ್ನತ ಸ್ಥಾನ ಮಾನಗಳ ಆಮಿಷವೊಡ್ಡಿದ್ದರು. ಆದರೆ ತನ್ನ ಶಿಷ್ಯ ಸಂಘ ದೋಷದಿಂದ ಪಡೆದ ಅಧಿಕಾರದ ಗದ್ದುಗೆಯಲ್ಲಿ ಕೂತು ಅರ್ಪಿ ಸಲು ಮುಂದೆ ಬಂದ ‘ಗುರುದಕ್ಷಿಣೆ’ಯನ್ನು ಬಾಳಪ್ಪ ಯಾವ ಮುಲಾಜು ಇಲ್ಲದೇ ತಿರಸ್ಕರಿಸಿದ್ದರು. ಜಾರ್ಜ್ ಪೆರ್ನಾಂಡಿಸ್ರ ಕೊನೆಗಾಲದ ಸಾರ್ವಜನಿಕ ಬದುಕಿನಲ್ಲಿ ಅವರು ಮತ್ತು ಬಾಳಪ್ಪನಡುವಿನ ಸಾಮ್ಯತೆ ಕಾಣುತ್ತಿದ್ದುದು ಇಸ್ತ್ರಿ ಹಾಕದ ಜುಬ್ಬಾ, ಪೈಜಾಮ ಮತ್ತು ಸವೆದ ಚಪ್ಪಲಿಗಳಲ್ಲಿ ಮಾತ್ರ. ಸಮಾಜವಾದದೊಂದಿಗಿನ ಬಿಡಲಾಗದ ನಂಟಿನಿಂದಾಗಿ, ಸಮಾಜವಾದದ ನೂರು ತುಂಡುಗಳಲ್ಲೊಂದಾದ ಜಾತ್ಯತೀತ ಜನತಾದಳದಲ್ಲಿ ತನ್ನ ಆರೋಗ್ಯದ ದಿನಗಳಲ್ಲಿ ಬಾಳಪ್ಪ ಗುರುತಿಸಿದ್ದರು.
ಜನತಾದಳದ ಭೀಷ್ಮ ಪಿತಾಮಹ ಪ್ರತೀ ಚುನಾವಣೆಗಳ ಸಂದಭರ್ಗಳಲ್ಲಿ ಮಂಗಳೂರಿಗೆ ಬಂದಾಗೆಲ್ಲಾ ಬಾಳಪ್ಪರನ್ನು ಎಂ.ಎಲ್.ಸಿ. ಮಾಡುವ ಕುರಿತಂತೆ ಮಾತನಾಡುತ್ತಿದ್ದರು. ಬಡ ನಿಷ್ಠಾವಂತ ಸಮಾಜ ವಾದಿಗೆ ಎಂ.ಎಲ್.ಸಿ. ಸ್ಥಾನ ಕೊಟ್ಟರೆ ಅದರಿಂದ ಯಾವ ರಾಜಕೀಯ ಲಾವೂ ಸಿಗಲಾರದು ಎಂಬ ವಾಸ್ತವವನ್ನು ಅರಿತ ಚಾಣಕ್ಯ ರಾಜಕಾರಣಿಯಲ್ಲವೇ ದೇವೇಗೌಡರು? ಡಾ ಅಮ್ಮೆಂಬಳ ಬಾಳಪ್ಪರಿಗೆ ಅವರ ಅಭಿಮಾನಿಗಳು ಸಮರ್ಪಿಸಿದ ಅಭಿನಂದನಾ ಗ್ರಂಥಕ್ಕೆ ಬರೆದ ಲೇಖನವೊಂದರಲ್ಲಿ ದಿವಂಗತ ಕಾಮ್ರೇಡ್ ಬೇವಿಂಜೆ ವಿಷ್ಣು ಕಕ್ಕಿಲ್ಲಾಯರು ಬಾಳಪ್ಪರ ನಿರ್ಮೋಹೀ ಮನಸ್ಸಿನ ಕುರಿತಂತೆ, ತತ್ವನಿಷ್ಠ ಬದುಕಿನ ಕುರಿತಂತೆ ಹೀಗೆ ಬರೆದಿದ್ದಾರೆ. ‘‘ಲಾಲ್ಕೃಷ್ಣ ಅಡ್ವಾಣಿಯವರು ಕೇಂದ್ರ ಸರಕಾರದಲ್ಲಿ ಮಂತ್ರಿಯಾಗಿದ್ದಾಗೊಮ್ಮೆ ಮಂಗಳೂರಿಗೆ ಬರುವ ಕಾರ್ಯಕ್ರಮವಿತ್ತು. ಅದರಲ್ಲಿ ಅವರು ಜಿಲ್ಲೆಯ ಸ್ವಾತಂತ್ರ್ಯ ಹೋರಾಟಗಾರರನ್ನು ಸಮ್ಮಾನಿಸಿ ಗೌರವಿಸುವ ಯೋಜನೆ ಹಾಕಿ ಉಭಯ ಜಿಲ್ಲೆಯ ಎಲ್ಲಾ ಸ್ವಾತಂತ್ರ್ಯ ಹೋರಾಟಗಾರರಿಗೆ ಆಹ್ವಾನ ನೀಡಿದ್ದರು. ಅಂದು ಅಡ್ವಾಣಿಯವರ ಕೈಯಿಂದ ಸನ್ಮಾನ ಸ್ವೀಕರಿಸದವರು ನಾನು ಮತ್ತು ಬಾಳಪ್ಪರು ಮಾತ್ರ. ಹೋರಾಟದ ಕಾಲದಲ್ಲಿ ನಮ್ಮಾಂದಿಗೆ ಇರದಿದ್ದವ್ದರು ಅಧಿಕಾರದ ಗದ್ದುಗೆ ಏರಿದ ಕೂಡಲೇ ನಮ್ಮಂಥವರ ಗೌರವಕ್ಕೆ ಪಾತ್ರರಾಗು ತ್ತಾರೆಂಬ ಕಲ್ಪನೆ ನಮಗೆ ಒಪ್ಪಿಗೆಯಾಗಲಿಲ್ಲ, ನಾವು ನಮ್ಮ ಜನರ ನಡುವೆ ನಮ್ಮ ಸ್ವತಂತ್ರ ಆಲೋಚನೆಗಳು, ನಮ್ಮದೇ ಆದಂತಹ ಕನಸುಗಳು, ಕಾರ್ಮಿಕರ ಮತ್ತು ರೈತರ ಹಿತಾಸಕ್ತಿ ಗಳಲ್ಲಿ ದೃಢವಾದ ನಿಷ್ಠೆ ಮುಂತಾದವುಗಳನ್ನು ಹೊಂದಿಕೊಂಡು ಕೊನೆಯುಸಿರಿನವರೆಗೆ ರಾಜಿರಹಿತವಾಗಿ ಬದುಕಲು ಉದ್ದೇಶಿದ್ದೆವು’’.
ಬಾಳಪ್ಪ ಅಪ್ಪಟ ದೇಶಭಕ್ತರಾಗಿದ್ದರೂ ಅವರು ಈಗಿನ ಸ್ವಘೋಷಿತ ದೇಶಭಕ್ತರಂತೆ ಭಾರತ ಎಂಬ ಬೌಗೋಳಿಕ ಪ್ರದೇಶವನ್ನು ಪ್ರೀತಿಸುವುದಕ್ಕೆ ತಮ್ಮ ದೇಶಪ್ರೇಮವನ್ನು ಸೀಮಿತಗೊಳಿಸಿದವರಲ್ಲ. ಸ್ವತಃ ಅವರೇ ಒಮ್ಮೆ ಹೀಗೆಂದಿದ್ದರು ‘‘ಈ ಬಲಪಂಥೀಯರ ದೇಶ ಪ್ರೇಮವು ಆಸ್ತಿಯ ಮೇಲಿನ ಮೋಹದಂತಿದೆ’’. ಸ್ವಾತಂತ್ರ್ಯ ಪೂರ್ವದಲ್ಲಿ ಹುಸಿ ದೇಶಭಕ್ತರ ಆರೆಸ್ಸೆಸ್ಸಿಗೆ ಪರ್ಯಾಯವಾಗಿ ಒಂದೊಮ್ಮೆ ಅಸ್ತಿತ್ವದಲ್ಲಿದ್ದ ರಾಷ್ಟ್ರ ಸೇವಾ ದಳದ ಜಿಲ್ಲೆಯ ಮುಂಚೂಣೆಯ ನಾಯಕರಾಗಿ ಬಾಳಪ್ಪ ಕರ್ತವ್ಯ ನಿರ್ವಹಿಸಿದ್ದರು. ಆರೆಸ್ಸೆಸ್ಸಿನ ಖಾಕಿ ಚಡ್ಡಿಗೆ ಪರ್ಯಾಯವಾಗಿ ಖಾದಿ ನೀಲಿ ಚಡ್ಡಿ, ಬಿಳಿ ಅಂಗಿ ಮತ್ತು ಆರೆಸ್ಸೆಸ್ಸಿನ ಕರಿ ಟೋಪಿಗೆ ಬದಲಾಗಿ ಖಾದಿ ಟೋಪಿ ಧರಿಸಿ ರಾಷ್ಟ್ರ ಸೇವಾ ದಳದ ಕಾರ್ಯಕರ್ತರು ಕವಾಯತು ನಡೆಸುತ್ತಿದ್ದರು. ಅದಕ್ಕೆಲ್ಲಾ ನೇತೃತ್ವ ನೀಡುತ್ತಿದ್ದವರು ಬಾಳಪ್ಪನವರು. ಆರೆಸ್ಸೆಸ್ನ ಬೌದ್ಧಿಕ್ ಶಿಬಿರಗಳಲ್ಲಿ ಮೂಲಭೂತವಾದವನ್ನು ಬೋಧಿಸಲಾಗುತ್ತಿದ್ದರೆ ರಾಷ್ಟ್ರ ಸೇವಾದಳದ ಬುದ್ಧಿದಾನ ಶಿಬಿರಗಳಲ್ಲಿ ಸಹಬಾಳ್ವೆ ಮತ್ತು ಜನಸೇವೆಗಳನ್ನು ಬೋಧಿಸಲಾಗುತ್ತಿತ್ತು. ಆರೆಸ್ಸೆಸ್ಸಿನ ಶಿಬಿರಗಳಲ್ಲಿ ಭಗವಾಧ್ವಜಗಳು ಹಾರುತ್ತಿದ್ದರೆ ರಾಷ್ಟ್ರ ಸೇವಾ ದಳದ ಶಿಬಿರಗಳಲ್ಲಿ ತ್ರಿವರ್ಣ ಧ್ವಜ ಹಾರುತ್ತಿತ್ತು. ಆರೆಸ್ಸಿಸ್ಸಿನ ಶಿಬಿರಗಳಿಗೆ ‘ನಮಸ್ತೇ ಸದಾ ವತ್ಸಲೇ’ ಧ್ಯೇಯ ಗೀತೆಯಾಗಿದ್ದರೆ ರಾಷ್ಟ್ರ ಸೇವಾದಳ ಶಿಬಿರಗಳಿಗೆ ‘ಝಂಡಾ ಊಂಚಾ ರಹೇ ಹಮಾರ, ವಿಜಯೀ, ವಿಶ್ವ ತಿರಂಗಾ ಪ್ಯಾರಾ’ ಧ್ಯೇಯ ಗೀತೆಯಾಗಿತ್ತು. ರಾಷ್ಟ್ರ ಸೇವಾ ದಳದಲ್ಲಿ ಬಾಳಪ್ಪರು ಎಷ್ಟೊಂದು ಸಕ್ರಿಯರಾಗಿ ದುಡಿದಿದ್ದರೆಂದರೆ ಸೂರ್ಯೋದಯಕ್ಕೆ ಮುನ್ನವೇ ಧ್ವಜ ಕಂಬವನ್ನು ಹೆಗಲ ಮೇಲೆ ಎತ್ತಿಕೊಂಡು ಶಿಬಿರ ಕೇಂದ್ರಗಳಿಗೆ ಬಾಳಪ್ಪರು ತೆರಳುತ್ತಿದ್ದರು.
ತನ್ನ ಸಂಗಾತಿಗಳನ್ನು ಕರೆದುಕೊಂಡು ಹೋಗಿ ಹಳ್ಳಿ ಹಳ್ಳಿಗಳಲ್ಲಿ ನಿಯಮಿತವಾಗಿ ಶ್ರಮದಾನ ಕಾರ್ಯಕ್ರಮಗಳನ್ನು ನಡೆಸುತ್ತಿದ್ದರು. ಬಾಳಪ್ಪರು ಸ್ವಾತಂತ್ರ್ಯ ಹೋರಾಟದ ಕಣಕ್ಕೆ ಧುಮುಕಲು ಪ್ರೇರಣೆ ನೀಡಿದ ಘಟನೆ ವಿಶಿಷ್ಟವಾದುದು. ಅದನ್ನವರು ಯಾವುದೇ ರೀತಿಯಲ್ಲಿ ಆತ್ಮವಂಚನೆಯೆಸಗದೇ ಹೇಳುತ್ತಿ ದ್ದರು. ಕಡುಬಡ ರೈತ ಕುಟುಂಬದಲ್ಲಿ ಹುಟ್ಟಿ ಬೆಳೆದ ಬಾಳಪ್ಪರು ಮನೆಯ ಆರ್ಥಿಕ ಸಂಕಷ್ಟಗಳಿಂದಾಗಿ ನಾಲ್ಕನೇ ಇಯತ್ತೆಗೆ ಶಾಲೆ ತೊರೆಯಬೇಕಾಗಿ ಬಂತು. ಹಾಗೆ ಶಾಲೆ ತೊರೆದವರು ಮಂಗಳೂರಿನ ಹೋಟೆಲೊಂದರಲ್ಲಿ ಮಾಣಿ ಯಾಗಿ ಕೆಲಸಕ್ಕೆ ಸೇರಿದರು. ಅತೀವ ಜ್ಞಾನದಾಹಿಯಾಗಿದ್ದ ಬಾಳಪ್ಪರು ಹೋಟೆಲ್ ಮಾಣಿಯಾಗಿದ್ದೂ ಪತ್ರಿಕೆಗಳನ್ನು ಖರೀದಿಸಿ ಓದುತ್ತಿದ್ದರು. ಕರಾಚಿಯಲ್ಲಿ ನಡೆದ ಕಾಂಗ್ರೆಸ್ನ ಅಧಿವೇಶನವೊಂದರಲ್ಲಿ ಪಂಡಿತ್ ಜವಾಹರ್ ಲಾಲ್ ನೆಹರೂ ಒಂದು ಘೋಷಣೆ ಮಾಡಿದರು. ದೇಶಕ್ಕೆ ಸ್ವಾತಂತ್ರ್ಯ ದಕ್ಕಿದರೆ ಉಳುವ ಕೈಗಳಿಗೇ ಭೂಮಿಯ ಒಡೆತನ ನೀಡಲಾಗುವುದು. ಇದನ್ನು ಪತ್ರಿಕೆಯಲ್ಲಿ ಓದಿ ಬಾಳಪ್ಪ ಅತೀವ ಸಂತಸ ಗೊಂಡಿದ್ದರು. ಪ್ರತೀ ವಿಷು ಸಂಕ್ರಮಣಕ್ಕೆ ಭೂಮಾಲಕನಿಗೆ ಗೇಣಿ ನೀಡುವ ರೈತನು ಉನ್ನಲು ಒಂದು ತುತ್ತು ಅನ್ನವಿಲ್ಲದೇ ಪರದಾಡುವ ಅನೇಕ ಸಂದಭರ್ಗಳನ್ನು ಬಾಳಪ್ಪಎಳವೆಯಲ್ಲೇ ಕಂಡಿದ್ದರು. ಬಾಳಪ್ಪರು ಸ್ವತಃ ಹುಟ್ಟಿ ಬೆಳೆದದ್ದು ಅಂತಹದ್ದೇ ಕುಟುಂಬವೊಂದರಲ್ಲಾಗಿತ್ತು. ಸ್ವಾತಂತ್ರ್ಯ ಬಂದರೆ ನಮ್ಮಂತವರಿಗೆ ಒಳ್ಳೆಯದಾಗುತ್ತದೆ ಎಂದು ಬಾಳಪ್ಪಸ್ವಾತಂತ್ರ್ಯ ಸಂಗ್ರಾಮದ ಕಣಕ್ಕೆ ದುಮುಕಿ ಭೂಗತ ಹೋರಾಟಗಳಲ್ಲಿ ಸಕ್ರಿಯರಾದರು. 1942ರ ಆಗಸ್ಟ್ನಲ್ಲಿ ಕ್ವಿಟ್ ಇಂಡಿಯಾ ಚಳವಳಿಯು ಮುಂಬೈನಲ್ಲಿ ತೀವ್ರಗೊಂಡಿತು. ಗಾಂಧೀಜಿ ಮತ್ತಿತರ ರಾಷ್ಟ್ರ ನಾಯಕರ ಬಂಧನದ ಸುದ್ದಿ ಕಾಳ್ಗಿಚ್ಚಿನಂತೆ ಹರಡಿ ದೇಶದಾದ್ಯಂತ ಹೋರಾಟಗಾರರು ಆಕ್ರೋಶಗೊಂಡು ಬೀದಿಗಿಳಿದರು.
1942ರ ಸೆಪ್ಟೆಂಬರ್ 9ರಂದು ಮಂಗಳೂರಿನ ಹೋರಾಟಗಾರರು ಎಂ.ಡಿ. ಅಧಿಕಾರಿಯವರ ನೇತೃತ್ವದಲ್ಲಿ ಬೀದಿಗಿಳಿದರು. ಮಂಗಳೂರು ಕೋರ್ಟ್ ಬಳಿ ಕೋರ್ಟ್ ಪಿಕೆಟಿಂಗ್ ನಡೆಸುತ್ತಿದ್ದ 50 ಮಂದಿಯನ್ನು ಪೊಲೀಸರು ಬಂಧಿಸಿದರು. ಎಂ.ಡಿ. ಅಧಿಕಾರಿಯವರ ನೇತೃತ್ವದಲ್ಲಿ ಸುಮಾರು 5,000 ಜನ ಸೆಂಟ್ರಲ್ ಮೈದಾನದಲ್ಲಿ (ನೆಹರೂ ಮೈದಾನ) ಸೇರಿ ಸಾರ್ವಜನಿಕ ಸಭೆೆ ನಡೆಸಿದರು. ಎಂ.ಡಿ. ಅಧಿಕಾರಿಯವರು ಭಾಷಣ ಮಾಡುತ್ತಿದ್ದಾಗ ವೇದಿಕೆಯೇರಿದ ಪೋಲೀಸರು ಲಾಠಿ ಪ್ರಹಾರ ನಡೆಸಿದರು. ಅಧಿಕಾರಿಯವರ ತಲೆ ಒಡೆದು ರಕ್ತ ಸುರಿಯ ತೊಡಗಿದ್ದರಿಂದ ಕಾರ್ಯಕರ್ತರು ಮತ್ತಷ್ಟು ಆಕ್ರೋಶಿತಗೊಂಡು ತೀವ್ರ ಪ್ರತಿರೋಧ ತೋರಿದರು. ಪೈಲ್ವಾನ್ ಲೋಕಯ್ಯ ಶೆಟ್ಟರು ಅಧಿಕಾರಿಯವರನ್ನು ಹೆಗಲ ಮೇಲೆ ಹೊತ್ತುಕೊಂಡೇ ಕಾರ್ಸ್ಟ್ರೀಟ್ನಲ್ಲಿದ್ದ ಉಳ್ಳಾಲ ಶ್ರೀನಿವಾಸ ಮಲ್ಯರ ಸಹೋದರ ಡಾ ಯು.ಪಿ. ಮಲ್ಯರ ರಾಮಕೃಷ್ಣ ಆಸ್ಪತ್ರೆಗೆ ಕೊಂಡೊಯ್ದರು. ಆಗ ಬಾಳಪ್ಪ ಸಹಿತ ಅನೇಕರ ಬಂಧನವಾಯಿತು. ಒಂದು ತಿಂಗಳ ಕಾಲ ಜೈಲಿನಲ್ಲಿದ್ದು ಬಿಡುಗಡೆಗೊಂಡರು. ಜೈಲುವಾಸ ಬಾಳಪ್ಪರಲ್ಲಿ ಹೋರಾಟದ ಕೆಚ್ಚನ್ನು ಇಮ್ಮಡಿಗೊಳಿಸಿತು. ಬ್ರಿಟಿಷರ ವಿರುದ್ಧ ಅಲ್ಲಲ್ಲಿ ಯುವಕರನ್ನು ಸೇರಿಸಿ ಘೋಷಣೆ ಕೂಗುವುದು, ಪೊಲೀಸರ ಲಾಠಿ ಏಟು ತಿನ್ನುವುದು ಮಾಮೂಲಿಯಾಗಿಬಿಟ್ಟಿತು. ಆ ಬಳಿಕ 1942ರ ಡಿಸೆಂಬರ್ 4ರ ಮಂಗಳೂರು ಕೋರ್ಟಿಗೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ಬಾಳಪ್ಪ, ಲೋಕಯ್ಯ ಶೆಟ್ಟಿ ರೂವಾರಿಗಳೆಂದು ಸುದ್ದಿ ಹರಡಿತು. ಡಿಸೆಂಬರ್ 6ರಂದು ಕೊಡಿಯಾಲ್ಬೈಲ್ ಬಳಿ ಸೈಕಲ್ನಲ್ಲಿ ಹೋಗುತ್ತಿದ್ದ ಬಾಳಪ್ಪರನ್ನು ಪೋಲೀಸರು ಬಂಧಿಸಿದರು. ಪೋಲೀಸರು ಅವರನ್ನು ಕ್ರೂರವಾಗಿ ಹಿಂಸಿಸಿದರು. ಈ ಬಾರಿ ಗುರುತರವಾದ ಆಪಾದನೆಗಳೊಂದಿಗೆ ಬಾಳಪ್ಪರು ತಮಿಳುನಾಡಿನ ವೆಲ್ಲೂರು ಜೈಲು ಸೇರಿದರು. ಆಗ ಬಾಳಪ್ಪರಿಗೆ 20ರ ನವತಾರುಣ್ಯ. ಅಂದು ಜೈಲು ಸೇರಿದವರು ಮತ್ತೆ ಬಿಡುಗಡೆಗೊಂಡಿದ್ದು 1944ರ ಫೆಬ್ರವರಿ ತಿಂಗಳಲ್ಲಾಗಿತ್ತು. ಜೈಲಿನ ಬದುಕು ಬಾಳಪ್ಪರ ಬದುಕನ್ನೇ ಬದಲಿಸಿತು. ಜೈಲಿನಲ್ಲಿ ಬಾಳಪ್ಪರು ಬಹಳಷ್ಟು ಸಮಾಜವಾದೀ ಸಾಹಿತ್ಯವನ್ನು ಅಭ್ಯಸಿಸಿದರು.
ಕಾರ್ಲ್ಮಾರ್ಕ್ಸ್ನ ಬರಹಗಳನ್ನು ಅಭ್ಯಸಿಸಿದರು. ಜೈಲಿನಲ್ಲಿ ಕುಳಿತು ಇಂಗ್ಲಿಷ್ ಮತ್ತು ಉರ್ದು ಭಾಷೆ ಕಲಿತರು. ಜೈಲಿನಿಂದ ಬಿಡುಗಡೆಯಗಿ ಬರುವಾಗ ಬಾಳಪ್ಪ ಸೈದ್ಧಾಂತಿಕವಾಗಿ ಬಲಿಷ್ಠಗೊಂಡಿದ್ದರು. ಜೈಲಿನಿಂದ ಬಿಡುಗಡೆಗೊಂಡು ಬಂದವರು ಮಂಗಳೂರು ಹಂಪನಕಟ್ಟೆಯಲ್ಲಿದ್ದ ಕೆನರಾ ಮೆಡಿಕಲ್ಸ್ನಲ್ಲಿ ಸೇಲ್ಸ್ಮ್ಯಾನ್ ಆಗಿ ಕೆಲಸಕ್ಕೆ ಸೇರಿದರು. ಹಗಲು ಹೊತ್ತು ಹೊಟ್ಟೆಪಾಡಿನ ಕೆಲಸ ರಾತ್ರಿ ಹೊತ್ತು ಭೂಗತ ಚಟುವಟಿಕೆಗಳು, ವಿಧ್ವಂಸಕ ಕೃತ್ಯಗಳು ಬಾಳಪ್ಪರ ಬದುಕಿನ ದಿನಚರಿಯಾಯಿತು. ಅನೇಕ ವರ್ಷಗಳ ಕಾಲ ಔಷಧಾಲಯ, ಆಯುರ್ವೇದಿಕ್ ಕ್ಲಿನಿಕ್, ಫಾರ್ಮಸಿಗಳಲ್ಲಿ ದುಡಿದ ಬಾಳಪ್ಪರು ಆ ಕಾಲದಲ್ಲಿ ಅನುಭವದ ಆಧಾರದಲ್ಲಿ ವೈದ್ಯ ವೃತ್ತಿ ನಿರ್ವಹಿಸಲು ಪಡೆಯುತ್ತಿದ್ದ “Registered Medical Practitioner’ ಲೈಸೆನ್ಸನ್ನು 1968ರಲ್ಲಿ ಪಡೆದು ಡಾ. ಅಮ್ಮೆಂಬಳ ಬಾಳಪ್ಪರಾದರು. ಮಹಾತ್ಮ ಗಾಂಧಿ, ರಾಜಗೋಪಾಲಾಚಾರಿ ದೇಶದಾ ದ್ಯಂತ ಹಿಂದಿ ಭಾಷಾ ಚಳವಳಿಯನ್ನು ಹುಟ್ಟು ಹಾಕಿದ್ದರು. ಆಗಲೇ ದಕ್ಷಿಣ ಭಾರತದ ಹಿಂದಿ ಪ್ರಚಾರ ಸಬಾ ಹುಟ್ಟಿಕೊಂಡಿತ್ತು. ಅದರಿಂದ ಪ್ರಭಾವಿತರಾದ ಎಂ.ಡಿ. ಅಧಿಕಾರಿ ಗಳು ತಮ್ಮ ಹುಟ್ಟೂರು ಕಾರ್ಕಳದ ಹೆಬ್ರಿ ಬಳಿಯ ಮುದ್ರಾಡಿಯಲ್ಲಿ ಕಸ್ತೂರ್ಬಾ ಗಾಂಧಿ ಸ್ಮಾರಕ ಪ್ರಾಥಮಿಕ ಶಾಲೆ ಪ್ರಾರಂಭಿಸಿದ್ದರು. ಹಿಂದಿ ಬಾಷೆಯ ಮೇಲೆ ಒಳ್ಳೆಯ ಪ್ರಭುತ್ವವಿದ್ದ ತಮ್ಮ ಒಡನಾಡಿ ಬಾಳಪ್ಪರನ್ನು ಅಧಿಕಾರಿಯವರು ತಮ್ಮ ಶಾಲೆಗೆ ಹಿಂದಿ ಅಧ್ಯಾಪಕರಾಗಿ ಬರುವಂತೆ ಒತ್ತಾಯಿಸಿದ್ದ ಪರಿಣಾಮ ಕೆಲಕಾಲ ಬಾಳಪ್ಪರು ಅಧ್ಯಾಪಕರಾಗಿಯೂ ವೃತ್ತಿ ನಿರ್ವಹಿಸಿದ್ದರು. ಮುದ್ರಾಡಿಯಲ್ಲಿ ತಮ್ಮ ವಿದ್ಯಾರ್ಥಿ ಗಳಿಗೆ ಮಾತ್ರವಲ್ಲದೇ ಸಾರ್ವಜನಿಕರಿಗೂ ಜಾತಿ ಪದ್ಧತಿ, ಅಸ್ಪೃಶ್ಯತೆ, ಕೋಮುವಾದ, ಆರ್ಥಿಕ ಅಸಮಾನತೆ ಮುಂತಾದವುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಬಾಳಪ್ಪರು ಮಾಡಿದ್ದರು. ಬಾಳಪ್ಪರು ತಮ್ಮ ಸಮಾಜವಾದಿ ಸಿದ್ಧಾಂತದ ಪ್ರಚಾರ, ಚಳವಳಿಯ ಕುರಿತಂತೆ ಜನರಲ್ಲಿ ಜಾಗೃತಿ, ರೈತರ ಕಾರ್ಮಿಕರ ನೋವುಗಳಿಗೆ ಧ್ವನಿ ನೀಡುವ ಸಲುವಾಗಿ ಕೆಲಕಾಲ ‘ಮಿತ್ರ’ ಎಂಬ ಕನ್ನಡ ವಾರಪತ್ರಿಕೆಯನ್ನು ನಡೆಸಿದ್ದರು. ತುಳುವಪ್ಪೆಮಗೆ (ತುಳುವಮ್ಮನ ಮಗ) ಬಾಳಪ್ಪತುಳು ಭಾಷೆಯ ಬಗ್ಗೆ ವಿಶೇಷ ಮಮಕಾರವನ್ನು ಹೊಂದಿದ್ದರು. 70ರ ದಶಕದಲ್ಲಿ ಆ ಕಾಲಕ್ಕೆ ಒಂದು ಹೊಸ ಪರಿಕಲ್ಪನೆಯಾದ ತುಳು ಮಾಸಿಕ ‘ತುಳು ಸಿರಿ’ಯನ್ನು ಸ್ಥಾಪಿಸಿದ್ದರು. ಹಿಂದುಳಿದ ವರ್ಗಗಳ ಏಳಿಗೆಯ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಬಾಳಪ್ಪರು ಮಂಡಲ್ ಆಯೋಗದ ವರದಿಯನ್ನು ಜಾರಿಗೆ ತರುವಂತೆ ಒತ್ತಾಯಿಸಿ ಧ್ವನಿಯೆತ್ತಿದ ಮಂಗಳೂರಿನ ಮೊದಲಿಗರಲ್ಲಿ ಒಬ್ಬರಾಗಿದ್ದರು. ರಾಮಕೃಷ್ಣ ಹೆಗಡೆ ಸರಕಾರ ವೆಂಕಟಸ್ವಾಮಿಯವರ ನೇತೃತ್ವದಲ್ಲಿ ಸ್ಥಾಪಿಸಿದ್ದ ಹಿಂದುಳಿದ ವರ್ಗಗಳ ಆಯೋಗದ ಸದಸ್ಯರಾಗಿ ದಣಿವರಿಯದೆ ಬಾಳಪ್ಪ ದುಡಿದಿದ್ದರು. ಅದಕ್ಕಾಗಿ ರಾಜ್ಯದಾದ್ಯಂತ ಸಂಚರಿಸಿ ಹಿಂದುಳಿದ ವರ್ಗಗಳ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸ್ಥಿತಿಗಳನ್ನು ಅಭ್ಯಸಿಸಿ ದ್ದರು. 1983ರಿಂದ ಪ್ರಾರಂಭಿಸಿ 1986ರವರೆಗೆ ವೆಂಕಟಸ್ವಾಮಿ ಆಯೋಗವು ಮೂರು ಸಂಪುಟಗಳ 1022 ಪುಟಗಳ ವರದಿಯನ್ನು ಸರಕಾರಕ್ಕೆ ಸಲ್ಲಿಸಿತ್ತು. ಸದ್ರಿ ವರದಿ ತಯಾರಿಕೆಯಲ್ಲಿ ಬಾಳಪ್ಪರ ಪಾತ್ರ ಅನನ್ಯವಾಗಿತ್ತು. ಈಗಾಗಲೇ ಉಲ್ಲೇಖಿಸಿದಂತೆ ಬಾಳಪ್ಪರು ಸ್ವಾತಂತ್ರ್ಯ ಸಂಗ್ರಾಮದ ಕಣಕ್ಕೆ ದುಮುಕಲು ಮುಖ್ಯ ಪ್ರೇರಣೆ ಉಳುವ ಕೈಗಳಿಗೆ ಭೂಮಿಯ ಒಡೆತನ ನೀಡುವ ನೆಹರೂರವರ ದೂರಗಾಮಿ ಯೋಚನೆ. ‘ಉಳುವವನೇ ಹೊಲದೊಡೆಯ’ ಕಾನೂನು ಸ್ವಾತಂತ್ರ್ಯ ಪ್ರಾಪ್ತಿಯಾಗಿ ಎರಡು ದಶಕಗಳ ಬಳಿಕವೇ ಜಾರಿಗೆ ಬಂತು. ಆಗ ಅತ್ಯಂತ ಆನಂದ ತುಂದಿಲರಾದ ಬಾಳಪ್ಪರು ಹಳ್ಳಿ ಹಳ್ಳಿಗಳಿಗೆ ತೆರಳಿ ಗೇಣಿದಾರ ರೈತರನ್ನು ಬಡಿದೆಬ್ಬಿಸಿ ಡಿಕ್ಲರೇಶನ್ಗೆ ಅರ್ಜಿ ಕೊಡುವಂತೆ ಪ್ರಚೋದಿಸಿದ್ದರು. ಇದರಿಂದಾಗಿ ಅವರು ಅನೇಕ ಶ್ರೀಮಂತ ಭೂಮಾಲಕರ ವಿರೋಧ ಕಟ್ಟಿಕೊಳ್ಳಬೇಕಾಗಿ ಬಂದಿತ್ತು. ಬಂಟ್ವಾಳ ತಾಲೂಕು ಭೂ ನ್ಯಾಯ ಮಂಡಳಿಯ ಸದಸ್ಯನಾಗಿ ಬಾಳಪ್ಪರು ಮಾಡಿದ ಕೆಲಸ ಅನುಪಮವಾದುದು. ಮಧ್ಯ ರಾತ್ರಿಯವರೆಗೆ ಪಂಚಾಯತ್ ಕಛೇರಿಗಳಲ್ಲಿ, ಮನೆಯಲ್ಲಿ ಕೂತು ಬಾಳಪ್ಪರು ಗೇಣಿದಾರ ರೈತರ ಅರ್ಜಿಯನ್ನು ಬರೆದು ಕೊಡುತ್ತಿದ್ದರು. ಅನೇಕ ದಲಿತ ಗೇಣಿದಾರರನ್ನು ಸ್ವತಃ ಮನೆಗೆ ಕರೆಸಿ ಅವರಿಗೆ ಅರ್ಜಿ ಬರೆದು ಕೊಡುವಂತಹ ಕೆಲಸವನ್ನು ಸ್ವಇಚ್ಚೆಯಿಂದ ಬಾಳಪ್ಪರು ಮಾಡುತ್ತಿದ್ದರು. ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭೂ ಒಕ್ಕಲುದಾರರು ಮತ್ತು ಭೂಮಾಲಕರ ನಡುವೆ ಆಗಾಗ ಘರ್ಷಣೆ ನಡೆಯುತ್ತಿತ್ತು. ಕಮ್ಯೂನಿಸ್ಟರು ಮತ್ತು ಸಮಾಜವಾದಿಗಳು ಗೇಣಿದಾರ ರೈತರ ಪರವಾಗಿ ಹೋರಾಟ ನಡೆಸುತ್ತಿದ್ದರು. ಆ ಸಂದರ್ಭದಲ್ಲಿ ಕಮ್ಯೂನಿಸ್ಟ್ ಮತ್ತು ಸಮಾಜವಾದಿ ಹೋರಾಟಗಾರರನ್ನು ಹತ್ತಿಕ್ಕಲು ಭೂಮಾಲಕರು ಗೂಂಡಾಗಳನ್ನು ಸಾಕುತ್ತಿದ್ದರು. ಮಂಗಳೂರು ತಾಲೂಕಿನ ನೀರುಮಾರ್ಗದಲ್ಲಿ ಭೂಮಾಲಕರು ಮತ್ತು ಗೇಣಿದಾರರ ಮಧ್ಯೆ ಆಗಾಗ ಸಂಘರ್ಷ ನಡೆಯುತ್ತಿತ್ತು. ಭೂಮಾಲಕರ ದಬ್ಬಾಳಿಕೆಯ ವಿರುದ್ಧ ಹೋರಾಡಲು ಭೂರಹಿತ ರೈತರು ಸಂಘಟಿತರಾಗಬೇಕೆಂದು ಬಾಳಪ್ಪರು ಆಗಾಗ ಕರೆ ಕೊಡುತ್ತಿದ್ದರು. ಒಮ್ಮೆ ಭೂರಹಿತರ ರೈತರ ಸಭೆಯಲ್ಲಿ ಬಾಳಪ್ಪರು ಭಾಷಣ ಮಾಡುತ್ತಿದ್ದಾಗ ಭೂಮಾಲಕರಿಂದ ನಿಯೋಜಿತರಾದ ಗೂಂಡಾಗಳು ಬಾಳಪ್ಪರ ಮೇಲೆರಗಿ ತೀವ್ರ ಹಲ್ಲೆ ಮಾಡಿದರು. ಆಗ ಬಾಳಪ್ಪರ ತಲೆಗೆ ಏಟು ಬಿದ್ದು ರಕ್ತಸ್ರಾವವಾಗುತ್ತಿತ್ತು. ಬಾಳಪ್ಪರ ಆಪ್ತ ಸಂಗಾತಿ ಐತಪ್ಪ ಸಾಲ್ಯಾನ್ ಮತ್ತಿತರರು ಗೂಂಡಾಗಳ ಕೈಯಿಂದ ಬಾಳಪ್ಪರನ್ನು ರಕ್ಷಿಸಿದರು. ಐತಪ್ಪ ಸಾಲ್ಯಾನ್ ಬಾಳಪ್ಪರ ತಲೆಗೆ ಹೊಡೆದ ಗೂಂಡಾನೊಂದಿಗೆ ಹೊಡೆದಾಡಿ ಆತನ ಕೈಯ ಹೆಬ್ಬೆರಳನ್ನು ಮುರಿದು ಹಾಕಿದರು. ವಿಷಯ ತಿಳಿದ ಬಾಳಪ್ಪರ ಅನುಯಾಯಿಗಳಾಗಿದ್ದ ಬೋಳೂರಿನ ಮೊಗವೀರ ಯುವಕರು ಆಕ್ರೋಶಿತರಾಗಿ ಮರುದಿನ ನೀರು ಮಾರ್ಗಕ್ಕೆ ತೆರಳಲು ಲಾರಿಯೊಂದನ್ನು ಗೊತ್ತುಪಡಿಸಿದರು. ಅಹಿಂಸಾವಾದಿ ಬಾಳಪ್ಪರಿಗೆ ವಿಷಯ ತಿಳಿಯಿತು. ಬಾಳಪ್ಪರು ಯುವಕರು ಹಿಂಸಾಚಾರಕ್ಕಿಳಿಯದಂತೆ ತಡೆದರು. ಆದರೆ ಐತಪ್ಪ ಸಾಲ್ಯಾನ್ ಬಾಳಪ್ಪರಿಗೆ ತಿಳಿಯದಂತೆ ಗುಂಪು ಕಟ್ಟಿ ಹೋಗಿ ಪ್ರತೀಕಾರ ತೀರಿಸಿಯೇ ಬಿಟ್ಟರು, ಮಂಗಳೂರಿನಲ್ಲಿ ಹೋಟೆಲ್ ನೌಕರರ ಪರ ಹೋರಾಟಗಳಲ್ಲಿ ಬಾಗಿಯಾದಾಗಲು ಬಾಳಪ್ಪರ ಮೇಲೆ ಮಾಲಕರ ಪರ ಗೂಂಡಾಗಳು ಹಲ್ಲೆ ಮಾಡಿದ್ದರು. ಕಾರ್ಮಿಕರ ಮೇಲಿನ ಶೋಷಣೆಯನ್ನು ಎಂದೆಂದೂ ಸಹಿಸದ ಬಾಳಪ್ಪ ಶ್ರೀಮಂತರ ಗೂಂಡಾಗಳಿಂದ ಅನೇಕ ಬಾರಿ ಹಲ್ಲೆಗೊಳಗಾದರೂ ಕಾರ್ಮಿಕರ ಪರ ತನ್ನ ಬದ್ಧತೆಯಿಂದ ಇಳಿ ವಯಸ್ಸಿನಲ್ಲೂ ಹಿಂಜರಿಯಲಿಲ್ಲ. ಇಂತಹ ಅಪೂರ್ವ ಸಮಾಜವಾದಿ ಹೋರಾಟಗಾರನಿಗೆ ನಿಜವಾಗಿಯೂ ಸಲ್ಲಬೇಕಾದ ಶ್ರದ್ಧಾಂಜಲಿ ಸಲ್ಲಲೇ ಇಲ್ಲ. ಜನಪರ ಹೋರಾಟಕ್ಕಾಗಿಯೇ ತನ್ನ ಬದುಕನ್ನು ಮುಡಿಪಾಗಿಟ್ಟಿದ್ದ ಬಾಳಪ್ಪರಿಗೆ ಬಾಳಪ್ಪರೇ ಸರಿಸಾಟಿ. ಕೋಮು ಗಲಭೆಯ ನೆತ್ತರಿನಿಂದ ತೋಯ್ದು ಹೋಗಿರುವ ತುಳುವಪ್ಪೆಯ ಒಡಲಿನಿಂದ ಇನ್ನೋರ್ವ ಬಾಳಪ್ಪಜನ್ಮ ತಾಳಲಾರರು. ಉಸಿರಾಟದ ತೊಂದರೆ ಮತ್ತು ನಿಶ್ಶಕ್ತಿಯಿಂದ ಬಳಲಿ ತೀವ್ರ ಅನಾರೋಗ್ಯಕ್ಕೆ ಒಳಗಾಗಿದ್ದ ಬಾಳಪ್ಪ ಅವರು ೯೪ ವರ್ಷ ವಯಸ್ಸಿನಲ್ಲಿ ೨೦೧೪ ರ ಮೇ ೧೫ರಂದು ನಿಧನರಾದರು.