ಕುಲಾಲ್ ವರ್ಲ್ಡ್ ಡಾಟ್ ಕಾಮ್ :
ಮಾನವನ ದೇಹದ ರಚನೆಯು ಸುಮಾರು 23 ಜೋಡಿ ವರ್ಣತಂತುಗಳನ್ನು ಹೊಂದಿದೆ ಎಂದು ಸಂಶೋಧನೆಯಿಂದ ತಿಳಿದು ಬರುತ್ತದೆ. ಸುಲಭವಾಗಿ ವ್ಯಕ್ತಿಯ ಮೂಲವನ್ನು ಪತ್ತೆ ಹಚ್ಚಲು ಈ ಬರಿ ಪದ್ಧತಿಯನ್ನು ಅನಾದಿಕಾಲದಿಂದ ತರಲಾಯಿತು. ಪುರಾತನ ನಂಬಿಕೆಗಳ ಪ್ರಕಾರ, ವೇದ ಕಾಲದಲ್ಲಿ ಬರಿ ಅಥವಾ ಬಳಿ ಅಸ್ತಿತ್ವಕ್ಕೆ ಬಂದಿತು. ಈ ಬರಿ ಪದ್ಧತಿ ವ್ಯವಸ್ಥೆಯನ್ನು ರಕ್ತ ಸಂಬಂಧಿಗಳ ನಡುವಿನ ವಿವಾಹಗಳನ್ನು ತಪ್ಪಿಸಲು ಮತ್ತು ಆದ್ದರಿಂದ ಯಾವ ವಂಶಾವಳಿಯನ್ನು ಮದುವೆಯಾಗಬಹುದೆಂದು ನಿರ್ಧರಿಸಲು ಕಟ್ಟುನಿಟ್ಟಿನ ನಿಯಮಗಳನ್ನು ಸ್ಥಾಪಿಸಲಾಯಿತು.
ಲಭ್ಯವಿರುವ ಹಲವಾರು ವೈಜ್ಞಾನಿಕ ಸಂಶೋಧನೆಗಳ ಪ್ರಕಾರ, ರಕ್ತ ಸಂಬಂಧಿಗಳ ನಡುವಿನ ಮದುವೆಯು ಅನುವಂಶಿಕ ಅಸಾಮರಸ್ಯ ಮತ್ತು ಹೈಬ್ರಿಡ್ ಡಿಎನ್ಎ ಸಂಯೋಜನೆಯ ಕಾರಣದಿಂದ ಅಸಹಜ ಸಂತತಿಗೆ ಕಾರಣವಾಗಬಹುದು. ಜೆನೆಟಿಕ್ಸ್ ಆಧಾರಿತ ಮಾಹಿತಿ ಪ್ರಕಾರ ಒಂದೇ ಬಳಿ ಅಥವಾ ಬರಿಯ ಸಂಬಂಧ ಬೆಳೆಸುವುದು ತಪ್ಪು. ಇದರಿಂದ ಜೀನ್ಗಳ ನಿಕಟತೆಯಿಂದಾಗಿ ಆನುವಂಶಿಕ ವಿರೂಪಗಳು ಉಂಟಾಗಬಹುದು.
ವೈಜ್ಞಾನಿಕ ಸತ್ಯವನ್ನು ನಮ್ಮ ಯುವ ಜನಾಂಗಕ್ಕೆ ತಿಳಿಯಸದೆ ಇದ್ದರೆ ಯುವ ಮನಸುಗಳು ಪ್ರೀತಿ-ಪ್ರೇಮ-ಮದುವೆ ಅಂತ ದಾರಿ ತಪ್ಪಿ, ಮುಂದೆ ಜೀವನದಲ್ಲಿ ಸಾಕಿ ಸಲಹಿದ ಅಪ್ಪ, ಅಮ್ಮ ಹಾಗೂ ಹಿರಿಯರ ಭಾವನೆಗೆ ಘಾಸಿಯಾಗಿ ಅವರ ಮಕ್ಕಳು ಇದರಿಂದ ಜೆನೆಟಿಕ್ಸ್ ತೊಂದರೆಗೆ ಒಳಗಾಗಿ (100% ತೊಂದರೆಗೆ ಒಳಗಾಗುತ್ತಾರೆ ಅಂತ ಅಲ್ಲ. ಸೋದರ ಸಂಬಂಧಿಗಳ ನಡುವಿನ ಮದುವೆ, ಜನ್ಮದೋಷಗಳಿಂದ ಹುಟ್ಟುವ ಮಕ್ಕಳ ಅಪಾಯವನ್ನು ದುಪ್ಪಟ್ಟು ಮಾಡುತ್ತದೆ) ಸುಂದರ ಜೀವನವನ್ನು ಹಾಳು ಮಾಡದಿರಲು ನಾವು ತಿಳಿವಳಿಕೆ ನೀಡಬೇಕು. ಇದು ನನ್ನ ವೈಯಕ್ತಿಕ ಅಂಬೋಣ. ವೈಜ್ಞಾನಿಕವಾಗಿ ತಿಳಿದ ಪ್ರಕಾರ ರಕ್ತಸಂಬಂಧಿ ವಿವಾಹ ಜೆನೆಟಿಕ್ಸ್ ತೊಂದರೆಯನ್ನು ತರಬಹುದು.
ಆಕರ್ಷಣೆಯು ಒಂದು ಪ್ರಾಯದಲ್ಲಿ, ಒಂದು ಹಂತದಲ್ಲಿ ಗಂಡು-ಹೆಣ್ಣಿನ ನಡುವೆ ಪ್ರಕೃತಿ ಸಹಜವಾದದ್ದು. ಆದರೆ ಆ ಆಕರ್ಷಣೆ ಒಂದೇ ಬರಿ, ಅಂದರೆ ಒಂದೇ ಕುಟುಂಬಕ್ಕೆ ಸೇರಿದ ಗಂಡು ಹೆಣ್ಣುಗಳ ನಡುವೆ ಆಗಿ ಮದುವೆ ತನಕ ಹೋಗುವ ಹಂತದವರೆಗೆ ಹೋದರೆ ನಾವು ಹಿರಿಯರು ಅವರಿಗೆ ತಿಳಿವಳಿಕೆ ನೀಡಿ ಅಂತಹ ಅಸಂಬದ್ಧ ಸಂಬಂಧ ಬೆಳೆಸದ ಹಾಗೆ ತಿಳಿ ಹೇಳಬೇಕು. ನಾವು ಕೂಡ ನಮ್ಮ ಹಿರಿಯರು ಹಾಕಿಕೊಟ್ಟ ಜೀವನ ಮೌಲ್ಯ, ಸಾಮಾಜಿಕ ಸ್ಥಾನಮಾನ ಮರೆತು ಅಂತಹ ಮದುವೆಗೆ ಪ್ರೋತ್ಸಾಹ ಕೊಟ್ಟರೆ ಮುಂದೆ ಕುಲಾಲ ಭಾಂದವರು ಕೂಡ ಸಂಸ್ಕಾರಯುತ ಜೀವನ ನಡೆಸಲು ಕಷ್ಟ ಆಗಬಹುದು. ಇದರ ಅರ್ಥ ಹಿರಿಯರು ಹಾಕಿದ ಆಲದಮರಕ್ಕೆ ಸುತ್ತು ಬರೆಬೇಕು ಅಂತ ನನ್ನ ಅಭಿಪ್ರಾಯ ಅಲ್ಲ. ಹಿರಿಯರು ತಮಗೆ ವಿದ್ಯೆ ಇಲ್ಲದಿದ್ದರೂ, ವಿಜ್ಞಾನ ಬೆಳೆಯದ ಕಾಲದಲ್ಲಿ ಅವರದೇ ವಿಚಾರ ತರ್ಕಗಳಿಂದ ಜಾರಿಗೆ ತಂದ ಕೆಲವೊಂದು ವಿಚಾರಗಳನ್ನು ಪರಾಮರ್ಶಿಸಿ ನೋಡುವಾಗ ಅದರಲ್ಲಿನ ವೈಜ್ಞಾನಿಕ ಸತ್ಯ ನಮಗೆ ಗೋಚರವಾಗುತ್ತದೆ. ಅವರ ವಾದ ತಪ್ಪು ಅಂತ ಅಲ್ಲಗಳೆಯಲಾಗದು. ಒಂದೇ ಬರಿಯವರು ಆದರೆ, ನಮ್ಮ ಕುಟುಂಬಕ್ಕೆ ಸಂಬಂಧಪಡದವರು , ಒಂದೇ ದೈವ- ನಾಗ ಮೂಲದವರಲ್ಲದವರು ಮದುವೆಯಾದರೆ ಆಗುವ ಸಾಮಾಜಿಕ ಮತ್ತು ವೈಯಕ್ತಿಕ ಅಪಾಯಕ್ಕಿಂತ ಒಂದೇ ಬರಿಯವರು, ಒಂದೇ ಕುಟುಂಬಕ್ಕೆ ಸಂಬಂಧಪಟ್ಟವರು,ಒಂದೇ ದೈವ ನಾಗ ಮೂಲದವರು ಮದುವೆಯಾದರೆ ಸಾಮಾಜಿಕ ಹಾಗೂ ವೈಯಕ್ತಿಕ ಅಪಾಯ ಹೆಚ್ಚು ಎಂದು ನನ್ನ ಅನಿಸಿಕೆ.
ಒಂದೇ ಕುಟುಂಬದವರು ಮದುವೆಯಾಗಲು ನಾವು ಪ್ರೋತ್ಸಾಹ ನೀಡುವುದಕ್ಕಿಂತ ಈಗಾಗಲೇ ನಮ್ಮ ಕುಲಾಲ ಸಮಾಜದಲ್ಲಿ ಉಪ್ಪಿಯನ್ ಬರಿಯವರು ಅನುಭವಿಸುವ ನೋವು ಮತ್ತು ಆ ಬರಿ ಯವರ ಬಗ್ಗೆ ಇರುವಂತಹ ತಪ್ಪು ಕಲ್ಪನೆಯನ್ನು ತೊಡೆದು ಹಾಕಿ ಅವರಿಗೆ ಬಾಳು ನೀಡಲು ನಾವು ಕರೆ ನೀಡಬೇಕು. ಉಪ್ಪಿಯನ್ ಬರಿಯವರನ್ನು ವಿವಾಹ ಆದವರು ಯಾರು ಕೂಡ ಜೀವನದಲ್ಲಿ ಕಷ್ಟ ಮಾತ್ರ ಪಟ್ಟಿಲ್ಲ. ಸುಖ ಕೂಡ ಪಟ್ಟಿದ್ದಾರೆ. ಕಷ್ಟ ಸುಖಗಳು ಒಂದೇ ನಾಣ್ಯದ ಎರಡು ಮುಖಗಳು. ಇವು ಜೀವನದಲ್ಲಿ ಸಹಜ. ಬೇರೆ ಬರಿಯವರನ್ನು ಮದುವೆಯಾದವರು ಸುಖದ ಸುಪ್ಪತ್ತಿಗೆಯಲ್ಲಿ ತೇಲುತ್ತಿಲ್ಲ. ನಾವು ಯುವಕರಿಗೆ ಆ ಬಗ್ಗೆ ತಿಳಿವಳಿಕೆ ನೀಡುವುದು ಒಳಿತು. ಅದು ಬಿಟ್ಟು ಒಂದೇ ಬರಿಯ ವಿವಾಹ ಆಗಿ ಮುಂದೆ ಅಣ್ಣ-ತಮ್ಮ, ಮಾವ-ಸೊಸೆ ಸಂಬಂಧಕ್ಕೆ ಬೆಲೆ ಇಲ್ಲದಿದ್ದರೆ ನಮ್ಮ ಕುಲಾಲ ಬಂಧುಗಳು ಕೂಡ ಪಾಶ್ಚಾತ್ಯ ಸಂಸ್ಕೃತಿ ಗೆ ಮಾರು ಹೋಗೋ ಅಪಾಯ ಜಾಸ್ತಿ. ಅದಲ್ಲದೆ ಒಂದೇ ಬರಿ ಹೊಂದಿರುವವರನ್ನು ಒಡಹುಟ್ಟಿದವರು ಎಂದು ಪರಿಗಣಿಸಲಾಗುತ್ತದೆ. ವೈಜ್ಞಾನಿಕವಾಗಿ ತಿಳಿದ ಪ್ರಕಾರ ರಕ್ತಸಂಬಂಧಿ ವಿವಾಹ ಜೆನೆಟಿಕ್ಸ್ ತೊಂದರೆಯನ್ನು ಕೂಡ ತರಬಹುದು.
ಇಂದಿನ ಯುವಜನರು ಇಂತಹ ಸಹೋದರ ಸಂಬಂಧದ ಅಂದರೆ ಅಕ್ಕ-ತಂಗಿಯರ ಮಕ್ಕಳು, ಅಣ್ಣ-ತಮ್ಮಂದಿರ ಮಕ್ಕಳು,ದೈವ -ನಾಗ ಕುಟುಂಬದ ಒಂದು ಕಾಲದಲ್ಲಿ ಒಂದೇ ತಾಯಿಯ ಹೊಟ್ಟೆಯಲ್ಲಿ ಹುಟ್ಟಿದ ಮಕ್ಕಳ ಪೀಳಿಗೆಯವರು ಮದುವೆಯಾದರೆ ಮುಂದೆ ಸಾಮಾಜಿಕ ವ್ಯವಸ್ಥೆ ,ಕುಟುಂಬ ಶಿಷ್ಟಾಚಾರ ಹಾಗೂ ಸಂಬಂಧಗಳಿಗೆ ಬೆಲೆ ಇಲ್ಲದಂತೆ ಆಗಬಹುದು. ಇದನ್ನು ತಪ್ಪಿಸಲು ನಾವು ನಮ್ಮ ಮಕ್ಕಳಿಗೆ ಕುಟುಂಬ, ಸಂಬಂಧದ ಬಗ್ಗೆ ತಿಳಿವಳಿಕೆ ನೀಡಬೇಕು. ಅವರು ಯೌವನದಲ್ಲಿ ಒಂದೇ ಕುಟುಂಬದೊಳಗೆ ಆಕರ್ಷಣೆಗೆ ಒಳಗಾಗಿ ಮುಂದೆ ಜೀವನದಲ್ಲಿ ಅಪಾಯ ತಂದುಕೊಂಡು, ಕುಟುಂಬದಲ್ಲಿ ಹಿರಿಯರ ಭಾವನೆಗೆ ಧಕ್ಕೆಯಾಗದಂತೆ ಬದುಕಲು ಸಹಕಾರ ನೀಡಬೇಕು. ಕೂಡುಕುಟುಂಬ ವ್ಯವಸ್ಥೆ ಈಗಿನ ಕಾಲ ಘಟ್ಟದಲ್ಲಿ ಮರೀಚಿಕೆಯಾಗಿದೆ. ಹಿಂದೆ ಕೂಡುಕುಟುಂಬ ಇರುವಾಗ ಹಿರಿಯರು, ಮಕ್ಕಳು ಸಂಬಂಧದ ಅರಿವು ಸರಿಯಾಗಿ ಇರುತ್ತಿತ್ತು. ಈಗ ಮಕ್ಕಳಿಗೆ ಒಂದು ಕುಟುಂಬ-ಒಂದೇ ಮಗು ಎಂಬಂತೆ ಇರುವಾಗ ನಾವು ಅವರ ಮನಸ್ಸು ಇಂತಹ ವಿಷಯದ ಕಡೆ ವಾಲದಂತೆ ಎಚ್ಚರವಹಿಸಬೇಕು. ಇಂದಿನ ಕಾಲ ಘಟ್ಟದಲ್ಲಿ ನಾವು ಮಾನವೀಯತೆ, ಸಂಬಂಧಗಳ ನಡುವಿನ ಮೌಲ್ಯವನ್ನು ಕಳೆಯುತ್ತಾ ಬರುತ್ತಿದ್ದೇವೆ. ಭಗವಂತನ ಸೃಷ್ಟಿಯಲ್ಲಿ ಮನುಷ್ಯ ಅತ್ಯಂತ ಬುದ್ಧಿವಂತ. ಅಂತಹ ಮನುಷ್ಯನೇ ಪ್ರಾಣಿಗಳಿಗಿಂತ ಕಡೆಯಾಗಿ ವರ್ತಿಸದಂತೆ ಎಚ್ಚರಿಕೆ ವಹಿಸಬೇಕಾದ್ದು ನಮ್ಮ ಕರ್ತವ್ಯ.
ಬರಹ : ಜಯರಾಮ್ ಸುರತ್ಕಲ್, ಮಂಗಳೂರು