ಕುಲಾಲ್ ವರ್ಲ್ಡ್ ಡಾಟ್ ಕಾಮ್ ಸ್ಪೆಷಲ್
ಕಾಪಿನಿಂದ ಇಳಿದು ಹತ್ತು ದಿನಗಳಾಗಿತ್ತು. ಹೇಂಟೆ ತನ್ನ ಮರಿಗಳ ಪರಿವಾರದ ಜೊತೆ ಹೊರಟಿತ್ತು. ಆಕಾಶ ಮಾರ್ಗದಿಂದ ಆಗಾಗ ಕೇಳಿ ಬರುವ ಶಬ್ದದ ಜಾಡು ಹಿಡಿದು ಹೇಂಟೆ ಮರಿಗಳಿಗೆ ಅವಿತು ಕೊಳ್ಳಲು ಮುನ್ಸೂಚನೆ ನೀಡುತ್ತಿತ್ತು. ಜೊತೆಗೆ ಇತರ ಕೋಳಿಗಳೂ ಮರಿಗಳನ್ನು ರಕ್ಷಿಸುವ ಬಗ್ಗೆ ವೈಮನಸ್ಸನ್ನು ಮರೆತು ತಮ್ಮ ಕರ್ತವ್ಯ ನಿರ್ವಹಿಸುತ್ತಿತ್ತು. ಈ ಗಿಡುಗ ಮತ್ತು ಕೋಳಿಗೆ ಯಾಕೆ ದ್ವೇಷ ಎಂದು ಅಮ್ಮ ಹೇಳಿದ ಕಥೆಯನ್ನು ನೆನಪಿಸುತ್ತಿರುವಾಗಲೇ ಹೇಂಟೆಯ ಎಚ್ಚರಿಕೆ ಯ ಕೂಗು ಕಿವಿಗಪ್ಪಳಿಸಿತು. ನೋಡುವಷ್ಟರಲ್ಲಿಯೇ ಪಕ್ಕಿಸಲೆ ಎಂಬ ವಾಯುವೇಗದ ಪಕ್ಷಿ ಮರಿಯೊಂದನ್ನು ಎತ್ತಿ ಹಾರಿತು. ಮರದಲ್ಲಿ ಇಟ್ಟು ತಿನ್ನಲು ನೋಡಿದಾಗ ಆಕಸ್ಮಿಕ ವೆಂಬಂತೆ ಕೋಳಿಮರಿ ಕೆಳಗೆ ಬಿತ್ತು. ಕೂಡಲೆ ಎತ್ತಿಕೊಂಡು ಬಂದೆ. ತಾಯಿ ಮಣ್ಣಿನ ಮಡಕೆಯನ್ನು ತೊಳೆದು ಬಿಸಿಲಿಗೆ ಒಣಗಲು ಇಟ್ಟಿದ್ದರು. ಅದರಲ್ಲಿ ಒಂದು ಮಡಕೆಯನ್ನು ತೆಗೆದೆ. ಗೆರಟೆಯೊಂದನ್ನು ಹುಡುಕಿ ತಂದೆ. ಈ ಮರಿಯನ್ನು ಅಂಗಳದಲ್ಲಿ ಇಟ್ಟು ಮಡಕೆಯನ್ನು ಅದರ ಮೇಲೆ ಕವುಚಿ ಹಾಕಿ ಗೆರಟೆಯಿಂದ ಮಡಕೆಯ ಮೇಲೆ ಉಜ್ಜಲು ತೊಡಗಿದೆ. ಕೆಲವು ನಿಮಿಷಗಳ ಬಳಿಕ ಮಡಕೆಯನ್ನು ನೇರ ಮಾಡಿ ನೋಡಿದೆ. ಒಳಗೆ ಇದ್ದ ಕೋಳಿಮರಿ ಎದ್ದು ಓಡಾಡ ತೊಡಗಿತು. ಮಡಕೆ ಕೋಳಿ ಮರಿಗೆ ಜೀವಶಕ್ತಿ ನೀಡಿತು. ಬಾಲ್ಯದಲ್ಲಿ ನಾನು ಕಂಡ ಕೆಲವು ವಿಸ್ಮಯಗಳಲ್ಲಿ ಇದೂ ಒಂದು. ಇಂದಿಗೂ ಇದರ ರಹಸ್ಯ ಅರ್ಥ ವಾಗಿಲ್ಲ. ಈ ಜನಪದ ಚಿಕಿತ್ಸೆ ರಹಸ್ಯವಾಗಿಯೇ ಉಳಿಯುವುದರಲ್ಲಿಯೇ ಅದರ ಅನನ್ಯತೆಯೂ ಅಡಗಿದೆ.
***
ಆದರೆ ಇಲ್ಲಿ ನಾನು ಹೇಳ ಹೊರಟಿರುವುದು ನಮಗೆ ಜೀವಶಕ್ತಿ ನೀಡಬಲ್ಲ ಇಂತಹ ಮಡಕೆಯನ್ನು ನಾವು ಮರೆಯುತ್ತಿರುವುದರ ಕುರಿತು. ನಾಗರೀಕತೆಯ ಬೆಳವಣಿಗೆಗೂ ಮಡಕೆಗೂ ಬಹಳ ಹತ್ತಿರದ ಸಂಬಂಧವಿದೆ.ಮನುಷ್ಯ ಬೇಯಿಸಿ ತಿನ್ನಲು ಕಲಿತದ್ದೆ ಮಡಕೆಯಿಂದ. ಇದು ಆತನ ಆರೋಗ್ಯ ಕಾಪಾಡಿತು, ವಂಶವನ್ನು ಬೆಳೆಸಿತು. ಕ್ರಮೇಣ ಮಡಕೆಯ ಸುತ್ತ ಆಚರಣೆ ನಂಬಿಕೆಗಳು ಹುಟ್ಟಿ ಮಡಕೆಗೊಂದು ದೈವಿಕ ಶಕ್ತಿ ಕೂಡಿ ಬಂತು. ಮಣ್ಣಲ್ಲಿ ಹುಟ್ಟಿ ಮಣ್ಣಲ್ಲಿ ಬದುಕಿ ಕೊನೆಗೆ ಮಣ್ಣು ಸೇರುವಾಗಲೂ ಮನುಷ್ಯ ನಿಗೆ ಮಣ್ಣಿನ ಮಡಕೆಯ ಆಚರಣೆ ಬೇಕಾಯಿತು. ಈ ನಡುವೆ ಹೊಸತು ಪರಿಕರಗಳು ಬಂದಾಗ ಈ ಮಣ್ಣು ಮಡಕೆ ಆತನಿಗೆ ಒಡೆಯುವ ತುಚ್ಛ ಸಾಧನವಾಯಿತು. ಇದು ಆತನಿಗೆ ಅತಿ ನಾಗರೀಕತೆ ಕಲಿಸಿದ ಪಾಠ. ಮಡಕೆಯ ಅವನತಿಯ ಜೊತೆ ಮಡಕೆಯ ನಿರ್ಮಾತೃಗಳೂ ಬದಲೀವೃತ್ತಿಯನ್ನು ಅರಸಿಹೊರಟರು. ಕುಂಬಾರನ ತಗೋರಿ ತಿರುಗುವುದು ನಿಂತಿತು. ಅದರ ಪರಿಭಾಷೆಗಳೂ ಕಣ್ಮರೆಯಾಗತೊಡಗಿತು.ಜೊತೆಗೆ ಅದನ್ನು ಆಶ್ರಯಿಸಿದ್ದ ಸಂಸ್ಕೃತಿಯೂ ಪ್ರದರ್ಶನದ ವಸ್ತುವಾಯಿತು. ಅಲ್ಲೊಂದು ಇಲ್ಲೊಂದು ತಿರುಗುವ ತಗೋರಿಯನ್ನು ಮೂಸಿ ನೋಡುವವರೂ ಇಲ್ಲವಾದರು. `ಯಾನ್ ಕಲ್ತಿ ವಿದ್ಯೆಲಾ ಉಂಡು,ಮಣ್ಣ್ ಲಾ ಉಂಡು’ ಎಂದು ಎದೆ ತಟ್ಟಿದ ಕುಂಬಾರನಿಗೆ ಮಣ್ಣೂ ಸಿಗದಂತಾಯಿತು. ನಾಗರೀಕತೆಯನ್ನು ಪೋಷಿಸಿದವನಿಗೆ ವಿಷಾಧದ ಛಾಯೆ ಮೂಡಿತು. ಆರೋಗ್ಯ ಕಳಕೊಂಡಾಗ ಹಲವರಿಗೆ ಈ ಮಣ್ಣು ಮಡಕೆ ಎಲ್ಲಾ ಒಮ್ಮೊಮ್ಮೆ ನೆನಪಾಗುತ್ತದೆ. ಆದರೆ ಕುಂಬಾರ, ಆತನ ಕೆಂಡವಿಲ್ಲದ ಆವೆ, ಮಣ್ಣಿಲ್ಲದ ತಗೋರಿ,ಬೆಂಡಾದ ಬೆರಳು ವಿಸ್ಮೃತಿಯಲ್ಲೇ ಉಳಿಯಿತು. ಮಣ್ಣು ಮಾಯೆಯೋ…..