ಬೆಂಗಳೂರಿನ 3K ಬಳಗ ಹಮ್ಮಿಕೊಂಡ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಪಡೆದ ‘ಮಂಜುನಾಥ್ ಹಿಲಿಯಾಣ’ ಅವರ ಲೇಖನ ಬರಹ ಇದು. ಮೂರು ಮುಖ್ಯ ನೆಲೆಗಳಲ್ಲಿ ಮಾಧ್ಯಮಗಳ ಸ್ಥಿತಿ-ಗತಿಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನವನ್ನು ಲೇಖಕರು ಮಾಡಿದ್ದಾರೆ.
**********
ಭಾರತ ಬದಲಾಗುತ್ತಿದೆ..!
ಯಾವುದೋ ಹಳ್ಳಿಯ ಮೂಲೆಯಲ್ಲಿ ಸಣ್ಣ ಟರ್ಪಾಲಿನ ಕೆಳಗೆ ಬೀಡಾ ಅಂಗಡಿ ಇಟ್ಟುಕೊಂಡ ಬೀಡಾ ವ್ಯಾಪಾರಿಯೊಬ್ಬ ದಿಲ್ಲಿ ರಾಜಕಾರಣದ ಆಗು ಹೋಗುಗಳ ಬಗ್ಗೆ ವಿಮರ್ಶಿಸುವ ಮಟ್ಟಕ್ಕೆ ಬೆಳೆಯುತ್ತಿದ್ದಾನೆ.. ನಿತ್ಯ ರಣರಂಗವಾಗಿರುವ ಇರಾಕ್-ಇರಾನ್ನಂತಹ ದೇಶಗಳ ಆಂತರ್ಯದ ಗಲಭೆಗಳಿಗೂ ನಮ್ಮ ಊರಿನ ಪೆಟ್ರೋಲ್ ಬಂಕುಗಳಲ್ಲಿ ಏರಿ-ಇಳಿಯುವ ತೈಲ ಬೆಲೆಗಳಿಗೂ ಇರುವ ನೇರಾ-ನೇರ ಸಂಬಂಧದ ಬಗ್ಗೆ ಹಳ್ಳಿಯ ಗಮ್ಮಾರನು ತಿಳಿದುಕೊಳ್ಳುವಷ್ಟು ಪ್ರಬುದ್ದನಾಗುತ್ತಿದ್ದಾನೆ. ಸರಕಾರದ ಜಿಎಸ್ಟಿ ದರಕ್ಕೂ ತಾನು ಏರಿಸಿರುವ ಹೊಟೇಲಿನ ಪ್ಲೇಟು ಇಡ್ಲಿ ಬೆಲೆಗೂ ಇರುವ ಸಂಬಂಧದ ಬಗ್ಗೆ ತಿಳಿಸುವ ಜಾಣತನವನ್ನು ಪುಟ್ ಪಾತ್ ವ್ಯಾಪಾರಿಯೊಬ್ಬ ಬೆಳೆಸಿಕೊಂಡಿದ್ದಾನೆ. ಹಾಲಿವುಡ್-ಬಾಲಿವುಡ್ ಸಿನಿಮಾಗಳ ಬಗ್ಗೆ, ನಟ-ನಟಿಯರ ರಂಗಿನ ಗಾಸಿಪ್ಗಳ ಸತ್ಯ-ಮಿತ್ಯದ ಬಗ್ಗೆ ಹಳ್ಳಿಯ ಪಿಳ್ಳೆಗಳು ಬಾಯಿಚಪ್ಪರಿಸಿ ಮಾತನಾಡುತ್ತಿದ್ದಾರೆ. ಕಾಲ-ಕಾಲಕ್ಕೇ ಸರಿಯಾಗಿ ಬರದ ಮಳೆ-ಬೆಳೆಗಳ ಬಗ್ಗೆ, ಬತ್ತುತ್ತಿರುವ ನದಿ-ಕೆರೆಗಳ ಬಗ್ಗೆ, ಹೆಚ್ಚುತ್ತಿರುವ ದಿನಸಿ ವಸ್ತುಗಳ ಬೆಲೆಗಳ ಬಗ್ಗೆ, ನಿತ್ಯ ನೆಡೆಯುವ ರೈತರ ಆತ್ಮಹತ್ಯೆಯ ಬಗ್ಗೆ ದೇಶದ ಬೆನ್ನೆಲುಬು ‘ನೇಗಿಲ ಯೋಗಿ’ ಆತಂಕಿತನಾಗಿ ಮಾತನಾಡುತ್ತಿದ್ದಾನೆ. ನೋಟು ಬ್ಯಾನಿನಿಂದಾದ ಒಳಿತು-ಕೆಡುಕುಗಳ ಬಗ್ಗೆ, ನಿಲ್ಲದ ಸರಣಿ ಭಾಗ್ಯಗಳ ಬಗ್ಗೆ ಈ ದೇಶದ ಸಾಮಾನ್ಯ ನಾಗರಿಕನು ಚರ್ಚಿಸುವಷ್ಟು ಪ್ರಬುದ್ದತೆಯನ್ನು ಬೆಳೆಸಿಕೊಳ್ಳುತ್ತಿದ್ದಾನೆ. ಕಾವಿಯೊಳಗಿನ ಕಾಮದ ಬಗ್ಗೆ, ಧರ್ಮದ ಹೆಸರಿನಲ್ಲಿ ನೆಡೆಯುವ ಅಧರ್ಮದ ಬಗ್ಗೆ, ಓಟು ಬಂದಾಕ್ಷಣ ಮಾತ್ರ ಜನರ ಮನೆಬಾಗಿಲಿಗೆ ಓಡಿ ಬರುವ ರಾಜಕಾರಣಿಗಳ ಸೋಗಲಾಡಿತನದ ಬುದ್ಧಿಯನ್ನು ನೋಡಿ ಜನರು ಮುಸಿ ಮುಸಿ ನಗುವಷ್ಟು ಬದಲಾಗುತ್ತಿದ್ದಾರೆ. ಮುಂಬಯಿಯ ಪ್ಯಾಷನ್ ಮಾಲ್ಅಲ್ಲಿ ನಿನ್ನೆಯಷ್ಟೇ ಬಿಡುಗಡೆಯಾದ ಹೊಸ ಡ್ರೆಸ್ಸನ್ನು ಇಂದು ಸಂಜೆಯೊಳಗೆ ತರಿಸಿ ಮಿಡುಕುವಷ್ಟು ಹಳ್ಳಿಯ ಕುವರಿಯರು ಬದಲಾಗುತ್ತಿದ್ದಾರೆ. ಕ್ರಿಕೇಟ್ ,ಕಬಡ್ಡಿ, ಟೆನಿಸ್ ಬಗ್ಗೆ, ಬಿಚ್ಚಮ್ಮ೦ದಿರ ಬೆಚ್ಚನೆಯ ಕಥೆಗಳ ಬಗ್ಗೆ ಕಾಲೇಜು ಕ್ಯಾಂಪಸ್ಸುಗಳಲ್ಲಿ ಎಗ್ಗಿಲ್ಲದೆ ಚರ್ಚೆಯಾಗುತ್ತಿದೆ.. ಅಬ್ಬಬ್ಬಾ..ಭಾರತ ಎಷ್ಟು ಬದಲಾಗಿ ಹೋಯ್ತು?? 1947ರಲ್ಲಿ ಇಡೀ ದೇಶಕ್ಕೆ ಸ್ವಾತಂತ್ರ್ಯ ಘೋಷಣೆಯಾದಾಗ ಅದನ್ನು ತಿಳಿಯಲು ಈ ದೇಶದ ಹಳ್ಳಿಯ ಸಾಮಾನ್ಯ ನಾಗರಿಕನಿಗೆ ವರ್ಷಗಳು ಬೇಕಾಗಿದ್ದವು. ಎಷ್ಟೋ ಜನರಿಗೆ ಸ್ವಾತಂತ್ರ್ಯ ಅನ್ನುವ ಶಬ್ದದ ಅರ್ಥವೇ ಗೊತ್ತಿರಲಿಲ್ಲ. ಹಾವಾಡಿಗರ ನಾಡೆಂದು, ಮೂಡಮತಿಯರ ತವರೂರೆಂದು ಬ್ರಿಟೀಷರಿಂದ ಕರೆಸಿಕೊಂಡಿದ್ದ ಭಾರತ ಇದೇನಾ ಎಂಬಷ್ಟು ಬದಲಾಗಿದೆ. ಇಂದು ಪ್ರಪಂಚದ ಯಾವುದೇ ಮೂಲೆ ಮೂಲೆಯ ವಿದ್ಯಮಾನಗಳನ್ನು ನಿಮಿಷದೊಳಗೆ ತಿಳಿಯುವಷ್ಟು ಭಾರತ ನಾಗರಿಕ ಬದಲಾಗಿದ್ದಾನೆ. ನಿಸ್ಸಂದೇಹವಾಗಿ ಇದಕ್ಕೆ ಕಾರಣ ಸುದ್ದಿ ಮಾದ್ಯಮಗಳು ದೇಶದಲ್ಲಿ ಮಾಡಿದ ಅಭೂತಪೂರ್ವ ಮಾಹಿತಿ ಕ್ರಾಂತಿ.. ಸುದ್ಧಿ ಸ್ಪೋಟ..!!
ಹೌದು..’ವಿಶ್ವ ವ್ಯಾಪಾರ ಒಪ್ಪಂದ’ದ ಫಲಶ್ರುತಿಯಾಗಿ ಜಾಗತಿಕರಣವನ್ನು ಒಪ್ಪಿ-ಅಪ್ಪಿ ಹಿಡಿದ ಪರಿಣಾಮ ಭಾರತದ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಶಕೆಯೇ ಆರಂಭಗೊಂಡಿತು. ಜಾಗತೀಕರಣದ ನೇರಾನೇರ ಪರಿಣಾಮ ಮಾಧ್ಯಮ ಕ್ಷೇತ್ರದಲ್ಲಿ ಹೊಸ ಪರ್ವವನ್ನೇ ಸೃಷ್ಟಿಸಿದೆ. ದೂರದರ್ಶನ-ರೇಡಿಯೋದಂತಹ ಸರಕಾರಿ ಮಾದ್ಯಮಗಳನ್ನಷ್ಟೇ ನೆಚ್ಚಿಕೊಂಡಿದ್ದ ದೇಶದ ಜನತೆಯ ಮುಂದೆ ಖಾಸಗಿ ಒಡೆತನದ ನೂರಾರು ವಾಹಿನಿಗಳು ಪ್ರಸಾರ ಕಾರ್ಯವನ್ನು ಆರಂಭಿಸಿದವು. ಅದರಲ್ಲೂ ಕಳೆದ ಹತ್ತು ವರ್ಷಗಳಿಂದ ಹೆಚ್ಚು ಕಡಿಮೆ ವರ್ಷಕ್ಕೆರಡರಂತೆ ಹೊಸ ಸುದ್ದಿವಾಹಿನಿಗಳು ಆರಂಭಗೊಂಡಿದೆ. ರಾಷ್ಟ್ರ-ರಾಷ್ಟ್ರಗಳ ಮೂಲೆ ಮೂಲೆಯ ಸುದ್ದಿಗಳನ್ನು ಹುಡುಕಿ ಜನರ ಮುಂದೆ ಬಿತ್ತರಿಸಲು ಆರಂಭಿಸಿವೆ. ‘ನಿನ್ನೆಯ ವರ್ತಮಾನವನ್ನು ಹೇಳುವುದು ಇಂದಿನ ಇಂತಿಹಾಸವನ್ನು ಅರುಹುದು..ಇದೇ ಸುದ್ದಿ’ ಎಂಬ ಪತ್ರಿಕೋದ್ಯಮದ ಡೆಫಿನೇಶನ್ ಗಳು ಇಂದು ಬದಲಾಗಿದೆ. ಸಮಾಜ ಮತ್ತು ಮಾದ್ಯಮಗಳ ನಡುವೆ ಇದ್ದ ಸುದ್ದಿ ಮನೆಯ ‘ಸಮಯ’ ಅನ್ನುವ ಗೆರೆಗಳು ಅಳಿಸಿ ಹೋಗಿ ನೇರ ಪ್ರಸಾರ(ಲೈವ್) ಅನ್ನುವ ಹೊಸ ಶಕೆಯನ್ನು ಸುದ್ದಿ ವಾಹಿನಿಗಳು ಆರಂಭ ಮಾಡಿವೆ. ಹಳ್ಳಿಯ ಮೂಲೆ ಮೂಲೆಯ ಪುಟ್ಟ ಪುಟ್ಟ ಗುಡಿಸಲುಗಳಲ್ಲೂ ಡಿಶ್, ಸೆಟ್ ಬಾಕ್ಸ್ ಗಳು ತಲೆ ಎತ್ತಿದ್ದು ಮಾಹಿತಿ-ಮನೋರಂಜನೆಯ ಮಾಹಾಪೂರವನ್ನೆ ಜನರಿಗೆ ಉಣಬಡಿಸುತ್ತಿವೆ.. ಪರಿಣಾಮ ಸುದ್ದಿ ವಾಹಿನಿಗಳು ದೇಶದ ಪ್ರಗತಿಯಲ್ಲಿ ದೊಡ್ಡ ಕೊಡುಗೆಯನ್ನು ನೀಡಿದೆ ;ನೀಡುತ್ತಾ ಬಂದಿದೆ ಎನ್ನುವುದರಲ್ಲಿ ಸಂಶಯವೇ ಇಲ್ಲ.
ಸುದ್ದಿ ವಾಹಿನಿಗಳು ದೇಶದಲ್ಲಿ ಮಾಡಿದ ಕೆಲಸ ಅಸಾಧರಣವಾದದ್ದು. ಭಾರತದ ರಾಜಕಾರಣದಲ್ಲಿ ಮೇರುಪತ್ಯವನ್ನು ಸಾಧಿಸಿದ್ದ ಪ್ರಧಾನಿಯಿಂದ ಹಿಡಿದು ಊರಿನ ಮರಿ ಪುಡಾರಿಗಳ ಧೂರ್ತ ಮುಖವನ್ನು ಬಯಲಿಗೆಳೆದು ಜನರ ಮುಂದೆ ಅವರೆಲ್ಲರನ್ನು ಬೆತ್ತಲಾಗಿಸಿದೆ. ರಾತ್ರಿ ಬೆಳಗಾಗುವುದರೊಳಗೆ ಎಷ್ಟೂ ಸರಕಾರಗಳು ಉರುಳಿಹೋಗುವಂತೆ ಮಾಡಿ ಜನನಪ್ರತಿನಿಧಿಗಳು ತಲೆದಂಡ ತೆರುವಂತೆ ಮಾಡಿವೆ. ಮೂಲಭೂತ ಸೌಕಾರ್ಯಗಳೇ ಇಲ್ಲದ ಎಷ್ಟೂ ಕುಗ್ರಾಮಗಳ ಸಚಿತ್ರ ವರದಿಯನ್ನು ಪ್ರಸಾರಿಸಿ ಸವಲತ್ತುಗಳು ಹಳ್ಳಿಗಳಿಗೆ ಹರಿದು ಬರುವಂತೆ ಮಾಡಿವೆ. ಸಾಧನೆಯ ಹಾದಿಯಲ್ಲಿ ಸದ್ದಿಲ್ಲದೆ ಸಾಗಿದ ಎಷ್ಟೂ ಸಾಧಕರ ಅದ್ಬುತ ಯಶೋಗಾಥೆಗಳನ್ನು ಪ್ರಸಾರಮಾಡಿ ಜನರಲ್ಲಿ ಸ್ಪೂರ್ತಿಸೆಲೆಯನ್ನು ತುಂಬಿವೆ. ಕೃಷಿ, ಆರೋಗ್ಯ, ಮಾರುಕಟ್ಟೆ ಎಲ್ಲ ಕ್ಷೇತ್ರಗಳ ಆಗುಹೋಗುಗಳ ಬಗ್ಗೆ ವರದಿಗಳನ್ನು ನೀಡಿ ಜನರ ನಿತ್ಯ ಬದುಕಿಗೆ ವರದಾನ ನೀಡಿವೆ. ಜನಸಾಮಾನ್ಯರಿಗೆ ನೇರವಾಗಿ ಮಾತನಾಡಲು ಎಂದೂ ಸಿಗದ ‘ದೊಡ್ಡ ಮಂಡೆ’ಯ ಎಷ್ಟೂ ಸಚಿವರನ್ನ, ಉನ್ನತ ಅಧಿಕಾರಿಗಳನ್ನು ಸ್ಟುಡಿಯೋಕ್ಕೆ ಕರೆಸಿ ಮಾತನಾಡಿಸಿವೆ. ಜನಸಾಮಾನ್ಯರಿಗೂ ಅಭಿವ್ಯಕ್ತಿಯ ಸ್ವಾತಂತ್ರ್ಯ ನೀಡಿ ರಾಜಕರಣಿಗಳ ಮುಖದ ಬೆವರು ಇಳಿಸಿವೆ. ಮಹಿಳೆಯ ಮೇಲಾಗುವ ಲೈಂಗಿಕ, ಮಾನಸಿಕ, ಔದ್ಯೋಗಿಕ ಸಮಸ್ಯೆಗಳ ಮೇಲೆ ನಿರಂತರ ಬೆಳಕು ಚೆಲ್ಲಿ ಕಾನೂನು ಸುಧಾರಣೆಗಳನ್ನು ಮಾಡಿಸಿದೆ. ಎಷ್ಟೂ ವಿಸ್ಮಯ, ನಿಗೂಢ ವಿದ್ಯಮಾನಗಳನ್ನು ಜನರ ಮುಂದಿರಿಸಿ ಬೆರಗು ಹುಟ್ಟಿಸಿವೆ..ದಿನಾ ಬೆಳಗಾದರೆ ನೂರಾರು ತೆರನಾದ ಹೊಸ ವಿಷಯಗಳ ಬಗ್ಗೆ ಬೆಳಕು ಚೆಲ್ಲುವ ಸುದ್ದಿ ಮಾದ್ಯಮಗಳು ದೇಶದ ಪ್ರಗತಿಯಲ್ಲಿ ದೊಡ್ಡ ಕೊಡುಗೆ ನೀಡಿದೆ ಎನ್ನುವುದನ್ನು ಎಲ್ಲರು ಒಪ್ಪಿಕೊಳ್ಳುತ್ತಾರೆ:ಒಪ್ಪಿಕೊಳ್ಳಬೇಕು ಕೂಡ.
************
ದೇಶದ ಪ್ರಗತಿಯಲ್ಲಿ ತನ್ನದೇ ರೀತಿಯಲ್ಲಿ ಮಾಹಿತಿ ಕ್ರಾಂತಿಯ ಮೂಲಕ ಅಭೂತಪೂರ್ವ ಸೇವೆಗೈಯುತ್ತಿರುವ ಈ ಮಾಧ್ಯಮಗಳಿಗೆ ಜವಾಬ್ದಾರಿಯೂ ಸಾಕಷ್ಟಿದೆ. ಆರಂಭದ ಕೆಲ ವರ್ಷಗಳಲ್ಲಿ ಆ ಜವಾಬ್ದಾರಿಯನ್ನು ಅತ್ಯಂತ ಜತನದಿಂದ ಮಾಡಿಕೊಂಡು ಬರುತ್ತಿದ್ದ ಸುದ್ದಿ ಮಾಧ್ಯಮಗಳು ಇತ್ತೀಚಿಗಿನ ಕೆಲ ವರ್ಷಗಳಲ್ಲಿ ಬೇಜವಾಬ್ದಾರಿತನದ ವರ್ತನೆ ತೋರುತ್ತಿರುವುದಕ್ಕೆ ನಾಗರಿಕರಿಗೆ ಅಪಾರ ನೋವಿದೆ. ಆ ಜವಾಬ್ದಾರಿಗಳನ್ನು ಮಾಧ್ಯಮಗಳಿಗೆ ನೆನಪಿಸಿಕೊಡಬೇಕಾದದ್ದೂ ನಾಗರಿಕರ ಕರ್ತವ್ಯವೇ ಸರಿ..
ಕೆಲ ವರ್ಷಗಳ ಹಿಂದೆ ಈ ದೇಶದ ನಾಗರಿಕ ದೂರದರ್ಶನದಲ್ಲಿ ಪ್ರಸಾರವಾಗುತಿದ್ದ ಅರ್ಧ ಗಂಟೆಯ ವಾರ್ತೆಗಾಗಿ ದಿನವಿಡೀ ಕಾತರಿಸಿದ್ದ ಕ್ಷಣಗಳುಂಟು. ಕಾರ್ಗಿಲ್ ಕದನದ ಮಾಹಿತಿಗೆ ಟಿವಿ ಮುಂದೆ ಜಾತಕ ಪಕ್ಷಿಯಂತೇ ಕಾದ ಸಮಯಗಳುಂಟು. ಆದರೆ ಮಾಧ್ಯಮಗಳು ಖಾಸಗಿ ಒಡೆತನದ ಹಕ್ಕಿಗೆ ಒಳಪಟ್ಟ ಮೇಲೆ ಮಾಧ್ಯಮ ಕ್ಷೇತ್ರದಲ್ಲಿ ಕ್ಷಿಪ್ರ ಬೆಳವಣಿಗೆಗಳು ಆಗಿ ಹೋಗಿವೆ. ಆರಂಭದಲ್ಲಿ ಒಂದೆರಡು ಸುದ್ದಿ ವಾಹಿನಿಗಳಿಗೆ ಸೀಮಿತವಾಗಿದ್ದ ಮಾಧ್ಯಮ ಕ್ಷೇತ್ರದಲ್ಲಿ ಇಂದು ಮನೋರಂಜನೆಯ ವಾಹಿನಿಗಳಿಗಿಂತ ಸುದ್ದಿ ವಾಹಿನಿಗಳೇ ಅಧಿಕವಾಗಿವೆ. ಅಷ್ಟೇ ಪ್ರಬಲವೂ ಆಗಿವೆ. ಟಿವಿ ಮುಂದೆ ಕುಳಿತು ರಿಮೋಟ್ ಒತ್ತುತ್ತಿದ್ದರೆ ವಿವಿಧ ಬಗೆಯ ಸೈದ್ಧಾ೦ತಿಕ ನಿಲುವುಗಳಿರುವ ವೈವಿಧ್ಯಮಯ ಸುದ್ದಿಯ ವಿಸ್ತಾರವಿರುವ ನೂರಾರು ಸುದ್ದಿ ವಾಹಿನಿಗಳು ನಮ್ಮೆದುರು ತೆರೆದುಕೊಳ್ಳುತ್ತಾ ಹೋಗುತ್ತವೆ.. ಈ ದೇಶದ ದೊಡ್ಡ ದೊಡ್ಡ ಉದ್ಯಮಿಗಳು ಮಾಧ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಪರಿಣಾಮ ಮಾಧ್ಯಮ ಕ್ಷೇತ್ರದ ರೀತಿ-ರಿವಾಜುಗಳೇ ಬದಲಾಗಿ ಹೋಗಿದೆ. ತಳುಕು-ಬಳಕುಗಳು ಅಲ್ಲಿಗೆ ಕಾಲಿಟ್ಟಿವೆ. ಲಾಭ ಗಳಿಸುವುದೇ ಈ ಉದ್ಯಮಿಗಳ ಮೂಲ ಉದ್ದೇಶವಾಗಿರುವುದರಿಂದ ಎಲ್ಲವನ್ನು ವ್ಯಾಪಾರೀಕರಣದ ದೃಷ್ಟಿಯಲ್ಲಿ ತಾಳೆ ಹಾಕುವ ಸ್ಥಿತಿಗೆ ಮಾಧ್ಯಮಗಳು ಬಂದು ಕುಳಿತಿವೆ. ಜಾಹಿರಾತುದಾರರು ಮಾಧ್ಯಮಗಳ ಸುದ್ದಿಗಳ ಮೇಲೆ ಗಂಭೀರ ಪ್ರಭಾವ ಬೀರುತ್ತಿದ್ದಾರೆ.
ಆರಂಭದಲ್ಲಿ ಬಹಳ ಗಾಂಭೀರ್ಯದ ನಡಿಗೆಯನ್ನಿಟ್ಟ ಸುದ್ದಿ ಮಾಧ್ಯಮವಿಂದು ಅತೀ ಸ್ಪರ್ಧಾತ್ಮಕತೆಯ ನಡಿಗೆಯಿಂದ ಜವಾಬ್ದಾರಿಯನ್ನು ಮರೆತಂತಿದೆ. ಅತೀಯಾದರೆ ಅಮೃತವೂ ವಿಷ ಎನ್ನುವ ಹಾಗೇ ಲೆಕ್ಕವಿಲ್ಲದಷ್ಟು ಸುದ್ದಿ ವಾಹಿನಿಗಳು ಹುಟ್ಟಿಕೊಂಡ ಪರಿಣಾಮ ಅವುಗಳ ಮಧ್ಯೆಯೇ ವೀಪರೀತ ಅನ್ನುವಷ್ಟು ಸ್ಪರ್ಧೆ ಆರಂಭಗೊಂಡಿದೆ.. ‘ಯಾವುದು ಸುದ್ದಿ, ಸಿಕ್ಕ ಸುದ್ದಿಯ ಸತ್ಯಾಸತ್ಯತೆ ಎಷ್ಟು, ಇದು ಸಮಾಜಕ್ಕೆ ಬೀರುವ ಸಂದೇಶ ಏನು’ ಎಂಬ ಸಣ್ಣ ಯೋಚನೆಯೂ ಸುದ್ದಿಮನೆಯಿಂದ ದೂರವಾಗಿದೆ. ಬರೇ ಒರಲುವ, ಜನರನ್ನು ಹೆದರಿಸುವ, ಭಯಾನಕತೆಯನ್ನು ತುಂಬುವ, ಕ್ರೈಂ, ಸೆಕ್ಸ್, ಸಿನಿಮಾಗಳನ್ನಷ್ಟೇ ವೈಭವಿಕರಿಸುವ ಕೆಟ್ಟ ಚಾಳಿಯೊಂದು ಸುದ್ದಿ ವಾಹಿನಿಗಳಲ್ಲಿ ಆರಂಭಗೊಂಡಿದೆ.. ಸಿಕ್ಕ ಸುದ್ದಿ ಎಷ್ಟು ನಿಖರವಾದದ್ದು, ಯಾವ ಮೂಲದಿಂದ ಬಂದದ್ದು ಎಂಬ ಸಣ್ಣ ಯೋಚನೆಯನ್ನು ಮಾಡದೇ ಸಿಕ್ಕ ಸಣ್ಣ ಸುದ್ದಿಗೇ ರೆಕ್ಕೆಪುಕ್ಕ ಸೇರಿಸಿ ದೊಡ್ಡದ್ದು ಮಾಡಿ ‘ಸ್ಪೋಟಕ ಸುದ್ದಿ’ಯ ಹಾಗೇ ಜನರ ಮುಂದೆ ಒರಲುತ್ತಿವೆ.
ಈ ದೇಶದ ಪ್ರತಿಯೊಬ್ಬ ನಾಗರಿಕನಿಗೂ ಇನ್ನೂ ಸ್ಪಷ್ಟವಾಗಿ ನೆನಪಿದೆ.. ದೇಶದ ಪ್ರಧಾನಿ ಹಳೆಯ ನೋಟುಗಳನ್ನು ಬ್ಯಾನ್ ಮಾಡಿಸಿ ಹೊಸ ನೋಟುಗಳನ್ನು ಚಲಾವಣೆಗೆ ತಂದ ಸಮಯ. ಸಾಕಷ್ಟು ಗೊಂದಲ ಊಹಪೋಹ ನಿರ್ಮಾಣವಾದ ಸಮಯ. ಜನರಿಗೆ ಅದರ ಬಗ್ಗೆ ಸರಿಯಾದ ಮಾಹಿತಿ ನೀಡಬೇಕಿದ್ದ ಕನ್ನಡದ ಪ್ರಸಿದ್ದ ಸುದ್ದಿ ವಾಹಿನಿಯೊಂದರ ಮುಖ್ಯಸ್ಥರೊಬ್ಬರು ಸ್ಟುಡಿಯೋದಲ್ಲಿ ಕುಳಿತು ‘ಪ್ರಧಾನಿ ತಂದ ಹೊಸ ನೋಟಿನಲ್ಲಿ ಚಿಪ್ ಅಳವಡಿಸಲಾಗಿದೆ. ಅದು ಯಾವುದೇ ಮೂಲೆಯಲ್ಲಿ ಇದ್ದರೂ ಜನರಿಗೆ ಗೊತ್ತಾಗುತ್ತೆ ಹಾಗೇ ಹೀಗೆ’ ಎಂದು ಎಗ್ಗಿಲ್ಲದೇ ಸುಳ್ಳುಗಳನ್ನೆ ಸುದ್ದಿಯನ್ನಾಗಿಸುವ ಪ್ರಯತ್ನದಲ್ಲಿದ್ದರು. ಯಾವ ಮೂಲದಿಂದ ಈ ಸುದ್ದಿಯನ್ನು ಅವರು ಹುಡುಕಿ ತಂದರೋ ದೇವರಿಗೆ ಗೊತ್ತು! ತೀರಾ ಇತ್ತೀಚೆಗೆ ಕನ್ನಡದ ನಟನೊಬ್ಬನಿಗೆ ಬ್ರಿಟನ್ನಿನ ಪಾರ್ಲಿಮೆಂಟಿನಲ್ಲಿ ಗೌರವ ನೀಡಿದರೆ ಅದಕ್ಕೆ ಪ್ರಶಸ್ತಿಯ ಹಣೆಪಟ್ಟಿ ಕಟ್ಟಿ ಸುಳ್ಳುಗಳನ್ನೇ ಪೋಣಿಸಿ ಸುದ್ದಿಯನ್ನಾಗಿಸಿದ್ದರು. ಇಂತಹ ಎಡಬಿಡಂಗಿ ಪ್ರಕರಣಗಳು ಈಗ ಸುದ್ದಿ ವಾಹಿನಿಗಳಲ್ಲಿ ತೀರಾ ಮಾಮೂಲು ಅನ್ನಿಸಿ ಬಿಟ್ಟಿದೆ. ಜವಾಬ್ದಾರಿ ತೋರಬೇಕಿದ್ದ ಮಾದ್ಯಮಗಳ ಬೇಜವಬ್ದಾರಿ ವರ್ತನೆ ಅಂದರೆ ಇದೇ ತಾನೆ??
ಸದಾ ಸಿನಿಮಾ ಸೆಲೆಬ್ರಿಟಿಗಳ, ಸಿಟಿ, ಪಟ್ಟಣ ಪೇಟೆಗಳನ್ನಷ್ಟೇ ಸುತ್ತುವ, ರಾಜಕರಣಿಗಳನ್ನೆ ಹಿಂಬಾಲಿಸುವ, ಕ್ರೈಂಗಳನ್ನೇ ವೈಭವಿಕರಿಸುವದಷ್ಟೇ ಮಾದ್ಯಮಗಳ ಕರ್ತವ್ಯ ಎಂಬಂತೆ ಇಂದಿನ ಮಾದ್ಯಮಗಳು ವರ್ತಿಸುತ್ತಿವೆ. ಪಿ ಸಾಯಿನಾಥ್ ಅಂತಹ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಾರೆ.’’ ನಮ್ಮ ದೇಶದಲ್ಲಿ ಶೇ 60ಕ್ಕಿಂತ ಅಧಿಕ ಜನ ಇಂದಿಗೂ ಹಳ್ಳಿಯಲ್ಲಿ ವಾಸವಿದ್ದಾರೆ. ಆದರೆ ನಮ್ಮ ಮಾದ್ಯಮಗಳು ಕೇವಲ ಬೆಂಗಳೂರು, ಮುಂಬೈ, ದಿಲ್ಲಿಯಂತಹ ಪಟ್ಟಣಗಳಿಗಷ್ಟೇ ಕ್ಯಾಮರ ಪೋಕಸ್ ಮಾಡುತ್ತವೆ.. ಆ ಮೂಲಕ ಹಳ್ಳಿಯ ಜನರ ಬಗ್ಗೆ ನಮಗೆ ಜವಾಬ್ದಾರಿಯೇ ಇಲ್ಲ ಎಂಬಂತೆ ವರ್ತಿಸುತ್ತವೆ’’ ಎಂಬ ಮಾತು ಎಷ್ಟು ವಾಸ್ತವ ಅನ್ನಿಸಿಬಿಡುತ್ತದೆ ಅಲ್ಲವೇ?
ಕರ್ನಾಟಕದ ಒಂದು ಹಳ್ಳಿಯಲ್ಲಿ ಪುಟ್ಟ ಹೆಣ್ಣುಕಂದಮ್ಮವೊಂದು ತೆರೆದ ಕೊಳವೆ ಬಾವಿಗೆ ಬಿದ್ದು ಸಾವು ಬದಕಿನ ನಡುವೆ ಹೋರಾಡುತ್ತಿದ್ದರೇ ಕನ್ನಡದ ಸುದ್ದಿ ವಾಹಿನಿಗಳೆಲ್ಲ ಸಿನಿಮಾ ನಾಯಕರೊಬ್ಬರ ಮದುವೆಯ ಸಂಭ್ರಮವನ್ನು ಜನರಿಗೆ ತೋರಿಸುವ ಧಾವಂತದಲ್ಲಿದ್ದವು… ಪುಟ್ಟ ಮಗುವಿನ ಘೋರ ದುರಂತ, ಕೊಳವೆ ಬಾವಿ ಮುಚ್ಚದೇ ಬಿಟ್ಟ ಸರಕಾರದ ಅಧಿಕಾರಿಗಳ ಕೊರಳುಪಟ್ಟಿ ಹಿಡಿದು ಜಗ್ಗಿ ಕೇಳಬೇಕಿದ್ದ ವಾಹಿನಿಗಳೆಲ್ಲ ನಾಯಕನ ಮದುವೆಯ ಮೆಹಂದಿಯನ್ನು ಜನರಿಗೆ ತೋರಿಸುತ್ತಿದ್ದವು. ಸುದ್ದಿ ವಾಹಿನಿಗಳ ಬೇಜವಬ್ದಾರಿತನದ ವರ್ತನೆಗೆ ಇದೊಂದು ಉದಾಹರಣೆ ಅಷ್ಟೇ..!!
ಸಾಲು ಸಾಲಾಗಿ ಹುಟ್ಟಿಕೊಂಡ ಸುದ್ದಿ ವಾಹಿನಿಗಳ ಪರಿಣಾಮವಾಗಿ ಸುದ್ದಿಗಾಗಿ ಅವುಗಳ ನಡುವೆಯೇ ಜಿದ್ದಿ ಎರ್ಪಟ್ಟಿವೆ. ಸದಾ ಎಕ್ಸ್-ಕ್ಲೂಸಿವ್ ಸುದ್ದಿಗಳನ್ನೇ ಕೊಡುವಂತೆ ಪ್ರತಿನಿಧಿಗಳನ್ನು ಒತ್ತಾಯಿಸುವ ಪರಿಣಾಮ ಯಾರದ್ದೊ ಸೆಲೆಬ್ರಿಟಿಗಳ ಮಂಚಗಳಿಗೆ ಕ್ಯಾಮರ ಫಿಕ್ಸ್ ಮಾಡುವ, ಕಾವಿಧಾರಿಗಳ ಕಾಮಗಳನ್ನು ಬಯಲಿಗೆಳೆಯುವ, ರಾಜಕಾರಣಿಗಳ ಕಚ್ಚೆ ಹರುಕುತನಗಳನ್ನೇ ಹುಡುಕಿಹೋಗುವ, ಯಾರದ್ದೋ ಬದುಕಿನ ತೀರಾ ವಯಕ್ತಿಕ ವಿದ್ಯಮಾನಗಳನ್ನು ಎಳೆದು ತರುವ ಧಾವಂತವನ್ನು ಮಾಧ್ಯಮಗಳು ಮಾಡುತ್ತಿವೆ. ಕೋಲ್ಕತ್ತಾದಲ್ಲಿ ಒಬ್ಬ ಟಿವಿ ವಾಹಿನಿಯ ಕ್ಯಾಮರಮೆನ್ ಒಬ್ಬ ನಿರುದ್ಯೋಗಿ ಯುವಕನಿಗೆ ಮೈಗೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿಕೊಂಡು ಸಾಯುವಂತೆ ಪ್ರೇರೇಪಿಸಿದ್ದ. ಅದನ್ನು ದೊಡ್ಡ ಸುದ್ದಿಯನ್ನಾಗಿಸಿ ತಾನೊಬ್ಬ ದೊಡ್ಡ ಪತ್ರಕರ್ತ ಎಂಬ ಹೆಗ್ಗಳಿಕೆಯನ್ನು ಪಡೆಯುವುದು ಅವನ ಉದ್ದೇಶವಾಗಿತ್ತು. ಈ ಮಾಧ್ಯಮಗಳು ತಾವೇ ಸುದ್ದಿಗಳನ್ನು ಸೃಷ್ಟಿಸುವ ಕೀಳು ಮಟ್ಟಕ್ಕೆ ಇಳಿದರೆ ಪ್ರಜಾಪ್ರಭುತ್ವದ ನಾಲ್ಕನೆಯ ಅಂಗವೆಂದು ಕರೆಸಿಕೊಳ್ಳುವ ನೈತಿಕ ಹಕ್ಕು ಎಲ್ಲಿಂದ ಬಂದಿತು??
ಹಿಂದೆಲ್ಲ ಧರ್ಮ ಧರ್ಮಗಳ ನಡುವಿನ ಗಲಭೆಗಳನ್ನು ತೋರಿಸುವಾಗ ‘ಅನ್ಯಕೋಮುಗಳ ಗಲಭೆ’ ಎಂದಷ್ಟೇ ತೋರಿಸುವ ಪರಿಪಾಠವನ್ನು ಮಾದ್ಯಮಗಳು ಬೆಳೆಸಿಕೊಂಡಿದ್ದವು. ಆದರೆ ಈ ಸ್ಪರ್ಧಾತ್ಮಕತೆ ವಿಪರೀತ ಎಂಬಷ್ಟು ಮಟ್ಟಕ್ಕೆ ಬೆಳೆದ ಪರಿಣಾಮ ಆ ಗೆರೆಗಳನ್ನು ಇಂದಿನ ಸುದ್ದಿ ಮಾಧ್ಯಮಗಳು ಅಳಿಸಿ ಹಾಕಿವೆ. ಮಂದಿರ, ಮಸೀದಿ, ಚರ್ಚ್ ಎಂದು ಬೊಬ್ಬಿರಿದು ಹೇಳುತ್ತವೆ. ಎಲ್ಲೋ ಸಣ್ಣ ಗಲಾಟೆಯಲ್ಲಿ ಮುಗಿದು ಹೋಗುತ್ತಿದ್ದ ಎಷ್ಟೋ ಮತೀಯ ಗಲಭೆಗಳಿಗೆ ಇನ್ನಷ್ಟು ಬೆಂಕಿ ಹಚ್ಚಿಸಿ ಚಂದಾ ನೋಡುತ್ತಿವೆ.. ಧರ್ಮದ ವಿಷಯಗಳಿಗೆ ಬಂದರೆ ‘ಬರೆಯುವುದಷ್ಟೇ , ಸುದ್ದಿಯನ್ನು ಪ್ರಸಾರ ಮಾಡುವುದಷ್ಟೇ ಪತ್ರಿಕೋದ್ಯಮ ಅಲ್ಲ; ಕೆಲವೊಮ್ಮೆ ಪ್ರಸಾರ ಮಾಡದಿರುವುದು ಪತ್ರಿಕೋದ್ಯಮ ಆಗಬಹುದು ಎಂದು ಮಾಧ್ಯಮಗಳಿಗೆ ಬುದ್ದಿ ಹೇಳುವವರು ಯಾರು??
ಸುದ್ದಿ ಮಾಧ್ಯಮಗಳ ಭಾಷಾ ಬಳಕೆಯ ಬಗ್ಗೆಯೂ ಸಾಕಷ್ಟು ವಿರೋಧ ಜನಸಾಮಾನ್ಯರಿಗೆ ಉಂಟು. ಸ್ಪಷ್ಟವಾದ ಭಾಷೆಯಲ್ಲಿ ಯಾವುದೇ ‘ಅತೀ’ಗಳನ್ನು ಸೇರಿಸದೆ ಇದ್ದದ್ದನ್ನು ಇದ್ದ ಹಾಗೇ ಹೇಳಿದರೇ ಒಬ್ಬ ಒಳ್ಳೆಯ ನೋಡುಗ ಸದಾ ಸ್ವಾಗತಿಸುತ್ತಾನೆ. ಭಾಷೆಗಳನ್ನೇ ಕೊಲ್ಲುವ, ಬದುಕಿರುವವರನ್ನು ಸಾಯಿಸುವ, ಸಾಮಾನ್ಯ ಜ್ಞಾನವೂ ಇಲ್ಲದ ನಿರೂಪಣೆಯಿಂದ ಸಮಾಜದ ಸ್ವಾಸ್ಥ್ಯ ಕೆಡುವುದು ಖಂಡಿತಾ. ರಾತ್ರಿ ಹತ್ತರ ಮೇಲಂತೂ ಯಾವ ಸುದ್ದಿ ವಾಹಿನಿಗಳನ್ನು ಹಾಕಿದರೂ ಅಲ್ಲಿ ನಿಗೂಢ, ವಿಸ್ಮಯದ ಹೆಸರಿನಲ್ಲಿ ಭಯಾನಕತೆಯನ್ನು ಬೀರುವ, ಪುಟ್ಟ ಮಕ್ಕಳ ಹೃದಯ ಬೆಚ್ಚುವ ಸುದ್ದಿಗಳನ್ನೇ ಪ್ರಸಾರ ಮಾಡುತ್ತಿವೆ. ತಾವೇ ಅಲ್ಲಿ ಹೋಗಿ ನೋಡಿ ಬಂದ ಹಾಗೇ, ತಮಗೆಲ್ಲ ತಿಳಿದಿದೆ ಎಂಬ ದರ್ಪದ ಧೋರಣೆಯನ್ನು ಮಾಧ್ಯಮಗಳು ಮಾಡುತ್ತಿವೆ. ಜನ ಸಾಮಾನ್ಯರಿಗೆ ಈ ಜನ್ಮದ ಉಸಾಬರಿಯನ್ನೇ ಸಂಭಾಳಿಸಿಕೊಳ್ಳುವುದು ಕಷ್ಟ. ಇನ್ನು ಯಾವುದ್ಯಾವುದೋ ಜನ್ಮದ ಕಥೆಗಳನ್ನು ಕಟ್ಟಿಕೊಂಡು ಮಾಡುವುದೇನು? ಯಾವ ಮಾಧ್ಯಮದ ಬಳಿಯೂ ಇದಕ್ಕೆ ಉತ್ತರ ಇರಲಿಕ್ಕಿಲ್ಲ.
ಇಂದಿನ ಸುದ್ದಿ ಪತ್ರಿಕೆಗಳು ಹಿಂದೆ ಬಿದ್ದಿಲ್ಲ. ಪ್ರಮುಖ ಸುದ್ದಿಗಳು ಪ್ರಕಟವಾಗಬೇಕಿದ್ದ ಮುಖಪುಟಗಳನ್ನೆಲ್ಲಾ ಜಾಹಿರಾತುಗಳು ತಿಂದು ಹಾಕಿವೆ.. ದಿನ ಬೆಳಗಾದರೆ ಪತ್ರಿಕೆಯಿಂದ ದಿನವನ್ನು ಆರಂಭಮಾಡುವ ಎಷ್ಟೋ ಮನೆಗಳಲ್ಲಿ ಇಂದು ಪತ್ರಿಕೆಯನ್ನು ತೆರೆದರೆ ಬಿಕಿನಿ ಪೋಟೋಗಳು ಚಳ್ಳನೇ ನಗುತ್ತಿರುತ್ತವೆ. ಜಾಹಿರಾತುಗಳ ಮಧ್ಯೆ ಸುದ್ದಿಗಳು ಎಲ್ಲಿವೆ ಎಂದು ಹುಡುಕಬೇಕಾದ ಸ್ಥಿತಿಯಲ್ಲಿ ಸುದ್ದಿ ಪತ್ರಿಕೆಗಳು ಇವೆ. ಎಷ್ಟೆಷ್ಟೋ ಹೊಸ ಶಬ್ದಗಳು ಸುದ್ದಿ ಮನೆಯಿಂದ ಹೊರಬಂದು ಜನಸಾಮಾನ್ಯರ ನಿತ್ಯ ಭಾಷೆಗಳಲ್ಲಿ ಸೇರಿ ಹೋದ ಉದಾಹರಣೆ ಪತ್ರಿಕೆಗಳದ್ದು. ಆದರೆ ಇತ್ತೀಚೆಗೆ ಹೊಸ ಶಬ್ದಗಳನ್ನು ಶೋಧಿಸುವ ಕೆಲಸಬಿಟ್ಟು ಇಂಗ್ಲೀಷ್ ಭಾಷೆಯನ್ನೆ ಕನ್ನಡದಲ್ಲಿ ಬರೆಯವ ಭಾಷ ಪ್ರೇಮವನ್ನು ಪತ್ರಿಕೆಗಳು ಮಾಡುತ್ತಿವೆ.
ಹೇಳುತ್ತಾ ಹೋದರೆ ಇನ್ನೂ ಸಾಕಷ್ಟು ವಿಷಯ ಉಂಟು. ಜವಾಬ್ದಾರಿಯ ಔನ್ಯತ್ಯ ಸ್ಥಿತಿಯಲ್ಲಿರಬೇಕಾದ ಸುದ್ದಿ ಮಾಧ್ಯಮಗಳು ಬೇಜವಾಬ್ದಾರಿತನದ ಪ್ರತಿರೂಪಗಳಾಗುತ್ತಿರುವುದು ದೊಡ್ಡ ದುರಂತ.. ಮಾಧ್ಯಮಗಳ ಮೇಲೆ ಜನರು ಇಟ್ಟಿರುವ ಜನರ ನಂಬಿಕೆಯ ಸೌಧ ಕಳಚಿಕೊಳ್ಳುತ್ತಿದೇನೋ ಎಂಬ ದಿಗಿಲು ನಮ್ಮನ್ನು ಕಾಡದಿರದು..ಉತ್ತರವೆಂತು??
**********
ಮಾದ್ಯಮ ಎಂದಿಗೂ ಪ್ರಜಾಪ್ರಭುತ್ವದ ನಾಲ್ಕನೇಯ ಅತೀ ಬಲಿಷ್ಠ ಅಂಗ. ಪ್ರಜಾಪ್ರಭುತ್ವದ ಕಾವಲು ನಾಯಿ. ಇಂದಿಗೂ ಮಾದ್ಯಮಗಳಲ್ಲಿ ಬಂದದ್ದನ್ನು ಚೂರು ಯೋಚಿಸದೇ ನಂಬುವ ದೊಡ್ಡ ಸಮುದಾಯದ ಭಾರತದಲ್ಲಿದೆ. ಪತ್ರಿಕೋದ್ಯಮ ಎಂದರೆ ಅದೊಂದು ಜವಬ್ದಾರಿಯುತವಾದ ಮೇರು ಉದ್ಯೋಗ. ಹಣದ ಲಾಲಸೆಗಿಂತ ಸಮಾಜಮುಖಿಯಾದ ಉತ್ಕಟ ತುಡಿತಗಳಿರುವ ಮನಸ್ಸುಗಳು ಪತ್ರಿಕೋದ್ಯಮದ ಕಡೆಗೆ ಬರಬೇಕಿದೆ. ಪ್ರಪಂಚದ ಯಾವ ರಾಷ್ಟ್ರಗಳಲ್ಲೂ ಇರದ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕು ಭಾರತದ ಮಾಧ್ಯಮಗಳಿಗಿದೆ. ಅದೂ ‘ಸ್ವೇಚ್ಛಾಚಾರ’ ಆಗಬಾರದಷ್ಟೆ.
ಮಾಧ್ಯಮಗಳಿಗೂ ಒಂದಿಷ್ಟು ನೀತಿ ಸಂಹಿತೆಯ ಅಗತ್ಯ ಇದೆ. ಹಾಗಾಂತ ತಪ್ಪುಗಳನ್ನು ತಿದ್ದಿ ಹೇಳುವ ಅವುಗಳ ಮೂಲ ಆಶಯಕ್ಕೆ ಕೊಡಲಿ ಏಟು ನೀಡುವ ಸಂಹಿತೆಗಳು ಮಾಧ್ಯಮದ ಕ್ಷೇತ್ರಕ್ಕೆ ಬೇಡ. ನಿರ್ಭೀತ ವರದಿ, ಸತ್ಯ ಎಷ್ಟೇ ಕಟುವಾದರೂ ಪ್ರಕಟಿಸುವ ಧೈರ್ಯ, ಆಸೇ ಆಮೀಷಗಳಿಗೆ ಒಳಗಾಗದ ವೃತ್ತಿ ನಿಷ್ಠೇ ಮಾಧ್ಯಮಗಳಿಗೆ ಎಂದಿಗೂ ಬೇಕು. ಮಾಧ್ಯಮದ ದೊಡ್ಡ ದೊಡ್ಡ ತಜ್ಞರೆಲ್ಲ ಒಟ್ಟಿಗೆ ಸೇರಿ ದೇಶದ ಪ್ರಗತಿಯಲ್ಲಿ ಸುದ್ದಿ ಮಾಧ್ಯಮಗಳು ತೋರಬೇಕಾದ ಕರ್ತವ್ಯ, ಅವುಗಳ ಜವಾಬ್ದಾರಿ, ಲಂಗುಲಾಗಾಮಿಲ್ಲದ ಬೇಜಬ್ದಾರಿ ವರ್ತನೆಗಳಿಗೆ ಮೂಗುದಾರ ತೂಡಿಸಬೇಕಾದ ಬದ್ಧತೆಯನ್ನು ಮಾಡಬೇಕಿದೆ.
ಅಷ್ಟಕ್ಕೂ ಸುದ್ದಿ ಮಾಧ್ಯಮ ಎಂದರೆ ಅದು ‘ಎಂದೋ ಕಳೆದು ಹೋದ ಕಾಲದ ಕಥೆಯನ್ನು ಹೇಳುವುದಷ್ಟೇ ಅಲ್ಲ: ನೆಡೆದು ಹೋದ ವಿದ್ಯಮಾನವನ್ನು ತೋರುವುದಷ್ಟೇ ಅಲ್ಲ; ಅದು ವರ್ತಮಾನದೊಂದಿಗೆ ಸಾಗುತ್ತಾ ಸ್ವಸ್ಥ ಮನಸ್ಸುಗಳನ್ನು ನಿರ್ಮಾಣ ಮಾಡುವ ದೀಪ ಆಗಲಿ.. ಸದಾ ಅರಿವಿನ ಬೆಳಕನ್ನು ಹಂಚುವ ದೀವಿಗೇ ಆಗಲಿ; ಸಮಾಜದ ಸ್ವಾಸ್ಥ್ಯ ಕೆಡಿಸುವ ದೊಂದಿ ಆಗದಿರಲಿ..ಏನಂತೀರಿ??