ವಿಶಾಲ ಭಾರತದ ಹಳ್ಳಿಗಾಡಿನ ಬಡ ಮತ್ತು ಕೆಳಮಧ್ಯಮ ವರ್ಗದ ಮಂದಿಗೆ ತಮಗೆಯಂತಹ ದೇಸೀ ತಂಪು ಪೆಟ್ಟಿಗೆಗಳು ಆಹಾರ ವಸ್ತುಗಳನ್ನು ಸುಸ್ಥಿತಿಯಲ್ಲಿ ಕಾಯ್ದಿಡಲು ಸಹಕಾರಿ ಆಗಬಹುದು. ಫ್ರಿಡ್ಜ್ನಂತಲ್ಲದೆ, ಇಂತಹ ತಂಪು ಪೆಟ್ಟಿಗೆಗಳಲ್ಲಿ ಕಾಯ್ದಿಟ್ಟ ಆಹಾರ ವಸ್ತು ಗಳ ತಾಜಾತನವೂ ಉಳಿಯುತ್ತದೆ.
ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕೃಷಿ ಯಂತ್ರ ಮೇಳದ ಪ್ರವೇಶ ದ್ವಾರದ ಬಳಿ ಒಂದು ಸ್ಟಾಲ್. ಅಲ್ಲಿ ಹಲವು ಮಂದಿ ಕುತೂಹಲಿಗಳು ಸದಾ ಗುಂಪುಗೂಡಿದ್ದರು. ಅಲ್ಲೇನದು ಎಂದು ನೋಡಹೋದರೆ ಸುಳ್ಯದ ಕೃಷಿಕ -ತಂತ್ರಜ್ಞಾನಾಸಕ್ತ ಎಂ. ಜಿ. ಸತ್ಯನಾರಾಯಣ ಕಂಡರು. ಅವರು ಪ್ರದರ್ಶಿಸಿ ಮಾರಾಟ ಮಾಡುತ್ತಿದ್ದದ್ದು ಒಂದು ಅಪ್ಪಟ ದೇಸೀ – ಮಣ್ಣಿನ ಸೊಗಡಿನ ತಂಪುಪೆಟ್ಟಿಗೆ. ಮೇಳಕ್ಕೆ ಬಂದವರೆಲ್ಲ ಕುತೂಹಲದಿಂದ ವೀಕ್ಷಿಸುತ್ತಿದ್ದ, ಕೆಲವರು ತನಗೆ ಬೇಕು ಎಂದು ಖರೀದಿಸುತ್ತಿದ್ದ ಈ ಮಣ್ಣಿನ ಪೆಟ್ಟಿಗೆ – ದೇಸೀ ತಂಪು ಪೆಟ್ಟಿಗೆಯ ಹೆಸರೇ “ತಮಗೆ’!ಇದೊಂದು ಮಣ್ಣಿನ ಕೂಲ್ ಛೇಂಬರ್.
ಕುಂಬಾರರೇ ಮಾಡಿದ್ದು. ಒಂದರೊಳಗೊಂದು ಸಿಲಿಂಡರ್ ಆಕಾರದ, ಕುಂಡದಂತಹ ಎರಡು ಮಣ್ಣಿನ ಪಾತ್ರೆಗಳು. ಒಳಗಿನ ಪಾತ್ರೆ ಹೊರಗಿನ ಪಾತ್ರೆಗಿಂತ ಕೊಂಚ ಸಣ್ಣದು. ಎರಡು ಪಾತ್ರೆಗಳ ನಡುವೆ ಎರಡು ಇಂಚು ಅಂತರ. ಎರಡು ಪಾತ್ರೆಗಳ ನಡುವಣ ಈ ಅಂತರದಲ್ಲಿ ತಳಕ್ಕೂ ಬದಿಗಳಲ್ಲೂ ಹೊಯಿಗೆ ತುಂಬಿಸಿದ್ದಾರೆ. ಹೊಯಿಗೆಗೆ ತಂಪು ನೀರು ಹಾಕಿ ಒದ್ದೆ ಮಾಡಿದ ಮೇಲೆ ತಂಪುಪೆಟ್ಟಿಗೆ ಬಳಕೆಗೆ ಸಿದ್ಧ. “ತಮಗೆ’ಗೆ ಮೇಲೊಂದು ಮುಚ್ಚಳ. ಹೀಗೆ ರಚನೆಯಾಗಿರುವ ದೇಸೀ ತಂಪು ಪೆಟ್ಟಿಗೆ “ತಮಗೆ’ಯೊಳಗೆ 5 ಡಿಗ್ರಿಯಿಂದ 6 ಡಿಗ್ರಿ
ಸೆಂಟಿಗ್ರೇಡ್ನಷ್ಟು ತಂಪು ವಾತಾವರಣ ಇರುತ್ತದೆ. ಹಣ್ಣು -ತರಕಾರಿಗಳನ್ನು ನಾಲ್ಕೈದು ದಿನಗಳವರೆಗೆ ಆರಾಮವಾಗಿ ಕಾಪಿಡಬಹುದು. ಹಾಲು -ಮೊಸರುಗಳನ್ನೂ ಒಂದು ದಿನ ಇರಿಸಬಹುದು. ಸದಾ ಹೈಟೆಕ್ ತಂತ್ರಜ್ಞಾನದ ಬಗ್ಗೆ ಮಾತನಾಡುವ ತಂತ್ರಜ್ಞಾನಪ್ರಿಯ ಎಂ. ಜಿ. ಸತ್ಯನಾರಾಯಣ ಹೀಗೆ ನೆಲಮಟ್ಟದ ದೇಸೀ ಸಲಕರಣೆಯೊಂದರ ಬಗ್ಗೆ ಆಸಕ್ತಿ
ತಳೆದು ಅದರ ಮಾರಾಟ – ಪ್ರಚಾರಕ್ಕೆ ಹೊರಟದ್ದು ಅಚ್ಚರಿಯ ವಿಚಾರವೇ ಸರಿ.
ಇವತ್ತು ಪೇಟೆ ಪಟ್ಟಣಗಳಲ್ಲಿ ಬಿಡಿ, ಹಳ್ಳಿಯಲ್ಲಿಯೂ ತರಕಾರಿ – ಹಣ್ಣುಹಂಪಲನ್ನು ಅಂಗಡಿಯಿಂದ ತಂದು ಬಳಸುವ ಪರಿಪಾಠವೇ ಹೆಚ್ಚು. ಹಿಂದೆ ಮುಳಿ – ಸೋಗೆಯ ಅಥವಾ ಹೆಂಚಿನ ಮಾಡು; ಸಗಣಿ ಸಾರಿಸಿದ ಅಥವಾ ಕಾವಿ ನೆಲದ ಮನೆಯಿದ್ದಾಗ ಮನೆಯೊಳಗೆ ಸದಾ ಒಂದು ಹದವಾದ ತಂಪಿನ ವಾತಾವರಣ ಇರುತ್ತಿತ್ತು. ಹಾಗಾಗಿ ತರಕಾರಿ
– ಹಣ್ಣು ಹಂಪಲು ಇತ್ಯಾದಿಗಳು ಹೆಚ್ಚು ದಿನ ಬಾಳಿಕೆ ಬರುತ್ತಿದ್ದವು. ಆದರೆ ಇಂದು ನಾವು ಆರ್ ಸಿಸಿ ಮನೆಗಳಲ್ಲಿ ವಾಸಿಸುತ್ತಿದ್ದೇವೆ. ಆರ್ಸಿಸಿ ಮನೆಯೊಳಗೆ ಉಷ್ಣಾಂಶ ಹೆಚ್ಚು ಎನ್ನುವುದನ್ನು ನಾವು ಅನುಭವದಿಂದಲೇ ಕಂಡುಕೊಂಡಿದ್ದೇವೆ. ಇಂತಹ ಮನೆಗಳಲ್ಲಿ ತರಕಾರಿ, ಹಣ್ಣುಹಂಪಲು, ಹಾಲು-ಮೊಸರು ಕಾಯ್ದಿಡುವುದು ಸಮಸ್ಯೆಯೇ.
ಫ್ರಿಡ್ಜ್ ಇರಬಹುದು; ಆದರೆ ವಿದ್ಯುತ್?
ಪೇಟೆ -ಪಟ್ಟಣಗಳಲ್ಲಾದರೆ ಸದಾ ಕಾಲ ವಿದ್ಯುತ್ ಸರಬರಾಜು ಇರುತ್ತದೆ ಎನ್ನೋಣ. ಈಗೀಗ ಅದೂ ಕಷ್ಟವೇ. ಅದರಲ್ಲೂ ನಮ್ಮ ಗ್ರಾಮಾಂತರ ಪ್ರದೇಶಗಳಲ್ಲಿ ಮಳೆಗಾಲ ಮುಗಿದ ಕೂಡಲೇ ಲೋಡ್ ಶೆಡ್ಡಿಂಗ್, ಪವರ್ ಕಟ್ ಆರಂಭವಾಗುತ್ತದೆ. ಇಂತಹ ಸನ್ನಿವೇಶದಲ್ಲಿ ಫ್ರಿಡ್ಜ್ ಇದ್ದೂ ನಿರುಪಯೋಗಿ. ಪವರ್ ಕಟ್, ಲೋಡ್ ಶೆಡ್ಡಿಂಗ್ ಆದಾಗ ಫ್ರಿಡ್ಜ್ನಲ್ಲಿರಿಸಿದ ಆಹಾರವಸ್ತುಗಳು ನೀರು ಸೂಸಿ ಹಾಳಾಗುತ್ತವೆ. ಈ ಸಮಸ್ಯೆಗೆ ತಮಗೆಯಂತಹ ದೇಸೀ ತಂತ್ರಜ್ಞಾನ ಅತ್ಯುತ್ತಮ ಪರಿಹಾರ ಎಂಬುದು ಸತ್ಯನಾರಾಯಣ ಅವರು ಕಂಡುಕೊಂಡ ಸತ್ಯ. ಅದು ಸರಿಯೇ ಸರಿ. ಸೃಷ್ಟಿಸಿದ್ದು ಹೀಗೆ…
ಮಣ್ಣಿನಲ್ಲಿ ಎರಡು ಹೂಕುಂಡದಂತಹ ಆಕೃತಿ ರಚಿಸಿ ಒಂದರೊಳಗೊಂದು ಇರಿಸಿ ಹೊಯಿಗೆ ಸುರಿಯಲು ಏನು ಕೆಲಸ ಎಂದುಕೊಳ್ಳಬೇಡಿ. ಈ ಎರಡೂ ಮಣ್ಣಿನ ರಚನೆಗಳು ಸದಾಕಾಲ ನೀರಿನ ಸಂಪರ್ಕದಲ್ಲಿ ಇರುವುದರಿಂದ ಸಾದಾ ಆವೆಮಣ್ಣಿನ ಸಾಮಾನ್ಯ ರಚನೆಗಳು ಈ ತಮಗೆ ಆಗುವುದಿಲ್ಲ. ಸತ್ಯನಾರಾಯಣ ಕರಾವಳಿಯಲ್ಲೆಲ್ಲ ಹುಡುಕಾಡಿದರು. ಎಲ್ಲೂ ಅವರಿಗೆ ನೀರಿನ ಸಂಪರ್ಕವನ್ನು ತಾಳಿಕೊಳ್ಳಬಲ್ಲ ಮಣ್ಣಿನ ರಚನೆಗಳು ಸಿಗಲಿಲ್ಲ. ಏಕೆಂದರೆ, ಇಲ್ಲೆಲ್ಲ ರಚನೆಯಾಗುವುದು ಕಾಯಿಸಲು – ಬೇಯಿಸಲು ಅಂದರೆ, ಉಷ್ಣ ಸಂಪರ್ಕಕ್ಕೆ ಸರಿಯಾಗಿ ಸಿದ್ಧವಾಗುವ ಮಣ್ಣಿನ ಮಡಿಕೆ – ಕುಡಿಕೆಗಳು. ಇಂತಹ ಮಣ್ಣಿನ ಪಾತ್ರೆಗಳಿಂದ ತಮಗೆ ರಚಿಸಿದರೆ ಸ್ವಲ್ಪವೇ ಸಮಯದಲ್ಲಿ ಅದು ಮತ್ತೆ ಆವೆಮಣ್ಣಿನ ಮುದ್ದೆಯಾದೀತು. ನೀರಿನ ಸಂಪರ್ಕದಲ್ಲಿರುವ ತಮಗೆಯಂತಹ ಮಣ್ಣಿನ ರಚನೆಯ ನಿರ್ಮಾಣದಲ್ಲಿ ಆವೆ ಮಣ್ಣು ಹುಳಿ ಬರುವ ಪ್ರಮಾಣ, ಅದರಲ್ಲಿ ಮಿಶ್ರವಾಗಿರುವ ಪ್ರಮಾಣ ಮತ್ತು ಸಿದಟಛಿಗೊಂಡ ತಮಗೆಯನ್ನು ಬೇಯಿಸುವ ಪ್ರಮಾಣ ಮುಖ್ಯವಾಗುತ್ತದೆ. ಕೊನೆಗೂ ಸತ್ಯನಾರಾಯಣ ಅವರಿಗೆ ಕೋಲಾರದಲ್ಲಿ ತಮಗೆಗೆ ಬೇಕಾದಂತಹ ಮಣ್ಣಿನ ಪಾತ್ರೆ ಮಾಡಿಕೊಡುವವರು ಸಿಕ್ಕಿದರು. ಹಾಗಾಗಿ ಈಗ ಅವರು ಕೋಲಾರದಿಂದ ತಮಗೆಗಳನ್ನು ತಯಾರಿಸಿ ತರಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ಸಹಜವಾಗಿಯೇ ಸಾಗಾಣಿಕೆ ವೆಚ್ಚ ಜಾಸ್ತಿಯಾಗಿದೆ. ಸತ್ಯನಾರಾಯಣ ಕೈಗೆಟಕುವ ಬೆಲೆಯಲ್ಲಿ ತಮಗೆ ಮಾರಾಟ ಮಾಡುತ್ತಾರೆ. (ಅಂದಾಜು ಒಂದು ಸಾವಿರ ರೂಪಾಯಿ) ಸಾಕಷ್ಟು ಮಂದಿ ತಮಗೆಯ ಬಗ್ಗೆ ಆಸಕ್ತಿ ತೋರಿಸಿದ್ದಾರೆ, ಪ್ರತಿಕ್ರಿಯೆ ಉತ್ತಮವಾಗಿದೆ
ಎನ್ನುವುದು ಅವರ ನುಡಿ.
ಮಾಹಿತಿಗೆ ಮೊಬೈಲ್: 9731855028
ತಂಪು ತಂಪು ಕೂಲ್ ಚೇಂಬರ್ , ಕುಂಬಾರರೇ ಮಾಡಿದ ಬಡವರ ಫ್ರಿಡ್ಜ್
pottery
3 Mins Read