ಇವತ್ತು ನೀವು ಯಾವ ಭಾಷೆಯ ಟಿವಿ ಚಾನೆಲ್ಲುಗಳನ್ನೆ ಹಾಕಿ ನೋಡಿ. ಅಲ್ಲಿ ಮಕ್ಕಳನ್ನು ಕೇಂದ್ರೀಕರಿಸಿ ರೂಪುಗೊಂಡ ಕಾರ್ಯಕ್ರಮಗಳು ಸಿಕ್ಕಾಪಟ್ಟೆಯಾಗಿ ತುಂಬಿಕೊಂಡಿದೆ. ಪ್ರಸ್ತುತ ಕನ್ನಡ ವಾಹಿನಿಗಳಂತೂ ಒಬ್ಬರಿಗೊಬ್ಬರು ಸ್ಪರ್ದೆಗೆ ಬಿದ್ದವರ ಹಾಗೆ ಮಕ್ಕಳನ್ನು ಕಾರ್ಯಕ್ರಮದ ಸರಕನ್ನಾಗಿ ಮಾಡಿಕೊಂಡು ಚಂದ ನೋಡುತ್ತಿವೆ. ಮಕ್ಕಳಲ್ಲಿ ಅಡಗಿರುವ ಸುಪ್ತ ಪ್ರತಿಭೆಯನ್ನು ಈ ಸಮಾಜಕ್ಕೇ ತೋರಿಸಬೇಕಾದದ್ದೆ. ಈ ನೆಲೆಯಲ್ಲಿ ಆರಂಭಗೊಂಡ ಮಾದ್ಯಮಗಳ ಪ್ರತಿಭಾನ್ವೆಷಣೆ ಕಾರ್ಯಕ್ರಮ ಮೆಚ್ಚತಕ್ಕದ್ದೆ. ಮಗುವೊಂದು ಮುಗ್ದವಾಗಿ ಅಭಿನಯಿಸಿದರೆ, ಮುದ್ದಾಗಿ ಮಾತಾಡಿದರೆ, ಸೊಗಸಾಗಿ ಹಾಡಿದರೆ ಎಲ್ಲರು ಮೆಚ್ಚುತ್ತಾರೆ.. ಮಗುವನ್ನು ಅಭಿನಂದಿಸುತ್ತಾರೆ. ಆದರೆ..?
ಇಂದಿನ ಕೆಲವು ವಾಹಿನಿಗಳು ಮಕ್ಕಳ ಮಾನಸೀಕತೆಯನ್ನು ಮೀರಿರುವ ಅಸಂಬಂಧ, ಅರ್ಥಹೀನ ಕಾರ್ಯಕ್ರಮಗಳನ್ನು ಮಕ್ಕಳಿಂದ ಮಾಡಿಸಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿವೆ. ತಮ್ಮ ಮಗನನ್ನು ಯಾ ಮಗಳನ್ನು ರಾತ್ರಿ ಬೆಳಗಾಗುವುದರೊಳಗೆ ಸೆಲೆಬ್ರಿಟಿ ಮಾಡುವ ಧಾವಂತದಲ್ಲಿ ಪಾಲಕರು ಮಕ್ಕಳನ್ನು ಟಿವಿ ವಾಹಿನಿಗಳ ಸರಕುಗಳನ್ನಾಗಿ ಮಾಡುತ್ತಿದ್ದಾರೆ. ಇದೊಂದು ದುರಂತ? ಅಲ್ಲದಿದ್ದರೆ ಸುಮ್ಮನೆ ಯೋಚನೆ ಮಾಡಿ ನೋಡಿ. ಲಾಲಿಪಾಪು ತಿಂದು ಆಡಿ ನಲಿಯ ಬೇಕಾದ ವಯಸ್ಸಿನ ಮಕ್ಕಳು ಟಿವಿಯಲ್ಲಿ ತಮ್ಮ ಬಾಲ್ಯವನ್ನು ಮೀರಿ ಗಂಡ-ಹೆಂಡತಿ ರಂಪಾಟ, ಪ್ರೀತಿ-ಪ್ರೇಮ-ಪ್ರಣಯ, ಪ್ರೇಮ ದುರಂತ ಕತೆಗಳನ್ನು ಅಭಿನಯಿಸುತ್ತಿವೆ. ಸ್ಟಾರ್ ಸಿನಿಮಾ ನಟ ನಟಿಯರ ಪೂಳ್ಳು ಡೈಲಾಗುಗಳನ್ನು ಸಾಲಾಗಿ ಹೊಡೆದು ಎಲ್ಲರಿಂದ ಚಪ್ಪಾಳೆ ಗಿಟ್ಟಿಸುತ್ತಿರುವುದು ನಿಮಗೆ ಒಂದು ದೊಡ್ಡ ದುರಂತದಂತೆ ಕಾಣುವುದಿಲ್ಲವೇ?
‘ಚಂದ ಮಾಮ ಬಾರೋ..ಚಂದಿರ ಮಾಮ ಬಾರೋ’ ಎಂಬ ಹಾಡಿಗೆ ಕುಣಿಯಬೇಕಿದ್ದ ಮಗು ‘ಚುಂಬಿಸು ಬಾರೋ..ಮುದ್ದಿಸು ಬಾರೋ’ ಹಾಡಿಗೆ ಕುಣಿಯುತ್ತಿದೆ. ‘ನಾಯಿ ಮರಿ ನಾಯಿ ಮರಿ ತಿಂಡಿ ಬೇಕೆ’ ಎಂದು ಕೇಳಬೇಕಿದ್ದ ಮಗು ಹೆಂಡತಿಯಿಂದ ಲಟ್ಟಣಿಗೆಯ ಪೆಟ್ಟು ತಿನ್ನುವ ಪೆದ್ದು ಗಂಡನ ಪಾತ್ರ ಮಾಡುತ್ತಿದೆ.. ಸಾಲು ಸಾಲಾಗಿ ಡಬ್ಬಲ್ ಮಿನಿಂಗ್ ಡೈಲಾಗ್ ಹೊಡೆಯುತ್ತಿವೆ. ಕೈಯಲ್ಲಿ ಪಿಸ್ತೂಲು ಹಿಡಿದು ‘ಎಂತದಾ..ಶೂಟ್ ಮಾಡ್ಬೆಕಾ’ ಎಂದು ಕೇಳುತ್ತಿದೆ. ಜೀವಕ್ಕೆ ಕುತ್ತು ಬರುವ ಸ್ಟಂಟ್ ಗಳನ್ನು , ಸಾಹಸ ದೃಶ್ಯಗಳನ್ನು ಮಾಡುತ್ತಿವೆ. ಹಿಪ್ ಹಾಪ್, ರಾಕ್ ಡ್ಯಾನ್ಸ್ ಗಳಿಗೆ ಸ್ಟೆಪ್ ಹಾಕುತ್ತಿವೆ. ಮಗುವಿನ ವಯಸ್ಸಿಗೂ ಅದರ ಅಭಿನಯಕ್ಕೂ ತಾಳಮೇಳವೇ ಇರುವುದಿಲ್ಲ..ಇದು ವರ್ತಮಾನದ ಟಿವಿ ವೈರುದ್ಯ..
ಟಿವಿ ನಿರೂಪಕರು ಕೆಲವರು ಇದ್ದಾರೆ..’ಪುಟ್ಟಿ ನೀ ಎಷ್ಟು ಕ್ಯೂಟ್ ಇದ್ದೀಯಾ..ನನ್ನೆ ಮದುವೆ ಆಗ್ತೀಯಾ’ ಅಂತ ಒಬ್ಬ ಕೇಳ್ತಾನೆ. ಮದುವೆ ಎಂದರೆ ಏನು ಅಂತಾನೆ ತಿಳಿಯದ ಮಗು ಹಸಿ ಹಸಿಯಾಗಿ ನಾಚಿಕೊಳ್ತದೆ.. ಅವರೇ ಕಲಿಸಿದ ಗಿಳಿಪಾಠ ಅಲ್ಲದೆ ಇದು ಇನ್ನೇನು? ಈ ಕಾರ್ಯಕ್ರಮಗಳನ್ನು ಮನೆಯಲ್ಲಿ ಸದಾ ನೋಡುವ ನಮ್ಮ ಮನೆಯ ಮಕ್ಕಳು ಏನು ಕಲಿತುಕೊಂಡಾರು? ಯೋಚಿಸಿ.
ಮಕ್ಕಳಲ್ಲಿ ಸ್ಪರ್ದಾ ಮನೋಭಾವನೆ ಬೇಕು. ಆದರೆ ಅದಕ್ಕೂ ಮಿತಿ ಉಂಟು. ಈ ಟಿವಿ ತೀರ್ಪುಗಾರರು ದಿನೇ ದಿನೇ ಮಕ್ಕಳಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸಿ ಒಂದೊಂದೇ ಮಗುವನ್ನು ಸೋಲಿಸಿ ಆ ಮಗುವಿನ ಕಣ್ಣೀರನ್ನು ಪ್ರೇಕ್ಷಕರಿಗೆ ತೋರಿಸಿ ಅವರನ್ನು ಅಳಿಸಿ ಸಿಂಪತಿ ಗಿಟ್ಟಿಸಿ ಆ ಮೂಲಕ ಟಿವಿ ಟಿ ಆರ್ ಪಿ ಹೆಚ್ಚಿಸಿಕೊಳ್ಳುವುದು ಮೋಸ ಅಲ್ಲದೆ ಇನ್ನೇನು? ಮಕ್ಕಳ ಮಾನಸೀಕತೆ ತುಂಬ ಸೂಕ್ಷ್ಮ. ಅಲ್ಲಿ ನಾವು ಉದಾತ್ತ ಅಂಶಗಳನ್ನು ತುಂಬುವ ಪಾಠ ಮಾಡಿದರೆ ಮಕ್ಕಳು ಚೆಂದವಾಗಿ ವಿಕಸಿತಗೊಳ್ಳುತ್ತಾರೆ.. ಅದು ಅಲ್ಲದೆ ಮಕ್ಕಳಿಗೆ ಬಾಲ್ಯ ಬಹಳ ಮುಖ್ಯ. ಆ ಬಾಲ್ಯದ ಖುಷಿಯನ್ನು ಮಕ್ಕಳು ಅನುಭವಿಸಿ ಬೆಳೆಯಬೇಕು. ಬಾಲ್ಯದಲ್ಲೇ ದೊಡ್ಡವರ ತರಹ ‘ನಾಟಕ’ ಮಾಡುವುದನ್ನು ಮಕ್ಕಳು ಕಲಿಯಬಾರದು. ಅಷ್ಟಕ್ಕೂ ಮಕ್ಕಳನ್ನು ಕೇಂದ್ರೀಕರಿಸಿ ಕಾರ್ಯಕ್ರಮದ ಸರಕುಗಳನ್ನಾಗಿ ಬಳಸಿಕೊಳ್ಳುವ ಈ ಮಾದ್ಯಮಗಳಿಗೆ ಇತಿ ಮೀತಿ ಹೇರಬೇಡವೆ? ಮಾಧ್ಯಮದ ತಜ್ಞರು ಉತ್ತರಿಸಬೆಕಷ್ಟೆ.