ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಚನ್ನಪಟ್ಟಣದ ಸಂದೇಶ್ ಕುಂಬಾರ ಅವರು ಈ ಬಾರಿಯ `ಕುವೆಂಪು ಯುವ ಕವಿ ಪ್ರಶಸ್ತಿ’ ಪಡೆದಿದ್ದಾರೆ. ಕನ್ನಡ ಸಂಘರ್ಷ ಸಮಿತಿ ವತಿಯಿಂದ ರಾಷ್ಟ್ರಕವಿ ಕುವೆಂಪು ಅವರ 115ನೇ ಹುಟ್ಟಹಬ್ಬದ ಅಂಗವಾಗಿ ಜ.11ರಂದು ಚಾಮರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಅರವಿಂದ ಮಾಲಗತ್ತಿ ಪ್ರಶಸ್ತಿ ಪ್ರದಾನ ಮಾಡಿದರು.ಇದೆ ಸಂದರ್ಭ ಹಿರಿಯ ಸಾಹಿತಿ ಪ್ರೊ.ಜಿ.ಅಬ್ದುಲ್ ಬಷೀರ್ ಅವರಿಗೆ ಅನಿಕೇತನ ಪ್ರಶಸ್ತಿ ಹಾಗೂ ಸಾಹಿತಿ ಡಾ.ಬಸವರಾಜ ಸಬರದ ಅವರ ಪರವಾಗಿ ಪುತ್ರ ಜಯರಾಜ್ ಗೆ ಚಿರಂತನ ಪ್ರಕಾಶನ ದತ್ತಿ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಒಂದು ಸಣ್ಣ ಟೀ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಸಂದೇಶ್ ಕುಂಬಾರ್ ಸಾಹಿತ್ಯ ಕೃಷಿಯಲ್ಲಿ ತನ್ನದೆ ವಿಶೇಷ ವೈಶಿಷ್ಟ್ಯ ಶೈಲಿಯಿಂದ ಹೊಸ ಭರವಸೆಯ ಛಾಪಿನೊಂದಿಗೆ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಕನ್ನಡ ನಾಡು ನುಡಿ ಬಗ್ಗೆ ಅಪಾರ ಅಭಿಮಾನ ಹಾಗೂ ಅಧಮ್ಯವಾದ ಕನ್ನಡ ಸಾಹಿತ್ಯ ಒಲವು ಹೊಂದಿರುವ ಸಂದೇಶ್ ಅವರು ಪ್ರೌಢಶಾಲಾ ಶಿಕ್ಷಣ ಪಡೆದಿದ್ದಾರೆ.