ಗಂಡುಕಲೆ ಯಕ್ಷಗಾನದ ಉಡುಗೆ-ತೊಡುಗೆ ಹೊಲಿಯುವ ಹೆಣ್ಮಗಳು !
ಮಹಿಳಾ ಯಕ್ಷಗಾನದ ಉದಯವಾಗಿ ಸರಿ ಸುಮಾರು ನಲ್ವತ್ತು ವರುಷಗಳಾಗಬಹುದು. ಈ ಅವಧಿಯಲ್ಲಿ ಮೇಳದಲ್ಲಿ ತಿರುಗಾಟ ಮಾಡಿದ ಮಹಿಳಾ ಭಾಗವತರು ಶ್ರೀಮತಿ ಲೀಲಾವತಿ ಬೈಪಾಡಿತ್ತಾಯ ಮಾತ್ರ. ಮೋಹಿನಿ ಭಟ್ ಎಂಬವರು ಅಲ್ಪಕಾಲ ತಿರುಗಾಟ ಮಾಡಿ ಹಿಂದೆ ಸರಿದಿದ್ದಾರೆ. ವಿಜಯಾ ಭಟ್ ಎಂಬವರು ಮದ್ಲೆಗಾರರಾಗಿ ಅತ್ಯಲ್ಪ ಅವಧಿಯಲ್ಲೇ ವಿಮುಖರಾಗಿದ್ದಾರೆ. ಆದರೆ ಹವ್ಯಾಸಿ ಮಹಿಳಾ ಭಾಗವತರು, ಮದ್ಲೆಗಾರರು, ವೇಷಧಾರಿಣಿಯರು ಧಾರಾಳ ಇದ್ದಾರೆ. ಆದರೆ ಪ್ರಸಾದನ ವಿಭಾಗದಲ್ಲಿ ಕಲಾಸೇವೆಯನ್ನು ಕೈಗೆತ್ತಿಕೊಂಡವರು ತೀರಾ ವಿರಳ. ಅಂತಹ ವಿರಳ ಸಂಖ್ಯೆಯ ಯಕ್ಷಗಾನ ಮಹಿಳಾ ಪ್ರಸಾದನ ಕಲಾವಿದೆಯರಲ್ಲಿ ಓರ್ವರು ಇಂದಿರಾ .ಬಿ. ಮೂಲ್ಯ.
ಇಂದಿರಾ ಇರುವುದು ಮುಂಬಯಿ ಮಹಾನಗರದಲ್ಲಿ. ಮೂಲತಃ ಯಕ್ಷಗಾನದ ಆಡುಂಬೊಲವಾದ ಕಟೀಲಿನವರು. ನಿತ್ಯ ಅನುರಣಿಸುವ ಚೆಂಡೆ-ಮದ್ದಳೆಗಳ ನಾದವನ್ನು ಕೇಳುತ್ತಾ ಬೆಳೆದ ಕಟೀಲು ಕ್ಷೇತ್ರದ ಹುಡುಗಿ ಆಟ ನೋಡಿದ್ದು ಬೆರಳೆಣಿಕೆಯಷ್ಟು, ಆಸೆಗಳು ಮಾತ್ರ ಆಕಾಶದಷ್ಟು…
ಕಟೀಲು ಬಾಬು ಮೂಲ್ಯ-ಹೊನ್ನಮ್ಮ ದಂಪತಿ ಪುತ್ರಿ ಇಂದಿರಾ ಒಂದನೇ ತರಗತಿಯಿಂದ ಬಿ.ಎ ಪದವಿಯ ತನಕ ಓದಿದ್ದು ಶ್ರೀಕ್ಷೇತ್ರ ಕಟೀಲಿನ ಶಿಕ್ಷಣ ಸಂಸ್ಥೆಯಲ್ಲಿ. ಅನಂತರ ವಿವಾಹ, ಮುಂಬೈಗೆ ಪಯಣ. ಗೃಹಿಣಿಯ ಹೊಣೆ ನಿರ್ವಹಣೆ. ಅತ್ತೆಯ ಸೇವೆ.. ಹೀಗೆ ಸಾಗುತ್ತಿದ್ದ ಬದುಕಿನಲ್ಲಿ ಕಲಾವಿದೆಯೋರ್ವಳು ಮೈವೆತ್ತಿದ್ದು ಎರಡು ಮಕ್ಕಳ ಅಮ್ಮನಾದ ಬಳಿಕ. ಬಾಲ್ಯದಲ್ಲೇ ಟೈಲರಿಂಗ್ ನಲ್ಲಿ ಆಸಕ್ತಿಯಿದ್ದ ಇಂದಿರಾಗೆ ಯಾಕೋ ಆ ವಿದ್ಯೆ ಕಲಿಯಲಾಗಲಿಲ್ಲ. ಮುಂಬೈಯಲ್ಲಿ ಗೃಹಿಣಿಯ ಪಾತ್ರ ಚೆನ್ನಾಗಿ ನಿರ್ವಹಿಸುತ್ತಾ ಬಿಡುವಿನ ವೇಳೆ ಸೂಜಿ-ನೂಲು ಕೈಗೆತ್ತಿಕೊಂಡರು. ಸುಪ್ರಿಯಾ ಟೀಚರ್ ಅವರಿಂದ ಹೊಲಿಯುವ ಕಲೆಯನ್ನು ಕರಗತ ಮಾಡಿಕೊಂಡ ಇಂದಿರಾ ಹರಿದ ಬಟ್ಟೆಗಳಿಗೆ ತೇಪೆ ಹಾಕುವಲ್ಲಿಂದ ಉಡುಪುಗಳನ್ನು ಹೊಲಿಯುವ ತನಕ ಬೆಳೆಯುತ್ತಾ ಉತ್ತಮ ಲೇಡಿಸ್ ಟೈಲರ್ ಆದರು.
ಒಂದು ಅನಿವಾರ್ಯ ಸಂದರ್ಭ ಮಗಳ ಭರತನಾಟ್ಯ ಕಾರ್ಯಕ್ರಮಕ್ಕೆ ಡ್ಯಾನ್ಸ್ ಉಡುಪು ಬೇಕಿತ್ತು. ಬಾಡಿಗೆಗೆ ಡ್ಯಾನ್ಸ್ ಉಡುಪು ತರುವುದಕ್ಕಿಂತ ತಾನೇ ಹೊಲಿದರೇನು? ಎಂದು ತೋರಿತು. ತಕ್ಷಣ ಬಣ್ಣದ ಬಟ್ಟೆಗಳನ್ನು ಕೊಂಡು ಅದರಲ್ಲಿ ಕಲೆಯನ್ನು ಅರಳಿಸಲು ಪ್ರಯತ್ನಿಸಿದರು. ಪ್ರಥಮ ಪ್ರಯತ್ನವೇ ಯಶಸ್ವಿಯಾಯಿತು. ಬಣ್ಣಗಳ ಹೊಂದಾಣಿಕೆ, ಹೊಲಿಗೆಯ ನಾಜೂಕು ಡ್ಯಾನ್ಸ್ ಟೀಚರಿಗೆ ತುಂಬಾ ಖುಷಿ ನೀಡಿತು. ಪರಿಣಾಮ ನಾಲಸೋಪರ ಕಲಾಕ್ಷೇತ್ರ ಡ್ಯಾನ್ಸ್ ಅಕಾಡೆಮಿಗೆ ವೇಷದ ಉಡುಪುಗಳನ್ನು ಹೊಲಿಯುವ ಅವಕಾಶ ಒದಗಿತು.
ಬಂದ ಅವಕಾಶಗವನ್ನು ಅತ್ಯಂತ ನಿಷ್ಠೆಯಿಂದ ಸದುಪಯೋಗಪಡಿಸಿಕೊಂಡ ಇಂದಿರಾಗೆ ಅಭಿನಯ ಮಂಟಪ ಸಂಸ್ಥೆಯ ’ಅಂಕದ ಬೂಳ್ಯ’, ’ಕಾರ್ನಿಕದ ಶನೀಶ್ವರೆ’ ನಾಟಕಗಳಿಗೆ ಪ್ರಸಾದನವನ್ನು ಒದಗಿಸುವ ಅವಕಾಶವು ಸಿಕ್ಕಿತು. ತನ್ನ ಕಾಯಕದ ಕುಶಲತೆಯಿಂದ ಇವರು ಶೀಘ್ರದಲ್ಲೇ ಪ್ರಸಾದನ ಕಲಾವಿದೆಯಾದರು.
ಸ್ವಯಂಸ್ಪೂರ್ತಿಯಿಂದ ವೇಷಭೂಷಣ ಕಲಿಯಲು ಹೊರಟ ಇವರಿಗೆ ಯಕ್ಷಗಾನದ ಉಡುಪುಗಳನ್ನು ಹೊಲಿಯಲು ಮಾರ್ಗದರ್ಶನ ನೀಡಿದವರು ಪೊಳಲಿ ನಾಗೇಶ ಕುಮಾರ್. ’ಯಕ್ಷಪ್ರಿಯಾ ಬಳಗ’ ಪೊಳಲಿ ನಾಗೇಶ ಅವರು ಮುಂಬೈಯಲ್ಲಿ ಸ್ಥಾಪಿಸಿದ ಸಂಸ್ಥೆ. ಯಕ್ಷಶಿಕ್ಷಣ ನೀಡುವ ಈ ಸಂಸ್ಥೆಗೆ ಇಂದಿರಾ ತನ್ನ ಮಕ್ಕಳನ್ನು ಕಳುಹಿಸಿದರು. ಮಕ್ಕಳ ಆಟಕ್ಕೆ ವೇಷ ಕಟ್ಟುತ್ತಾ ವೇಷಭೂಷಣಗಳ ರಚನೆಯನ್ನು ಸೂಕ್ಷ್ಮವಾಗಿ ನೋಡುತ್ತಾ ತಾನೂ ರಂಗಸ್ಥಳದ ರಾಜ-ಮಹಾರಾಜರ ಉಡುಪಗಳನ್ನು ನೋಡುತ್ತಾ ತಾನೇ ರಂಗಸ್ಥಳದ ರಾಜ-ಮಹಾರಾಜರ ಉಡುಪುಗಳನ್ನು ಹೊಲಿಯಲು ಶುರುವಿಟ್ಟರು. ಮೊದಲಿಗೆ ಮಕ್ಕಳಿಗಾಗಿ ನಿರ್ಮಿಸಿದ ಆಟದ ವಸ್ತ್ರಗಳು ಅತ್ಯಂತ ಚೆನ್ನಾಗಿ ಮೂಡಿಬಂತು. ಅದೇ ಸ್ಪೂರ್ತಿಯಿಂದ ದೊಡ್ಡವರ ವೇಷಕ್ಕೆ ಬೇಕಾದ ರಾಜವೇಷ, ಬಣ್ಣದ ವೇಷ, ಪುಂಡುವೇಷದ ಉಡುಪುಗಳನ್ನು ಹೊಲಿದರು. ಎಲ್ಲವೂ ಯಶಸ್ವಿ ಕುತೂಹಲದ ಕಣ್ಣುಗಳಿಂದ ಯಕ್ಷಗಾನದ ವೇಷಭೂಷಣ ನೋಡುತ್ತಾ, ಕಲಿಯುತ್ತಾ ಬೆಳೆದ ಇಂದಿರಾ ಚೌಕಿ ಕೆಲಸವನ್ನೂ ಮಾಡುತ್ತಾರೆ. ’ಯಕ್ಷಪ್ರಿಯ ಬಳಗ’ದ ಹೆಂಗಸರು ಮಕ್ಕಳ ಆಟದಲ್ಲಿ ಅವರಿಗೆ ವೇಷ ಕಟ್ಟುವ-ಬಿಚ್ಚುವ ಕೆಲಸವನ್ನು ಇವರೇ ಮಾಡುತ್ತಾರೆ.
“ಇದು ಸಂಪಾದನೆಗಲ್ಲ, ನನ್ನ ಕಲಾಸೇವೆ” ಎಂದು ಹೇಳುವ ಶ್ರೀಮತಿ ಇಂದಿರಾ ಬಿ.ಮೂಲ್ಯ, “ಇದರಿಂದ ಸಮಯದ ಸದುಪಯೋಗ ಆಗುತ್ತದೆ. ನನ್ನ ಕಲೆ ರಂಗವೇದಿಕೆಯಲ್ಲಿ ವಿಜೃಂಭಿಸುವಾಗ ತುಂಬಾ ಖುಷಿ ಆಗುತ್ತದೆ. ನನ್ನ ಕಲೆ ರಂಗವೇದಿಕೆಯಲ್ಲಿ ವಿಜೃಂಭಿಸುವಾಗ ತುಂಬಾ ಖುಷಿ ಆಗುತ್ತದೆ” ಎಂದು ಹರ್ಷ ವ್ಯಕ್ತಪಡಿಸುತ್ತಾರೆ. ಇಂದಿರಾ ಮೇಡಂಗೆ ಟಿ.ವಿ ನೋಡುವ ವ್ಯಸನ ಇಲ್ಲ. ದಿನಪತ್ರಿಕೆ ತಪ್ಪದೇ ಓದುತ್ತಾರೆ. ಮನೆವಾರ್ತೆ ಮುಗಿದ ಬಳಿಕ ಬಣ್ಣಬಣ್ಣದ ಬಟ್ಟೆಗಳನ್ನು ಕತ್ತರಿಸಲು ಆರಂಭಿಸುತ್ತಾರೆ. ಏಕಲವ್ಯ ಸಾಧಕಿಯಾಗಿಯೇ ಯಕ್ಷಗಾನದ ವೇಷಗಳ ಉಡುಪುಗಳನ್ನು ಹೊಲಿಯಲು ಕಲಿತ ಇವರಿಗೆ ತನ್ನ ಯಶಸ್ಸಿನ ಕುರಿತು ಧನ್ಯತೆಯಿದೆ.
ಪತಿ ಭಾಸ್ಕರ ಎಮ್ .ಮೂಲ್ಯರು ವೃತ್ತಿಯಲ್ಲಿ ಫೋಟೋಗ್ರಾಫರ್. ಪತ್ನಿಯ ಎಲ್ಲಾ ಚಟುವಟಿಕೆಗಳಿಗೆ ನಿರಂತರ ಪ್ರೋತ್ಸಾಹ ನೀಡುವ ವಿಶಾಲ ಹೃದಯಿ ಇವರು. ಅವರ ಪ್ರೋತ್ಸಾಹದಿಂದ ನನ್ನ ಕನಸುಗಳನ್ನು ಸಾಕಾರಗೊಳಿಸಲು ಸಾಧ್ಯವಾಯಿತು ಎಂದು ವಿನೀತರಾಗಿ ಹೇಳುವ ಈ ಸದ್ ಗೃಹಿಣಿ ಆಸಕ್ತರಿಗೆ ಕಲಿಸುವ ಅಪೇಕ್ಷೆಯನ್ನೂ ವ್ಯಕ್ತಪಡಿಸುತ್ತಾರೆ. ಆದರೆ ಕಲಿಯಲು ಬರುವವರಾರು? ಎಂಬುದು ಇವರ ಪ್ರಶ್ನೆ !
ಹೊಸಹೊಸ ಭಾಗವತರಂತೆ ಹಾಡುವ ಮಹಿಳಾ ಭಾಗವತರಿದ್ದಾರೆ. ಚೆಂಡೆ ಹೆಗಲಿಗೇರಿಸಿಕೊಂಡ ಹೆಂಗಸರನ್ನೂ ಕಾಣಬಹುದು. ಬಣ್ಣದ ವೇಷ ಕಟ್ಟಿ ಆರ್ಭಟಿಸುವವರಿದ್ದಾರೆ. ಪುಂಡುವೇಷ ಧರಿಸಿ ರಂಗಸ್ಥಳ ಹುಡಿ ಹಾರಿಸುವವರಿದ್ದಾರೆ. ರಾಜವೇಷ, ಹಾಸ್ಯ, ಸ್ತ್ರೀವೇಷ, ಅರ್ಥಗಾರಿಕೆ ಎಲ್ಲದಕ್ಕೂ ಮಹಿಳೆಯರಲ್ಲಿ ಕಲಾವಿದೆಯರಿದ್ದಾರೆ. ಆದರೆ ವೇಷ-ಭೂಷಣ ಹೊಲಿಯುವ, ವೇಷ ಕಟ್ಟುವ ಮಹಿಳೆಯರು ಎಷ್ಟಿದ್ದಾರೆ ? ಯಕ್ಷಗಾನದ ಸಾತ್ವಿಕ, ವಾಚಿಕ, ಆಂಗಿಕ ಅಭಿನಯಗಳನ್ನು ಬಿಟ್ಟು ಆಹಾರ್ಯದ ವಿಭಾಗದಲ್ಲಿ ಕಲಾಸೇವೆ ಮಾಡುವ ಇಂದಿರಾ ನಿಜಕ್ಕೂ ಪ್ರಶಂಸನೀಯರು.