ಉಡುಪಿ ಜಿಲ್ಲೆ ಗ್ರಾಮಾಭಿವೃದ್ದಿ ಯೋಜನೆ ಪ್ರಾರಂಭಗೊಳ್ಳುವ ಮೊದಲು ಬಹಳಷ್ಟು ಮಂದಿ ಕೃಷಿಯಲ್ಲಿ ಲಾಭವಿಲ್ಲ ಎಂದು ಹೇಳಿ ಅಥವಾ ಕೂಲಿ ಕಾರ್ಮಿಕರ ಕೊರತೆಯ ಕಾರಣದಿಂದ ತಮ್ಮ ಜಮೀನನ್ನು ಪಾಳುಬಿಟ್ಟು ತಾವು ಬೇರೆ ಪ್ರದೇಶಗಳಿಗೆ ಕೆಲಸಕ್ಕೆ ಹೋಗುತ್ತಿದ್ದರು. ಅದೆಷ್ಟು ಮಂದಿ ತಮ್ಮ ಭೂಮಿಯನ್ನು ಅತೀ ಕಡಿಮೆ ದರದಲ್ಲಿ ಜಮೀನ್ದಾರರಿಗೆ, ವ್ಯಾಪಾರಿಗಳಿಗೆ ಮಾರಾಟ ಮಾಡಿದ ಪ್ರಕರಣ ಕೂಡ ಇವೆ. ಇಂತಹ ಪರಿಸ್ಥಿತಿಯಲ್ಲಿ ಉಡುಪಿ ತಾಲೂಕಿನ ಆವರ್ಸೆ ಎಂಬ ಕುಗ್ರಾಮ ಕೂಡ ಹೊರತಾಗಿಲ್ಲ. ಅಲ್ಲಿನ ಹೆಚ್ಚಿನ ರೈತರು ಇದೇ ವ್ಯವಸ್ಥೆಯನ್ನು ಮುಂದುವರಿಸಿದ್ದರು.
ಆ ಗ್ರಾಮದ ಅತ್ಯಂತ ಬಡ ಕುಟುಂಬದ ವ್ಯಕ್ತಿ ಕೃಷ್ಣ ಕುಲಾಲ್. ಇವರು ಕೂಡ ತನ್ನಲ್ಲಿರುವ 5 ಎಕರೆ ಭೂಮಿಯನ್ನು ಪಾಳುಬಿಟ್ಟು ದೂರದ ಮುಂಬೈಯಲ್ಲಿ ಹೋಟೇಲ್ ಕೆಲಸ ಮಾಡುತ್ತಿದ್ದರು. ತನ್ನ ಜೀವನ ನಿರ್ವಹಣೆಗೆ, ಮಕ್ಕಳ ಶಿಕ್ಷಣಕ್ಕೆ, ಮನೆ ವಾರ್ತೆಗೆ ಹೋಟೇಲ್ ಕೆಲಸದ ಸಂಬಳವೆ ಆಧಾರವಾಗಿತ್ತು. ಇಂತಹ ಪರಿಸ್ಥಿತಿಯಲ್ಲಿ ಅತ್ಯಂತ ಕಷ್ಟದಿಂದ ತನ್ನ ಜೀವನ ಸಾಗಿಸುತ್ತಿದ್ದರು ಕುಲಾಲ್ ರವರು.
ಒಂದು ಬಾರಿ ದೀಪಾವಳಿಯ ಸಂಧರ್ಭದಲ್ಲಿ ಊರಿಗೆ ಬಂದಾಗ ಗ್ರಾಮಾಭಿವೃದ್ದಿ ಯೋಜನೆಯು ಉಡುಪಿ ತಾಲೂಕಿಗೆ ಕಾಲಿರಿಸಿದ ಕ್ಷಣವದು. ಅಂಗಡಿಯಲ್ಲಿ ದಿನಸಿ ವಸ್ತುಗಳನ್ನು ಕೊಳ್ಳುವ ಸಂದರ್ಭದಲ್ಲಿ ಯೋಜನೆಯ ಕಾರ್ಯಕರ್ತ(ಸೇವಾನಿರತ) ರವರ ಪರಿಚಯವಾಯಿತು. ಈ ಸಂಧರ್ಭದಲ್ಲಿ ಅವರು ಪ್ರಗತಿ ಬಂಧು ಸಂಘ ರಚನೆಗೆ ಒತ್ತು ನೀಡಿದಾಗ ತನಗೂ ಕೂಡ ಇಷ್ಟವಿಲ್ಲದೆ ಸಂಘವನ್ನು ರಚನೆ ಮಾಡಿದರು. ಈ ಸಂಘಕ್ಕೆ ಶಂಕರನಾರಾಯಣ ಪ್ರಗತಿ ಬಂಧು ಸಂಘ ಎಂಬ ನಾಮಕರಣದೊಂದಿಗೆ 8 ಮಂದಿ ಸದಸ್ಯರು ಸಂಘ ರಚನೆಗೆ ಸಹಕಾರಿಯಾದರು. ಸೇವಾ ನಿರತರ ನಿರಂತರ ಮಾರ್ಗದರ್ಶನದಿಂದ ತಂಡದ ವಾರದ ಶ್ರಮ ವಿನಿಮಯ ಪ್ರಾರಂಭವಾಯಿತು.
ಕುಲಾಲ್ ರವರ ಪಾಳುಬಿದ್ದ 5 ಎಕರೆ ಪ್ರದೇಶ ನೋಡಿದಾಗ ಉಳಿದವರಿಗೂ ಕೂಡ ಅಲ್ಲಿ ಏನು ಕೆಲಸ ಮಾಡುವುದು, ಇಡೀ ಭೂಮಿ ಕಸ ಕಡ್ಡಿಗಳಿಂದ ತುಂಬಿ ಹೋಗಿತ್ತು. ಕುಲಾಲ್ ರವರು ಈ ಭೂಮಿಯಲ್ಲಿ ಕೆಲಸ ಮಾಡುವುದಕ್ಕಿಂತ ಮುಂಬೈಯಲ್ಲಿ ಹೋಟೇಲ್ ಕೆಲಸ ಮಾಡುವುದೇ ಲೇಸು ಎಂದು ಹೇಳಿ ಮುಂಬೈಗೆ ಹೊರಟು ನಿಂತರು. ಈ ಸಂದರ್ಭದಲ್ಲಿ ಕಾರ್ಯಕರ್ತರು ನೀಡಿದ ಪ್ರೇರಣೆ , ಧೈರ್ಯ ಅವರನ್ನು ಮುಂಬೈಗೆ ಹೋಗುವುದನ್ನು ನಿಲ್ಲಿಸಿತು. ಆ ಭೂಮಿಯಲಿ ್ಲ ನೀರಿಲ್ಲದೆ ಬರಡಾಗಿತ್ತು. ಕುಲಾಲ್ ರವರು ಈ ಬರಡು ಭೂಮಿಯನ್ನು ಏನಾದರೂ ಮಾಡಿ ಹಸಿರುಗೊಳಿಸಬೇಕು ಎಂದು ನಿಶ್ಚಯಿಸಿ ಬಾವಿ ರಚನೆ ಮಾಡಲು ಪ್ರಾರಂಭಿಸಿದರು. ಅವರ ಬಳಿ ಹಣಕಾಸಿನ ವ್ಯವಸ್ಥೆ ಅಷ್ಟೊಂದು ಇರಲಿಲ್ಲ. ತಮ್ಮ ಪ್ರಗತಿ ಬಂಧು ತಂಡದ ಸದಸ್ಯರು ಶ್ರಮ ವಿನಿಮಯ ಮತ್ತು ಯೋಜನೆಯ ಮೂಲಕ 2002 ರಲ್ಲಿ ರೂ.5000/- ಸಾಲ ಪಡೆದು ಬಾವಿ ಕೆಲಸ ಪ್ರಾರಂಭಿಸಿದರು. ಆದರೆ ಅವರ ದುರಾದೃಷ್ಟ ಅಥವಾ ಆ ಜಮೀನಿನ ಪ್ರಭಾವವೊ ಏನೋ ನೀರು ಬರಲಿಲ್ಲ.
ಈ ಸಂದರ್ಭದಲ್ಲಿ ಧೈರ್ಯವನ್ನು ಕಳೆದುಕೊಳ್ಳದೆ ಮಳೆ ನೀರಿನಿಂದ ಮನೆಯ ಖರ್ಚಿಗಾಗಿ ಒಂದು ಗದ್ದೆಯಲ್ಲಿ ಭತ್ತ ಬೆಳೆ ಮಾಡಿದರು. ಈ ಸಂಧರ್ಭದಲ್ಲಿ ಕುಲಾಲ್ ರವರು ಯೋಜನೆಯಲ್ಲಿ ನೀಡಲಾಗುವ ವಿವಿಧ ರೀತಿಯ ಕೃಷಿ ತರಬೇತಿಗಳು, ಸರಕಾರದ ವಿವಿಧ ಇಲಾಖೆಯ ತರಬೇತಿಗಳನ್ನು ಪಡೆದುಕೊಂಡು ನೀರಿಂಗಿಸುವಿಕೆ ಅಥವಾ ಮಳೆನೀರು ಕೊಯ್ಲು ವಿಧಾನಗಳನ್ನು ತನ್ನ ಜಮೀನಿನಲ್ಲಿ ಅಳವಡಿಸಿಕೊಂಡರು.ಇದರ ಪರಿಣಾಮವಾಗಿ ಅವರ ಜಮೀನಿನಲ್ಲಿ ಇಂದು ನೀರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗಿಲ್ಲ. ಈ ಮೂಲಕ ನೀರಿಂಗಿಸುವಿಕೆಯ ಎಲ್ಲಾ ರೀತಿಯ ವಿಧಾನಗಳನ್ನು ಅಳವಡಿಸಿಕೊಂಡು ಅವರು ಯಶಸ್ವಿಗೊಳಿಸಿದ್ದಾರೆ.
ಗ್ರಾಮಾಭಿವೃದ್ದಿ ಯೋಜನೆಯ ಮೂಲಕ ಮತ್ತು ಜಲಾನಯನ ಇಲಾಖೆಯ ವತಿಯಿಂದ ತನ್ನ ಜಮೀನಿನಲ್ಲಿ ಸುಮಾರು 20 ಅಡಿ ಆಳ ಮತ್ತು 200 ಅಡಿ ಅಗಲದ ಕೆರೆಯನ್ನು ಸುಮಾರು 2 ಲಕ್ಷ ರೂ.ವೆಚ್ಚದಲ್ಲಿ ಮಾಡಿದ್ದು, ಇದಕ್ಕೆ ಸಂಘದಿಂದ ರೂ.1 ಲಕ್ಷ ಸಾಲ ಪಡೆದುಕೊಂಡಿದ್ದು, ಇದರ ಪರಿಣಾಮ ಇಂದು ಆವರ್ಸೆ ಗ್ರಾಮದ ಸುಮಾರು 200 ಮನೆಗಳ ಬಾವಿಗಳು ಅಂತರ್ಜಲದಿಂದ ಕೂಡಿವೆ. ಈ ಹಿಂದೆ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ಬರಿದಾಗುತ್ತಿದ್ದ ಬಾವಿಗಳು ಇಂದು ಈ ಕೆರೆಯ ಮೂಲಕ ಅಂತರ್ಜಲವನ್ನು ಹೆಚ್ಚಿಸಿಕೊಂಡಿವೆ.
ಅಕ್ಕಿ ಮಿಲ್ ರಚನೆ: ಗ್ರಾಮಾಭಿವೃದ್ದಿ ಯೋಜನೆಯ ಪ್ರಗತಿಬಂಧು ಸಂಘದ ಮೂಲಕ ರೂ.2 ಲಕ್ಷ ಸಾಲ ಪಡೆದು ಶ್ರೀ.ಕುಲಾಲ್ ರವರು ಅಕ್ಕಿ ಮಿಲ್ನ್ನು ರಚನೆ ಮಾಡಿದ್ದು, ಇಂದು ಅವರ ಅಕ್ಕಿ ಮಿಲ್ ನಲ್ಲಿ ಸಂಘದ ಸದಸ್ಯರು ಕೆಲಸ ಮಾಡುತ್ತಿದ್ದಾರೆ. ಮಿಲ್ಲಿನ ಬೂದಿಯನ್ನು ತನ್ನ ಕೃಷಿಗೆ ಬಳಸುತ್ತಾರೆ.ಅಲ್ಲದೇ ಈ ಬೂದಿಯಿಂದ ಗೊಬ್ಬರವನ್ನು ತಯಾರಿಕೆ ಮಾಡಿ ತರಕಾರಿ ಮುಂತಾದ ಬೆಳೆಗಳಿಗೆ ಹಾಕುತ್ತಾರೆ.
ಸಿಮೆಂಟ್ ಚೀಲದಲ್ಲಿ ತರಕಾರಿ ಕೃಷಿ: ಕುಲಾಲ್ ರವರು ಮಳೆಗಾಲದ ಸಮಯದಲ್ಲಿ ಅಕ್ಕಿ ಮಿಲ್ಲಿನ ಅಂಗಳವನ್ನು ತನ್ನ ಕೃಷಿಗೆ ಬಳಸಿಕೊಂಡಿರುವುದು ಸಂತೋಷದಾಯಕ ಯಾಕೆಂದರೆ ಹೆಚ್ಚಿನ ರೈತರು ಜಾಗವನ್ನು ಖಾಲಿ ಬಿಟ್ಟು ಕೃಷಿಗೆ ಜಾಗವಿಲ್ಲ ಎಂದು ಹೇಳುವ ಮಂದಿ ಬಹಳಷ್ಟು ಇದ್ದಾರೆ. ಆದರೆ ಇವರು ಸಿಮೆಂಟ್ ಚೀಲಗಳನ್ನು ಸಂಗ್ರಹಿಸಿ ಅದರಲ್ಲಿ ಗೊಬ್ಬರ(ಹಟ್ಟಿ), ಮಣ್ಣು ಮುಂತಾದವುಗಳನ್ನು ಸೇರಿಸಿ ಬೆಂಡೆ, ಅಲಸಂಡೆ, ಕುಂಬಳಕಾಯಿ ಮುಂತಾದವುಗಳನ್ನು ಬೆಳೆಸಿ ಅದರಲ್ಲಿ ಹೆಚ್ಚಿನ ಲಾಭವನ್ನು ಪಡೆದಿರುತ್ತಾರೆ. 2014-15 ನೇ ಸಾಲಿನಲ್ಲಿ ಅವರು ಈ ಕೃಷಿಯಿಂದ ಸುಮಾರು 80000/- ರೂ.ಆದಾಯ ಪಡೆದಿರುತ್ತಾರೆ.ಇದಕ್ಕೆ ಸಂಘದ ಮೂಲಕ ಆಯೋಜಿಸಿದ ಕೃಷಿ ತರಬೇತಿ ಕಾರ್ಯಕ್ರಮದಿಂದ ಮಾಹಿತಿಯನ್ನು ಪಡೆದು ಅದನ್ನು ಅನುಷ್ಠಾನ ಮಾಡಿದ್ದಾರೆ.
ತರಕಾರಿ ಬೀಜ, ಎರೆಗೊಬ್ಬರ ಮಾರಾಟ: ಕುಲಾಲ್ ರವರು ತನ್ನಲ್ಲಿ ಸಾವಯವ ಮಾದರಿಯಲ್ಲಿ ಬೆಳೆದ ತರಕಾರಿ ಬೀಜಗಳನ್ನು ಸಂಗ್ರಹಿಸಿ ಅದನ್ನು ಸಣ್ಣ ಸಣ್ಣ ಪೊಟ್ಟಣಗಳನ್ನಾಗಿ ಮಾಡಿ ಮಾರಾಟ ಮಾಡುತ್ತಾರೆ. ಇವರ ತರಕಾರಿ ಬೀಜಗಳಿಗೆ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಬಹಳಷ್ಟು ಮಂದಿ ರೈತರು ಇವರ ಮನೆಗೆ ಬಂದು ತರಕಾರಿ ಬೀಜಗಳನ್ನು ತೆಗೆದುಕೊಂಡು ಹೋಗುತ್ತಾರೆ. ಕೃಷಿ ಮೇಳ, ವಿಚಾರ ಸಂಕಿರಣ ಮುಂತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಲ್ಲಿ ಅವರು ಬೆಳೆದ ತರಕಾರಿ ಬೀಜಗಳನ್ನು ಮಾರಾಟ ಮಾಡುತ್ತಾರೆ. ಕಳೆದ ವರ್ಷ ಯೋಜನೆ ವತಿಯಿಂದ ನಡೆದ ಕೃಷಿ ಮೇಳದಲ್ಲಿ ಇವರು ಸುಮಾರು 1 ಲಕ್ಷ ರು.ಮೌಲ್ಯದ ಬೀಜ ಮಾರಾಟ ಮಾಡಿದ್ದಾರೆ. ಅಲ್ಲದೇ 2 ಎರೆಗೊಬ್ಬರ ತೊಟ್ಟಿಯನ್ನು ರಚನೆ ಮಾಡಿದ್ದು, ಇದರಲ್ಲಿ ತಯಾರಿಸಿದ ಎರೆಗೊಬ್ಬರವನ್ನು ತನ್ನ ಕೃಷಿಗೆ ಬಳಸಿಕೊಂಡು ಉಳಿದ ಗೊಬ್ಬರವನ್ನು ಕೆ.ಜಿ.ಗೆ 20 ರೂ.ನಂತೆ ಮಾರಾಟ ಮಾಡುತ್ತಾರೆ.ಪ್ರತಿ ವರ್ಷ ಸರಾಸರಿ 70,000/- ರೂ.ಮೌಲ್ಯದ ಗೊಬ್ಬರವನ್ನು ಮಾರಾಟ ಮಾಡುತ್ತಾರೆ.
ಕೋಳಿ ಸಾಕಾಣಿಕೆ / ಹೈನುಗಾರಿಕೆ:
ಕುಲಾಲ್ ರವರು ಯೋಜನೆಯ ಮೂಲಕ ರೂ.2 ಲಕ್ಷ ಸಾಲ ಪಡೆದು ಕೋಳಿ ಸಾಕಾಣಿಕೆ ಮಾಡಿರುತ್ತಾರೆ. ಹೆಚ್ಚಾಗಿ ನಾಟಿ ಕೋಳಿ, ಗಿರಿರಾಜ, ಸ್ವರ್ಣಧಾರ, ಮುಂತಾದ ತಳಿಯ ಕೋಣಿ ಸಾಕಾಣಿಕೆ ಮಾಡಿದ್ದು, ಉತ್ತಮ ಲಾಭ ಗಳಿಸಿರುತ್ತಾರೆ. ತಿಂಗಳಿಗೆ ಸರಾಸರಿ 30000/- ರೂ.ಲಾಭ ಇದರಿಂದ ಬರುತ್ತಿದೆ.ಮನೆಯಲ್ಲಿ ಉತ್ತಮವಾದ ಹಟ್ಟಿ ರಚನೆ ಮಾಡಿ ಹೈನುಗಾರಿಕೆ ಮಾಡುತ್ತಿದ್ದು, ಪ್ರತಿ ದಿನ 80 ಲೀ. ಹಾಲನ್ನು ಡೈರಿಗೆ ಹಾಕುತ್ತಾರೆ. ಹಟ್ಟಿ ರಚನೆಗೆ ಯೋಜನೆ ಮೂಲಕ 25000/- ರೂ. ಸಾಲ ಪಡೆದಿರುತ್ತಾರೆ ಅಲ್ಲದೆ ಕೆಲಸ ಕಾರ್ಯಗಳನ್ನು ತನ್ನ ಸಂಘದ ಸದಸ್ಯರು ಶ್ರಮ ವಿನಿಮಯದ ಮೂಲಕ ಮಾಡಿರುತ್ತಾರೆ.
ಕುಮ್ಕಿ ಜಾಗದಲ್ಲಿ ತರಕಾರಿ ಕೃಷಿ:
ಕುಲಾಲ್ ರವರು ಯೋಜನೆಯ ಮೂಲಕ ನಡೆಯುತ್ತಿರುವ ವಿವಿಧ ರೀತಿಯ ಕೃಷಿ ಸಂಬಂಧಿತ ಕಾರ್ಯಕ್ರಮಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಅಲ್ಲಿ ಸಿಕ್ಕಿದ ಮಾಹಿತಿಯಿಂದ ಸಾವಯವ ಮಾದರಿಯಲ್ಲಿ ತರಕಾರಿ ಕೃಷಿಗಳನ್ನು ಅತ್ಯಂತ ಯಶಸ್ವಿಯಾಗಿ ಮಾಡಿರುತ್ತಾರೆ. ಮುಖ್ಯವಾಗಿ ಯಾವುದೇ ರೀತಿಯ ನೀರಿನ ಆಶ್ರಯವಿಲ್ಲದ ನಿರುಪಯುಕ್ತ ಗುಡ್ಡೆ ಜಾಗದಲ್ಲಿ ಗೇರು ಗಿಡಗಳನ್ನು ನಾಟಿ ಮಾಡಿದ್ದಾರೆ. ಮಳೆಗಾಲದ ಸಮಯದಲ್ಲಿ ಗೇರು ಗಿಡದ ಬುಡದಲ್ಲಿ ತರಕಾರಿಗಳನ್ನು ನಾಟಿ ಮಾಡಿದ್ದಾರೆ. ಇದರ ಮೂಲಕ ಹೆಚ್ಚಿನ ಲಾಭವನ್ನು ಅವರು ಪಡೆದಿರುತ್ತಾರೆ.ಒಂದು ಕಾಲದಲ್ಲಿ ಪಾಳುಬಿದ್ದ ಈ ಪ್ರದೇಶ ಇಂದು ಸಂಘದ ಮೂಲಕ ಶ್ರಮ ವಿನಿಮಯ ಮಾಡುವುದರ ಮೂಲಕ ಹಸಿರಾಗಿ ಕಂಗೊಳಿಸುತ್ತಿದೆ. ಅಲ್ಲದೇ ನೋಣಿ ಗಿಡಗಳನ್ನು (ಔಷದೀಯ ಸಸ್ಯ) ನಾಟಿ ಮಾಡಿ ಅದರ ಮೂಲಕ ನಾಟಿ ಔಷದಿಯನ್ನು ಕೂಡ ತಯಾರಿಸಿ ತನ್ನ ಕುಟುಂಬದ ಆರೋಗ್ಯವನ್ನು ಕಾಪಾಡಿಕೊಳ್ಳುತ್ತಿದ್ದಾರೆ. ಯೋಜನೆಯಿಂದ ಸಂಪೂರ್ಣ ಸುರಕ್ಷಾ (ಆರೋಗ್ಯ ವಿಮೆ), ಜೀವನ ಮಧುರ(ಜೀವ ವಿಮೆ), ಪಿಂಚಣಿ ಗಳನ್ನು ಮಾಡಿದ್ದು, ಯೋಜನೆಯ ಮೂಲಕ ಮತ್ತು ವಿವಿಧ ರೀತಿಯ ತರಬೇತಿಯ ಮೂಲಕ ಅವರು ಒಬ್ಬ ಆದರ್ಶ ಕೃಷಿಕರಾಗಿ ಮೆರೆದಿದ್ದಾರೆ. ಯಾವುದೇ ಸಾಫ್ಟ್ ವೇರ್ ಕಂಪನಿಯ ನೌಕರರಿಗೆ ಕಡಿಮೆ ಇಲ್ಲದೆ ಕೃಷಿಯಿಂದ ಆದಾಯ ಪಡೆಯುತ್ತಿದ್ದಾರೆ.ಓದಿದ್ದು 7 ನೇ ತರಗತಿಯಾದರೂ ತನ್ನ ಅಪಾರವಾದ ಕೃಷಿ ಜ್ಞಾನದಿಂದ ಬ್ರಹ್ಮಾವರ ಕೃಷಿ ವಿಜ್ಞಾನ ಕೇಂದ್ರ ಕೃಷಿ ವಿಜ್ಞಾನಿಗಳಿಗೆ ಪಾಠ ಹೇಳುವಷ್ಟು ಅವರು ಬೆಳೆದಿದ್ದಾರೆ.
ಅವರ ಮಾತಿನಂತೆ ಒಂದು ವೇಳೆ ನಾನು ಅದೇ ಹೋಟೆಲ್ ನೌಕರನಾಗಿದ್ದರೆ ನಾನು ಹಾಗೆ ಇರುತ್ತಿದ್ದೆ. ಆದರೆ ನನ್ನ ಈ ಸಾಧನೆಗೆ ಕಾರಣ ಗ್ರಾಮಾಭಿವೃದ್ದಿ ಯೋಜನೆ ಎಂದು ಅವರು ಮನ ತುಂಬಿ ಹೇಳುತ್ತಾರೆ.ಅವರ ಸಾಧನೆಗೆ ಕರ್ನಾ ಟಕ ರಾಜ್ಯ ಸರಕಾ ರದ ಕೃಷಿ ಪಂಡಿತ ಪ್ರಶಸ್ತಿ, ಯೋಜನೆಯ ಕೃಷಿ ಮೇಳದಲ್ಲಿ ಸನ್ಮಾನ ದೊರಕಿರುತ್ತದೆ. ಕುಲಾಲ್ ರವರನ್ನು ಮಾತನಾಡಿಸಿ ದಾಗ ಅವರು ಹೇಳಿದಿಷ್ಟು ರೈತರು ಕೃಷಿಯಿಂದ ಲಾಭವಿಲ್ಲ ಎಂದು ಹೇಳಿ ಇತರ ಕೆಲಸಕ್ಕೆ ಹೋಗುವ ಬದಲು ಸರಿಯಾದ ಮಾಹಿತಿ ಪಡೆದು ಕೃಷಿ ಮಾಡಿದ್ದಲ್ಲಿ ಖಂಡಿತವಾಗಿಯೂ ಲಾಭ ಇದೆ.ನನ್ನ ಸಾಧನೆ ಅದು ಗ್ರಾಮಾಭಿವೃದ್ದಿ ಯೋಜನೆಯ ಸಂಘದ ಮೂಲಕ ಮತ್ತು ಪ್ರಗತಿ ನಿಧಿ (ಕಿರು ಆರ್ಥಿಕ ವ್ಯವಹಾರ) ಮೂಲಕ ನಡೆದಿದೆ. ನಾನು ಮೊದಲು ಕೃಷಿಯಲ್ಲಿ ತೊಡಗಿಸಿಕೊಂಡಾಗ ನನಗೆ ಯಾರೂ ಕೂಡ ಆರ್ಥಿಕ ಸಹಾಯ ಮಾಡಿಲ್ಲ. ಆಗ ನನಗೆ ಆಧಾರವಾಗಿದ್ದು ಯೋಜನೆಯ ಪ್ರಗತಿ ಬಂಧು ಸಂಘ.ಇದರ ಮೂಲಕ ಸಾಲ ಪಡೆದು ಇಂದು ನನಗೆ ಈ ರೀತಿಯ ಕೃಷಿ ಮಾಡಲು ಸಾಧ್ಯುವಾಯಿತು.ಅಂದು ನನಗೆ ಯಾವ ಬ್ಯಾಂಕ್ ನವರು ಕೂಡ ಸಾಲ ನೀಡಿಲ್ಲ. ಆದರೆ ಇಂದು ಅವರೇ ಸಾಲ ನೀಡಲು ಒತ್ತಾಯ ಮಾಡಿದ್ದಾರೆ.ಗ್ರಾಮಾಭಿವೃದ್ದಿ ಯೋಜನೆಯು ಇಲ್ಲದಿದ್ದರೆ ನಾನು ಬರೇ ಕಾಮರ್ಿಕನಾಗಿ ಉಳಿಯುತ್ತಿದ್ದೆ.ಇಂದು ಸಂಘದ ಮೂಲಕ ಮನೆ ರಚನೆ, ಹಟ್ಟಿ ರಚನೆ, ಜಾಗ ಖರೀದಿ, ಅಕ್ಕಿ ಮಿಲ್ ರಚನೆ, ಮಕ್ಕಳಿಗೆ ವಿದ್ಯಾಭ್ಯಾಸ, ತಂಗಿಯಂದಿಯರಿಗೆ ಮದುವೆ, ಮಾಡಿರುತ್ತೇನೆ ಎಂದು ಅವರು ಹೇಳುತ್ತಾರೆ.ಅವರ ಸಾಧನೆ ನಿಜಕ್ಕೂ ಅಧ್ಬುತವಾಗಿದೆ.ಒಬ್ಬ ಕೃಷಿಕನಿಗೆ ಆಥರ್ಿಕ ಮತ್ತು ಮಾಹಿತಿ ಸಹಾಯ ನೀಡಿದ್ದಲ್ಲಿ ಆತ ಯಾವ ರೀತಿ ಬೆಳೆಯಬಹುದು ಎಂಬುದಕ್ಕೆ ಶ್ರಿಯುತ ಕುಲಾಲ್ ರವರು ಸಾಕ್ಷಿಯಾಗಿದ್ದಾರೆ.
ಅವರು ತನ್ನ ಸಾಧನೆಗೆ ನೆರವಾದ ಶ್ರೀ.ವೀರೇಂದ್ರ ಹೆಗ್ಗಡೆಯವರು ಮತ್ತು ಯೋಜನೆಯ ಕಾರ್ಯಕರ್ತರುಗಳನ್ನು ನೆನೆಯುತ್ತಾರೆ. ಕುಲಾಲ್ ರವರು ತನ್ನ ಸಾಧನೆಗೆ ಮೈಗೂಡುಸಿದ್ದು ತನ್ನ ಅಪಾರವಾದ ಇಚ್ಚಾ ಶಕ್ತಿ ಮತ್ತು ಸಾಧಿಸುವ ಛಲ. ಇಲ್ಲದಿದ್ದರೆ ಅವರು ಏನು ಕೂಡ ಮಾಡಲು ಆಗುತ್ತಿರಲಿಲ್ಲ. ಪ್ರಗತಿಬಂಧು ಸಂಘದಿಂದ ಹೆಚ್ಚಿನ ಉಪಯೋಗ ಪಡೆದು ಆಥರ್ಿಕ ವ್ಯವಹಾರವನ್ನು ನಡೆಸಿ ಸಂಘದ ಶ್ರಮ ವಿನಿಮಯ ಮಾಡುವುದರ ಮೂಲಕ ಈ ಸಾಧನೆ ಮಾಡಿದ್ದಾರೆ. ತಿಂಗಳಿಗೆ ಸರಾಸರಿ 40000/- ಕ್ಕೂ ಮಿಕ್ಕಿ ಆದಾಯ ಪಡೆಯುತ್ತಿರುವ ಕುಲಾಲ್ ರವರು ನಮ್ಮ ಕೃಷಿಕರಿಗೆ ಮಾದರಿಯಾಗಿದ್ದಾರೆ ಎಂದು ಹೇಳಬಹುದು.ಒಟ್ಟಾಗಿ ಕಿರು ಆರ್ಥಿಕ ವ್ಯವಹಾರ ಮತ್ತು ಪ್ರಗತಿ ಬಂಧು ಸಂಘದ ಮೂಲಕ ಅವರು ಶೂನ್ಯದಿಂದ ಮೇಲೆ ಬಂದು ಇಂದು ಸಮಾಜದಲ್ಲಿ ಗಣ್ಯ ವ್ಯಕ್ತಿಯಾಗಿ ಮೆರೆಯುತ್ತಿದ್ದಾರೆ. ಅವರ ಸಾಧನೆ ಮತ್ತಷ್ಟು ಹೆಚ್ಚಾಗಲಿ ಎಂಬುದು ನಮ್ಮ ಶುಭ ಹಾರೈಕೆ.







