‘ದೀಪದ ಕೆಳಗಿನ ಕತ್ತಲು’ ಈ ಕುಂಬಾರರ ಬದುಕು. ದೀಪಾವಳಿಯ ಸಂದರ್ಭದಲ್ಲಿ ಹೆಚ್ಚಾಗಿ ಮನೆ ಮನೆಯಲ್ಲೂ ಉಪಯೋಗಿಸುವ ಮಣ್ಣಿನ ಹಣತೆಯನ್ನು ಇವರೇ ತಯಾರಿಸುತ್ತಾರಾದರೂ ‘ಎಣ್ಣೆಯೇ ಇಲ್ಲದ ಹಣತೆ’ ಬದುಕು ಇವರದಾಗಿದೆ. ಜಾಗತೀಕರಣ, ಉದಾರೀಕರಣದ ಕಬಂಧಬಾಹುವಿಗೆ ಸಿಕ್ಕಿ ತತ್ತರಿಸುವ ನೇಕಾರಿಕೆ, ಮೀನುಗಾರಿಕೆ, ಕಷಿ, ಮರಗೆಲಸ ಮುಂತಾದ ಗುಡಿಕೈಗಾರಿಕೆಗಳ ಸಾಲಿಗೆ ಸೇರುವ ಈ ಕುಂಬಾರಿಕೆ ವತ್ತಿಯನ್ನು ಈಗಲೂ ಜೀವನಾಧಾರವಾಗಿ ಹೊಂದಿರುವವರ ಸಂಖ್ಯೆ ವಿರಳವಾಗುತ್ತಾ ಸಾಗುತ್ತಿದೆ.
ವತ್ತಿಯೆಲ್ಲವೂ ‘ಪ್ರತಿಷ್ಠೆ’ಯಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ, ‘ಮಣ್ಣಿ’ನಲ್ಲೇ ಬದುಕು ಕಂಡುಕೊಳ್ಳುವ ಈ ವತ್ತಿಯಿಂದ ಯುವ ತಲೆಮಾರು ಮಾರು ದೂರ ಓಡುತ್ತಿದೆ. ಮಣ್ಣನ್ನು ತುಳಿದು ಹದ ಮಾಡಿ, ಅದರಿಂದ ತರಹೇವಾರಿ ಪಾತ್ರೆಗಳನ್ನು ತಯಾರಿಸಿ ಸಂತೆ ಸಂತೆಗಳಲ್ಲಿ ಅದನ್ನು ಜನರಿಗೆ ತಲುಪಿಸುವ ‘ಭಕ್ತ ಕುಂಬಾರರು’ ಇಂದು ಕಡಿಮೆಯಾಗಿದ್ದಾರೆ.
‘ನಮ್ಮ ವತ್ತಿಗೆ ಮೂಲಸೆಲೆಯಾದ ಜೇಡಿ ಮಣ್ಣು ಅಥವಾ ಕೊಜೆ ಮಣ್ಣು ಇಂದು ಸಿಗುತ್ತಿಲ್ಲ. ಹಿಂದೆ ಈ ಮಣ್ಣು ಧಾರಾಳವಾಗಿದ್ದ ಪ್ರದೇಶಗಳೆಲ್ಲಾ ಇಂದು ಹೌಸ್ಸೈಟ್ಗಳಾಗಿ ಬಿಕರಿಯಾಗುತ್ತಿವೆ. ಇನ್ನೊಂದು ನಮಗೆ ಬೇಕಾದ ಸೌಧೆಯ ಕೊರತೆ. ಕಟ್ಟಿಗೆಯನ್ನು ಪಡೆಯಲು ನಾವು ಪಡುವ ಅಧ್ವಾನದಿಂದ ವತ್ತಿಯ ಮೇಲೆ ನಮಗೆ ಜಿಗುಪ್ಸೆ ಹುಟ್ಟುವಂತಾಗುತ್ತದೆ ಎಂದು ಕುಂಬಾರಿಕೆ ವತ್ತಿಯಿಂದಲೇ ಜೀವನ ಸಾಗಿಸುವ ಸಾಧು ಕುಲಾಲ್ ಹೇಳುತ್ತಾರೆ.
ಬ್ರಹ್ಮಾವರ ಸಮೀಪದ ಕುಂಜಾಲು ಗ್ರಾಪಂ ವ್ಯಾಪ್ತಿಯ ಆರೂರು ಕೀರ್ತಿನಗರದಲ್ಲಿ ಕುಂಬಾರಿಕೆ ವತ್ತಿಯನ್ನೇ ಬದುಕಾಗಿ ಸ್ವೀಕರಿಸಿರುವ ನಾಲ್ಕಾರು ಕುಟುಂಬಗಳಲ್ಲಿ ಸಾಧು ಕುಲಾಲ್ ಅವರೂ ಒಬ್ಬರು. ಕಳೆದ 20 ವರ್ಷಗಳಿಂದ ತಾನು ಈ ವತ್ತಿಯಲ್ಲಿದ್ದೇನೆ. ಈಗೀಗ ಪಾತ್ರೆಗಳಿಗೆ ಒಳ್ಳೆಯ ಬೇಡಿಕೆ ಇದೆ. ಆದರೆ ಅದನ್ನು ತಯಾರಿಸುವವರೇ ಇಲ್ಲ. ಕುಲಕಸುಬನ್ನೇ ನಂಬಿರುವ ನನ್ನಂಥವರು ಇದನ್ನು ಮುಂದುರಿಸಲು ನೂರೆಂಟು ವಿಘ್ನಗಳು ಎಂದು ಅವರು ತಮ್ಮ ಬದುಕಿನ ಕಹಿಯನ್ನು ಬಿಚ್ಚಿಡುತ್ತಾರೆ.
ಇಂದು ನಮಗಿರುವುದು ಮಣ್ಣು ಮತ್ತು ಕಟ್ಟಿಗೆ ಸಮಸ್ಯೆ. ಪಾತ್ರೆ ತಯಾರಿಸಲು ಬೇಕಾಗುವ ಜೇಡಿಮಣ್ಣಿರುವ ಪ್ರದೇಶವೇ ವಿರಳವಾಗುತ್ತಿದೆ. ಇದ್ದರೂ ಮಣ್ಣು ತೆಗೆಯಲು ಸಮಸ್ಯೆಗಳೆದುರಾಗುತ್ತಿದೆ. ಮಣ್ಣನ್ನು ಆಯ್ಕೆ ಮಾಡಲು, ತರಲು ನಾವೇ ಹೋಗಬೇಕು. ನಂತರ ಅದನ್ನು ಕುಟ್ಟಿ ಹದ ಮಾಡಬೇಕು. ಹೀಗಾಗಿ ಇಂದಿನ ತಲೆಮಾರು ಇತ್ತ ತಲೆಹಾಕುವುದಿಲ್ಲ ಎನ್ನುತ್ತಾರೆ ಅವರು.
ನಮ್ಮ ವತ್ತಿಗೆ ಸರಕಾರದಿಂದ ವಿಶೇಷ ಪ್ರೋತ್ಸಾಹವೇನೂ ಸಿಗುವುದಿಲ್ಲ. ಕಷಿಗೆ, ನೇಕಾರರಿಗೆ, ಮೀನುಗಾರರಿಗೆ ಸರಕಾರ ಘೋಷಿಸಿರುವ ವಿಶೇಷ ಸಾಲ ಯೋಜನೆ ಇತರ ಪ್ರೋತ್ಸಾಹ ನಮಗೂ ಸಿಗುವಂತಾಗಬೇಕು ಎಂಬುದು ಅವರ ಬೇಡಿಕೆ.
ಹಿಂದೆಲ್ಲಾ ದೀಪಾವಳಿ ವೇಳೆಗೆ ಒಂದೊಂದು ಮನೆಯವರು ಐದಾರು ಸಾವಿರ ವಿವಿಧ ಗಾತ್ರ, ನಮೂನೆಯ ಹಣತೆಯನ್ನು ತಯಾರಿಸಿ ಮಾರುಕಟ್ಟೆಗೆ ಬಿಡುತ್ತಿದ್ದರು. ಆದರೆ ಇಂದು ಪಿಂಗಾಣಿ ಹಣತೆಗಳು ಬಂದು ನಮ್ಮ ಹೊಟ್ಟೆಯ ಮೇಲೆ ಕಲ್ಲು ಹಾಕುತ್ತಿವೆ. ಇವುಗಳ ಮಾರಾಟದಿಂದ ಹೆಚ್ಚಿನ ಲಾಭವೂ ಸಿಗುತ್ತಿಲ್ಲ ಎಂದು ಸಾಧು ಕುಲಾಲ್ ಹೇಳುತ್ತಾರೆ.
ಉಡುಪಿ ಜಿಲ್ಲೆಯಲ್ಲಿ ಸುಮಾರು ಒಂದು ಲಕ್ಷ ಕುಂಬಾರ ಜನಾಂಗದವರಿದ್ದಾರೆ. ಇವುಗಳಲ್ಲಿ ಈಗ ಕುಂಬಾರಿಕೆಯನ್ನು ನಡೆಸುವ 50-60 ಕುಟುಂಬಗಳೂ ಸಿಗುವುದಿಲ್ಲ. ಆರೂರು ಕೀರ್ತಿನಗರ, ಪೆರ್ಡೂರು ಆಸುಪಾಸು, ಕುಂದಾಪುರದ ಸಿದ್ಧಾಪುರಗಳಲ್ಲಿ ಕೆಲವು ಕುಟುಂಬಗಳು ಈಗಲೂ ಕುಂಬಾರಿಕೆ ವತ್ತಿಯನ್ನು ಜೀವನಾಧಾರವಾಗಿ ಅವಲಂಬಿಸಿ ಕುಲಕಸುಬನ್ನು ಉಳಿಸಲು ಹೆಣಗುತ್ತಿವೆ ಎಂದು ಕುಂಜಾಲು ಗ್ರಾ.ಪಂ. ಉಪಾಧ್ಯಕ್ಷ ರಾಜು ಕುಲಾಲ್ ಹೇಳುತ್ತಾರೆ.
ಇದಕ್ಕೆ ಈ ವತ್ತಿಗೆ ಅಗತ್ಯವಾದ ಮಣ್ಣು ಮತ್ತು ಕಟ್ಟಿಗೆ ಕೊರತೆ ಒಂದು ಕಾರಣವಾದರೆ, ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ದೊರೆಯದಿರುವುದೂ ಇನ್ನೊಂದು ಕಾರಣ ಎಂದು ರಾಜು ಕುಲಾಲ್ ವಿವರಿಸಿದರು. ಇದರ ಉಳಿವಿಗಾಗಿ, ಆಸಕ್ತಿಯುಳ್ಳವರಿಗೆ ಸೂಕ್ತ ತರಬೇತಿಗೆ ಸರಕಾರ ವ್ಯವಸ್ಥೆ ಮಾಡಬೇಕು. ಈ ಗುಡಿಕೈಗಾರಿಕೆಗೆ ಬ್ಯಾಂಕ್ಗಳು ಕಷಿ ಹಾಗೂ ಮೀನುಗಾರರಿಗೆ ನೀಡುವಂತೆ ಶೇ.1ರ ಬಡ್ಡಿದರದಲ್ಲಿ ಸಾಲ ನೀಡಬೇಕು. ಈ ವತ್ತಿ ಮುಂದಿನ ತಲೆಮಾರಿ ನಲ್ಲೂ ಮುಂದುವರಿಯಬೇಕಾದರೆ ಸರಕಾರ ಕೆಲವು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜು ಕುಲಾಲ್ ಸಲಹೆ ನೀಡುತ್ತಾರೆ.
ಹಿಂದೆಲ್ಲಾ ದೀಪಾವಳಿ ಸಂದರ್ಭದಲ್ಲಿ ಇಲ್ಲಿ ತಯಾರಾಗುತ್ತಿದ್ದ ಹಣತೆಗೆ ಭಾರೀ ಬೇಡಿಕೆ ಇದ್ದರೆ, ಇಂದು ಅದನ್ನು ಕೇಳುವವರೇ ಇಲ್ಲ. ಹೀಗಾಗಿ ಎಣ್ಣೆಯೇ ಇಲ್ಲದ ದೀಪ (ಹಣತೆ) ಇವರ ಬದುಕು ಎಂಬಂತಾಗಿದೆ.