ಆಧುನಿಕತೆಯ ಸುಳಿಗೆ ಸಿಲುಕಿ ನಲುಗಿದ ಕುಂಬಾರಿಕೆ, ಮಡಕೆಗೆ ಕುಸಿದ ಬೇಡಿಕೆ
ಮೊಳಕಾಲ್ಮುರು: ಮಣ್ಣಿಗೆ ರೂಪ ಕೊಡುವ ಚಾಕಚಕ್ಯತೆ ಹೊಂದಿರುವ ಕುಂಬಾರರು, ತಮ್ಮ ಜೀವನಕ್ಕೆ ಸ್ಪಷ್ಟ ಚಿತ್ರಣ ಕೊಡಲು ಕಷ್ಟಪಡುತ್ತಿದ್ದಾರೆ. ತಾಲ್ಲೂಕಿನ ಕುಂಬಾರ ಕುಟುಂಬಗಳ ಆರ್ಥಿಕ, ಸಾಮಾಜಿಕ ಪರಿಸ್ಥಿತಿ ಇದಕ್ಕೆ ಸಾಕ್ಷಿಯಾಗಿದೆ.
ಮಣ್ಣಿನ ಮಡಕೆಗಳಿಗೆ ಬೇಡಿಕೆ ಇದ್ದಾಗ ಸ್ವಲ್ಪ ಮಟ್ಟಿಗೆ ನೆಮ್ಮದಿ ಜೀವನ ನಡೆಸುತ್ತಿದ್ದ ಕುಂಬಾರರು, ಈಗ ಆಧುನಿಕತೆಯ ಸುಳಿಗೆ ಸಿಲುಕಿದ್ದಾರೆ. ಬೇಸಿಗೆಯ ಒಂದೆರಡು ತಿಂಗಳು ಆದಾಯ ಗಳಿಸಲೂ ಕಷ್ಟ ಪಡಬೇಕಾಗಿದೆ. ತಾಲ್ಲೂಕಿನ ದೇವಸಮುದ್ರ, ನಾಗ ಸಮುದ್ರ, ಮೊಳಕಾಲ್ಮುರು, ಕೋನಸಾಗರ, ಬಿ.ಜಿ.ಕೆರೆ, ಬೈರಾಪುರ ಹಾಗೂ ಗಡಿಭಾಗದ ಬೆಲ್ಲದಾರಹಟ್ಟಿಯಲ್ಲಿ ಮಾತ್ರ ಕುಂಬಾರಿಕೆ ವೃತ್ತಿ ಸ್ವಲ್ಪ ಪ್ರಮಾಣದಲ್ಲಿ ನಡೆಯುತ್ತಿದೆ. 25 ಕುಟುಂಬಗಳು ಕುಲಕಸುಬನ್ನು ಮುಂದುವರಿಸಿವೆ.
ಶ್ರಮಕ್ಕೆ ತಕ್ಕಷ್ಟು ಆದಾಯ ದೊರೆಯುವುದಿಲ್ಲ ಎಂಬ ಕಾರಣಕ್ಕಾಗಿಯೇ ಬಹುತೇಕರು ಈ ವೃತ್ತಿಯಿಂದ ದೂರವಾಗುತ್ತಿದ್ದಾರೆ’ ಎಂದು ದೇವಸಮುದ್ರದಲ್ಲಿ ಕುಂಬಾರಿಕೆ ನಡೆಸುವ ನಾಗರಾಜ ಅಭಿಪ್ರಾಯಪಟ್ಟರು.‘ಮಣ್ಣಿನ ಪರಿಕರಗಳ ತಯಾರಿಕೆಗೆ ಮುಖ್ಯವಾಗಿ ಕೆರೆಯ ಕಪ್ಪು ಮಣ್ಣು, ನಂತರ ಜಿಗಟಿನ ಕೆಂಪು ಮಣ್ಣು, ಹರಳು ಮಿಶ್ರಿತ ಮಣ್ಣು ಸೇರಿದಂತೆ ಮೂರು ಬಗೆಯ ಮಣ್ಣಿನ ಅಗತ್ಯವಿದೆ. ಮೊದಲು ಮಣ್ಣನ್ನು ಗುಂಡಿಗೆ ಹಾಕಿ ರುಬ್ಬಿಕೊಳ್ಳಬೇಕು. ನಂತರ ಜರಡಿಯಿಂದ ಸ್ವಚ್ಛ ಮಾಡಿಕೊಳ್ಳಲಾಗುವುದು.
ಬಳಿಕ ಮಿಶ್ರಣ ಮಾಡಿ ಗಾಲಿಗೆ ಹಾಕಿ ಆಕಾರ ತೆಗೆದು ಸಮತಟ್ಟು ಮಾಡಲಾಗುವುದು. ಈ ಕೆಲಸಕ್ಕೆ ಐದಾರು ಕಾರ್ಮಿಕರು ಬೇಕಾಗುತ್ತದೆ. ಮನೆ ಮಂದಿಯೆಲ್ಲ ಕೆಲಸ ಮಾಡಿದರೂ ಜೀವನ ನಡೆಸುವುದು ಕಷ್ಟವಾದೆ’ ಎಂದು ಬಿ.ಜಿ.ಕೆರೆಯ ಶಿವಮೂರ್ತಿ ತಿಳಿಸಿದರು. ‘ಮಡಕೆಗೆ ರೂಪ ಕೊಡುವುದು ಒಂದು ಕಷ್ಟವಾದರೆ, ಅವುಗಳನ್ನು ಭಟ್ಟಿಯಲ್ಲಿ ಸುಡುವುದು ಇನ್ನೊಂದು ಸವಾಲಿನ ಕೆಲಸ. 100 ಮಡಕೆಗಳನ್ನು ಭಟ್ಟಿಯಲ್ಲಿ ಹಾಕಿ ಸುಟ್ಟರೆ ಕೈಗೆ ಸಿಗುವುದು 60ರಿಂದ 65 ಮಾತ್ರ. ಕೆಲವು ತೂತು ಬಿದ್ದರೆ, ಮತ್ತೆ ಕೆಲವು ಒಡೆದು ಹೋಗುತ್ತವೆ. ಇದಕ್ಕೆ ನಿಖರ ಕಾರಣ ತಿಳಿದಿಲ್ಲ. ದೇವರ ಮೇಲೆ ಭಾರ ಹಾಕಿ ಭಟ್ಟಿಯಲ್ಲಿ ಸುಡುತ್ತೇವೆ’ ಎಂದು ಶಿವಮೂರ್ತಿ ಹೇಳಿದರು.
ಈಗ ಸ್ಟೀಲ್, ಅಲ್ಯೂಮಿನಿಯಂ ಪಾತ್ರೆಗಳನ್ನೇ ಹೆಚ್ಚು ಬಳಕೆ ಮಾಡುತ್ತಿರುವ ಪರಿಣಾಮ ಮಣ್ಣಿನ ಸಾಮಗ್ರಿಗಳಿಗೆ ಬೇಡಿಕೆ ತಗ್ಗಿದೆ. ಸಾಗಣೆ ಸಮಸ್ಯೆಯೂ ಇರುವುದರಿಂದ ಮಡಕೆಗಳಿಗೆ ವಾರದ ಸಂತೆಗಳೇ ಮಾರುಕಟ್ಟೆಯಾಗಿವೆ. ಹೀಗಾಗಿ ಸರ್ಕಾರ ಆರ್ಥಿಕ ನೆರವು ನೀಡುವ ಮೂಲಕ ಈ ಕಸುಬನ್ನು ಉಳಿಸಬೇಕು ಎಂದು ಕುಂಬಾರರು ಒತ್ತಾಯಿಸಿದ್ದಾರೆ.
– ಕೊಂಡ್ಲಹಳ್ಳಿ ಜಯಪ್ರಕಾಶ
(ಕೃಪೆ : ಪ್ರಜಾವಾಣಿ)


