ಮೂರು ಸಾವಿರ ಬಾರಿ ತಟ್ಟಿ ನಿರ್ದಿಷ್ಟ ಆಕಾರ ನೀಡಿದಾಗ ಅದು ಘಟಂ ಆಗಿ ರೂಪುಗೊಳ್ಳುತ್ತದೆ. ಘಟಂ , ದಕ್ಷಿಣ ಭಾರತ ಕರ್ನಾಟಕ ಸಂಗೀತದ ಪ್ರಮುಖ ಪಕ್ಕವಾದ್ಯಗಳಲ್ಲೊಂದು. ಮೀನಾಕ್ಷಿ ಕೇಶವನ್ ಘಟಂ ಸಿದ್ಧಹಸ್ತರು. ಇಡೀ ಮನಮಧುರೈನಲ್ಲಿ ಘಟಂ ತಯಾರಿಸುವ ಏಕೈಕ ಕುಟುಂಬ ಈ 63ವರ್ಷದ ಮಹಿಳೆಯದ್ದು.
“ನೀವು ಅದನ್ನು ಕನಿಷ್ಠ 3 ಸಾವಿರ ಬಾರಿ ತಟ್ಟಬೇಕು” ಎಂದು ಮೀನಾಕ್ಷಿ ಹಾಗೆ ಮಾಡುತ್ತಲೇ ವಿವರ ನೀಡುತ್ತಾರೆ. ಅದು ಬೆಂಕಿಯಿಂದ ಸುಡದ ಆವೆಮಣ್ಣಿನ ಮಡಿಕೆ. ಇತರ ಅಡುಗೆ ಪಾತ್ರೆಗಳಂತೆಯೇ ಮೇಲ್ನೋಟಕ್ಕೆ ಕಾಣುತ್ತದೆ. ಆದರೆ ಅದನ್ನು ತಾಳವಾದ್ಯವಾಗಿ ಅದನ್ನು ರೂಪಿಸುವಲ್ಲಿ ತಲ್ಲೀನರಾಗಿದ್ದರು. ತೊಡೆಯಲ್ಲಿ ಇಟ್ಟುಕೊಂಡು, ಮರದ ದೊಡ್ಡ ಚಾಕುವಿನಂತಹ ಸಾಧನದಿಂದ ಎಲ್ಲ ಬದಿಯನ್ನೂ ಜತನದಿಂದ ತಟ್ಟುತ್ತಾರೆ, ಮೂರು ಸಾವಿರ ಬಾರಿ ತಟ್ಟಿ ನಿರ್ದಿಷ್ಟ ಆಕಾರ ನೀಡಿದಾಗ ಅದು ಘಟಂ ಆಗಿ ರೂಪುಗೊಳ್ಳುತ್ತದೆ. ಘಟಂ, ದಕ್ಷಿಣ ಭಾರತ ಕರ್ನಾಟಕ ಸಂಗೀತದ ಪ್ರಮುಖ ಪಕ್ಕವಾದ್ಯ ಗಳಲ್ಲೊಂದು. ಮೀನಾಕ್ಷಿ ಕೇಶವನ್, ಘಟಂ ಸಿದ್ಧಪಡಿಸುವಲ್ಲಿ ಸಿದ್ಧಹಸ್ತರು. ಇಡೀ ಮನಮಧಿರೈನಲ್ಲಿ ಘಟಂ ತಯಾರಿಸುವ ಏಕೈಕ ಕುಟುಂಬ ಈ 63 ವರ್ಷದ ಮಹಿಳೆಯದ್ದು.
ತಮಿಳುನಾಡಿನ ಮಧುರೈಯಿಂದ ಒಂದು ಘಂಟೆ ಪ್ರಯಾಣಿಸಿದರೆ, ಘಟಂಗೆ ಖ್ಯಾತವಾದ ಮನಮಧುರೈ ಸಿಗುತ್ತದೆ. “ನಾಲ್ಕು ತಲೆಮಾರುಗಳಿಂದ ಘಟಂ ತಯಾರಿಸುತ್ತಿರುವ ಈ ಕುಟುಂಬಕ್ಕೆ ಹದಿನೈದನೆ ವಯಸ್ಸಿನಲ್ಲೇ ವಿವಾಹವಾಗಿ ಬಂದೆ” ಎಂದು ಮೀನಾಕ್ಷಿ ಹೇಳುತ್ತಾರೆ. ಪತಿ ಹಾಗೂ ಬಾವಮೈದುನರಿಂದ ಈ ಕುಶಲಕಲೆಯನ್ನು ಮೀನಾಕ್ಷಿ ಕಲಿತರು. “ಇದರಲ್ಲಿ ಪ್ರಾವೀಣ್ಯ ಸಾಧಿಸಲು ಆರು ವರ್ಷಗಳ ಕಾಲ ಬೇಕಾಯಿತು” ಎಂದು ಆಕೆಯ ಮಗ ರಮೇಶ್ ಹೇಳುತ್ತಾರೆ. ಅದು ಅತ್ಯಂತ ವೇಗದ ಕಲಿಕೆ. ನೀವು ಮಡಕೆ ಮಾಡುವ ಕುಟುಂಬಕ್ಕೆ ಸೇರಿರದಿದ್ದರೆ, ಈ ಕೌಶಲ ರೂಢಿಸಿಕೊಳ್ಳಲು ಇನ್ನಷ್ಟು ಸಮಯ ಹಿಡಿಯುತ್ತದೆ ಎನ್ನುವುದು ಅವರ ಅಭಿಮತ.
“ಇದರಲ್ಲಿನ ಅತ್ಯಂತ ಕೌಶಲಪೂರ್ಣ ಭಾಗ ಎಂದರೆ, ಘಟಂನ ನಾದವನ್ನು ಸುಧಾರಿಸುವುದು” ಎಂದು ಬಲಗೈನಿಂದ ಬದಿಯನ್ನು ಒಪ್ಪಗೊಳಿಸುವ ಕಾಯಕ ಮುಂದುವರಿಸುತ್ತಲೇ ಮೀನಾಕ್ಷಿ ವಿವರಣೆಗೆ ತೊಡಗಿದರು. ಎಡಗೈ, ಮಡಕೆಯೊಳಗೆ ಒಂದು ಗುಂಡುಕಲ್ಲನ್ನು ತಿರುಗಿಸುತ್ತಿತ್ತು. “ಮಡಕೆ ಪದರ ಕುಸಿಯದಂತೆ ಮಾಡಲು ಮತ್ತು ನುಣುಪಾಗಿಸಲು ಹಾಗೆ ಮಾಡಬೇಕು” ಎಂದು ಹೇಳುತ್ತಾರೆ. ನಾಲ್ಕು ದಶಕಗಳ ಕಾಲ ಮಣ್ಣಿನ ಒಡನಾಟ ದಲ್ಲಿರುವ ಆಕೆಯ ಕೈ ಅಸಾಧ್ಯ ದಣಿವು ಕೊಡುತ್ತಲೇ ಇರುತ್ತದೆ. ಬಳಲಿದ ಭುಜದಿಂದ ಬೆರಳ ತುದಿವರೆಗೆ ಆ ನೋವು ಹೇಗೆ ಹರಿಯುತ್ತದೆ ಎನ್ನುವುದನ್ನು ವಿವರಿಸುತ್ತಾರೆ. ಆದರೆ ನಿಮಿಷದಲ್ಲಿ ಮತ್ತೆ ಮರದ ಚಾಕು ಮತ್ತು ಗುಂಡುಕಲ್ಲು ಎತ್ತಿಕೊಂಡು ಮಡಕೆಯನ್ನು ಮಡಿಲಲ್ಲಿಟ್ಟುಕೊಂಡು ಕಾಯಕ ಮುಂದುವರಿಸುತ್ತಾರೆ.
ಪ್ರಕ್ರಿಯೆ ಹೇಗೆ?
ಆಕೆ ಹೆಮ್ಮೆಯಿಂದ ಹೇಳಿಕೊಳ್ಳುವಂತೆ, “ಪ್ರಶಸ್ತಿ ಪುರಸ್ಕೃತ ಕುಂಬಾರ” ಮಹಿಳೆಯನ್ನು ಭೇಟಿ ಮಾಡಲು ನಾವು ಮನಮಧುರೈಗೆ ಬಂದಿದ್ದೆವು. ಅದು ಪ್ರತಿಷ್ಠಿತ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ. ಹೊಳೆಯುವ ಚೌಕಟ್ಟಿನಿಂದ ಕಂಗೊಳಿಸುತ್ತಿದ್ದ ಆ ಭಾವಚಿತ್ರದಲ್ಲಿ ಮೀನಾಕ್ಷಿ, ರಾಷ್ಟ್ರಪತಿಗಳಿಂದ ಪ್ರಶಸ್ತಿ ಸ್ವೀಕರಿಸುತ್ತಿದ್ದರು. ಮನೆಯ ಹಜಾರದ ಎತ್ತರದಲ್ಲಿ ದಿವಂಗತ ಪತಿಯ ಫೋಟೊ ಪಕ್ಕದಲ್ಲೇ ಈ ಚಿತ್ರ ರಾರಾಜಿಸುತ್ತಿತ್ತು. ಪ್ರಶಸ್ತಿ ಸ್ವೀಕಾರ ಸಮಾರಂಭಕ್ಕಾಗಿ ಕುಟುಂಬ ದಿಲ್ಲಿಗೆ ಸ್ಮರಣೀಯ ಪ್ರವಾಸ ಕೈಗೊಂಡದ್ದನ್ನು ರಮೇಶ್ ನೆನಪಿಸಿಕೊಂಡರು. “ನನ್ನ ತಾಯಿ ವಿಮಾನದಲ್ಲಿ ಕುಳಿತದ್ದು ಅದೇ ಮೊದಲು; ಅದರಿಂದ ಅತ್ಯಾನಂದದ ಜತೆಗೆ ಭಯವು ಆಗಿತ್ತು. 2014ರ ಎಪ್ರಿಲ್ 11ರಂದು ನಮ್ಮನ್ನು ರಾಷ್ಟ್ರಪತಿ ಭವನಕ್ಕೆ ಹವಾನಿಯಂತ್ರಿತ ಬಸ್ ನಲ್ಲಿ ಕರೆದೊಯ್ಯಲಾಯಿತು. ಆ ದಿನ ಸಂಜೆ, ನಮ್ಮ ತಾಯಿ, ಈ ಪ್ರತಿಷ್ಠಿತ ಪ್ರಶಸ್ತಿ ಗಳಿಸಿದ ಮೊಟ್ಟಮೊದಲ ಕುಂಬಾರಿಕೆ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾದರು”
ಸ್ವತಃ ಅತ್ಯಂತ ಕುಶಲಕರ್ಮಿಯಾದ ರಮೇಶ್ ಕೂಡಾ ತಮ್ಮ ತಾಯಿಯ ಕೌಶಲವನ್ನು ಹೆಮ್ಮೆಯಿಂದ ವಿವರಿಸುತ್ತಾರೆ. ಅಕಾಡಮಿಯ ಕಿರುಹೊತ್ತಗೆಯಲ್ಲಿ, “ಅತ್ಯುತ್ಕೃಷ್ಟ ಗುಣಮಟ್ಟದ ಘಟಂ ತಂತ್ರಜ್ಞಾನವನ್ನು ಅರಿತಿರುವ ದೇಶದ ಏಕೈಕ ಮಹಿಳೆ ಮೀನಾಕ್ಷಿ” ಎಂದು ಉಲ್ಲೇಖಿಸಿದ್ದನ್ನು ಹೆಮ್ಮೆಯಿಂದ ತೋರಿಸಿದರು. ವಿಶ್ವಾದ್ಯಂತ ಹಲವು ಮಂದಿ ಘಟಂ ವಾದಕರು ಮೀನಾಕ್ಷಿ ತಯಾರಿಸಿದ ಘಟಂಗಳನ್ನು ಕೊಂಡೊಯ್ದಿದ್ದಾರೆ. “ಇದಕ್ಕೆ ಸಂಗ್ರಹಿಸುವ ಆವೆಮಣ್ಣು ಕೂಡ ವಿಶಿಷ್ಟ. ಆರು ಕೆರೆಗಳಿಂದ ಇದಕ್ಕೆ ಮಣ್ಣು ಸಂಗ್ರಹಿಸುತ್ತೇವೆ. ಇದನ್ನು ಒಂದು ದಿನ ಒಣಗಿಸಿ, ವೈಗೈ ನದಿಯ ನುಣುಪು ಮರಳಿನ ಜತೆ ಮಿಶ್ರ ಮಾಡಿ ಹದಗೊಳಿಸಲಾಗುತ್ತದೆ. ಅದರ ನಾದ ಉತ್ತಮಪಡಿಸುವ ಸಲುವಾಗಿ ಗ್ರಾಫೈಟ್ ಹಾಗೂ ಸತು ಸೇರಿಸುತ್ತೇವೆ. ಅದನ್ನು ಆರು ಗಂಟೆ ಕಾಲ ಅಚ್ಚಿನಲ್ಲಿಟ್ಟು, ಹೊರಗೆ ಎರಡು ದಿನಗಳ ಕಾಲ ಇಡುತ್ತೇವೆ. ಆವೆಮಣ್ಣು ಬಲಿಷ್ಠವಾದ ಬಳಿಕ ಅದನ್ನು ಮಡಕೆಯಾಗಿ ರೂಪಿಸುತ್ತೇವೆ” ಎಂದು ವಿವರ ನೀಡುತ್ತಾರೆ.
ರಮೇಶ್ ಕಾಯಕವನ್ನು ಸರಳಗೊಳಿಸಿದ್ದಾರೆ. ಎಲೆಕ್ಟ್ರಿಕ್ ಚಕ್ರದ ಎದುರು ಕೂತು, ಆವೆಮಣ್ಣಿನ ಮುದ್ದೆಯನ್ನು ತಟ್ಟುತ್ತಾರೆ. ಬಳಿಕ ಮಧ್ಯಭಾಗದಲ್ಲಿ ಇಡುತ್ತಾರೆ. ಅದು ತಿರುಗಿದಂತೆಲ್ಲ, ಮಣ್ಣನ್ನು ಸಂಗ್ರಹಿಸಿ, ಕೈಯಿಂದ ಆಕೃತಿ ರೂಪುಗೊಳಿಸುತ್ತಾರೆ, ಅದರ ಬದಿಗಳನ್ನು ಕೈಯಿಂದ ತಟ್ಟಿದರೆ ಮಡಕೆ ಸಿದ್ಧವಾಗುತ್ತದೆ. ಕಚ್ಚಾ ಮಣ್ಣಿನ ಮಡಕೆ ಸಿದ್ಧವಾಗುವ ಈ ಹಂತದಿಂದ ಮೀನಾಕ್ಷಿಯವರ ಕೆಲಸ ಆರಂಭವಾಗುತ್ತದೆ. ಮೀನಾಕ್ಷಿ ಬಳಿಗೆ ಬರುವಾಗ ಇದರ ತೂಕ 16ಕೆ. ಜಿ. ಇರುತ್ತದೆ. ಮುಂದಿನ ಕೆಲ ವಾರಗಳ ಕಾಲ ಘಟಂ ನೆರಳಿನಲ್ಲಿ ಒಣಗಬೇಕು. ನಂತರ ತಿಳಿಬಿಸಿಲಿನಲ್ಲಿ ನಾಲ್ಕು ಗಂಟೆ ಕಾಲ ಒಣಗಬೇಕು. ಅಂತಿಮವಾಗಿ ಕುಟುಂಬದವರು ಇದಕ್ಕೆ ಹಳದಿ ಮತ್ತು ಕೆಂಪು ಪಾಲಿಶ್ ಮಾಡುತ್ತಾರೆ. ಆ ಬಳಿಕ 12 ಗಂಟೆ ಕಾಲ ಸಮುದಾಯದ ಕುಲುಮೆಯಲ್ಲಿ ಇದನ್ನು ಸುಡಲಾಗುತ್ತದೆ. ಅಲ್ಲಿಂದ ಬರುವಾಗ ತೂಕ ಎಂಟು ಕೆ. ಜಿ.ಗೆ ಇಳಿದಿರುತ್ತದೆ. ಆಕರ್ಷಕ ತಾಳವಾದ್ಯವಾಗಿ ರೂಪುಗೊಳ್ಳುತ್ತದೆ.
ಎಲ್ಲರ ಕಾಯಕ
ಕಳೆದ ಹಲವು ವರ್ಷಗಳಲ್ಲಿ ಘಟಂ ತಯಾರಿಸುವಲ್ಲೂ ಸಾಕಷ್ಟು ಬದಲಾವಣೆಗಳು ಆಗಿವೆ. ಇದೀಗ ಈ ಮಡಗೆಗಳು ಕೂಡಾ ವಾದಕರ ಆದ್ಯತೆಗೆ ಅನುಗುಣವಾಗಿ ಲಘುತೂಕದ, ಸಣ್ಣ ಹಾಗೂ ಹೆಚ್ಚು ಸೊಗಸಾಗಿ ಮಾರ್ಪಟ್ಟಿರುತ್ತವೆ. ಇವುಗಳನ್ನು ಒಯ್ಯುವುದು ಸುಲಭ ಎಂದು ರಮೇಶ್ ವಿವರಿಸುತ್ತಾರೆ. ಮನಮಧುರೈ ಘಟಂಗಳು ಇಂದಿಗೂ ಅತ್ಯಂತ ತೂಕದ ಘಟಂಗಳು. ಸಾಮಾನ್ಯವಾಗಿ ಇವು ಅಡುಗೆ ಮಡಕೆಗಳಿಗಿಂತ ಮೂರುಪಟ್ಟು ತೂಕದ್ದಾಗಿರುತ್ತವೆ. ಹಾಗೂ ದುಪ್ಪಟ್ಟು ದಪ್ಪ ಇರುತ್ತವೆ. ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಲಘುತೂಕದ ಹಾಗೂ ತೆಳು ಘಟಂಗಳನ್ನು ತಯಾರಿಸಲಾಗುತ್ತದೆ.
ತಂತ್ರಗಾರಿಕೆಯ ಜತೆಗೆ ಮನಮಧುರೈ ಪ್ರದೇಶದ ಘಟಂ ಅದ್ಭುತ ಸ್ಪಷ್ಟತೆಯ ವಿಶೇಷಣೆಯನ್ನೂ ಹೊಂದಿದೆ. ಬೇಸರದ ಸಂಗತಿ ಎಂದರೆ ಇಂದು ಉತ್ತಮ ಗುಣಮಟ್ಟದ ಮಣ್ಣು ಇಟ್ಟಿಗೆ ತಯಾರಿಕೆಗೆ ಹೋಗುತ್ತದೆ. ಇದು ಕುಂಬಾರರ ಜೀವನಾಧಾರಕ್ಕೆ ಮಾರಕವಾಗಿ ಪರಿಣಮಿಸಿದೆ. ಇಷ್ಟಾಗಿಯೂ ರಮೇಶ್ ತಮ್ಮ ಮಗಳು, ಅಳಿಯ ಹಾಗೂ ಸೊಸೆಯಂದಿರಿಗೆ ಈ ಕೌಶಲ ಕಲಿಸುತ್ತಿದ್ದಾರೆ. ಇದು ಈ ಘಟಂ ಕುಟುಂಬದ ಐದನೆ ತಲೆಮಾರು. ಎಲ್ಲವೂ ಹಣಕ್ಕಾಗಿಯೇ ಅಲ್ಲ. ಏಕೆಂದರೆ ಘಟಂ ಮಾರಾಟದಿಂದ ಬರುವುದು ಕೇವಲ 600ರುಪಾಯಿ ಮಾತ್ರ. ಇದಕ್ಕೆ ಹೋಲಿಸಿದರೆ, ಚಿಕ್ಕ, ಉತ್ತಮ ಬ್ರಾಂಡ್ ಮೌಲ್ಯ ಹೊಂದಿರುವ ಚೈನಾ ಬೌಲ್ ಬೆಲೆ ಸಾವಿರಾರು ರೂಪಾಯಿ ಇರುತ್ತದೆ.
ಇಷ್ಟಾಗಿಯೂ, 160ವರ್ಷದ ಪರಂಪರೆಯನ್ನು ಉಳಿಸುವ ಪ್ರಯತ್ನ ಅವರದ್ದು. “ನಾನು 10ವರ್ಷದವನಿದ್ದಾಗ ಅಮೆರಿಕನ್ ಪತ್ರಕರ್ತೆಯೊಬ್ಬರು ನಮ್ಮಲ್ಲಿಗೆ ಬಂದಿದ್ದರು. ನಮ್ಮ ಸಂಪಾದನೆ ಎಷ್ಟು ಕಡಿಮೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದರು. ನನ್ನನ್ನು ಹಾಗೂ ತಂಗಿಯನ್ನು ಊಟಿಯಲ್ಲಿ ಕಾನ್ವೆಂಟ್ ಗೆ ಕಳುಹಿಸುವ ವಾಗ್ದಾನ ಮಾಡಿದ್ದರು. ಆದರೆ ತಂದೆ ಒಪ್ಪಲಿಲ್ಲ. ನಾವು ಕೂಡಾ ಕುಂಬಾರಿಕೆ ಕಲಿಯಬೇಕು ಎನ್ನುವುದು ಅವರ ಬಯಕೆಯಾಗಿತ್ತು”.
ಯುವಕನಾಗಿದ್ದ ರಮೇಶ್ ಗೆ 90ವರ್ಷದ ಅಜ್ಜ, ತಮ್ಮ ಕೌಶಲಧಾರೆ ಎರೆದರು. ಸಾಯುವ ಕೆಲ ದಿನಗಳ ಮುನ್ನ ಕೂಡಾ ಅವರು ಘಟಂ ತಯಾರಿಸುತ್ತಿದ್ದರು. ಅವರು ಅಷ್ಟು ಸುದೀರ್ಘ ಕಾಲ ಬಾಳಲು ಕಾರಣವೆಂದರೆ, ಅವರ ಫೋಟೊ ಕ್ಲಿಕ್ಕಿಸಲು ಅವರು ಯಾರಿಗೂ ಅವಕಾಶ ಕೊಡುತ್ತಿರಲಿಲ್ಲ ಎಂದು ಮೀನಾಕ್ಷಿ ಹೇಳುತ್ತಿದ್ದಂತೆ, ನಾನು ಅಪರಾಧಿ ಪ್ರಜ್ಞೆಯಿಂದ ಕ್ಯಾಮರಾ ಒಳಗಿಟ್ಟೆ.
ಪ್ರತಿಫಲ ಕಡಿಮೆ ಎನ್ನುವುದನ್ನು ಅವರು ಒಪ್ಪುತ್ತಾರೆ. ಅವರ ಕೆಲಸವನ್ನು ಸಂಗೀತಸೇವೆ ಎಂದೇ ಪರಿಗಣಿಸಬೇಕು. ಹಲವು ವರ್ಷಗಳ ಕಾಲ ಪಕ್ಕವಾದ್ಯವಾಗಿ ಬಳಕೆಯಲ್ಲಿದ್ದ ಘಟಂ ಇದೀಗ ಸ್ವತಂತ್ರ ತಾಳವಾದ್ಯವಾಗಿ ರೂಪುಗೊಂಡಿದೆ. ತಾವು ಸಿದ್ಧಪಡಿಸಿದ ಘಟಂ ವಾದನ ಕಚೇರಿಗಳಿಗೆ ಕೆಲವಕ್ಕೆ ಮೀನಾಕ್ಷಿ ಭೇಟಿ ನೀಡಿದ್ದಾರೆ. ರಮೇಶ್ ಈ ವಿವರಗಳನ್ನು ನೀಡಿದರು. ತಾಯಿ ಹೆಚ್ಚು ಮಾತುಗಾರರಲ್ಲ. ಅಕಾಡಮಿ ಪ್ರಶಸ್ತಿ ಬಂದಾಗಲೂ ಅವರ ಸಂದರ್ಶನಕ್ಕೆ ಅವರು ನಿರಾಕರಿಸಿದ್ದರು. ಅವರು ನೀಡಿದ ಸುದೀರ್ಘ ಸಂದರ್ಶನವೆಂದರೆ ಕಳೆದ ವರ್ಷ ಆಕಾಶವಾಣಿಗೆ ನೀಡಿದ ಸಂದರ್ಶನ. ಅದರಲ್ಲಿ ಅವರು ನಮ್ಮ ತಂದೆ ಇಷ್ಟಪಡುತ್ತಿದ್ದ ಕೊಳಂಬು(ಸಾಂಬರ್) ಬಗ್ಗೆಯೂ ಮಾತಾನಾಡಿದ್ದರು ಎಂದು ರಮೇಶ್ ನಕ್ಕರು.
ಕಾಯಕ ಪ್ರೀತಿ
ವಹಿವಾಟಿನ ಬಗ್ಗೆ ಅವರು ಏನು ಹೇಳಲಿಲ್ಲ. ಘಟಂ ಅವರ ಜೀವನಾಧಾರವಲ್ಲ. ಅವರ ಕಾಯಂ ಆದಾಯವೆಂದರೆ, ಮಣ್ಣಿನ ಪಾತ್ರೆಗಳ ವೈವಿಧ್ಯಮಯ ಶ್ರೇಣಿ. ಸಿದ್ಧ ಔಷಧಿ ಕೊಳೆಯಲು ಬೇಕಾಗುವ ಮಡಕೆಗಳೂ ಇದರಲ್ಲಿ ಸೇರಿವೆ. ವರ್ಷವಿಡೀ ಮೀನಾಕ್ಷಿ, ರಮೇಶ್, ಆತನ ಪತ್ನಿ ಮೋಹನಾ, ಸಹೋದರಿ ಕೆ.ಪರಮೇಶ್ವರಿ ಹಾಗೂ ಕೆಲ ಸಹಾಯಕರು 400 ಘಟಂ ತಯಾರಿಸುತ್ತಾರೆ. ಆ ಪೈಕಿ ಅರ್ಧದಷ್ಟು ಮಾರಟವಾಗುತ್ತದೆ. ಇನ್ನರ್ಧ ನಾದ ಪರೀಕ್ಷೆಯಲ್ಲಿ ವಿಫಲವಾಗುತ್ತವೆ. ಮಡಕೆ ಸುಟ್ಟ ಬಳಿಕವಷ್ಟೇ ನಾದ ಪರೀಕ್ಷೆಯನ್ನು ಮಾಡಲು ಸಾಧ್ಯ. ಕೆಲವೊಮ್ಮೆ ಆಕರ್ಷಕವಾಗಿ ಕಾಣುವ ಘಟಂಗಳು ಕೂಡಾ ಸಂಗೀತಕ್ಕೆ ಯೋಗ್ಯವಾಗಿರುವುದಿಲ್ಲ ಎಂದು ವಿವರಿಸುತ್ತಾರೆ.
ಈ ವ್ಯವಹಾರಕ್ಕೆ ಯಾವ ಹಣಕಾಸು ಸಹಾಯವು ಇಲ್ಲ. ಈ ಕುಶಲಕಲೆಗೆ ಸರಕಾರ ಯಾವ ನೆರವೂ ನೀಡುವುದಿಲ್ಲ. ಘಟಂ ವಾದಕರಂತೆ ಘಟಂ ತಯಾರಕರನ್ನು ಪ್ರಶಸ್ತಿಗಳಿಗೂ ಪರಿಗಣಿಸುವುದಿಲ್ಲ ಎನ್ನುವುದು ರಮೇಶ್ ಅವರ ಅಳಲು. ಎಲ್ಲ ಪ್ರತಿಕೂಲಗಳ ನಡುವೆಯೂ ತಮ್ಮ ಕುಟುಂಬ ಹಲವು ಮಂದಿಗೆ ಜೀವನಾಧಾರವಾಗಿದೆ ಎನ್ನುವುದು ಹೆಮ್ಮೆಯ ಸಂಗತಿ ಎಂದು ಹೇಳುತ್ತಾರೆ.
ನಾವು ಭೇಟಿ ನೀಡಿದ ದಿನ ಎಲ್ಲ ಕಾರ್ಮಿಕರು ತುಂತುರು ಮಳೆ ಬರುತ್ತಿದ್ದ ಕಾರಣ ಅರ್ಧ ಒಣಗಿದ ಮಡಕೆಯನ್ನು ಒಳಕ್ಕೆ ಒಯ್ಯುವಲ್ಲಿ ನಿರತರಾಗಿದ್ದರು. ಕೊಠಡಿಯಲ್ಲಿ ಟೆರ್ರಾಕೋಟಾ ಕೂಡಾ ಸಾಕಷ್ಟು ಕಾಣುತ್ತಿತ್ತು. ಚದುರಿದ ಮೋಡಗಳಿದ್ದ ಆಗಸದಲ್ಲಿ ಮಧ್ಯಾಹ್ನ ಮಳೆ ಬರುವ ಸ್ಪಷ್ಟ ಸೂಚನೆ ಕಾಣುತ್ತಿತ್ತು. ಮುಂಗಾರು ಇವರ ಪಾಲಿಗೆ ದರಿದ್ರ ಋತು. ಕೆಲಸಕ್ಕೆ ಧಕ್ಕೆ ಉಂಟಾದ್ದರಿಂದ ತಲೆ ಕೆಟ್ಟ ರಮೇಶ್ ಘಟಂ ಬಾರಿಸುತ್ತಾ ಕೂತಿದ್ದರು. ಜೇಡಿಮಣ್ಣು ಹದ ಮಾಡಿದ ಅವರ ಪಾದ ಹಾಗೂ ಕೈ ಗಂಧದ ಬಣ್ಣದಿಂದ ಕೂಡಿತ್ತು. ಮಡಕೆಯ ಬಾಯಿ ಪಕ್ಕದಲ್ಲಿ ಬೆರಳುಗಳಿಂದ ಬಡಿಯುವ ಮೂಲಕ ತೀಕ್ಷ್ಣ ಲೋಹದ ಶಬ್ದ ಹೊರಡಿಸುತ್ತಿದ್ದರು. “ನಾನು ಔಪಚಾರಿಕವಾಗಿ ತರಬೇತಿ ಪಡೆದಿಲ್ಲ” ಎಂದು ಹೇಳಿದರೂ ಆ ಸ್ಪಷ್ಟತೆಯ ನಾದ ಹಾಗೂ ಲಯ ಆಕರ್ಷಕವಾಗಿತ್ತು.
ಹಲವು ತಾಳವಾದ್ಯಗಳಲ್ಲಿ ಪ್ರಾಣಿಗಳ ಚರ್ಮ ಇರುತ್ತದೆ. ಘಟಂ ಮಾತ್ರ ಐದು ವಸ್ತುಗಳಿಂದ ಸೃಷ್ಟಿಸಲ್ಪಡುವ ಸಂಗೀತವಾದ್ಯ. ಭೂಮಿಯಿಂದ ಮಣ್ಣು; ಒಣಗಿಸಲು ಸೂರ್ಯ ಹಾಗೂ ಗಾಳಿ; ಹದಗೊಳಿಸಲು ನೀರು ಹಾಗೂ ಬೇಯಿಸಲು ಬೆಂಕಿ ಹೀಗೆ ಪಂಚಭೂತಗಳು ಈ ಸಂಗೀತವಾದ್ಯದ ಜೀವಾಳ. ರಮೇಶ್ ಮಾನವ ಶ್ರಮವನ್ನು ಉಲ್ಲೇಖಿಸಲಿಲ್ಲ. ಅದನ್ನು ಹೇಳುವುದೂ ಬೇಕಿರಲಿಲ್ಲ. ಏಕೆಂದರೆ, ಕಾರಿಡಾರ್ ನ ಒಳಗೆ, ನಮಗೆ ಗುನುಗುತ್ತಿದ್ದುದು, ಮೀನಾಕ್ಷಿಯವರು ಘಟಂನ ಬದಿಗಳನ್ನು ನಯಗೊಳಿಸಲು ಮತ್ತು ಅದರ ನಾದವನ್ನು ಪರಿಪೂರ್ಣಗೊಳಿಸಲು ಹೊಡೆಯುತ್ತಿದ್ದ ಹೊಡೆತ ಮಾತ್ರ.