ಬೇಸಿಗೆಯಲ್ಲಿ ಕುಡಿಯುವ ನೀರು ತಂಪಾಗಿದ್ದರೆ ಏನೋ ಸುಖ. ಆದರೆ ವಾತಾವರಣದ ಉಷ್ಣತೆಗೆ ಪ್ಲಾಸ್ಟಿಕ್, ಮೆಟಲ್ ಬಾಟಲಿಗಳಲ್ಲಿರುವ ನೀರೂ ಬೆಚ್ಚಗಾಗಿರುತ್ತದೆ. ಇದಕ್ಕೆ ಪರಿಹಾರವಾಗಿ ಮಣ್ಣಿನ ಬಾಟಲಿಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ..
ಎಷ್ಟೇ ಆಧುನಿಕ ಪರಿಕರಗಳು ಬಂದರೂ ಕಡೆಗೆ ಪುರಾತನ ವಿಧಾನಗಳತ್ತಲೇ ಮನಸು ಹೊರಳುತ್ತದೆ. ನವ ನಾಗರಿಕತೆಯ ಅನ್ವೇಷಣೆಗಳಲ್ಲಿ ಒಂದಾದ ಪ್ಲಾಸ್ಟಿಕ್ ಬಂದಿದ್ದೇ ತಡ ಅಡುಗೆ ಮನೆಯಿಂದ ಬಚ್ಚಲಮನೆಯವರೆಗೂ ಪ್ಲಾಸ್ಟಿಕ್ ವಸ್ತುಗಳೇ ಅಧಿಪತ್ಯ ಸಾಧಿಸಿದವು. ಇದೀಗ ಪ್ಲಾಸ್ಟಿಕ್ ವಿರುದ್ಧ ಜಾಗೃತಿ ಮೂಡಿಸುವ ಕಾಲ ಬಂದಿದೆ. ಅದಕ್ಕೆ ಮತ್ತೆ ಮಣ್ಣಿನೆಡೆಗೆ ಹೊರಟಿದ್ದೇವೆ. ಹಳ್ಳಿ, ಪಟ್ಟಣವೆನ್ನದೇ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಜಾಗ ಪಡೆದ ನಂತರವೂ ಮಣ್ಣಿನ ಹೂಜಿ, ಮಡಕೆಗಳಲ್ಲಿ ನೀರು ತುಂಬಿಟ್ಟು ಕುಡಿಯುವ ಪದ್ಧತಿ ಬೇಸಿಗೆಯಲ್ಲಿ ಕಂಡು ಬರುತ್ತದೆ.
ಅವುಗಳೇ ಈಗ ಬಾಟಲಿಗಳ ರೂಪದಲ್ಲೂ ಬಂದಿವೆ. ಈ ಬಾಟಲಿಗಳಿಗೆ ನೀರು ತುಂಬಿದ 20ರಿಂದ 25 ನಿಮಿಷಕ್ಕೆ ನೀರು ತಂಪಾಗುತ್ತದೆ. ಆರೋಗ್ಯಕರವೂ ಆಗಿದೆ. ಹೀಗಾಗಿ ನಗರದ ಜನರೂ ಈಗ ಈ ಸಾಂಪ್ರದಾಯಿಕ ಮಾದರಿಗೆ ಮನಸೋತಿದ್ದಾರೆ. ಸಾಫ್ಟ್ವೇರ್ ಸಂಸ್ಥೆಯ ಸಿಬ್ಬಂದಿಗಳೂ ಮಣ್ಣಿನ ಬಾಟಲಿಗಳ ಗ್ರಾಹಕರಾಗಿದ್ದಾರೆ. ಕಚೇರಿಗಳ ಮೇಜಿನ ಮೇಲೆ ಮಣ್ಣಿನ ಬಾಟಲಿಗಳು ಜಾಗ ಪಡೆದಿವೆ ಎಂಬುದು ವಿಶೇಷ.
ಸಮರ್ಪಣ ಮಾದರಿ
ರಾಜಾಜಿನಗರದ ಸಾಮಾಜಿಕ ಕಾರ್ಯಕರ್ತ ‘ಸಮರ್ಪಣ’ದ ರೂವಾರಿ ಶಿವಕುಮಾರ್ ಹೊಸಮನಿ ಅವರು ಸೋರದೇ ಇರುವ ಮಣ್ಣಿನ ಬಾಟಲಿಗಳನ್ನು ನಗರಕ್ಕೆ ಪರಿಚಯಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಬಿಬಿಎಂಪಿಯ ಪರಿಸರಸ್ನೇಹಿ ಗಣಪನ ಅಭಿಯಾನದಲ್ಲಿ ಗುರುತಿಸಿಕೊಂಡವರು ಶಿವಕುಮಾರ್. ಈ ಬಾರಿ ಮಣ್ಣಿನ ಬಾಟಲಿ ತಯಾರಿಸುವ ಯೋಜನೆ ಕೈಗೆತ್ತಿಕೊಂಡ ಅವರು ಅದಕ್ಕಾಗಿ ಬೆಳಗಾವಿಯ ಗೋಕಾಕ್ಗೆ ತೆರಳಿ ಅಲ್ಲಿನ ಕಲಾವಿದ ಸಾವಳಗಿ ಶಿವಬಸಪ್ಪ ಅವರನ್ನು ಭೇಟಿಯಾಗಿ ಅವರಿಂದ ಮಣ್ಣಿನ ಬಾಟಲಿ ತಯಾರಿಸಿ ತಂದಿದ್ದಾರೆ. ಕೆರೆಯ ಆಳದ ಮಣ್ಣಿನಿಂದ ತಯಾರಿಸಿದ ಆಕರ್ಷಕವಾದ ಬಾಟಲಿಗಳನ್ನು ಬೆಂಗಳೂರಿನ ಜನರಿಗೆ ಮಾರುತ್ತಿದ್ದಾರೆ.
ಈ ಬಾಟಲಿಗಳನ್ನು ಬೈಕ್ಗಳಿಗೂ ಜೋಡಿಸಲು ಸಾಧ್ಯವಾಗುವಂತೆ ಬಿದಿರಿನ ಸ್ಟ್ಯಾಂಟ್ ತಯಾರಿಸಿದ್ದಾರೆ. ಹೀಗಾಗಿ ಬೈಕ್ಗಳಲ್ಲಿ ದೂರ ಪ್ರಯಾಣ ಮಾಡುವಾಗಲೂ ತಂಪಾದ ನೀರು ಕುಡಿದು ದಣಿವಾರಿಸಿಕೊಳ್ಳಬಹುದು. ಬಾಟಲಿಗಳ ಮೇಲೆ ಸುಂದರ ವರ್ಲಿ ಕಲೆಯ ಚಿತ್ತಾರವೂ ಇದೆ. ಚನ್ನಪಟ್ಟಣದ ಮರದ ಮುಚ್ಚಳವನ್ನು ಬಾಟಲಿಗೆ ಬಳಸಿದ್ದಾರೆ. ಹೀಗೆ ಕುಂಬಾರರು, ವರ್ಲಿ ಕಲಾವಿದರು, ಮರದ ಕಲಾವಿದರಿಗೂ ಕೆಲಸ ನೀಡಿದ್ದೇವೆ ಎಂಬ ಹೆಮ್ಮೆ ಸಮರ್ಪಣದ್ದು. ಈ ಬೇಸಿಗೆಯಲ್ಲಿ ಸುಮಾರು 5000 ಮಣ್ಣಿನ ಬಾಟಲಿಗಳನ್ನು ಮಾರುವ ಗುರಿ ಹೊಂದಿದ್ದಾರೆ. ಶಿವಕುಮಾರ್ ಅವರ ಸಂಪರ್ಕ ಸಂಖ್ಯೆ: 99800 08074
ಬೆಲೆ ವಿವರ:
ಅರ್ಧ ಲೀಟರ್– ₹130
1 ಲೀಟರ್ –₹180
1.5 ಲೀಟರ್– ₹230, ಬಿದಿರಿನ ಸ್ಟ್ಯಾಂಡ್ಗೆ ₹20.
ಬೇಡಿಕೆ ಹೆಚ್ಚಿದೆ
ಈಗಾಗಲೇ 2,500 ಬಾಟಲ್ಗಳು ಮಾರಾಟವಾಗಿವೆ. ಕೆಲವು ಸಾಫ್ಟ್ವೇರ್ ಸಂಸ್ಥೆಗಳ ಸಿಬ್ಬಂದಿ ಹೆಚ್ಚಿನ ಸಂಖ್ಯೆಯಲ್ಲಿ ಮಣ್ಣಿನ ಬಾಟಲಿ ಕೊಂಡೊಯ್ಯುತ್ತಿದ್ದಾರೆ. ಬಸವೇಶ್ವರ ನಗರದ ಕೆನರಾ ಬ್ಯಾಂಕ್ನಿಂದ ಐನೂರು ಬಾಟಲಿಗೆ ಬೇಡಿಕೆ ಬಂದಿತ್ತು. ಆದರೆ, ಈ ವರ್ಷದ ಮಟ್ಟಿಗೆ ನಮ್ಮ ಗುರಿ ಇರುವುದು ಸಾಮಾನ್ಯರಿಗೂ ಮಣ್ಣಿನ ಬಾಟಲಿಯ ಬಗ್ಗೆ ಅರಿವು ಮೂಡಿಸುವುದು. ಹಾಗಾಗಿ ಹೆಚ್ಚಿನ ಪ್ರಮಾಣದ ಬೇಡಿಕೆಗೆ ಸರಿಯಾಗಿ ಬಾಟಲಿ ಪೂರೈಸುವುದು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಪೂರ್ಣಪ್ರಮಾಣದಲ್ಲಿ ಸಮರ್ಪಣ ಕೆಲಸ ಮಾಡಲಿದೆ. ನಮ್ಮ ಈ ಕೆಲಸವನ್ನು ಗುರುತಿಸಿ ಪ್ರಧಾನಿಗಳ ಕಾರ್ಯಾಲಯದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಆಹ್ವಾನ ಬಂದಿದೆ.
ಎನ್ನುತ್ತಾರೆ ಶಿವಕುಮಾರ್ ಹೊಸಮನಿ.
ಬರಹ : ಹೇಮಾ ವೆಂಕಟ್ (ಸುದ್ದಿ ಕೃಪೆ; ಪ್ರಜಾವಾಣಿ)