ಹೊಸಪೇಟೆ: ದಿನೇ ದಿನೇ ಉಷ್ಣಾಂಶ ಹೆಚ್ಚುತ್ತಿದ್ದು, ನಗರದಲ್ಲಿ ಮಣ್ಣಿನ ಮಡಕೆ ಗಳಿಗೆ ಬೇಡಿಕೆ ಹೆಚ್ಚುತ್ತಿದೆ. ಬೆಳಿಗ್ಗೆಯಿಂದ ಸಂಜೆವರೆಗೆ ಕೆಂಡ ದಂತಹ ಬಿಸಿಲು ಇರುತ್ತಿದೆ. ಜನರು ಮನೆಯಿಂದ ಸ್ವಲ್ಪವೇ ಹೊರಗೆ ಓಡಾಡಿ ಬಂದರೂ ಬಳಲಿ ಬೆಂಡಾಗುತ್ತಿದ್ದರೆ. ಪುನಃ ಮನೆಗೆ ಬಂದಾಗ ಮೊದಲು ಮಾಡುವ ಕೆಲಸವೆಂದರೆ ಬಾಯಾರಿಕೆ ನೀಗಿಸಿಕೊಳ್ಳುವುದು.
ಅದರಲ್ಲೂ ತಣ್ಣನೆ ನೀರು ಕುಡಿದರೆ ಮನಸ್ಸಿಗೆ ಏನೋ ಸಮಾಧಾನ. ಹೀಗಾಗಿ ಪ್ರತಿಯೊಬ್ಬರೂ ಮಣ್ಣಿನ ಮಡಕೆಗಳ ಮೊರೆ ಹೋಗುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಮಾರುಕಟ್ಟೆಯಲ್ಲಿ ಅವುಗಳಿಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ಏರಿಕೆಗೂ ಕಾರಣವಾಗಿದೆ.
ನಗರದ ಮೇನ್ ಬಜಾರ್, ಬಸ್ ನಿಲ್ದಾಣ ರಸ್ತೆ, ಟಿ.ಬಿ ಡ್ಯಾಂ ರಸ್ತೆ, ಎಪಿ ಎಂಸಿ ಮಾರುಕಟ್ಟೆ, ಹಳೆ ರಾಮಾ ಟಾಕೀಸ್, ಹಂಪಿ ರಸ್ತೆಯಲ್ಲಿ ಈಗ ಬಗೆ ಬಗೆಯ ಮಡಕೆಗಳನ್ನು ಮಾರಾಟ ಮಾಡಲಾಗುತ್ತಿದೆ.
ಐದು ಲೀಟರ್ ನೀರು ಹಿಡಿಯುವ ಸುರಾಯಿಯಿಂದ ಮೂವತ್ತು ಲೀಟರ್ ವರೆಗಿನ ಬೃಹತ್ ಮಡಕೆಗಳನ್ನು ಮಾರಾಟಕ್ಕೆ ಇಡಲಾಗಿದೆ. ಐದು ಲೀಟರ್ ನೀರಿನ ಮಡಕೆಗೆ ₹ 40, ಹತ್ತು ಲೀಟರ್ಗೆ ₹ 80 ಹಾಗೂ 20 ಲೀಟರಿನ ಮಡಕೆಗಳನ್ನು ₹ 140ಕ್ಕೆ ಮಾರಾಟ ಮಾಡಲಾಗುತ್ತಿದೆ. ಇನ್ನು ಮೂವತ್ತು ಲೀಟರ್ ಸಾಮರ್ಥ್ಯದ ಬೃಹತ್ ಗಾತ್ರದ ಮಡಕೆಗಳನ್ನು ₹ 250ಕ್ಕೆ ಬಿಕರಿ ಆಗುತ್ತಿವೆ.
‘ಫೆಬ್ರುವರಿಯಿಂದಲೇ ಮಡಕೆಗಳನ್ನು ಮಾರಾಟ ಮಾಡುತ್ತಿದ್ದೇವೆ. ಆದರೆ, ಮಾರ್ಚ್ ಮೊದಲ ವಾರದಿಂದ ಒಳ್ಳೆಯ ವ್ಯಾಪಾರ ಆಗುತ್ತಿದೆ. ದಿನಕ್ಕೆ 40ರಿಂದ 50 ಮಡಕೆಗಳು ಮಾರಾಟವಾಗುತ್ತಿವೆ. ಅದರಲ್ಲೂ 10, 20 ಲೀಟರಿನ ಮಡಕೆಗಳನ್ನು ಜನ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿದ್ದಾರೆ’ ಎಂದು ಬಸ್ ನಿಲ್ದಾಣ ರಸ್ತೆಯ ಮಡಕೆಗಳ ವ್ಯಾಪಾರಿ ಲಕ್ಷ್ಮಮ್ಮ ತಿಳಿಸಿದರು.
‘ಬೇಸಿಗೆ ಮುಗಿದರೆ ಮಡಕೆಗಳನ್ನು ಯಾರೂ ಕೇಳುವುದಿಲ್ಲ. ಈಗ ಹೆಚ್ಚು ಬೇಡಿಕೆಯಿರುವ ಕಾರಣ ಐದೋ, ಹತ್ತೋ ರೂಪಾಯಿ ಚೌಕಾಸಿ ಮಾಡಿದರೆ ಕೊಡುತ್ತಿದ್ದೇವೆ. ಅದಕ್ಕಿಂತಲೂ ಕಡಿಮೆಯಲ್ಲಿ ಯಾರಿಗೂ ಕೊಡುತ್ತಿಲ್ಲ’ ಎಂದು ಹೇಳಿದರು.
‘ನಾನು ಪ್ರತಿ ವರ್ಷ ಹೊಸ ಮಡಕೆ ಖರೀದಿಸುತ್ತೇನೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಬೆಲೆ ದುಬಾರಿ ಆಗಿದೆ. ಜನ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸುತ್ತಿರುವ ಕಾರಣ ಚೌಕಾಸಿಗೂ ಅವಕಾಶ ಇಲ್ಲದಂತಾಗಿದೆ. ನಾವು ಹೇಳಿದಷ್ಟು ಬೆಲೆಗೆ ತಗೊಳ್ಳಿ, ಇಲ್ಲದಿದ್ದರೆ ಹೋಗಿ ಎಂದು ಮುಖದ ಮೇಲೆ ಹೊಡೆದಂತೆ ಹೇಳುತ್ತಿದ್ದಾರೆ’ ಎಂದು ನಗರದ ಬಸ್ ನಿಲ್ದಾಣ ರಸ್ತೆಯಲ್ಲಿ ಮಡಕೆ ಖರೀದಿಗೆ ಬಂದಿದ್ದ ಅಮರಾವತಿಯ ಲತಾ ತಿಳಿಸಿದರು.
‘ನನ್ನ ಮನೆಯಲ್ಲಿ ರೆಫ್ರಿಜಿರೇಟರ್ ಇದೆ. ಆದರೆ, ಅದರಲ್ಲಿನ ನೀರು ಕುಡಿ ದರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹಾಗಾಗಿ ಅದ ರೊಳಗಿನ ನೀರು ಕುಡಿಯುವುದನ್ನು ಬಿಟ್ಟಿದ್ದೇನೆ. ಬೇಸಿಗೆಯಲ್ಲಿ ಮಡಕೆಯೊ ಳಗಿನ ನೀರು ಕುಡಿದರೆ ಏನೋ ಸಮಾಧಾನ. ಬೆಲೆ ದುಬಾರಿ ಆದರೂ ಕೊಂಡೊಯ್ಯುತ್ತಿದ್ದೇನೆ’ ಎಂದರು.
ಸೌಜನ್ಯ: ಪ್ರಜಾವಾಣಿ