ಗುಡಿಕೈಗಾರಿಕೆಗಿಲ್ಲ ಸರಕಾರದ ಉತ್ತೇಜನ
ಮಂಗಳೂರು(ಮಾ.೧೭): ಕುಂಬಾರಿಕೆ ಒಂದು ಗುಡಿಕೈಗಾರಿಕೆ. ನಾಗರೀಕತೆ ಆರಂಭವಾಗಿ ಮನುಷ್ಯ ಚಕ್ರದ ಬಳಕೆ ಆರಂಭಿಸಿದಂದಿನಿಂದಲೇ ಕುಂಬಾರಿಕೆ ಆರಂಭಗೊಂಡಿತು. ಆದರೆ ಆಧುನೀಕತೆಯ ಭರಾಟೆಯಲ್ಲಿ ಕುಂಬಾರರು ಮಾಡುತ್ತಿದ್ದ ಮಣ್ಣಿನ ಪಾತ್ರೆಗಳ ಸ್ಥಾನಕ್ಕೆ ಇಂದು ಆಲ್ಯೂಮಿನಿಯಂ, ಸ್ಟೀಲ್ ಪಾತ್ರೆಗಳು ವಕ್ಕರಿಸಿದ ಪರಿಣಾಮ ಇಂದು ಕುಂಬಾರಿಕೆ ವೃತ್ತಿ ನಶಿಸುತ್ತಾ ಬರುತ್ತಿದೆ. ಇವೆಲ್ಲದರ ನಡುವೆ ಗುರುಪುರ ಕೈಕಂಬ ಸಮೀಪದ ಮಳಲಿಯ ಬೂಬ ಕುಲಾಲ್ ಎನ್ನುವವರು ಕುಂಬಾರಿಕೆ ನಡೆಸಿಕೊಂಡು ಅದರ ಜೊತೆ ಹೋರಾಟ ನಡೆಸುತ್ತಿದ್ದಾರೆ.
ಒಂದು ಕಾಲದಲ್ಲಿ ಮಣೇಲ್(ಇಂದಿನ ಮಳಲಿ) ಮಣ್ಣಿನ ಮಡಕೆಗಳಿಗೆ ತುಂಬಾ ಪ್ರಸಿದ್ಧಿ ಹೊಂದಿತ್ತು. ಮಳಲಿಯ ಪಟ್ಲ ಎಂಬಲ್ಲಿ ಮಡಿಕೆ ಮಾಡಲು ಯೋಗ್ಯವಾದ ಆವೆ ಮಣ್ಣು ಸಿಗುತ್ತಿದ್ದರಿಂದ ಮಳಲಿಯ ಮೂಲ್ಯರು ಇದನ್ನೊಂದು ವೃತ್ತಿಯ ರೂಪದಲ್ಲಿ ಮಾಡುತ್ತಿದ್ದರು. ಮಳಲಿಯ ಮಣ್ಣಿನ ಮಡಕೆಗಳು ಗಟ್ಟಿಮುಟ್ಟು ಎಂಬ ಹೆಸರು ಪಡೆದಿರುವುದಷ್ಟೇ ಅಲ್ಲದೆ ಪರವೂರುಗಳಿಗೆ ರಫ್ತಾಗುತ್ತಿತ್ತು. ಪ್ರತೀ ಮನೆಯಲ್ಲಿ ಎಂಬಂತೆ ಮಣ್ಣಿನ ಮಡಕೆಗಳನ್ನು ತಯಾರಿಸಲಾಗುತ್ತಿತ್ತು. ಆದರೆ ಇಂದು ಆ ಚಿತ್ರಣವೇ ಬದಲಾಗಿದೆ. ಒಂದು ಕಾಲದಲ್ಲಿ ಮಣ್ಣಿನ ಮಡಕೆಗಳಿಗೆ ಪ್ರಸಿದ್ಧವಾಗಿದ್ದ ಮಳಲಿಯಲ್ಲಿ ಇಂದು ಮಡಕೆ ತಯಾರಿಸುವವರು ಕಾಣಸಿಗುವುದೇ ಅಪರೂಪ.
ಪಟ್ಲದಿಂದ ಮಣ್ಣನ್ನು ತಲೆಯಲ್ಲೇ ಹೊತ್ತುಕೊಂಡು ಬಂದು, ಅದನ್ನು ಪರೇಲ್ ಎನ್ನುವ ವಿಶಿಷ್ಠ ಮಣ್ಣಿನ ಜೊತೆ ಸೇರಿಸಿ ಅದನ್ನು ಸೂಕ್ತವಾಗಿ ಹದ ಮಾಡಬೇಕು. ಅದೊಂದು ಉಂಡೆಯ ರೂಪವನ್ನು ತಾಳುತ್ತದೆ. ಆ ಉಂಡೆಯನ್ನು ಬಳಿಕ ತಗೋರಿ(ಚಕ್ರ)ಗೆ ಹಾಕಿ ತಿರುಗಿಸಬೇಕು. ಮಣ್ಣಿನ ಮಡಕೆ ಮಾಡುವವ ಅದನ್ನು ತನ್ನ ಬೆರಳಿನಲ್ಲೇ ಕುಂಭವಾಗಿ ಬದಲಿಸುತ್ತಾನೆ. ನಿಜವಾಗಿಯೂ ಅದೊಂದು ಕಲೆ. ಅದು ಸುಲಭವಾಗಿ ಒಲಿಯುವುದಿಲ್ಲ. ಆತನ ಬೆರಳಿನಿಂದ ಬಿಸಲೆ, ಗದ್ದವು, ಕಿನ್ನಗದ್ದವು, ಬಾವಡೆ, ಬಂಡಿಸಲೆ, ತೂರಿ, ಅಡ್ಯಾರ, ಕಿನ್ನಿಬಿಸಲೆ, ಕರ, ಮುಂತಾದ ನಮೂನೆಯ ಮಣ್ಣಿನ ಪಾತ್ರೆಗಳು ತಯಾರಾಗುತ್ತವೆ. ಬಿಳಿ ಕಲ್ಲು, ಹಾಗೂ ಮರದ ತುಂಡನ್ನು ಬಳಸಿ ಅದನ್ನು ನುಣುಪುಗೊಳಿಸಿ ಚೆನ್ನಾಗಿ ಒಣಗಿಸಿದ ಬಳಿಕ ಅದಕ್ಕೆ ಆವೆ ಹಾಕಲಾಗುತ್ತದೆ.
ಆವೆ ಹಾಕುವುದೆಂದರೆ ಮಡಿಕೆಯನ್ನು ಬೆಂಕಿಯಲ್ಲಿ ಸುಡುವುದು. ಕಟ್ಟಿಗೆ, ತೆಂಗಿನ ಗೆರಟೆ ಬಳಸಿ ಸುಡಲಾಗುತ್ತದೆ. ಇದು ಭಾರೀ ಜಾಗರೂಕತೆಯಾಗಿ ನಡೆಸುವ ಕೆಲಸ. ಸ್ವಲ್ಪ ಏಮಾರಿದರೂ ಮಡಿಕೆ ಒಡೆದುಹೋಗಬಹುದು. ಮಡಿಕೆಯನ್ನು ಒಪ್ಪವಾಗಿ ಜೋಡಿಸಿದ ನಂತರ ಅದಕ್ಕೆ ಬೈಹುಲ್ಲು ಹಾಗೂ ಮಣ್ಣನಿಂದ ಮುಚ್ಚಲಾಗುತ್ತದೆ. ಕೆಲಗಳಡೆ ಬೆಂಕಿ ಕೊಟ್ಟು ಅದು ಉರಿಯುವಂತೆ ಮಾಡಿಕೊಳ್ಳಬೇಕು, ಬೆಂಕಿ ನಂದದಂತೆ ನೋಡಿಕೊಳ್ಳಬೇಕು ಇಲ್ಲವಾದರೆ ಮಡಿಕೆ ಅರೆಬೆಂದುಹೋಗುತ್ತದೆ. ಇದರಿಂದ ಮಡಿಕೆ ಮಾಡುವವ ನಷ್ಟ ಹೊಂದುತ್ತಾನೆ.
ಮಡಿಕೆ ಬೆಂದ ಬಳಿಕ ಅದನ್ನು ಸಾಗಿಸುವುದು ದೊಡ್ಡ ಕೆಲಸ. ಯಾವುದಾದರೂ ವಸ್ತು ತಾಗಿದರೂ ಮಡಿಕೆ ಒಡೆದುಹೋಗುತ್ತದೆ. ಈ ಹಿಂದೆ ದೊಡ್ಡ ಕೋಲಿನಿಂದ ಎರಡೂ ಕಡೆಗಳಲ್ಲಿ ಮಡಿಕೆಗಳನ್ನು ಕಟ್ಟಿ ಅದನ್ನು ಹೊತ್ತುಕೊಂಡು ಮನೆಮನೆಗೆ ಹೋಗುತ್ತಿದ್ದರು. ಆದರೆ ಅದು ಸವಾಲಿನ ಕೆಲಸ. ಆದರೆ ಬೂಬಣ್ಣ ಮಾತ್ರ ಇಂದಿಗೂ ಹಳೇ ಕಾಲದಂತೆಯೇ ಕೋಲಿನಲ್ಲೇ ಹೊತ್ತುಕೊಂಡು ಹೋಗುತ್ತಾರೆ.
ಗುಡಿಕೈಗಾರಿಕೆಗಿಲ್ಲ ಸಹಾಯ ಹಸ್ತ:
ಅನಾದಿಕಾಲದಿಂದ ಬಂದಿರುವ ಕುಲಕಸುಬು ಕುಂಬಾರಿಕೆಗೆ ಯಾವುದೇ ಸಹಾಯ ಹಸ್ತ ಸರಕಾರದಿಂದಾಗಲೀ, ಸಂಘಸಂಸ್ಥೆಯಿಂದಾಗಲೀ ಸಿಕ್ಕಿಲ್ಲ. ಹಲವಾರು ಕುಲಾಲ ಸಂಘಟನೆಗಳಿದ್ದರೂ ತನ್ನ ಸ್ವಕುಲಕಸುಬಿನ ಬಗ್ಗೆ ಸಂಘಟನೆ ಮರೆತಿರುವುದು ಅಚ್ಚರಿಗೆ ಕಾರಣವಾಗಿದೆ. ಇಂದಿಗೂ ಹಲವು ಕಾರ್ಯಕ್ರಮಗಳಿಗೆ ಮಣ್ಣಿನ ಮಡಿಕೆಯ ಅಗತ್ಯವಿದೆ. ಆದರೆ ಯಾವುದೇ ನೆರವು ಸಿಗದಿರುವುದರಿಂದ ಕುಂಬಾರಿಕೆ ನಶಿಸುವುದರಲ್ಲಿ ಸಂಶಯವಿಲ್ಲ. ಈ ಬಗ್ಗೆ ಸರಕಾರದ ಗಮನಕ್ಕೆ ತಂದು ಕುಂಬಾರಿಕೆಗೆ ಸರಕಾರದಿಂದ ನೆರವು ಸಿಗುವಂತೆ ನೋಡಿಕೊಳ್ಳಬೇಕೆನ್ನುವ ಒತ್ತಾಯ ಕೇಳಿಬಂದಿದೆ.
ಚಿತ್ರ-ವರದಿ : ಗಿರೀಶ್ ಮಳಲಿ






