ಉಡುಪಿ : ಜಗತ್ತು ಬದಲಾದಂತೆ ಮನುಷ್ಯನ ಬೇಡಿಕೆಗಳು ಆದ್ಯತೆಗಳು ಬದಲಾಗುತ್ತಿವೆ. ಇಂದು ಇರುವ ವಸ್ತು ನಾಳೆಗೆ ಹಳತು. ಇದು ಪ್ರಕೃತಿ ನಿಯಮ. ಒಂದು ಕಾಲದಲ್ಲಿ ಬದುಕಿನ ಭಾಗವಾಗಿದ್ದ ಕುಂಬಾರಿಕೆ ಇಂದು ವಿನಾಶದ ಅಂಚಿಗೆ ತಲುಪಿದೆ. ಮಣ್ಣಿನ ಮಡಿಕೆಯ ನೆನಪು ಇಂದಿನ ಮಕ್ಕಳಿಗೂ ಇಲ್ಲದ ಸ್ಥಿತಿ ಉದ್ಭವಿಸಿದೆ. ಮಡಿಕೆಯ ಜಾಗದಲ್ಲಿ ಸ್ಟೀಲ್, ಹಿತ್ತಾಳೆ, ಕಂಚು, ಅಲ್ಯೂಮಿನಿಯಂ ಪಾತ್ರೆಗಳು ಬೆಸೆದುಕೊಂಡಿದ್ದು ಆಧುನಿಕತೆಯ ಭರಾಟೆಯಲ್ಲಿ ಸಾಂಪ್ರದಾಯಿಕ ಕಲೆ ಮರೆಯಾಗುತ್ತಿದೆ. ಆದರೂ, ಅಲ್ಲೊಂದು ಇಲ್ಲೊಂದು ಕಡೆಗಳಲ್ಲಿ ಕುಂಬಾರಿಕೆ ವೃತ್ತಿಯನ್ನು ಉಳಿಸಿಕೊಳ್ಳುವ ಯತ್ನ ಸಾಗಿದೆ.
ಅಲ್ಯುಮಿನಿಯಂ ಸ್ಟೀಲ್ ಪಾತ್ರೆಗಳ ಸೀಸನ್ ಗಳ ಈ ಆಧುನಿಕ ಕಾಲದಲ್ಲೂ ಆರೋಗ್ಯವರ್ಧಕವೂ ಪ್ರಾಕೃತಿಕವೂ ಆಗಿರುವ ಕುಂಬಾರಿಕೆನ್ನೆ ಬದುಕಿನ ಆಧಾರವನ್ನಾಗಿ ಮಾಡಿಕೊಂಡ ಕುಟುಂಬವೊಂದು ನಮ್ಮ ಮುಂದಿದೆ. ಉಡುಪಿ ತಾಲೂಕಿನ ಕಳತ್ತೂರು ಗ್ರಾಮದ ಕುಕ್ಕುಂಜ ಪರಿಸರದ ರಾಘು ಮೂಲ್ಯ ದಂಪತಿಗಳು ಕುಲಕಸುಬನ್ನೇ ನೆಚ್ಚಿಕೊಂಡು ಇಂದಿಗೂ ಜೀವನ ನಡೆಸುತ್ತಿದ್ದಾರೆ.
ಕುಂಬಾರಿಕೆಯೇ ನಶಿಸುತ್ತಿರುವ ಈಗಿನ ಆದುನಿಕ ಕಾಲಮಾನದಲ್ಲಿ ಅದಕ್ಕೆ ಸೆಡ್ಡೊಡೆದು ಜಾತಿ ಉದ್ಯೋಗದಿಂದಲೇ ಬದುಕಿನ ದೀವಿಗೆಯನ್ನು ಕಟ್ಟಿಕೊಂಡ ಕುಟುಂಬ ಇದು. ಯಜಮಾನ ರಾಘು ಮೂಲ್ಯ, ಪತ್ನಿ ಜಯಂತಿ ಹಾಗೂ ಇಬ್ಬರು ಗಂಡು ಓರ್ವ ಹೆಣ್ಣುಮಗಳನ್ನು ಹೊಂದಿರುವ ಈ ಕುಟುಂಬ ಕುಲಕಸುಬನ್ನೆ ಬದುಕಿನ ಆಧಾರವನ್ನಾಗಿ ಮಾಡಿಕೊಂಡಿರುವುದು ನಿಜವಾಗಲೂ ಹೆಮ್ಮೆಪಡುವ ಸಾಧನೆ.
ಕುಂಬಾರಿಕೆಗೆ ಅಗತ್ಯವಾಗಿ ಬೇಕಿರುವ ಜೇಡಿಮಣ್ಣು, ಸೌದೆಗಳಂತಹ ಮೂಲಭೂತ ಪರಿಕರಗಳ ಕೊರತೆಯ ನಡುವೆಯೂ ತಾವು ನಂಬಿರುವ ಕುಲಕಸುಬನ್ನು ಬಿಡದೆ ಅದರಲ್ಲೇ ತೊಡಗಿಸಿಕೊಂಡ ಕುಟುಂಬ ಇದು. ಹಣತೆ, ಹೂಜಿ, ರೊಟ್ಟಿ ಕಾವಲಿ, ಅನ್ನ ಬಸಿಯುವ ಮಡಿಕೆ, ಹ್ಯಾಂಗಿಂಗ್ ಪಾಟ್, ಹೂವಿನಕುಂಡ ಸೇರಿದಂತೆ ಹಲವು ರೀತಿಯ ಮಣ್ಣಿನ ಪಾತ್ರೆಗಳನ್ನು ಇವರು ತಯಾರಿಸುತ್ತಾರೆ.
`ಹೊಟ್ಟೆಪಾಡಿಗಾಗಿ ಕುಲಕಸುಬು ನಡೆಸುತ್ತಿದ್ದೇವೆ. ಲಾಭ ಅಂತೇನಿಲ್ಲ. ಜೀವನ ಸಾಗುತ್ತಿದೆ ಅಷ್ಟೇ. ವಿವಿಧೆಡೆ ಸಂತೆಯಲ್ಲಿ ಮಡಿಕೆಗಳನ್ನು ಮಾರಾಟ ಮಾಡ್ತೇವೆ ಎನ್ನುತ್ತಾರೆ ರಾಘು ಮೂಲ್ಯ `ಇತ್ತೀಚಿನ ದಿನಗಳಲ್ಲಿ ಕುಂಬಾರಿಕೆಯ ಗುಡಿ ಕೈಗಾರಿಕೆ ನಶಿಸುತ್ತಿದ್ದರೂ ಇದೂವರೆಗೂ ಸರ್ಕಾರದಿಂದ ಯಾವುದೇ ಸಹಾಯ ಸಿಕ್ಕಿಲ್ಲ. ಮಡಿಕೆ ಮಾಡೋ ಕುಲಕಸುಬು ನಮ್ಮ ಜೊತೆಯಲ್ಲೆ ಮರೆಯಾಗ್ತಿದೆ. ನಮ್ಮ ಮಕ್ಕಳು ಇದನ್ನು ಮಂದುವರೆಸುವ ಇರಾದೆ ಹೊಂದಿಲ್ಲ’ ಎನ್ನುವುದು ರಾಘು ಮೂಲ್ಯ ಮತ್ತು ಅವರ ಪತ್ನಿ ಜಯಂತಿ ಅವರ ಅಳಲು.
ಕುಂಬಾರಿಕೆಯ ಈ ಅಪರೂಪದ ಮಣ್ಣಿನ ಮಕ್ಕಳನ್ನು ಊರಿನ ಸಮುದಾಯ ಗುರುತಿಸಿ ಗೌರವಿಸಿದೆ. ಕುಂಬಾರ ಸಮುದಾಯಗಳು ಇವರನ್ನು ಗುರುತಿಸಿ ಗೌರವಿಸುವ ಕೆಲಸವನ್ನು ಮಾಡಬೇಕಿದೆ.
ಬರಹ: ಉದಯ್ ಕುಲಾಲ್ ಕಳತ್ತೂರು.
ಚಿತ್ರ: ವಿಜಯ್ ಉಚ್ಚಿಲ