ಕುಲಾಲ್ ವರ್ಲ್ಡ್ ಡಾಟ್ ಕಾಮ್ ನ ಗೌರವ ಸಂಪಾದಕ ಚಿದಂಬರ ಬೈಕಂಪಾಡಿ ಅವರ ಆರನೆಯ ಪುಸ್ತಕ ‘ಮರೆಯಲಾಗದ ಮುಂಬೈ’ ಇತ್ತೀಚೆಗೆ ಬಿಡುಗಡೆಯಾಗಿದ್ದು, ಈ ಪುಸ್ತಕಕ್ಕೆ ಡಾ. ಭರತ್ ಕುಮಾರ್ ಪೊಲಿಪು ಸೊಗಸಾದ ಮುನ್ನುಡಿಯನ್ನು ಬರೆದಿದ್ದಾರೆ. ಇದನ್ನು ನಮ್ಮ ಓದುಗರಿಗಾಗಿ ಇಲ್ಲಿ ಯಥಾವತ್ತಾಗಿ ಪ್ರಕಟಿಸಿದ್ದೇವೆ.
ಚಿದಂಬರ ಬೈಕಂಪಾಡಿಯವರು ಕವಿಯಾಗಿ, ಕತೆಗಾರರಾಗಿ ಹಾಗೂ ಪತ್ರಕರ್ತರಾಗಿ ಈಗಾಗಲೇ ಕನ್ನಡನಾಡಲ್ಲಿ ಪ್ರಸಿದ್ಧಿ ಪಡೆದವರು. ಪತ್ರಕರ್ತರಾಗಿ ನಿಷ್ಠುರತೆ, ಪ್ರಾಮಾಣಿಕತೆ ಹಾಗೂ ಪತ್ರಿಕೋದ್ಯಮದ ನೈತಿಕತೆಯನ್ನು ಎಂದೂ ಬಿಟ್ಟುಕೊಟ್ಟವರಲ್ಲ. ಅವರದ್ದು ಸೃಜನಾತ್ಮಕ ಬರವಣಿಗೆ. ಮುಂಗಾರು ಪತ್ರಿಕೆಯ ಮೌಲಿಕತೆಗೆ ಹಗಲಿರುಳು ವಡ್ಡರ್ಸೆಯವರ ಜತೆ ಕ್ರಿಯಾಶೀಲರಾಗಿ ದುಡಿದವರು. ಅವರ ಇತ್ತೀಚಿನ ಕೃತಿ ‘ಮರೆಯಲಾಗದ ಮುಂಬೈ’ ಪ್ರವಾಸ ಲೇಖನದ ಮಾದರಿಯಲ್ಲಿ ಇದ್ದರೂ ಅದರ ವ್ಯಾಪ್ತಿಯನ್ನು ಮೀರಿ ಮುಂಬಯಿ ಕುರಿತ ಅಧ್ಯಯನಾತ್ಮಕ ವಿನ್ಯಾಸವನ್ನು ಪಡೆದುಕೊಂಡಿದೆ.
ಮುಂಬಯಿಯಿಂದ ದೂರವಿರುವವರಿಗೆ ಮುಂಬಯಿ ಎಂಬುದು ಸದಾಕಾಲದ ವಿಸ್ಮಯ, ಕನಸು, ಬೆರಗು, ಎಲ್ಲವೂ ಹೌದು. ಅದು ಕನಸುಗಳನ್ನು ಮೂಡಿಸುವ ಕನಸುಗಳನ್ನು ಮಾರುವ ಮಾಯಾನಗರಿ. ಶ್ರದ್ಧೆಯಿಂದ ದುಡಿದವರನ್ನು ಎಂದೂ ಕೈ ಬಿಟ್ಟಿಲ್ಲ. ಯಾರೇ ಆದರೂ ಎಲ್ಲಿಂದಲೂ ಬಂದರೂ ಅವರಿಗೆ ಬದುಕುವ ದಾರಿ ತೋರಿಸುತ್ತದೆ. ಪ್ರೀತಿ, ಮಾನವೀಯತೆ ಕ್ರೌರ್ಯ ಹೀಗೆ ಎಲ್ಲವೂ ಇರುವ ಒಂದು ಮಾಯಾಲೋಕ. ಬಹುಭಾಷಿಕರ ಮಿಳಿತದ ಬಹು ಸಂವೇದನೆಯ ನಗರ.
ಮುಂಬಯಿಗೆ ಬಂದು ಅಲ್ಲಿನ ಬದುಕನ್ನು ತಿಳಿಯುವ ಕುತೂಹಲ ಎಲ್ಲರಲ್ಲೂ ಇರುವುದು ಸಹಜ. ಮುಂಬಯಿಗೆ ಹೋಗುವ ಕನಸನ್ನು ಬಾಲ್ಯದಿಂದಲೂ ಎಲ್ಲರೂ ಕಾಣುತ್ತಾರೆ. ಮುಂಬಯಿ ಬದುಕನ್ನು ಕನ್ನಡ ಸಾಹಿತ್ಯರಂಗದಲ್ಲಿ ಯಶವಂತ ಚಿತ್ತಾಲ, ವ್ಯಾಸರಾಯ ಬಲ್ಲಾಳ, ಜಯಂತ ಕಾಯ್ಕಿಣಿ, ಅರವಿಂದ ನಾಡಕರ್ಣಿ, ಗಂಗಾಧರ ಚಿತ್ತಾಲ ಮುಂತಾದ ಸಾಹಿತಿಗಳು ಬಹಳ ಸಶಕ್ತವಾಗಿ ಚಿತ್ರಿಸಿದ್ದಾರೆ. ಸೂಕ್ಷ್ಮ ಸಂವೇದನಶೀಲ ಬರಹಗಾರರಿಗೆ ಮುಂಬಯಿ ಅನುಭವಗಳ ಸಾಗರ. ಚಿದಂಬರ ಬೈಕಂಪಾಡಿಯವರು ಕೂಡಾ ಓರ್ವ ಸೂಕ್ಷ್ಮ ಸಂವೇದನಾಶೀಲ ಬರಹಗಾರರೂ, ವೃತ್ತಿನಿರತ ಪತ್ರಕರ್ತರೂ ಆಗಿರುವುದರಿಂದ ಅವರ ಮುಂಬಯಿ ನೋಡುವ ತಹತಹ ಕೇವಲ ಕೂತೂಹಲ ಮಾತ್ರ ಆಗಿರದೆ ಸಿಕ್ಕ ಅಲ್ಪ ಸಮಯದಲ್ಲಿ ಮುಂಬಯಿ ಬದುಕನ್ನು ಸಾಧ್ಯವಾದಷ್ಟು ಗ್ರಹಿಸುವ, ಅರಿಯುವ ತೀವ್ರವಾದ ಹಂಬಲವೇ ಆಗಿದೆ. ಜತೆಗೆ ದಕ್ಕಿಸಿಕೊಂಡ ಅನುಭವವನ್ನು ಕಲಾತ್ಮಕವಾಗಿ ಕಟ್ಟಿಕೊಡುವ ಬಯಕೆಯೂ ಅವರದ್ದಾಗಿದೆ. ಬಾಲ್ಯದಲ್ಲಿ ರಟ್ಟಿನ ತಟ್ಟೆಯೊಳಗೆ ಅವರು ಮುಂಬಯಿಯ ಕೆಲವು ಚಿತ್ರಿಕೆಗಳನ್ನು ಕಂಡವರು. ಕಂಡ ನಂತರ ಮುಂಬಯಿ ನೋಡುವ ಅವರ ಆಸ್ಥೆ ಮತ್ತಷ್ಟು ಬಲವಾಯಿತು. ಕರ್ನಾಟಕದಿಂದ ಅದರಲ್ಲಿಯೂ ಕರಾವಳಿ ಕಡೆಯಿಂದ ಸಾವಿರಾರು ಮಂದಿ ಮುಂಬಯಿಗೆ ವಲಸೆ ಹೋಗಿರುವುದು ಉದ್ಯೋಗಾರ್ಥಿಗಳಾಗಿ. ಮುಂಬಯಿಯಲ್ಲಿ ಉದ್ಯೋಗ ನಿರ್ವಹಿಸುತ್ತಲೇ ರಾತ್ರಿ ಶಾಲೆಯಲ್ಲಿ ಕಲಿಯುವ ಅವಕಾಶವಿತ್ತು. ಮುಂಬಯಿಯಲ್ಲಿ ಜೀವನ ಸಾಗಿಸುತ್ತಾ ಇರುವವರು ರಜೆಯಲ್ಲಿ ಊರಿಗೆ ಬಂದಾಗ ಅವರು ತರುವ ಚಾಕಲೇಟ್, ಬಿಸ್ಕಿಟ್ ಹಾಗೂ ಹೊಸ ಉಡುಪು ತುಂಬಿದ ಪೆಟ್ಟಿಗೆ ಯಾವಾಗ ತೆರೆಯುತ್ತಾರೆ ಎಂದು ನಾವೆಲ್ಲರೂ ಬಾಲ್ಯದಲ್ಲಿ ಕೂತೂಹಲದಿಂದ ಕಾಯುತ್ತಿರುತ್ತೇವೆ. ಆಸೆಯಿಂದ ನಿರೀಕ್ಷಿಸುತ್ತೇವೆ ಎಂಬ ಸಂಗತಿಗಳನ್ನು ಚಿದಂಬರ ಬಹಳ ಆಕರ್ಷಕವಾಗಿ ಚಿತ್ರಿಸುತ್ತಾರೆ. ಅದು ವಾಸ್ತವ ಕೂಡಾ. ಆದರೆ ಬಹಳಷ್ಟು ಜನರ ಮುಂಬಯಿ ಬದುಕು ಚಾಕಲೇಟಿನಷ್ಟು ಸಿಹಿ, ಸವಿಯಾಗಿರುವುದಿಲ್ಲ ಎಂಬ ಸಂಗತಿಯನ್ನು ಚಿದಂಬರ್ ಮುಂಬಯಿ ಭೇಟಿಯ ಅನುಭವದಲ್ಲಿ ದಾಖಲಿಸುತ್ತಾರೆ.
ಮುಂಬಯಿಯನ್ನು ಮುಂಬಯಿಯಲ್ಲಿ ಬದುಕುತ್ತಿರುವವರು ಗ್ರಹಿಸುವ ರೀತಿ ಬೇರೆ. ಮುಂಬಯಿಗೆ ಪ್ರವಾಸಕ್ಕಾಗಿ ಬಂದಾಗ ಗ್ರಹಿಸುವ ರೀತಿ ಬೇರೆ. ಚಿದಂಬರವರದ್ದು ಎರಡನೆಯ ರೀತಿಯದ್ದು. ಅವರು ಮುಂಬಯಿಗೆ ಬರುವ ಮೊದಲೇ ಮಾನಸಿಕವಾಗಿ ಮುಂಬಯಿಯನ್ನು ಸಾಕಷ್ಟು ಸೂಕ್ಷ್ಮವಾಗಿ ಅರಿಯುವ ಸಿದ್ಧತೆಯಿಂದಲೇ ಹೊರಡುತ್ತಾರೆ. ಪ್ರವಾಸದ ಸುಖ ಅನುಭವಿಸುವ ಉದ್ದೇಶ ಅವರದಲ್ಲ. ಮುಂಬಯಿಗರ ಸಾಮಾಜಿಕ ಬದುಕು ಅದರಲ್ಲಿಯೂ ಮುಂಬಯಿಯಲ್ಲಿ ನೆಲೆನಿಂತ ತುಳುವರ ಕನ್ನಡಿಗರು ಬದುಕುವ ಪರಿಯನ್ನು ಅಧ್ಯಯನ ಮಾಡುವ ಮನೋಸ್ಥಿತಿ ಅವರದ್ದಾಗಿದೆ. ಹಾಗಾಗಿ ಮುಂಬಯಿಗೆ ಬಸ್ಸಿನಿಂದ ಹೊರಡುವಲ್ಲಿಂದ ತೊಡಗಿ ಪ್ರತಿ ವಿವರಗಳನ್ನು ಸೂಕ್ಷ್ಮವಾಗಿ ನೋಡುತ್ತಾರೆ. ಅವಲೋಕಿಸುತ್ತಾರೆ. ಒಂದು ನಿರ್ದಿಷ್ಟ ಸಂಸ್ಕೃತಿಯಿಂದ ವಲಸೆ ಬಂದವರು ಇನ್ನೊಂದು ಪರಕೀಯ ಸಂಸ್ಕೃತಿಗೆ ಮುಖಾಮುಖಿಯಾಗಿ ಬದುಕಬೇಕಾಗಿ ಬಂದಾಗ ಎದುರಿಸುವ ಸಾಂಸ್ಕೃತಿಕ ಬಿಕ್ಕಟ್ಟಿನ ಕುರಿತ ಚಿಂತನೆಯೊಂದಿಗೆ ಅವರು ಮುಂಬಯಿ ಬದುಕನ್ನು ಅರಿಯಲು ಪ್ರಯತ್ನಿಸುತ್ತಾರೆ. ಮುಂಬಯಿಗೆ ಹೊರಡುವ ಮುನ್ನ ಮುಂಬಯಿಯಿಂದ ಬಂದವರ ಚರ್ಯೆಗಳನ್ನು ಕೂಡಾ ಆಕರ್ಷಕವಾಗಿ ವಿವರಿಸುತ್ತಾರೆ. “ಮೂರು ನಾಲ್ಕು ವರ್ಷಗಳ ಹಿಂದೆ ಜೊತೆಯಾಗಿ ಕ್ರಿಕೆಟ್ ಆಡುತ್ತಿದ್ದವನು ಬೊಂಬಾಯಿಗೆ ಹೋಗಿ ಬಂದಮೇಲೆ ಅವನು ಅಚ್ಚಾ, ಅಚ್ಚಾ ಎಂದು ಹೇಳತೊಡಗಿದ. ಗೂಡಂಗಡಿಯಲ್ಲಿ ಗರಿ ಗರಿಯಾದ ನೋಟುಗಳನ್ನು ಕೊಟ್ಟು ನಿನಗೇನು ಬೇಕೋ ತೆಗೆದುಕೋ ಎನ್ನುತ್ತಿದ್ದ” ಹೀಗೆ ಒಂದು ಪೂರ್ವರಂಗದ ರೀತಿ ತಮ್ಮ ಮುಂಬಯಿ ಪ್ರವಾಸಕ್ಕೆ ಪೀಠಿಕೆ ಸಿದ್ಧಪಡಿಸುತ್ತಾರೆ. ಪ್ರಥಮವಾಗಿ ಮುಂಬಯಿಗೆ ಪ್ರವಾಸಗೈದಾಗಿನ ಸಂಭ್ರಮ, ತಲ್ಲಣ, ಕುತೂಹಲ ಆರಂಭದ ಪ್ರಯಾಣದಿಂದ ತೊಡಗಿ ಮುಂಬಯಿಯಲ್ಲಿ ಇಳಿಯುವ ತನಕವೂ ವ್ಯಕ್ತವಾಗುತ್ತದೆ. ಮುಂಬಯಿಯಲ್ಲಿ ಬದುಕುವ ನಮ್ಮವರ ಸ್ಥಿತಿ ಹೂವಿನ ಹಾಸಿಗೆಯಾಗಿರುವುದಿಲ್ಲ. ಅವರು ಚಾಳ್ಗಳಲ್ಲಿ, ಜೋಪಡಿಗಳಲ್ಲಿ, ಆಫೀಸುಗಳಲ್ಲಿ ಜೀವನ ಸಾಗಿಸುತ್ತಾರೆ. ಪರಿಚಯದವರೊಬ್ಬರು ತಾನು ಆಫೀಸಿನಲ್ಲಿ ಮಲಗುತ್ತೇನೆ ಎಂದಾಗ ‘ಇದು ಬೊಂಬಾಯಿಯ ಬದುಕಿನ ಹೊಸ ನೋಟವನ್ನು ಕೊಟ್ಟಿತು. ಬಹಳ ಹಿಂದೆ ಬಹಳಷ್ಟು ಹಿರಿಯರು ತಾವು ದುಡಿಯುತ್ತಿದ್ದ ಕಚೇರಿಗಳಲ್ಲಿಯೇ ವಾಸ್ತವ್ಯ ಮಾಡಿ ಬಾಡಿಗೆ ಉಳಿಸಿ ಮನೆ ಮಂದಿಯನ್ನು ಸಾಕುತ್ತಿದ್ದರು ಎನ್ನುವ ಮಾಹಿತಿ ಕೇಳಿದಾಗ ನಿಜಕ್ಕೂ ನಾನು ದಂಗಾಗಿ ಹೋದೆ. ‘ಬೊಂಬಾಯಿಯಲ್ಲಿದ್ದವರೆಲ್ಲರೂ ಐಷರಾಮದ ಜೀವನ ನಡೆಸಿಕೊಂಡಿದ್ದಾರೆ ಎಂದೇ ನನ್ನ ಕಲ್ಪನೆಯಾಗಿತ್ತು’ ಎಂದು ಲೇಖಕರು ಮುಂಬಯಿಗರ ಜೀವನ ರೀತಿಯನ್ನು ಅರಿಯುತ್ತಾರೆ. ಮುಂಬಯಿ ಬದುಕಿನ ಕುರಿತಾದ ಕಲ್ಪನೆ – ಹಾಗೂ ಕಟುವಾಸ್ತವದ ದರ್ಶನ ಮಾಡಿಸುತ್ತಾರೆ. ಮುಂಬಯಿಯಲ್ಲಿ ಗೋರೆಗಾಂವ್ ಕರ್ನಾಟಕ ಸಂಘದ ಕಾರ್ಯಕ್ರಮಕ್ಕೆ ಬಂದ ಲೇಖಕರು ರವಿ ಅಂಚನ್ ರವರ ಪ್ಲಾಟಿನಲ್ಲಿ ಇರುತ್ತಾರೆ. ಈ ಮೂಲಕ ಫ್ಲಾಟ್ ಸಂಸ್ಕೃತಿ ಹಾಗೂ ಊರು – ಮನೆ ಸಂಸ್ಕೃತಿಯ ನಡುವಿನ ಜೀವನ ವಿಧಾನವನ್ನು ಅರಿಯಲು ಪ್ರೇರಿತರಾಗುತ್ತಾರೆ. ಅವರು ಹೇಳುತ್ತಾರೆ. “ಫ್ಲಾಟುಗಳ ಬಾಗಿಲು ಯಾವಾಗಲೂ ಮುಚ್ಚಿಯೇ ಇರುತ್ತದೆ”. ಅವರು ಹೇಳುವುದು ಸರಿ ಆದರೆ ಮುಂಬಯಿಗರ ಮನಸ್ಸು, ಕಣ್ಣು – ಕಿವಿ ಸದಾ ತೆರೆದೇ ಇರುತ್ತದೆ. ಮುಂಬಯಿಯಲ್ಲಿ ಕನ್ನಡ ಕಾರ್ಯಕ್ರಮವು ಕನ್ನಡಿಗರ ಸಂಸ್ಕೃತಿಯನ್ನು ಸದಾ ಜೀವಂತವಾಗಿ ಇರಿಸುವುದಕ್ಕೆ ಸಹಕಾರಿ. ಅದು ಅವರ ಅಸ್ಮಿತೆಗೆ ಅನಿವಾರ್ಯವೂ ಹೌದು. ಹಾಗಾಗಿ ಕನ್ನಡದ ಕಾರ್ಯಕ್ರಮಗಳಿಗೆ ಜನ ಸೇರುತ್ತಾರೆ. ಸಂಭ್ರಮಿಸುತ್ತಾರೆ. ಮುಂಬಯಿ ಕನ್ನಡಿಗರು ಕರ್ನಾಟಕದ ಸಾಹಿತಿಗಳನ್ನು, ಕಲಾವಿದರನ್ನು ಪ್ರೀತಿಸುತ್ತಾರೆ. ಉತ್ತಮವಾಗಿ ಸತ್ಕರಿಸುತ್ತಾರೆ. “ ಕರ್ನಾಟಕದಲ್ಲಿ ಜನ ಕನ್ನಡವನ್ನು ಪ್ರೀತಿಸುವುದಕ್ಕಿಂತಲೂ ಹೆಚ್ಚು ಭಾಷಾ ಪ್ರೀತಿಯನ್ನು, ಸಾಹಿತ್ಯದ ಮೇಲೆ ಅಭಿಮಾನವನ್ನು ಬೊಂಬಾಯಿ ಜನ ತೋರಿಸುತ್ತಾರೆ ಎನ್ನುವುದನ್ನು ಪ್ರಮಾಣೀಕರಿಸಿ ಹೇಳಬಹುದು” ಎಂದು ಚಿದಂಬರ್ ಹೇಳುವ ಮಾತು ಸತ್ಯವಾದುದು. ಮುಂಬಯಿಯಲ್ಲಿ ಇದ್ದಷ್ಟು ದಿನ ಅವರು ಸಮಯ ವ್ಯರ್ಥಮಾಡುವುದಿಲ್ಲ. ಇಲ್ಲಿನ ಹೊಟೇಲಿನಲ್ಲಿ ಕೆಲಸ ಮಾಡುವ ಕನ್ನಡಿಗರನ್ನು ಮಾತನಾಡಿಸುತ್ತಾರೆ. ಅವರ ಶ್ರಮವನ್ನು ಕೊಂಡಾಡುತ್ತಾರೆ. ಮುಂಬಯಿ ಶೈಲಿನ ಯಾತನಾಮಯ ಪ್ರಯಾಣದ ಸುಖವನ್ನು ಅನುಭವಿಸುತ್ತಾರೆ. ಪಿಕ್ ಪಾಕೆಟ್ಗೂ ಒಳಗಾಗುತ್ತಾರೆ. ರೈಲಿನಲ್ಲಿ ಜರಗುವ ಭಜನಾ ಕಾರ್ಮಿಕರನ್ನು ವೀಕ್ಷಿಸುತ್ತಾರೆ. “ನಮ್ಮಲ್ಲಿ ಬಸ್ಸಲ್ಲಿ ಮೈಗೆ ಸ್ವಲ್ಪ ಮೈ ತಾಗಿದರೂ ಕೆಕ್ಕರಿಸಿ ನೋಡುವ , ಕೋಳಿ ಕಾಳಗಕ್ಕೆ ನಿಂತಂತೆ ಸೆಟೆದು ನಿಲ್ಲುವುದನ್ನು ಕಂಡಿದ್ದ ನನಗೆ ಆ ರೈಲಿನಲ್ಲಿ ಬೊಂಬಾಯಿಯ ಜನ ಅದೆಷ್ಟು ತಾಳ್ಮೆಯವರು, ಸಹಿಷ್ಣುಗಳು ಅನಿಸಿತು. ಎಂದು ರೈಲಿನ ಪ್ರಯಾಣವನ್ನು ವಿವರಿಸುತ್ತಾರೆ. ಮುಂಬಯಿಗೆ ವೀಕ್ಷಣೆಗೆ ಬರುವವರಿಗೆ ಕಾಮಾಟಿಪುರ (ಕೆಂಪು ದ್ವೀಪ) ಪ್ರದೇಶವನ್ನು ನೋಡಿ ತಿಳಿಯುವ ಕೂತೂಹಲವಿರುತ್ತದೆ. ಆ ಪರಿಸರಕ್ಕೆ ಹೊರಗಿನಿಂದ ಗೆಳೆಯರೊಡನೆ ಒಂದು ರೌಂಡ್ ಹಾಕಿ ಅಲ್ಲಿನ ಪರಿಸರ, ಅಲ್ಲಿನ ಸ್ತ್ರೀಯರ ಜೀವನದ ರೀತಿಯನ್ನು ಬಹಳ ಮಾರ್ಮಿಕವಾಗಿ ಚಿತ್ರಿಸುತ್ತಾರೆ. “ಕಾಮಾಟಿಪುರವೆಂದರೆ ಬೊಂಬಾಯಿಯಲ್ಲಿ ದೇಹ ಮಾರಿಕೊಳ್ಳುವವರ ತಾಣ ದೇಹ ಸುಖ ಬಯಸಿದವರಿಗೆ ಸುಲಭವಾಗಿ ತಮ್ಮ ಇಚ್ಛೆ ಪೂರೈಸಿಕೊಳ್ಳುವ ಅಡ್ಡೆ ಎಂದು ಹೊರನೋಟಕ್ಕೆ ಹೇಳಿ ತೃಪ್ತಿ ಪಡಬಹುದು. ಒಬ್ಬ ಪತ್ರಕರ್ತ, ಲೇಖಕ, ಕತೆಗಾರ. ಕವಿ ಸೃಜನಶೀಲತೆಯನ್ನು ಕರಗತ ಮಾಡಿಕೊಂಡಿರುವ ವ್ಯಕ್ತಿ ಆ ಕಾಮಾಟಿಪುರವನ್ನು ನೋಡಿ ಅರ್ಥೈಸಿ ಕೊಳ್ಳುವ ವಿಧಾನವೇ ಬೇರೆ ಎನ್ನುವವನು ನಾನು” ಎಂದು ಚಿದಂಬರ್ ಹೇಳುವುದು ಅವರ ಗ್ರಹಿಕೆಯ ವಿಧಾನವನ್ನು ತಿಳಿಸುತ್ತದೆ. ಅವರು ಆ ರೀತಿ ಗ್ರಹಿಸಿ, ಅರಿತು ಬರೆದಿದ್ದಾರೆ ಕೂಡಾ. “ಜಗತ್ತಿನಾದ್ಯಂತ ಬರುವವರಿಗೆ ಸುಖ ಕೊಡುತ್ತಿದ್ದೇವೆ ಅಂದು ಕೊಳ್ಳುತ್ತಿರುವ ಅವರಿಗೆ ಸುಖವೆಂದರೇನು ಎಂದು ಗೊತ್ತಿರಲು ಸಾಧ್ಯವೇ ಇಲ್ಲ ಎಂಬ ಅವರ ಮಾತುಗಳು ಓರ್ವ ಸಹೃದಯ ಸಂವೇದನಾಶೀಲ ಕತೆಗಾರನಿಂದ ಮಾತ್ರ ಹೊಮ್ಮಲು ಸಾಧ್ಯ. “ ಬೊಂಬಾಯಿ ಮಹಾಸಾಗರದಲ್ಲಿ ಮಾನಿನಿಯರು ಸುಖವಾಗಿದ್ದರೆ ಅದಕ್ಕೆ ಕಾಮಾಟಿಪುರದಲ್ಲಿ ಮಾನಿನಿಯರು ಮೈದಾನ ಮಾಡುತ್ತಿರುವುದು ಕಾರಣ ಎನ್ನುವುದು ನಿರಾಕರಿಸಲಾಗದ ಸತ್ಯ” ಎಂಬ ಅವರ ಮಾತು ಕೂಡಾ ಚಿಂತನೆಗೆ ಹಚ್ಚುವಂತದ್ದು. ಮುಂಬಯಿ ಕೊಳಚೆಗೇರಿ ಧಾರಾವಿ ಸುತ್ತಿ ಅಲ್ಲಿನ ಕರಾಳ ಬದುಕಿನ ಚಿತ್ರಣ ನೀಡುತ್ತಾರೆ. “ಧಾರಾವಿಯ ತ್ಯಾಜ್ಯ ನದಿ ಹರಿದು ಸೇರುವುದು ಅರಬ್ಬೀ ಸಮುದ್ರದ ಒಡಲಿಗೆ. ಅಮ್ಮಾ ತಾಯೇ ನೀನೆಷ್ಟು ಕರುಣಾಮಯಿ. ಜಗತ್ತಿನ ಅತಿದೊಡ್ಡ ಕೊಳಗೇರಿಯ ಮಾಲಿನ್ಯವನ್ನು , ಮಲಿನವನ್ನು ಜೀರ್ಣಿಸಿಕೊಳ್ಳುವೆಯಲ್ಲಾ? ಸುಮ್ಮನೆ ಒಂದು ಪ್ರಶ್ನೆ ಕಡಲಿಗೆ..” ಎಂಬ ಸಾಲುಗಳು ಕವಿ ಹೃದಯದಿಂದ ಮೂಡಿ ಬರುವಂತದ್ದು. ಮುಂಬಯಿಯಲ್ಲಿ ಒಂದು ಕಾಲದಲ್ಲಿ ವಿಜೃಂಭಿಸಿದ ಡ್ಯಾನ್ಸ್ ಬಾರ್ಗಳ ಕುರಿತ ಅನುಭವ ಕಥನವೂ ಇದೆ. ಕರ್ನಾಟಕ ಸಂಘ ಮುಂಬಯಿಗೆ ವಿಚಾರಗೋಷ್ಠಿಯಲ್ಲಿ ಭಾಗವಹಿಸಲು ಬಂದಾಗ ಮರಾಠಿಗರು ಹಾಗೂ ಉತ್ತರ ಭಾರತೀಯರ ನಡುವಿನ ಸಂಘರ್ಷದ ಪ್ರತ್ಯಕ್ಷ ಅನುಭವವಾಗಿದ್ದನ್ನು ದಿಗ್ಭ್ರಮೆಯಿಂದ ದಾಖಲಿಸಿದ್ದಾರೆ. ಮುಂಬಯಿಯ ಕೆಲವು ಭೇಟಿಗಳಲ್ಲಿ ತನ್ನ ಅರಿವಿಗೆ, ಅನುಭವಕ್ಕೆ ದಕ್ಕಿದ್ದನ್ನು ಬಹಳ ಪ್ರಾಮಾಣಿಕವಾಗಿ ಹಿಡಿದಿಡುವಲ್ಲಿ ಯಶಸ್ವಿಯಾಗಿದ್ದಾರೆ. ಮುಂಬಯಿಯಲ್ಲಿ ಕನ್ನಡಿಗರು ಸಾಹಿತ್ಯ – ಸಂಸ್ಕೃತಿಯ ಸೇವೆಯಲ್ಲಿ ನಿರತರಾಗಿರುವುದನ್ನು ಹೃತ್ಪೂರ್ವಕವಾಗಿ ಕೊಂಡಾಡಿದ್ದಾರೆ. ಇಲ್ಲಿನ ಚಿತ್ರಣ ಓರ್ವ ಕತೆಗಾರನ ಕಸುಬುಗಾರಿಕೆ, ಪತ್ರಕರ್ತನ ಅನ್ವೇಷಣಾ ದೃಷ್ಟಿಕೋನ, ಕವಿಹೃದಯದ ತುಡಿತ ಹೀಗೆ ಹಲವು ಮಗ್ಗುಲುಗಳಿಂದ ಗ್ರಹಿಸಿ ಸೃಜನಾತ್ಮಕವಾಗಿ ಮುಂಬಯಿ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಕತೆಯಂತೆ ಓದಿಸಿಕೊಳ್ಳುವ ಪ್ರವಾಸ ಕಥನವು ಸರಳ – ಸುಂದರವಾಗಿ ಮೂಡಿ ಬಂದಿದೆ. ಪ್ರತಿ ಘಟನೆ – ಸನ್ನಿವೇಶಗಳಿಗೆ ಉಪಶೀರ್ಷಿಕೆ ನೀಡಿದ್ದು ಆಕರ್ಷಣೀಯವಾಗಿದೆ. ಬೈಕಂಪಾಡಿಯವರ ನೆನಪಿನ ಶಕ್ತಿಗೆ ತಲೆದೂಗಲೇ ಬೇಕು. ಮುಂಬಯಿ ಬದುಕನ್ನು ಪ್ರತಿಕ್ಷಣದಲ್ಲೂ ಅತೀ ಸೂಕ್ಷ್ಮವಾಗಿ, ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಗ್ರಹಿಸಿದ್ದರಿಂದ ಪುಸ್ತಕಕ್ಕೆ ಸಾಂಸ್ಕೃತಿಕ ಅಧ್ಯಯನದ ಶಿಸ್ತು ಪ್ರ್ರಾಪ್ತವಾಗಿದೆ. ಒಂದು ಉತ್ತಮ ‘ಪ್ರವಾಸ ಕಥನ’ ನೀಡಿದಕ್ಕೆ ಬೈಕಂಪಾಡಿಯವರಿಗೆ ಅಭಿನಂದನೆಗಳು ಸಲ್ಲಬೇಕು.
ಡಾ.ಭರತ್ಕುಮಾರ್ ಪೊಲಿಪು