ತೆಂಗಿನಕಾಯಿ ಕೀಳುವ ಕರಿಯನಿಗೂ ಈಗ ಗಾಂಚಲಿ. ಯಾವಾಗ ಫೋನ್ ಮಾಡಿದರೂ ಮೊಬೈಲ್ ನಾಟ್ ರೀಚೆಬಲ್. ಅಂಗಡಿ ಬೀದಿಯಲ್ಲಿ ಉಂಡಾಯಿಯಂತೆ ಅಲೆದುಕೊಂಡಿರುತ್ತಾನೆ. ಒಂದು ಮರಕ್ಕೆ ಹತ್ತಿ ಒಂದು ಕಾಯಿ ಕಿತ್ತರೂ ಇಪ್ಪತ್ತೈದು ರೂಪಾಯಿ ಮುಲಾಜಿಲ್ಲದೆ ಕೊಡಬೇಕು. ಗವರ್ಮೆಂಟ್ ತೊಟ್ಟೆ ಸಾರಾಯಿ ಬಂದ್ ಮಾಡಿದ ಮೇಲೆ ವೈನ್ಶಾಪ್ ಗಿರಾಕಿ. ಗಂಟೆಗೊಂದು ನೈನ್ಟಿ ಗುಂಡು ಬೀಳುತ್ತಿರಬೇಕು. ಮೊಬೈಲ್ಗೆ ದಿನಕ್ಕೊಂದು ಗಂಟೆಯಾದರೂ ಚಾರ್ಜ್ ಮಾಡಬೇಕು ಅನ್ನೋದೂ ಗೊತ್ತಿಲ್ಲ ಕಮಂಗಿಗೆ. ತಾನು ಮಾತ್ರ ದಿನಪೂರ್ತಿ ಚಾರ್ಜ್ ಮಾಡಿಕೊಂಡಿರ್ತಾನೆ.
ಈ ಕರಿಯನಿಂದಾಗಿ ತಾನು ನಿತ್ಯವೂ ಅಮ್ಮನ ಬಾಯಿಂದ ಬೈಗುಳ ಕೇಳಬೇಕು. ಒಂದೊಂದು ಸಲ ಅದೆಷ್ಟು ಸಿಟ್ಟು ಬರುತ್ತೆ ನಾಣಿಗೆ ಅಂದ್ರೆ ತೆಂಗಿನ ತೋಟ, ಹತ್ತು ಮುಡಿ ಭತ್ತದ ಗದ್ದೆಯನ್ನು ಮಾರಿಬಿಡಬೇಕು. ಈ ಹಳ್ಳಿಯಲ್ಲಿ ತೋಟ, ಗದ್ದೆ ಅಂತೆಲ್ಲಾ ಸುತ್ತಾಡಿ, ಆಳುಗಳ ಬೆನ್ನು ಹಿಡಿದು ಕೆಲಸ ಮಾಡಿಸೋದು ಅಂದ್ರೆ ಸಾಕಾಗಿ ಹೋಗುತ್ತೆ. ಕಾಟನ್ಪೇಟೆ ಕಾಲೇಜಿಗೆ ಹೋಗುವ ನವೀನ್ ಅದೆಷ್ಟು ಸಕತ್ತಾಗಿ ಡ್ರೆಸ್ ಮಾಡಿಕೊಂಡು ಕೂಲಿಂಗ್ಲಾಸ್ ಹಾಕೊಂಡು ಕಾರಲ್ಲಿ ತಿರುಗಾಡುತ್ತಾನೆ ?. ಅವನಂತೆ ತಾನೂ ದಿನಬೆಳಗಾಗುವಷ್ಟರಲ್ಲಿ ಕಾರು, ಬೈಕ್ ಯಾವುದರಲ್ಲಿ ಬೇಕಾದರೂ ತಿರುಗಾಡಬಹುದು ತುಂಡು ಗದ್ದೆ ಮಾರಿದ್ರೆ. ಅದಕ್ಕೆ ಅಮ್ಮ ಒಪ್ಪುತ್ತಿಲ್ಲ. ನೀನು ಊರ ಯಜಮಾನ ಅಂತ ಬುದ್ಧಿ ಹೇಳುವುದರಲ್ಲೇ ಅಮ್ಮ ಮುದುಕಿಯಾಗುತ್ತಿದ್ದಾಳೆ. ಹತ್ತನೇ ತರಗತಿ ರಿಸಲ್ಟ್ ಬರುವ ಮೊದಲೇ ಯಜಮಾನಿಕೆ ಹೊರೆ ಹೆಗಲೇರಿತು, ಓದಿಗೆ ಫುಲ್ ಸ್ಟಾಪ್ ಬಿತ್ತು. ಮಗನಿಗೆ ಮೂವತ್ತು ವರ್ಷ ಆಯ್ತು, ಒಳ್ಳೇ ಸಂಬಂಧ ಸಿಕ್ಕಿದ್ರೆ ಮದುವೆ ಮಾಡಬೇಕು ಅಂತೆಲ್ಲಾ ತನ್ನವರೊಂದಿಗೆ ಹೇಳಿಕೊಂಡೇ ಅಮ್ಮ ಕಾಲ ಕಳೆಯುತ್ತಾಳೆ.
ಹೊಟ್ಟೆಗೆ ಸರಿಯಾಗಿ ಊಟವಿಲ್ಲದಿದ್ರೂ ಐಶ್ವರ್ಯಳಂತ ಸೊಸೆ ತಂದುಕೊಂಡ್ರೆ ಸಾಕು ಎನ್ನುವ ಈ ಕಾಲದಲ್ಲಿ ಅಮ್ಮ ಇನ್ನೂ ಹಳ್ಳೀ ಗುಗ್ಗುವಿನಂತೆ ಅಕ್ಕಪಕ್ಕದ ಹಳ್ಳಿಗಳಲ್ಲಿರುವ ಹುಡುಗಿಯರನ್ನೇ ಹುಡುಕುತ್ತಿದ್ದಾಳೆ. ಅಮ್ಮನಿಗೆ ಒಪ್ಪಿಗೆ ಆದರೆ ಸಾಕೇ ತಾನು ಒಪ್ಪಬೇಡವೇ?. ಜೊತೆಯಲ್ಲಿ ಹೋಗುವಾಗ ಹತ್ತಾರು ಮಂದಿ ತನ್ನ ಸೊಸೆಯನ್ನು ನೋಡಿ ಹೊಟ್ಟೆ ಉರಿಸಿಕೊಳ್ಳಬೇಕು ಅನ್ನುವ ಸಾಮಾನ್ಯ ತಿಳುವಳಿಕೆಯೂ ಬೇಡವೇ?.
ಅಪ್ಪ ಕಣ್ಮುಚ್ಚಿದಾಗಿನಿಂದ ತಾನೊಬ್ಬನೇ ಗುದ್ದಾಡಬೇಕಾಗಿದೆ ಎನ್ನುವ ಸಂಕಟ ನಾಣಿಗೆ. ಹಿರಿ ಮಗನಾಗಿರುವ ತಪ್ಪಿಗೆ ಅಪ್ಪನಂತೆ ಊರ ಯಜಮಾನಿಕೆ ಬೇರೆ ಮಾಡಬೇಕು. ಈಗೆಲ್ಲಾ ಪೇಟೆಯಲ್ಲಿ ಓದುವುದರಿಂದ, ಸಿನಿಮಾ ಪಾರ್ಕ್ ಸುತ್ತಾಡಿ ಸೋಶಿಯಲ್ಲಾಗಿ ಹುಡುಗ-ಹುಡುಗಿ ತಿರುಗಾಡಿದ್ರೆ ಅದನ್ನೇ ಪಂಚಾಯಿತಿ ಕಟ್ಟೆಗೆ ತಂದು ರಾದ್ಧಾಂತ ಮಾಡುತ್ತಾರೆ. ವಾರಕ್ಕೊಂದು ಇಂಥ ದೂರು ಕೇಳಿ ಕೇಳಿ ಈ ಯಜಮಾನಿಕೆಯೇ ಬೇಡ ಅನ್ನಿಸಿದ್ದೂ ಇದೆ. ಅಪ್ಪನ ಕಾಲದಲ್ಲಿ ಈ ಊರಲ್ಲಿ ಹತ್ತಿಪ್ಪತ್ತು ಮನೆಗಳಿಗೆ ಮಾತ್ರ ಲೈಟಿದ್ದವು. ಈಗ ಬೀದಿ ತುಂಬೆಲ್ಲಾ ಸ್ರ್ಟೀಟ್ ಲೈಟ್ ಹಗಲೂ ರಾತ್ರಿ ಉರಿಯುತ್ತವೆ. ಬಾವಿ ಕಟ್ಟೆಯಲ್ಲಿ ಬಟ್ಟೆ ಒಗೆಯುತ್ತಿದ್ದವರು ಮನೆಗಳಲ್ಲಿ ವಾಷಿಂಗ್ ಮೆಷಿನ್ ಇಟ್ಟುಕೊಂಡಿದ್ದಾರೆ. ಕೊಡಪಾನಗಳಲ್ಲಿ ನೀರು ತರುವ ಕಾಲ ಕಳೆದುಹೋಗಿದೆ. ಮನೆಯೊಳಗೇ ನಲ್ಲಿಗಳಿವೆ. ಊರಿಗೆ ಬಂದವಳು ಹಿಂದಿನಂತೆ ನೀರಿಗೆ ಬರುವುದಿಲ್ಲ. ಇದೆಲ್ಲಾ ಅಮ್ಮನಿಗೆ ಯಾಕೆ ಗೊತ್ತಾಗುತ್ತಿಲ್ಲವೋ ಎನ್ನುವ ಸಂಕಟ ನಾಣಿಗೆ.
ಇದು ಗೋಳೂರು. ಸರಿ ಸುಮಾರು ಎರಡು ಸಾವಿರ ಮನೆಗಳಿಗೆ, ಹತ್ತು ಸಾವಿರ ಜನಸಂಖ್ಯೆ ಇದೆ. ಒಂದೂವರೆ ಸಾವಿರ ಮನೆಗಳಿಗೆ ಜಮೀನಿದೆ. ಭತ್ತ, ಅಡಿಕೆ, ತೆಂಗು, ಬೆಳೆ ಬೆಳೆಯುತ್ತಾರೆ. ಮನೆಯವರೇ ಗದ್ದೆ, ತೋಟದ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಕೂಲಿ ಕಾರ್ಮಿಕರ ಸಂಖ್ಯೆಯೂ ಹೆಚ್ಚುತ್ತಿದೆ. ಆದರೂ ಗದ್ದೆ ಕೆಲಸಗಳಿಗೆ ಕೆಲಸಗಾರರ ಬರ. ಊಟ, ತಿಂಡಿ, ಚಹಾ ಸಹಿತ ದಿನಕ್ಕೆ ಇನ್ನೂರು ರೂಪಾಯಿ ಸಂಬಳ ಕೊಡಬೇಕು. ಮೊಬೈಲ್ ಬಂದ ಮೇಲೆ ತಿಂಗಳು ಮೊದಲೇ ಫೋನ್ ಮಾಡಿ ಬುಕ್ ಮಾಡಬೇಕು ಕೆಲಸಕ್ಕೆ. ಊರ ಪಕ್ಕದಲ್ಲೇ ನದಿ ಹರಿದು ಹೋಗುವುದರಿಂದ ನೀರಿಗೇನು ಬರವಿಲ್ಲ. ಒಂದು ಕಾಲದಲ್ಲಿ ಊರ ಯಜಮಾನ ದೊಡ್ಡಣ್ಣನವರ ಟೆರೇಸ್ ಮನೆ ಒಂದನ್ನು ಬಿಟ್ಟರೆ ಉಳಿದವೆಲ್ಲಾ ಹಂಚಿನ ಮನೆಗಳು, ಅಲ್ಲಲ್ಲಿ ಗುಡಿಸಲುಗಳೂ ಇದ್ದವು. ಈಗ ಯಜಮಾನಿಕೆ ನಾಮಕಾವಾಸ್ತೆ ಇದೆ. ದೊಡ್ಡಣ್ಣರ ಮಗ ನಾಗೇಶ ವಂಶಪಾರಂಪರ್ಯವಾಗಿ ಊರ ಯಜಮಾನ. ಆದರೆ ಎಂಎಲ್ಎ ಸಂಪತ್ ಕುಮಾರ್ ಮಾತೇ ಫೈನಲ್. ಪಂಚಾಯಿತಿ ಕಟ್ಟೆಗೆ ತಕರಾರು ಬಂದರೂ ಎಂಎಲ್ಎ ಸ್ಪೀಕರ್ ಫೋನ್ನಲ್ಲಿ ಹೇಳಿದ್ದೇ ನ್ಯಾಯ. ಪೊಲೀಸ್ ಸ್ಟೇಶನ್ ಮಂಜೂರಾಗಿದೆಯಂತೆ, ಅದೂ ಬರಬಹುದು. ಆಗ ಪಂಚಾಯಿತಿ ಸ್ಟೇಶನ್ ಗೆ ಟ್ರಾನ್ಸಫರ್ ಆಗುತ್ತವೆ ಬಿಡಿ.
ಅಂದ ಹಾಗೆ ಗೋಳೂರು ಪಂಚಾಯತ್ ಇದೆ. ಕೈಪಕ್ಷ, ಕಮಲ ಪಕ್ಷ, ರೈತರ ಪಕ್ಷ, ಇತ್ತೀಚೆಗೆ ಬಡವರ ಪಕ್ಷವೂ ಚಿಗುರುತ್ತಿದೆ. ಆದರೆ ಸಂಪತ್ ಕುಮಾರ್ ಹೇಳಿದವರಿಗೇ ಓಟ್ ಹಾಕಬೇಕು. ಇದರ ಉಸ್ತುವಾರಿ ನೋಡಿಕೊಳ್ಳುವ ಜವಾಬ್ದಾರಿ ನಾಣಿ ಅರ್ಥಾತ್ ಊರ ಯಜಮಾನ. ಸಂಪತ್ ಕುಮಾರ್ ತುಂಬಾ ಬಿಜಿಯಾಗಿರುತ್ತಾರೆ. ವರ್ಷಕ್ಕೆ ಒಂದೆರಡು ಸಲ ಈ ಊರಿಗೆ ಬರುತ್ತಾರೆ. ನೇರವಾಗಿ ಅವರ ಕಾರು ಹೋಗುವುದೇ ನಾಣಿ ಮನೆಗೆ. ಅಲ್ಲಿ ನಾಣಿ, ಅವರ ಅಮ್ಮ ಸಭೆ ಮಾಡುತ್ತಾರೆ. ಪಂಚಾಯಿತಿ ಮೆಂಬರ್ಗಳು ಕಚೇರಿಯಲ್ಲಿರಬೇಕು. ಕಾರಿನಲ್ಲಿ ಕುಳಿತೇ ಸಂಪತ್ ಕುಮಾರ್ ಅವರಿಗೆ ಕೆಲವು ಅಮೂಲ್ಯ ಸಲಹೆ ಕೊಡುತ್ತಾರೆ. ಅವುಗಳು ಪಾಲನೆ ಆಗಬೇಕು. ಅವರ ಸಲಹೆಗಳೇ ಒಂಥರಾ ಪಂಚಾಯಿತಿ ನಿರ್ಣಯಗಳು. ಸಭೆಯಲ್ಲಿ ಹಾರಾಟ, ಚೀರಾಟ, ಸಭಾತ್ಯಾಗಕ್ಕೆ ಆಸ್ಪದವೇ ಇಲ್ಲ. ತಿದ್ದುಪಡಿಗಂತೂ ಅವಕಾಶ ಇಲ್ಲವೇ ಇಲ್ಲ. ಸಂಪತ್ ಕುಮಾರ್ ಮೊಬೈಲ್ನಲ್ಲಿ ಹೇಳಿದ್ದೇ ರೆಸುಲ್ಯೂಶನ್.
ಬಹುಮುಖ್ಯವಾಗಿ ಹೇಳಲೇ ಬೇಕೆಂದರೆ ಗೋಳೂರಲ್ಲಿ ಒಂದು ವೈನ್ ಶಾಪ್ ಇದೆ. ಅದು ಸಂಪತ್ ಕುಮಾರ್ ಅವರ ಪತ್ನಿ ಸಂಬಂಧಿಕರಿಗೆ ಸೇರಿದ್ದು. ನ್ಯಾಯಬೆಲೆ ಅಂಗಡಿ ಎಂಎಲ್ಎ ತಮ್ಮನ ಮಗನ ಹೆಸರಲ್ಲಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಸಂಪತ್ ಕುಮಾರ್ ಅವರ ಜಾತಿಯವರು. ಮುಖ್ಯ ನರ್ಸ್ ಪಂಚಾಯಿತಿ ಅಧ್ಯಕ್ಷರ ಪತ್ನಿ. ಮೆಡಿಕಲ್ ಶಾಪ್ ಮಾಲೀಕರು ಎಂಎಲ್ಎ ಖಾಸಾ ದೋಸ್ತ್. ಪಂಚಾಯತ್ ಕಾರ್ಯದರ್ಶಿ ಮಾತ್ರ ಬೇರೆ ಊರಿಂದ ಹೊಸದಾಗಿ ವರ್ಗವಾಗಿ ಬಂದವರು. ಆದರೆ ಎಂಎಲ್ಎ ಸಾಹೇಬರಿಗೆ ತುಂಬಾ ಬೇಕಾದವರ ಸಂಬಂಧಿ.
ಗೋಳೂರು ವೇಗವಾಗಿ ಬೆಳೆಯುತ್ತಿದೆ. ಎಂಎಲ್ಎ ಸಂಪತ್ ಕುಮಾರ್ ಶಾಸಕರ ತಂಡದಲ್ಲಿ ಜಪಾನ್, ಚೀನಾ, ಥೈಲ್ಯಾಂಡ್ ಪ್ರವಾಸ ಮಾಡಿ ಬಂದಿದ್ದಾರೆ. ಅವರು ಆ ದೇಶಗಳಿಗೆ ಹೋಗಿದ್ದು, ಅಲ್ಲಿ ಏನೆಲ್ಲ ಪ್ರಗತಿಯಾಗಿದೆ ಎನ್ನುವ ವೀಡಿಯೋ ಮಾಡಿಸಿ ತಂದಿದ್ದಾರೆ. ಊರವರನ್ನೆಲ್ಲಾ ಸೇರಿಸಿ ರಾತ್ರಿ ಹತ್ತುಗಂಟೆ ತನಕ ಎರಡೆರಡು ಸಲ ವೀಡಿಯೋ ನೋಡಿಸಿದ್ದಾರೆ. ಪೇಟೆಯಲ್ಲಿ ಓದುತ್ತಿರುವ ನವೀನ್, ಶ್ರೇಯ, ಅಮರ್, ಸಪ್ನಾ ಅವರುಗಳಂತು ಥ್ರಿಲ್ ಆಗಿದ್ದಾರೆ. ಗೋಳೂರಿಗೆ ನ್ಯೂಲುಕ್ ಬರಬೇಕು ಅಂತ ಓಪನ್ ಆಗಿ ತುಂಬಿದ ಸಭೆಯಲ್ಲಿ ವೀಡಿಯೋ ನೋಡಿ ಚಿಯರ್ ಮಾಡಿದ್ದಾರೆ. ಈ ವಿಷಯ ಎಂಎಲ್ಎ ಅವರ ಕಿವಿಗೆ ಆ ಕ್ಷಣದಲ್ಲೇ ತಲುಪಿದೆ. ನಾಣಿಗೂ ವೀಡಿಯೋ ಖುಷಿಕೊಟ್ಟಿದೆ. ಆದರೆ ನಾಣಿ ಅಮ್ಮನಿಗೆ ಮಾತ್ರ ಅಷ್ಟೊಂದು ಇಷ್ಟವಾಗಿಲ್ಲವಂತೆ. ಹಳೆತಲೆಮಾರಿನವರಿಗೆ ವಿದೇಶಿ ಮೋಜು, ಮಸ್ತಿ ಗೊತ್ತಿಲದ ಕಾರಣ ನಾಖುಷಿ ಸಹಜ.
ವೀಡಿಯೋದಲ್ಲಿ ನೋಡಿದ ರಸ್ತೆಗಳು, ಮಹಲುಗಳು, ನೈಟ್ ಬಾರ್, ಬ್ಯೂಟಿ ಪಾರ್ಲರ್ ನಾಣಿಗೂ ಥ್ರಿಲ್ ಕೊಟ್ಟಿದೆ. ಮದುವೆ ಆದ ಮೇಲೆ ಹನಿಮೂನ್ಗೆ ಸಿಂಗಾಪುರ್, ಥೈಲ್ಯಾಂಡ್ಗೆ ಫ್ರೀಟ್ರಿಪ್ ಸ್ಪಾನ್ಸರ್ ಮಾಡುವುದಾಗಿ ಎಂಎಲ್ಎ ಸಾಹೇಬರು ಹೇಳಿದ ಮೇಲಂತೂ ನಾಣಿ ವಿದೇಶಿ ಕಂಪೆನಿಗಳು ಗೋಳೂರಿಗೆ ಬರಲಿ ಎನ್ನುತ್ತಿದ್ದಾರೆ. ನಿಜ ಹೇಳಬೇಕೆಂದರೆ ಗೋಳೂರಿನ ಯುವಕರು ಹಿಂದೆಂದೂ ಇರದಷ್ಟು ಚುರುಕಾಗಿದ್ದಾರೆ. ಯುವಕರೆಲ್ಲಾ ಸೇರಿಕೊಂಡು ನ್ಯೂಏಜ್ ಅಸೋಸಿಯೇಷನ್ ಹೆಸರಲ್ಲಿ ಎಂಎಲ್ಎಯವರಿಗೆ ಮೆಮೊರಾಂಡಮ್ ಕೊಟ್ಟಿದ್ದಾರಂತೆ. ಗೋಳೂರು ಉದ್ಧಾರಕ್ಕೆ ನಾವು ನಿಮ್ಮಂದಿಗಿದ್ದೇವೆ, ‘ಹಳ್ಳಿ ವನವಾಸ ಸಾಕು, ಪಟ್ಟಣ ವಾಸ ಬೇಕು’ ಎನ್ನುವ ಸ್ಲೋಗನ್ ಬರೆದು ಸಹಿಮಾಡಿದ್ದಾರಂತೆ. ಈ ಸಂಘಕ್ಕೆ ನಾಣಿಯೇ ಪ್ರೆಸಿಡೆಂಟ್.
ಆದರೆ ನಾಣಿ ಅಮ್ಮ ಮಾತ್ರ ಅಪಸ್ವರ ತೆಗೆದಿದ್ದಾರೆ. ಅವರ ವಯಸ್ಸಿನವರು ಕೂಡಾ ಅದೇ ರಾಗ ಎಳೆದಿರುವುದು ಎಂಎಲ್ಎ ಸಂಪತ್ ಕುಮಾರ್ ಗರಂ ಆಗಲು ಕಾರಣವಾಗಿದೆಯೆಂದು ನಾಣಿಯೇ ನ್ಯೂಏಜ್ ಅಸೋಸಿಯೇಷನ್ ವರ್ಕಿಂಗ್ ಕಮಿಟಿ ಸಭೆಗೆ ತಿಳಿಸಿರುವುದು ಖಾತ್ರಿ. ಗೋಳೂರಲ್ಲಿ ವಿದೇಶಿ ವೀಡಿಯೋ ನೋಡಿದ ಮೇಲೆ ಯುವಕರು, ಹಿರಿಯರು ಬಣಗಳಾಗುತ್ತಿದ್ದಾರೆ. ಮನೆಯೊಳಗೆ ಅಪ್ಪಮಕ್ಕಳ ಮಧ್ಯೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆಯುತ್ತಿರುವುದು ಗುಟ್ಟೇನಲ್ಲ. ಯುವಕರು ಹಾದಿ ತಪ್ಪುತ್ತಿದ್ದಾರೆ ಎನ್ನುವ ಆತಂಕ ಹಿರಿಯರನ್ನು ಕಾಡುತ್ತಿದ್ದರೆ, ಹೊಸಯುಗಕ್ಕೆ ಕಾಲಿಡುತ್ತಿದ್ದೇವೆ ಎನ್ನುವ ಸಂಭ್ರಮ ಯುವಕರಿಗೆ. ಈಗಂತೂ ಗೋಳೂರಲ್ಲಿ ಯುವಕರು ಫುಲ್ ಖುಷಿಯಲ್ಲಿದ್ದಾರೆ. ತೆಂಗಿನಕಾಯಿ ಕೀಳುವ ಕರಿಯ ವೃತ್ತಿಯನ್ನೇ ಬಿಡುವುದಾಗಿ ಹೇಳಿಕೊಂಡಿದ್ದಾನೆ. ಅವನೂ ಕೈಗಾರಿಕೆಯ ಹೂವಿನ ತೋಟದ ಖಾಯಂ ನೌಕರನಾಗುತ್ತಾನಂತೆ.
ಗೋಳೂರು ಈಗ ಜಾಗತಿಕ ಭೂಪಟದಲ್ಲಿ ಸ್ಥಾನ ಪಡೆಯಲಿದೆ. ಐದು ಸಾವಿರ ಎಕ್ರೆ ಪ್ರದೇಶದಲ್ಲಿ ಕೈಗಾರಿಕೆ ತಲೆ ಎತ್ತಲಿದೆ. ಹತ್ತು ಸಾವಿರ ಮಂದಿಗೆ ಉದ್ಯೋಗ ಸಿಗಲಿದೆ. ಇದಕ್ಕಾಗಿ ಗೋಳೂರಿನ ಗದ್ದೆ, ತೋಟಗಳ ಭೂಮಿ ಸ್ವಾಧೀನ ಕೆಲಸ ಮುಗಿದಿದೆ. ಒಂದು ಎಕ್ರೆಗೆ ಭೂನೋಂದಣಿ ಕಚೇರಿಯಲ್ಲಿನ ದರಕ್ಕಿಂತ ನಾಲ್ಕು ಪಟ್ಟು ಹೆಚ್ಚು ದರ ನಿಗದಿ ಮಾಡಿರುವುದರಿಂದ ಎಲ್ಲರಿಗೂ ಖುಷಿಯಿದೆ. ನಾಣಿ ಅಮ್ಮ, ಅವರೊಂದಿಗೆ ಇನ್ನಷ್ಟು ಮಂದಿ ತಕರಾರು ತೆಗೆದಿದ್ದಾರೆ. ಭೂಮಿ ಕಳಕೊಳ್ಳುವವರಿಗೆ ಮನೆಗಿಬ್ಬರಿಗೆ ಅದೇ ಕೈಗಾರಿಕೆಯಲ್ಲಿ ಉದ್ಯೋಗ ಕೊಡುತ್ತಾರೆ. ವಿದೇಶಿ ಕಂಪೆನಿಯಾಗಿರುವುದರಿಂದ ಕೈತುಂಬಾ ಸಂಬಳ ಗ್ಯಾರಂಟಿ ಎನ್ನುವ ಸಂತೃಪ್ತಿ ಯುವಕರಿಗೆ. ನಿರ್ವಸಿತರಾದವರಿಗೆ ಕೈಗಾರಿಕೆಯವರೇ ಸ್ವಂತ ಖರ್ಚಿನಿಂದ ಕಾಲನಿ ನಿರ್ಮಿಸಲಿದ್ದಾರೆ. ಕಾಲನಿಯೊಳಗೆ ವೀಡಿಯೋದಲ್ಲಿ ನೋಡಿದಂತೆ ನೂರು ಅಡಿ ರಸ್ತೆಗಳನ್ನು ನಿರ್ಮಿಸಲಾಗುತ್ತದೆ. ಅಲ್ಲೇ ಸ್ಟೇಟ್, ಸೆಂಟ್ರಲ್ ಸಿಲೆಬಸ್ ಶಾಲೆ ತೆರೆಯುತ್ತಾರೆ. ಆಟದ ಮೈದಾನ, ಉದ್ಯಾನವನ, ಮಕ್ಕಳಿಗೆ ರಿಕ್ರಿಯೇಷನ್ ಕ್ಲಬ್ ತೆರೆಯುತ್ತಾರೆ. ಈ ಬಗ್ಗೆ ಸ್ವತ: ಎಂಎಲ್ಎ ಸಂಪತ್ ಕುಮಾರ್ ಆಸಕ್ತಿ ವಹಿಸಿರುವುದರಿಂದ ಯೋಜನೆ ಕಾಲಮಿತಿಯೊಳಗೆ ಕೈಗೂಡಲಿದೆ ಎನ್ನುವ ವಿಶ್ವಾಸ. ಆದ್ದರಿಂದಲೇ ಹೆಚ್ಚಿನವರು ಭೂಮಿ ಕೊಡಲು ತುದಿಗಾಲಲ್ಲಿ ನಿಂತಿದ್ದಾರೆ. ಹಳೆತಲೆಮಾರಿನವರು ಮಾತ್ರ ಎಗರಾಡುತ್ತಿದ್ದರೂ ಅವರೇನು ಹೆಚ್ಚು ವರ್ಷ ಬಾಳಿ ಬದುಕುವವರಲ್ಲ, ನಾಳೆಬೀಳುವ ಮರಗಳು ಎನ್ನುವ ಸಮಾಧಾನದ ಮಾತನ್ನು ಎಂಎಲ್ಎ ಯುವಕರಿಗೆ ಹೇಳಿದ್ದಾರೆ. ಈಗಾಗಲೇ ಹಲವು ಬ್ಯಾಂಕ್ನವರು ಶಾಖೆ ತೆರೆಯಲು ಮುಂದೆ ಬಂದಿದ್ದಾರೆ. ಭೂಮಿ ಮಾರಿದ ಹಣವನ್ನು ಸುರಕ್ಷಿತವಾಗಿ ಠೇವಣಿ ಇಟ್ಟರೆ ಬರುವ ಬಡ್ಡಿಯಿಂದ ಜೀವನ ಸಾಗಿಸಲು ಅನುಕೂಲವೆಂದು ಬ್ಯಾಂಕಿನವರು ಅಂಕಿ ಅಂಶ ಸಹಿತ ಮಾಹಿತಿಕೊಟ್ಟು ಹೋಗಿದ್ದಾರೆ. ಜನರಿಗೆ ವಿಶ್ವಾಸ ಬರುವ ಉದ್ದೇಶದಿಂದ ಎಂಎಲ್ಎ ತಮ್ಮ ಪತ್ನಿಯ ಹಿರಿತನದಲ್ಲಿ ಸಹಕಾರಿ ಸಂಘ ಸ್ಥಾಪನೆಗೂ ಮುಂದಾಗಿದ್ದಾರೆ. ಅಲ್ಲೂ ಹಣ ಠೇವಣಿ ಇಡಬಹುದು ಮತ್ತು ಬಡ್ಡಿ ಹೆಚ್ಚು ಕೊಡುತ್ತಾರೆ.
ಗೋಳೂರು ಈಗ ಭಾರೀ ಕೈಗಾರಿಕೆಗಳ ರಾಜಧಾನಿಯಾಗಿದೆ. ಗದ್ದೆ, ತೋಟಗಳು ಒಂದು ಕಾಲದಲ್ಲಿ ಇದ್ದವು ಎನ್ನುವುದೇ ಗೊತ್ತಾಗದಷ್ಟರಮಟ್ಟಿಗೆ ಕಟ್ಟಡಗಳು ತಲೆಯೆತ್ತಿವೆ. ಭೂಮಿ ಮಾರಿಕೊಂಡವರು ಲಕ್ಷಾಂತರ ರೂಪಾಯಿಗಳನ್ನು ಬ್ಯಾಂಕ್, ಸಹಕಾರಿ ಸಂಘದಲ್ಲಿ ಠೇವಣಿ ಇಟ್ಟಿದ್ದಾರೆ. ಅವರಿಗಾಗಿಯೇ ನಿರ್ಮಿಸಿಕೊಟ್ಟಿರುವ ಕಾಲನಿಯ ಸುಂದರ ಮನೆಗಳಲ್ಲಿ ವಾಸವಿದ್ದಾರೆ. ಮನೆ ಕಾಂಪೌಂಡ್ನೊಳಗೆ ಕಾರು, ಬೈಕ್ಗಳು ನಿಂತಿರುವುದು ಸರ್ವೇ ಸಾಮಾನ್ಯ. ಬಹುತೇಕ ಮಂದಿ ಕಾಲನಿಯ ಮನೆಯನ್ನೂ ಮಾರಿಕೊಂಡು ಪೇಟೆಗಳಿಗೆ ವಲಸೆ ಹೋಗಿದ್ದಾರೆ. ಈಗ ಗೋಳೂರಲ್ಲಿ ನಾಣಿಯ ಯಜಮಾನಿಕೆ ಇಲ್ಲ. ಸರ್ಕಲ್ ಇನ್ಸ್ಪೆಕ್ಟರ್ ದರ್ಜೆಯ ಪೊಲೀಸ್ ಠಾಣೆ ಇದೆ, ಅಲ್ಲೇ ಎಲ್ಲವೂ ಬಗೆಹರಿಯುತ್ತವೆ. ಮೂರು ಆಧುನಿಕ ಶೈಲಿಯ ಬಾರ್ಗಳಿವೆ. ಲೇಡಿಸ್ ಬಾರ್ ಕೂಡಾ ಇದೆ. ಡಿಸ್ಕೋ ನೃತ್ಯವಿರುವ ಬಾರ್ ಇಪ್ಪತ್ನಾಲ್ಕು ಗಂಟೆ ಸೇವೆಯಲ್ಲಿದೆ. ಇಲ್ಲಿ ಐಶ್ವರ್ಯ, ಬಿಂದು, ಶೀಲಾ, ಚಮೇಲಿ ಮುಂತಾದ ಸುರಸುಂದರಾಂಗನೆಯರು ಬಣ್ಣದ ಬೆಳಕಲ್ಲಿ ನೃತ್ಯ ಮಾಡುತ್ತಾರೆ. ಅದನ್ನು ನೋಡುತ್ತಾ ಕುಡಿದು ಮಜಾ ಮಾಡುವ ಯುವಕರು ನೋಟುಗಳನ್ನು ನೃತ್ಯಗಾರ್ತಿಯರತ್ತ ಎಸೆದು ಖುಷಿಪಡುತ್ತಾರೆ. ದೆಹಲಿ, ಮುಂಬೈನಂಥ ಮಹಾನಗರಗಳಲ್ಲಿ ಇರದಂಥ ಸುಂದರಿಯರನ್ನು ಗೋಳೂರಿನ ಯುವಕರು ಕಂಡು ಪುಳಕಗೊಳ್ಳುತ್ತಿದ್ದಾರೆ. ಸಿನಿಮಾ ಥಿಯೇಟರ್, ಬ್ಯೂಟಿ ಪಾರ್ಲರ್ಗಳು ಕೂಡಾ ಬಿಜಿಯಾಗಿವೆ. ಅಂತೂ ಸ್ವರ್ಗವೇ ಗೋಳೂರಿನ ಧರೆಗಿಳಿದಂತಾಗುತ್ತಿದೆ ಯುವಕರಿಗೆ. ಈಗ ಎಂಎಲ್ಎ ಸಂಪತ್ ಕುಮಾರ್ ಕೈಗಾರಿಕಾ ಮಂತ್ರಿಯಾಗಿದ್ದಾರೆ. ಗೋಳೂರಿನ ಅಭಿವೃದ್ಧಿಯ ಹರಿಕಾರ ಎನ್ನುವ ಬಿರುದಿನೊಂದಿಗೆ ನ್ಯೂಏಜ್ ಅಸೋಸಿಯೇಷನ್ ಭಾನುವಾರ ಅವರಿಗಾಗಿ ಭಾರೀ ಸನ್ಮಾನ ಸಭೆ ಆಯೋಜಿಸಿದೆ.
ಗೋಳೂರು ಚಿತ್ರಣವೇ ಬದಲಾಗಿದೆ. ಮನೆಗಿಬ್ಬರಿಗೆ ಉದ್ಯೋಗ ಕೊಡಲು ಕಂಪೆನಿ ಸಿದ್ಧವಿದೆ, ಆದರೆ ಈ ಊರಿನಲ್ಲಿ ಅವರ ಶೈಕ್ಷಣಿಕ ಅರ್ಹತೆಗೆ ಸೂಟ್ ಆಗುವ ಕೆಲಸಗಳಿಲ್ಲ. ಮಾನವೀಯತೆ ನೆಲೆಯಲ್ಲಿ ಕೆಲವರಿಗೆ ದಿನಗೂಲಿ ಕೆಲಸಕ್ಕೆ ನೇಮಕ ಮಾಡಿಕೊಂಡಿದ್ದಾರೆ. ಅಂಥವರಲ್ಲಿ ತೆಂಗಿನಕಾಯಿ ಕೀಳುವ ಕರಿಯನೂ ಒಬ್ಬ. ಕಾಲೇಜು ಪೂರ್ಣಗೊಳಿಸದ ನವೀನ್ಗೂ ಕೆಲಸ ಸಿಕ್ಕಿಲ್ಲ. ಅವನಿಗೂ ಈ ಬಗ್ಗೆ ಬೇಸರವಿಲ್ಲ. ಯಜಮಾನನಾಗಿದ್ದ ನಾಣಿ ಲೇಡಿಸ್ ಬಾರ್ನಲ್ಲಿ ಬಿಜಿ. ಡ್ಯಾನ್ಸರ್ ಚಮೇಲಿ ಜೊತೆ ಡೀಪ್ ಲವ್, ಅವನ ಮೊಬೈಲ್ ನಾಟ್ ರೀಚೆಬಲ್.
–ಚಿದಂಬರ ಬೈಕಂಪಾಡಿ