ಉಡುಪಿ ಒಂದು ಸಣ್ಣ ನಗರ. ಇಲ್ಲಿ ಶಿರಿಬೀಡು ಪ್ರದೇಶ ಒಂದು ಸಣ್ಣ ತುಂಡು ಭೂಭಾಗ. ಈ ಸಣ್ಣ ತುಂಡಿನಲ್ಲಿಯೂ ಶಿರಿಬೀಡು ಶಾಲೆಯ ಬಳಿ ಸಣ್ಣ ಕ್ಯಾಂಟೀನ್ ಇದೆ. ಇಲ್ಲಿ ಕಾಣುವುದು “ಊಟ ಬಲ್ಲವನಿಗೆ ರೋಗವಿಲ್ಲ’ ಎಂಬ ಗಾದೆ ಮಾತನ್ನು ಹೇಳಿದರೆ ಸಾಲದು, ಜೀವನದಲ್ಲಿ ಜಾರಿಗೆ ತರಬೇಕೆಂಬ ಇಚ್ಛಾಬಲ.
ಒಂದರಲ್ಲಿ ಬಹುಬಗೆ ಅಡುಗೆ
ಇಲ್ಲಿ ಆರೋಗ್ಯಕ್ಕೆ ಹೇಳಿ ಮಾಡಿಸಿದಂತಹ ಅಡುಗೆಯನ್ನು ಮಣ್ಣಿನ ಮಡಕೆಯಲ್ಲಿ ತಯಾರಿಸುತ್ತಾರೆ. ಅಕ್ಕಿ, ರಾಗಿ, ಅವರೆ, ಹೆಸರು, ಹುರುಳಿ, ಬಟಾಣಿ, ಅಳಸಂಡೆ, ಕಾಬೂಲಿಕಡ್ಲೆ, ಕಪ್ಪು ಎಳ್ಳು, ತೊಗರಿಬೇಳೆ, ನವಣೆ ಇತ್ಯಾದಿ ಧಾನ್ಯಗಳು, ಕೊತ್ತಂಬರಿ, ಜೀರಿಗೆ, ಶುಂಠಿ, ಅರಸಿನ, ಮೆಂತೆಯಂತಹ ಸಾಂಬಾರು ಪದಾರ್ಥಗಳು, ದ್ರಾಕ್ಷಿ, ಗೋಡಂಬಿಯಂತಹ ಒಣಹಣ್ಣು-ಬೀಜಗಳು, ಏಲಕ್ಕಿ , ಚಕ್ಕೆ , ಲವಂಗದಂತಹ ಪರಿಮಳ ದ್ರವ್ಯ, ಮೂರ್ನಾಲ್ಕು ಬಗೆ ಸೊಪ್ಪು , ನಾಲ್ಕೈದು ಬಗೆ ತರಕಾರಿಗಳನ್ನು ಏಕಕಾಲದಲ್ಲಿ ಬೇಯಿಸಿ ಮಾಡುವ ಕಿಚಡಿ ಪಲಾವು ಇದು. ಖಾರಕ್ಕೆ ಕಾಳುಮೆಣಸು ಬಳಸುತ್ತಾರೆ. ಅಕ್ಕಿಗಿಂತ ಸ್ವಲ್ಪ ಹೆಚ್ಚೇ ತರಕಾರಿ, ಸೊಪ್ಪುಗಳ ಪ್ರಮಾಣವಿರುತ್ತದೆ. ತುಪ್ಪ , ಮೊಸರು, ಮಜ್ಜಿಗೆ, ಉಪ್ಪಿನಕಾಯಿ, ಚಟ್ನಿ ಹೀಗೆ ಅವರವರ ನಾಲಗೆಗೆ ರುಚಿವರ್ಧಕವಾಗಿ ಬಳಸಬಹುದು.
ಪುಂಖಾನುಪುಂಖ ಪ್ರಶ್ನೆಗಳು
ಇಷ್ಟು ಹೇಳಿದ್ದೇ ತಡ ಇವುಗಳೆಲ್ಲವೂ ಏಕಕಾಲದಲ್ಲಿ ಹೇಗೆ ಬೇಯಲು ಸಾಧ್ಯ? ಮಡಕೆ ಒಡೆಯುವುದಿಲ್ಲವೆ? ಮಡಕೆಗೆ ಗ್ಯಾಸ್ ಅನಿಲ ಸಾಧ್ಯವೆ? ರುಚಿ ಇರುತ್ತದೋ ಎಂಬ ಹಲವು ಪ್ರಶ್ನೆಗಳು ನಿಮ್ಮನ್ನು ಧುತ್ತನೆ ಎದುರಿಸುವುದು ಖಾತ್ರಿ. ತೊಗರಿಬೇಳೆ, ಅವರೆ, ಹೆಸರು, ಹುರುಳಿಯಂತಹ ಹೆಚ್ಚು ಬೇಯಬೇಕಾದ ಧಾನ್ಯಗಳನ್ನು ನಾಲ್ಕು ಗಂಟೆ ಮುಂಚೆ ನೀರಿನಲ್ಲಿ ನೆನೆ ಹಾಕಿ ಅಕ್ಕಿಯ ಜೊತೆ ಬೇಯಿಸುತ್ತಾರೆ. ಸ್ವಲ್ಪ ಹೊತ್ತಿನಲ್ಲಿ ಸೊಪ್ಪು , ತರಕಾರಿಗಳನ್ನು ಹಾಕಿದರೆ ಸಾಕು. ಬೆಳ್ತಿಗೆ ಅಕ್ಕಿಯಾದರೆ ಕೇವಲ ಅರ್ಧ ಗಂಟೆ ಸಾಕು. ಸಾವಯವ ಅಕ್ಕಿ, ಸಾವಯವ ಸೊಪ್ಪು , ತರಕಾರಿಯಾದರೆ ಆರೋಗ್ಯಕ್ಕೆ ಇನ್ನೂ ಉತ್ತಮ. ಮಣ್ಣಿನಿಂದ ತಯಾರಾಗುವ ಮಡಕೆಗೆ ಕಲ್ಲು , ಲೋಹದ ಪಾತ್ರೆಗಳಷ್ಟು ಶಕ್ತಿ ಇರುವುದಿಲ್ಲ ನಿಜ.
ಆದರೆ ಜಾಗ್ರತೆಯಿಂದ ಕಾಪಾಡಿದರೆ ಇದು ತಲೆತಲಾಂತರಗಳಿಂದ ಬಾಳಿ ಬದುಕಿದ ಉದಾಹರಣೆಯೂ ಇದೆ. ಇದಕ್ಕೆ ಒಂದು ಉದಾಹರಣೆ ಉಡುಪಿಯ ಹಿರಿಯ ಪತ್ರಕರ್ತ ಬಿ.ಬಿ. ಶೆಟ್ಟಿಗಾರ್ ಅವರ ಬ್ರಹ್ಮಾವರದ ಮನೆಯಲ್ಲಿ ಅಜ್ಜಿ ಕಾಲದಿಂದ ಬಂದ ಅಳಿಗೆ (ಮಣ್ಣಿನ ಪಾತ್ರೆ) ಇಂದಿಗೂ ಇದೆ. ಇಷ್ಟು ದೀರ್ಘಕಾಲ ಈಗ ನಾವು ಖರೀದಿಸಿದ ಯಾವುದಾದರೂ ಪಾತ್ರೆಗಳು ಬದುಕಿ ಉಳಿಯುತ್ತವೆಯೆ? ಇಷ್ಟು ಅಲ್ಲದಿದ್ದರೂ ಕೆಲವು ತಿಂಗಳುಗಳ ಮಟ್ಟಿಗಂತೂ ಮಡಕೆ ಖಾತ್ರಿಯಾಗಿ ಬದುಕುತ್ತವೆ. ಬ್ರಹ್ಮಾವರದ ಸಮೀಪ ಆರೂರಿನಲ್ಲಿ ಪರವೂರುಗಳಿಗೂ ವಿಧವಿಧ ಮಣ್ಣಿನ ಪಾತ್ರೆಗಳನ್ನು ಕಳುಹಿಸಿಕೊಡುವ ಕುಶಲಕರ್ಮಿ ಕುಮಾರ್ ಕುಲಾಲ್, ತಂದೂರಿ ಮಡಕೆಗಳನ್ನು ರಾಜ್ಯಾದ್ಯಂತ ಪೂರೈಸುವ ಚೇರ್ಕಾಡಿ ಮುಂಡ್ಕಿನಜೆಡ್ಡು ಮಂಜು ಕುಲಾಲ್ ಇದ್ದಾರೆ. ಇವರ ಮಣ್ಣಿನ ನಾನಾ ವಿಧದ ಪಾತ್ರೆಗಳು ಬಹುಕಾಲ ಉಳಿಯುತ್ತವೆ. ಏಕೆಂದರೆ ಅವರು ಗುಣಮಟ್ಟ ಕಾಪಾಡಿಕೊಂಡು ಬರುತ್ತಾರೆ. ಅನಿಲ ಸಿಲಿಂಡರ್ ಬೆಂಕಿಯಿಂದಲೂ ಮಣ್ಣಿನ ಪಾತ್ರೆಗಳಲ್ಲಿ ಅಡುಗೆ ತಯಾರಿಸಲು ಸಾಧ್ಯ ಎಂಬುದು ಶಿರಿಬೀಡು ಕ್ಯಾಂಟೀನ್ನಲ್ಲಿ ತೋರುತ್ತಿದೆ.
ಶೇ. 100 ಪೌಷ್ಟಿಕಾಂಶದ ಲಾಭ
ಕೆಲವರ ಮನೆಗಳಲ್ಲಿ ಹಿಂದೆ ಕಲ್ಲು ಮಡಕೆ ಬಳಸುತ್ತಿದ್ದರು. ಈಗ ಕೆಲವೇ ಮನೆಗಳಲ್ಲಿ ವಸ್ತುಸಂಗ್ರಹಾಲಯದ ಸ್ಥಾನವನ್ನು ಕಲ್ಲು ಮಡಕೆ ಹೊಂದಿದೆ. ಏಕೆಂದರೆ, ಗ್ರಾಹಕರೂ ಇಲ್ಲ, ಉತ್ಪಾದಕರೂ ಇಲ್ಲವಾದ ಮೇಲೆ ಜೀವಂತಿಕೆಯೂ ಇಲ್ಲ. ಮಣ್ಣಿನ ಮಡಕೆಯಲ್ಲಿ ಮಾಡಿದ ಅಡುಗೆಯಿಂದ ಧಾನ್ಯ, ತರಕಾರಿ, ಮಾಂಸದ ಶೇ. 100 ಪೌಷ್ಟಿಕಾಂಶಗಳು ದೇಹಕ್ಕೆ ಲಭಿಸುತ್ತವೆ ಎಂದು ರಾಜೀವ್ ದೀಕ್ಷಿತ್ ಹೇಳುತ್ತಿದ್ದರು. ಆದರೆ ಅದರ ಅನುಷ್ಠಾನ ಆಗದಿದ್ದರೆ ಕಲ್ಲು ಮಡಕೆ ಗತಿಯೇ ಮಣ್ಣಿನ ಮಡಕೆಗೂ ಬರುತ್ತದೆ. ಇತ್ತ ಮನುಷ್ಯರಿಗೆ ರೋಗಗಳು, ಈ ರೋಗಗಳನ್ನು ಸೃಷ್ಟಿಸಲು ಸಹಕರಿಸುವ ಅಗ್ಗದ ಮತ್ತು ನಯನಮನೋಹರ ಲೋಹದ ಪಾತ್ರೆಗಳು ಮಾರುಕಟ್ಟೆಗೆ ಲಗ್ಗೆ ಇಡುತ್ತವೆ, ಅತ್ತ ಮಡಕೆಗಳು ಹುಟ್ಟುವುದಿಲ್ಲ. ಒಂದು ಬಾರಿ ಒಂದು ವೃತ್ತಿ ನಶಿಸಿ ಹೋದ ಮೇಲೆ ಅದನ್ನು ಮತ್ತೆ ಎದ್ದು ನಿಲ್ಲಿಸಬೇಕಾದರೆ ಬಹಳ ಕಷ್ಟವಿದೆ, ಇದು ವೃತ್ತಿಯ ಉದ್ಧಾರಕ್ಕೆ ಅಲ್ಲ, ಜೀವಸಂಕುಲದ ಉದ್ಧಾರಕ್ಕೆ. ದೊಡ್ಡ ಮಟ್ಟದ ಅಡುಗೆ ತಯಾರಿಸುವಾಗ ಮಣ್ಣಿನ ಮಡಕೆ ಅಸಾಧ್ಯವೆನಿಸಿದರೆ ತಾಮ್ರ, ಹಿತ್ತಾಳೆ, ಕಂಚಿನ ಪಾತ್ರೆಗಳು ಎರಡನೆಯ ಪ್ರಾಶಸ್ತ್ಯವಾಗಿ ಬಳಸಬಹುದು. ಉಳಿದೆಲ್ಲವೂ ರೋಗೋತ್ಪಾದಕ, ರೋಗೋತ್ತೇಜಕ, ರೋಗೋದ್ರೇಕದ ಪಾತ್ರೆಗಳು.
ಬಾಣಲೆಯಿಂದ ಬೆಂಕಿಗೆ
ಮಡಕೆಯ ಗುಣದ ಬಗ್ಗೆ ಅರಿವಾಗಿ ಬೇಡಿಕೆ ಕಂಡು ಬಂದರೆ ದೊಡ್ಡದೊಡ್ಡ ಕಂಪೆನಿಗಳು ಮಡಕೆ ಉದ್ಯಮಕ್ಕೆ ಕೈಹಾಕಬಹುದಾದ ಕಾಲವಿದು. ಆ ಕಂಪೆನಿಗಳು ಯಾವುದೋ ರಾಸಾಯನಿಕ ಮಿಶ್ರ ಮಾಡಿ ಅಗ್ಗದ ಮಡಕೆಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತವೆ ಎಂದಿಟ್ಟುಕೊಳ್ಳಿ. ಆಗ ನೈಸರ್ಗಿಕವಾಗಿ ಮಡಕೆ ತಯಾರಿಸುವ ಬಡವರು ಮತ್ತಷ್ಟು ಮೂಲೆಗುಂಪಾಗಿ ಅವರ ಮಕ್ಕಳು ಆ ವೃತ್ತಿಯನ್ನೇ ಬಿಟ್ಟು ಬೇರೆ ಕ್ಷೇತ್ರಕ್ಕೆ ಹೋಗುತ್ತಾರೆ. ಎರಡು ಮೂರು ಪೀಳಿಗೆಯ ಬಳಿಕ ಇನ್ನಾವುದೋ ಲಾಬಿಯಿಂದಾಗಿ ಎಲ್ಲೋ ದೂರದ ಪ್ರಯೋಗಾಲಯದವರು ಸಂಶೋಧನೆ ನಡೆಸಿ ಈ ಮಡಕೆಯಿಂದ ಆರೋಗ್ಯಕ್ಕೆ ಹಾನಿ ಎಂಬ ವರದಿ ಕೊಡುವುದು ಮಾಧ್ಯಮಗಳಲ್ಲಿ ಫ್ಲ್ಯಾಶ್ ನ್ಯೂಸ್ ಆಗಿ ಮೂಡಿಬರುತ್ತವೆ ಎಂದೂ ಊಹಿಸಿ. ಅದರ ಲಾಭ ಮತ್ತಷ್ಟೂ ಹಾನಿಕರವಾದ ಇತರ ಪಾತ್ರೆಗಳಿಗೆ ಆಗುತ್ತದೆ. ಇಂತಹ ಶಕ್ತಿಗಳೇ ಆ ಸಂಶೋಧನೆ ಹಿಂದೆ ಇರುವುದಿದೆ. ಆ ಹೊತ್ತಿಗೆ ಮಡಕೆ ತಯಾರಿಸುತ್ತಿದ್ದ ಮೂರನೆಯ ತಲೆಮಾರಿನ ಯುವಕರು ತಮ್ಮ ಅಜ್ಜ , ತಾತ ಉತ್ತಮ ಮಡಕೆ ತಯಾರಿಸುತ್ತಿದ್ದರು ಎಂದು ಬಣ್ಣಿಸಬೇಕಷ್ಟೆ. ಆಗ ಯುವಕರಿಗೆ ಕುಂಭಕಲೆ ಗೊತ್ತಿರುವುದಿಲ್ಲ. ಆಗಿನ ಸನ್ನಿವೇಶವನ್ನು ಬಳಸಿಕೊಳ್ಳುವ ಬುದ್ಧಿವಂತ ಇನ್ನೊಂದು ವರ್ಗ ಮಡಕೆ ಮಾಡುವ ಕಲೆಯನ್ನು ಕಲಿಸುವ ಕಾಲೇಜೊಂದನ್ನು ತೆರೆದು ಅವರ ಮಾರುಕಟ್ಟೆ ಮಾಡುತ್ತಾರೆ. ಗಾಂಧೀಜಿಯವರು ಗುಡಿಕೈಗಾರಿಕೆಗಳು ಬದುಕಬೇಕೆಂದು ಇಚ್ಛಿಸಿದ್ದರೂ ದಶಕ, ಶತಕಗಳ ಕಾಲದಿಂದ ಭಾರತದ ಗ್ರಾಮೀಣ ಗುಡಿ ಕೈಗಾರಿಕೆಗಳು ನಾಶವಾದ ಬಗೆ ಹೀಗೆ.
ಈಗಲೂ ಆಗಲೂ ಸ್ಲೋ ಪಾಯ್ಸನ್ ಪಾತ್ರೆ
ಬ್ರಿಟಿಷರ ಕಾಲದಲ್ಲಿ ಸ್ವಾತಂತ್ರ್ಯ ಹೋರಾಟಗಾರರಿಗೆ ಜೈಲಿನಲ್ಲಿ ಊಟ ಕೊಡುತ್ತಿದ್ದ “ಸ್ಲೋ ಪಾಯ್ಸನ್’ ಲೋಹದ ಪಾತ್ರೆಗಳು ಸ್ವಾತಂತ್ರ್ಯೋತ್ತರದಲ್ಲಿ ಉದ್ಯಮವಾಗಿ, ಅತ್ಯಾಧುನಿಕವಾಗಿ ರೂಪಾಂತರಗೊಂಡು ಬಡವರಿಗೆ ಅಗ್ಗದ ದರದ ನೆಪದಿಂದ, ಹೈಫೈ ಜನರಿಗೆ ಸಮಯ ಉಳಿತಾಯ, ಆಕರ್ಷಣೆ, ಸುಧಾರಣೆ ನೆಪದಿಂದ ಮನೆಮನೆಗಳಲ್ಲಿ ರಾರಾಜಿಸುತ್ತಿವೆ. ಆರ್ಥಿಕ, ಸಾಮಾಜಿಕವಾಗಿ ಉತ್ತರ-ದಕ್ಷಿಣ ಧ್ರುವದಂತಿರುವ ಇವೆರಡೂ ವರ್ಗಗಳು ಸಾಗುವುದು ಒಂದೇ ಕಡೆಗೆ, ಅದೇ ಅನಾರೋಗ್ಯದ ಅಂಗಣಕ್ಕೆ. ಆದರೆ, ಬಡ ವರ್ಗ ಖರ್ಚನ್ನು ನಿಭಾಯಿಸಲಾಗದೆ ಸಿರಿವಂತ ವರ್ಗದತ್ತ ಕೈಯೊಡ್ಡುತ್ತದೆ. ಹೀಗೆ ಹೇಳಿದಾಗ ಬಹುತೇಕರಿಗೆ ತಿಳಿಯುವುದಿಲ್ಲ, ಕೆಲವರಿಗೆ ಸಿಟ್ಟೂ ಬರುತ್ತದೆ. ಸರಳವಾಗಿ ಹೇಳುವುದಾದರೆ ಯಾವುದೇ ಪದಾರ್ಥದ ಮೂಲದಲ್ಲಿದ್ದ ಅಂದರೆ ಭೂಮಿಯಿಂದಲೇ ಅದಕ್ಕೆ ಬಂದ 18 ಬಗೆಯ ಪೌಷ್ಟಿಕಾಂಶಗಳಲ್ಲಿ ಬಹುತೇಕ ಅಂಶ ದೇಹಕ್ಕೆ ಸೇರಿದರೆ ಪುಷ್ಟಿ ದೊರಕುತ್ತದೆ. ಹಾಗಾದರೆ, ಆರೋಗ್ಯ ಇರುತ್ತದೆ. ಪೌಷ್ಟಿಕಾಂಶಗಳು ನಷ್ಟಗೊಂಡರೆ ತಿಂದದ್ದು ಹೊಟ್ಟೆಗೆ ತುಂಬಿಸಿದ ತ್ಯಾಜ್ಯವಾಗುತ್ತದೆ. ಪೌಷ್ಟಿಕಾಂಶಗಳು ಕಡಿಮೆಯಾದರೆ ರೋಗಾಣುಗಳು ದಾಳಿ ಮಾಡುತ್ತವೆ, ಆಗಲೇ ಬರುವುದು ರೋಗ. ವಾಹನಗಳಿಗೆ ಕಲಬೆರಕೆ ಇಂಧನ ತುಂಬಿಸಿದರೆ ಆಗುವ ಅನುಭವ ಸೂತ್ರವನ್ನೇ ದೇಹವೆಂಬ ವಾಹನಕ್ಕೂ ಅನ್ವಯಿಸಿದರೆ ಅರ್ಥವಾಗುತ್ತದೆ.
ಅಪಾಯಕಾರಿ ಪಾತ್ರೆಗಳು
ಆಧುನಿಕ ಪಾತ್ರೆಗಳಲ್ಲಿ ಬೇಯಿಸಿದ ಪದಾರ್ಥಗಳಲ್ಲಿ ನಾಲಗೆಗೆ ರುಚಿ ಇದ್ದರೂ ಪೌಷ್ಟಿಕಾಂಶ ನಷ್ಟವಾಗಿರುತ್ತದೆ. ಕೆಲವು ಅತ್ಯಾಧುನಿಕ ಅಡುಗೆ ತಯಾರಿ ಉಪಕರಣಗಳಲ್ಲಿ ಆಹಾರ ತಯಾರಿಸುವಾಗ ಹತ್ತಿರ ನಿಂತರೂ ಅದರ ರೇಡಿಯೇಶನ್ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಎನ್ನುವುದನ್ನು ತಜ್ಞರೇ ಒಪ್ಪಿಕೊಳ್ಳುತ್ತಾರೆ, ಇನ್ನು ಅದರ ಊಟ ಏನು ಮಾಡಬಹುದು? ಆದರೆ ಪ್ರಚಾರ, ಹಣಬಲದಿಂದಾಗಿ ಜನರಿಗೆ ಈ ಧ್ವನಿ ಕೇಳಿಸುತ್ತಿಲ್ಲ.
ಯಶಸ್ವೀ ಪ್ರಯೋಗ
ಶಿರಿಬೀಡು ಕ್ಯಾಂಟೀನ್ ಊಟ ಒಂದೇ ದಿನದ ಬೆಳವಣಿಗೆಯಲ್ಲ. ಒಂದೇ ಜಾತಿಯ ಸೊಪ್ಪು , ತರಕಾರಿಗಳಿಂದ ಶುರುವಾದ ಈ ಪ್ರಯೋಗ ಈಗ ಹಲವು ಧಾನ್ಯಗಳು, ಸೊಪ್ಪು, ತರಕಾರಿಗಳು ಸೇರಿ 30ಕ್ಕೂ ಹೆಚ್ಚು ಸಾಮಗ್ರಿಗಳು ಸೇರಿವೆ, ಸೇರ್ಪಡೆಯಾಗುತ್ತಲೇ ಇದೆ. ಒಂದು ತರಕಾರಿಯಿಂದ 30ಕ್ಕೂ ಹೆಚ್ಚು ಬಗೆ ಸಾಮಗ್ರಿಗಳ ಅಡುಗೆ ತಯಾರಿವರೆಗೆ ಕ್ಯಾಂಟೀನ್ ಮಾಲಕ ಶಂಕರ್, ಸಿಬಂದಿಗಳಾದ ನಾರಾಯಣ್, ರಾಜು ಅವರು ಹೆಚ್ಚು ಕಲಿಯದಿದ್ದರೂ ಯಶಸ್ವೀ ಪ್ರಯೋಗ ಮಾಡಿದ್ದಾರೆ. ಇಲ್ಲಿ ಬಡವನ ಹೊಟೇಲ್ಲೇ ಪ್ರಯೋಗಾಲಯ, ಹೆಚ್ಚು ಕಲಿಯದ ಸಿಬಂದಿಗಳೇ ಸಂಶೋಧಕರು!
ತಜ್ಞರ ಮೆಚ್ಚುಗೆ
ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೌಷ್ಟಿಕಾಂಶ ತಜ್ಞೆ ಸುವರ್ಣಾ ಹೆಬ್ಟಾರ್, ಮೆಡಿಸಿನ್ ವಿಭಾಗದ ವೈದ್ಯ ಡಾ| ರವಿರಾಜ ಆಚಾರ್ಯ, ಉಡುಪಿಯ ಆಯುರ್ವೇದ ವೈದ್ಯರಾದ ಡಾ| ರವಿರಾಜ ಭಂಡಾರಿ, ಡಾ| ಜಯರಾಮ ಭಟ್ ಮೊದಲಾದವರು ಭೇಟಿ ನೀಡಿ “ಇದೊಂದು ಶ್ರೇಷ್ಠ ಸಮತೋಲಿತ ಆಹಾರ. ದೇಹಕ್ಕೆ ಬೇಕಾದ ಎಲ್ಲಾ ಅಂಶಗಳೂ ಇದರಲ್ಲಿವೆ’ ಎಂದು ಮೆಚ್ಚುಗೆ ಸೂಚಿಸಿ ವೈಜ್ಞಾನಿಕ, ವೈದ್ಯಕೀಯ ಸಲಹೆಯನ್ನೂ ನೀಡಿದ್ದಾರೆ. ಮನಃಶಾಸ್ತ್ರಜ್ಞ ಡಾ| ಪಿ. ವಿ. ಭಂಡಾರಿಯವರು ಮಧುಮೇಹದವರು ಇದೇ ಊಟದಲ್ಲಿ ಅಕ್ಕಿ ಪ್ರಮಾಣ ಕಡಿಮೆ ಮಾಡಿ ತರಕಾರಿ, ಸೊಪ್ಪಿನ ಪ್ರಮಾಣ ಹೆಚ್ಚಿಸಬಹುದು ಎಂದು ಸಲಹೆ ನೀಡಿದ್ದಾರೆ. ಉಡುಪಿಯ ಮೆಸ್ಕಾಂ ಅಧಿಕಾರಿ ಗಣರಾಜ ಭಟ್ ಈ ಊಟದ ಸವಿಯನ್ನು ಗೆಳೆಯರ ಬಳಗದಲ್ಲಿ ಪ್ರಚಾರ ಮಾಡಿದ್ದಾರೆ. ಕ್ಯಾಟರರ್ ಶ್ರೀಧರ ಭಟ್ ತಮ್ಮ ಸಿಬಂದಿಗಳೊಂದಿಗೆ ಕ್ಯಾಂಟೀನ್ಗೆ ಭೇಟಿ ನೀಡಿ ತಮ್ಮ ಪಾಕಶಾಸ್ತ್ರ ಕೌಶಲದ ಸಲಹೆ ನೀಡಿ ತಾವೂ ಈ ಪ್ರಯೋಗ ಮಾಡಬಹುದೆಂದು ಉತ್ಸಾಹ ತೋರಿದ್ದಾರೆ.
– ಮಟಪಾಡಿ ಕುಮಾರಸ್ವಾಮಿ
(ಕೃಪೆ : ಉದಯವಾಣಿ)