ಬಾನ ಕೋಟಿ ತಾರೆ
ಇಳೆಗೆ ಚದುರಿ ಮಿನುಗಿದೆ…
ರವಿಯ ಕಿರಣ ಪ್ರಭೆಯು
ಇಬ್ಬನಿಯ ತಬ್ಬಿ ಮಿಂಚಿದೆ….
ಮಳೆಬಿಲ್ಲಿನ ಸಪ್ತ ವರ್ಣ
ಅಂಗಳದ ರಂಗೋಲಿಯೊಳಗಿದೆ…
ಕಲಾವಿದನ ಕುಂಚದ ಬಣ್ಣ
ಪುಟಾಣಿಗಳ ಧಿರಿಸ ಮೆತ್ತಿ ಮಿರುಗಿದೆ…
ಗುಡುಗು ಸಿಡಿಲು ಸದ್ದು
ಧರೆಯ ಮೇಲೆದ್ದು ಕರ್ಣ ಕವಚ ಹರಿದಿದೆ…
ಅಮರಾವತಿಯ ದಿವ್ಯ ವೈಭವ
ಪುರದೊಳಗೆ ನರರೊಳಗೆ ಸಂಭ್ರಮಿಸಿದೆ…
ಹಬ್ಬಗಳ ರಾಜನ ಸ್ವಾಗತಕೆ
ಮನುಕುಲವು ತವಕದಿಂ ಕಾಯುತಿದೆ…..
- ಸನಮ್ ಶೃಂಗೇರಿ
—————————
ಹಾರೈಕೆ..
ಹಚ್ಚಿಡುವೆ ಹಣತೆಗಳ
ಕನಸು ಬೆಚ್ಚಗಿರಲೆಂದು
ಮನದಲ್ಲೆ ಹರಸುತ್ತ…
ಬೆಳಗುವುದು ದೀಪ
ಸುರಿಸುತ್ತ ಒಲವ
ಅಂಧಕಾರವ ಛಲದಿ ದಹಿಸುತ್ತ.
ಆವೆಮಣ್ಣಿನ ಹಣತೆ
ಕುಂಬಾರನ ಹಸಿಗನಸು
ಹಣತೆಯನು ಬೆಳಗುವುದು
ಮಾನಿನಿಯ ಸವಿಗನಸು
ತಿಳಿವಿನೊಂದೆಳೆ ಬೆಳಕ
ಬಯಸುವುದು ಬಲು ಲೇಸು
ಪದವ ಬೆಸೆದಿಹ ಕವಿತೆ
ನನ್ನ ಕಲ್ಪನೆಯ ಹಸುಗೂಸು
ಮಣ್ಣಿಗೂ ಮನುಜನಿಗೂ
ಎಂದೂ ಮುಗಿಯದ ಬಂಧ
ಮಣ್ಣ ಹಣತೆ ಮನೆ ಬೆಳಗೆ
ಕುಂಬಾರನಿಗೆ ಮಹದಾನಂದ
ಹಚ್ಚಿಡುವೆ ಹಣತೆಗಳ
ಬದುಕು ಹಸನಾಗಿರಲೆಂದು..
ಕಂಡ ಕನಸುಗಳೆಲ್ಲ
ನಸುನಗುತ ನನಸಾಗಲೆಂದು…
- ಸಂಗೀತಾ ಕುಲಾಲ್ ಬೋಳ